ದೆಹಲಿಯಲ್ಲಿ ನಡೆದ 2014ರ ಇಂಡಿಯನ್ ಆಟೊ ಎಕ್ಸ್ ಪೋ ಷೋನಲ್ಲಿ ಪ್ರದರ್ಶನಕ್ಕೆ ಇರಿಸಿದ್ದ ಹೀರೋ ಕಂಪನಿಯ ಲೀಪ್ ಎಂಬ ಹೈಬ್ರಿಡ್ ಸ್ಕೂಟರ್ ಮುಂದಿನ ವರ್ಷಾರಂಭದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಲೀಪ್ – ಹೀರೊ ಮೋಟೋಕಾರ್ಪ್ ಕಂಪನಿ 2012ರ ಆಟೋ ಎಕ್ಸ್ ಪೋನಲ್ಲಿ ಬಹಿರಂಗಗೊಳಿಸಿದ ಕಾನ್ಸೆಪ್ಟ್. ಗುಡ್ ಗಾಂವ್ ನಲ್ಲಿರುವ ಉತ್ಪಾದನಾ ಘಟಕದಲ್ಲಿ ಇದನ್ನು ಉತ್ಪಾದಿಸಲಾಗುತ್ತಿದೆ. ಆರಂಭದಲ್ಲಿ ವಾರ್ಷಿಕ 6000 ಸ್ಕೂಟರ್ ಉತ್ಪಾದನೆ ಗುರಿ ಇರಿಸಿಕೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಪ್ರತಿಕ್ರಿಯೆ ಗಮನಿಸಿಕೊಂಡು ಉತ್ಪಾದನೆ ಹೆಚ್ಚಿಸುವ ಇರಾದೆ ಕಂಪನಿಯದ್ದು.
ಕಂಪನಿಯ ಜಾಗತಿಕ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ಲೀಪ್ ಎಂಬ ಹೈಬ್ರಿಡ್ ಸ್ಕೂಟರನ್ನು ವಿನ್ಯಾಸಗೊಳಿಸಲಾಗಿದೆ. ಲಿಥಿಯಂ ಐಯೋನ್ ಬ್ಯಾಟರಿ ಹಾಗೂ 11 ಬಿಎಚ್ಪಿ ಟ್ರಾಕ್ಷನ್ ಮೋಟಾರ್ ಹೊಂದಿರುವ ಈ ಸ್ಕೂಟರ್ ಗೆ 124 ಸಿಸಿ ಎಂಜಿನ್ ಅಳವಡಿಸಲಾಗಿದೆ. ಒಂದೊಮ್ಮೆ ಚಾರ್ಜ್ ಮಾಡುವುದು ಮರೆತರೂ ಚಿಂತೆ ಇಲ್ಲ. ಈ ಸ್ಕೂಟರ್ ಪೆಟ್ರೋಲ್ ಮೂಲಕವೂ ಕೆಲಸ ಮಾಡುತ್ತಿದ್ದು, ಮೂರು ಲೀಟರ್ ಸಾಮರ್ಥ್ಯದ ಟ್ಯಾಂಕ್ ಅಳವಡಿಸಲಾಗಿದೆ. ಗಂಟೆಗೆ 100 ಕಿ.ಮೀ. ಗರಿಷ್ಠ ವೇಗಮಿತಿ. ಇದರ ದರ ಇತ್ಯಾದಿ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.