Untitled Document
Sign Up | Login    
ರಾಘವೇಶ್ವರ ಶ್ರೀಗಳ ಪೀಠತ್ಯಾಗಕ್ಕೆ ಸಂಚು ಹೂಡಿದ ಶಕ್ತಿಗಳು ಯಾವುವು?


ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಮೇಲೆ ಬಂದಂತಹ ಅತ್ಯಾಚಾರ ಆರೋಪವನ್ನು ಇತ್ತೀಚೆಗೆ ನ್ಯಾಯಾಲಯವು ತಳ್ಳಿಹಾಕಿ, "ಇದು ಶ್ರೀಗಳನ್ನು ಸಿಕ್ಕಿಹಾಕಿಸಲು ನಡೆಸಿದ ಸಂಚು" ಎಂದು ಷರಾ ಬರೆದಿದ್ದಲ್ಲದೇ, CID ಮತ್ತು FSLಗಳನ್ನು ಕೂಡ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿದೆ. ಹಾಗಾದರೆ ಯಾರು ಯಾಕಾಗಿ ಒಂದು ಧಾರ್ಮಿಕ ಸಂಸ್ಥೆಯ ಮೇಲೆ ಹಗೆ ಸಾಧಿಸಲು ಹೊರಟಿದ್ದಾರೆ? ಯಾರು ಮಠದ ವಿರುದ್ಧ "ಷಡ್ಯಂತ್ರ" ಮಾಡುತ್ತಿದ್ದಾರೆ? ಆಮೂಲಾಗ್ರವಾಗಿ ಎಲ್ಲವನ್ನೂ ಪರಿಶೀಲಿಸೋಣ!

ಸುಮಾರು 1200 ವರ್ಷಗಳ ಹಿಂದೆ ಆದಿಶಂಕರಾಚಾರ್ಯರು ಗೋಕರ್ಣದ ಸಮೀಪದ ಅಶೋಕೆಯಲ್ಲಿ ಅಲ್ಲಿನ ಸೌಮ್ಯ ಪ್ರಕೃತಿಯ ಮಡಿಲಲ್ಲಿ ಧರ್ಮಪಾಲನೆಗಾಗಿ ಮಠವೊಂದನ್ನು ಸ್ಥಾಪಿಸಿ ತಮ್ಮ ಜ್ಯೇಷ್ಠ ಶಿಷ್ಯ ಸುರೇಶ್ವರಾಚಾರ್ಯರಿಂದ ಸನ್ಯಾಸ ದೀಕ್ಷೆ ಪಡೆದು ತಮ್ಮಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾನಂದರನ್ನು ಪೀಠಾಧಿಪತಿಯನ್ನಾಗಿ ಮಾಡಿ ಗೋಕರ್ಣ ದೇವಾಲಯದ ಆಡಳಿತವೂ ಸೇರಿದಂತೆ ಹಲವಾರು ಹೊಣೆಗಾರಿಕೆಗಳನ್ನು ಕೊಡುತ್ತಾರೆ. ಇದು ರಾಜಗುರುಪೀಠವಾಗಿದ್ದು ಸಮಾಜದ ಅಂತರಂಗ ಮತ್ತು ಬಹಿರಂಗ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದೆ. ಅಲ್ಲಿಂದ ಇಲ್ಲಿನವರೆಗೂ ಶ್ರೀಮಠದ ಮಾರ್ಗದರ್ಶನದಲ್ಲಿ ಧರ್ಮಪಾಲನೆ ನಡೆಯುತ್ತಾ ಬಂದಿದೆ. ಶಂಕರರಿಂದ ಆರಂಭಿಸಿ 35 ತಲೆಮಾರುಗಳು ಕಳೆದಿವೆ. ಪ್ರಸ್ತುತ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು 36ನೇ ಪೀಠಾಧೀಶರಾಗಿರುತ್ತಾರೆ. ಶ್ರೀಗಳ ಪ್ರೇರಣೆಯಂತೆ ಬಿಂದು-ಸಿಂಧು, ಮುಷ್ಟಿಭಿಕ್ಷೆ, ವಿದ್ಯಾನಿಧಿ, ಕಾಮದುಘಾ, ಗುರುಕುಲ, ಭಾರತೀ ವಿದ್ಯಾಲಯಗಳು, ಗ್ರಾಮರಾಜ್ಯ, ವಿದ್ಯಾನಿಧಿ, ಜೀವನದಾನ ಮೊದಲಾದ ಹತ್ತು ಹಲವಾರು ಸಮಾಜಮುಖಿ ಯೋಜನೆಗಳು ಆರಂಭಗೊಂಡವು. ಅಷ್ಟಾಗಿ ಮಠದ ಸಂಪರ್ಕ ಇಲ್ಲದವರೂ ಮಠಕ್ಕೆ ಬರಲಾರಂಭಿಸಿದರು! ಮಠದ ಪ್ರಸಿದ್ಧಿಯೂ ಜಾಸ್ತಿಯಾಗುತ್ತಾ ಬಂತು! ಬರೀ ಜಪ-ತಪ-ಅನುಷ್ಠಾನಗಳೇ ಆಗಿದ್ದರೆ ತೊಂದರೆ ಇರಲಿಲ್ಲವೇನೋ! ಆದರೆ ಇದು ರಾಜಗುರು ಪೀಠ. ಇಲ್ಲಿ ಕಾವಿಯೂ ಇದೆ, ಕಿರೀಟ-ಶ್ವೇತಛತ್ರಗಳೂ ಇವೆ! ಸಮಾಜದಲ್ಲಿ ನಡೆಯುವ ಅಧರ್ಮ ಕಾರ್ಯಗಳ ನಿಗ್ರಹವೂ ಪೀಠದ ಹೊಣೆಯಾಗಿರುತ್ತದೆ!

ಅದು 2003-04ರ ಸಮಯ; ಶ್ರೀಗಳು ಅಂಬಾರಗುಡ್ಡದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ಹಲವು ಜೀವ ಬೆದರಿಕೆಗಳ ನಡುವೆಯೂ ತಡೆದರು! (ಅಂಬಾರಗುಡ್ಡ ರಕ್ಷಣೆಗಾಗಿ ರಾಘವೇಶ್ವರ ಶ್ರೀಗಳು ನಡೆಸಿದ ಆಂದೋಲನ ) ಬೆದರಿಕೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶ್ರೀಗಳಿಗೆ ಗನ್ ಮ್ಯಾನ್ ರಕ್ಷಣೆ ಒದಗಿಸಿತು. 2007ರಲ್ಲಿ ಹೊಸನಗರದಲ್ಲಿ ವಿಶ್ವ ಗೋಸಮ್ಮೇಳನ ನಡೆಯಿತು. 9 ದಿನಗಳಲ್ಲಿ 20 ಲಕ್ಷಕ್ಕೂ ಅಧಿಕ ಜನರು ಸಾಕ್ಷಿಯಾಗಿ ವಿಶ್ವದ ಗಮನ ಸೆಳೆಯಿತು. 2009ರಲ್ಲಿ ಶ್ರೀಗಳ ನೇತೃತ್ವದಲ್ಲಿ ಕುರುಕ್ಷೇತ್ರದಿಂದ ನಾಗಪುರದವರೆಗೆ 108 ದಿನಗಳ ಕಾಲ "ವಿಶ್ವಮಂಗಳಗೋಗ್ರಾಮ"ಯಾತ್ರೆ ನಡೆದು ಗೋಹತ್ಯೆ ತಡೆಗೆ ಆಗ್ರಹಿಸಿ ಎಂಟೂವರೆ ಕೋಟಿ ಸಹಿಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು. ಈ ನಡುವೆ, 2008ರಲ್ಲಿ, ಕೆಲವು ದುರುಳರಿಂದಾಗಿ ಅನರ್ಥದ ಆಗರವಾಗಿದ್ದ ಗೋಕರ್ಣ ದೇವಾಲಯವನ್ನು ಪುನಃ ಮಠದ ಆಡಳಿತಕ್ಕೆ ಒಪ್ಪಿಸುವಂತೆ ಕೋರಿ ಅಲ್ಲಿನ ಸ್ಥಳೀಯರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. ಪರಂಪರೆಯಲ್ಲಿ ದೇಗುಲವು ಮಠಕ್ಕೆ ಸೇರಿದ್ದನ್ನು ಗಮನಿಸಿದ ಸರ್ಕಾರ ಆಡಳಿತವನ್ನು ಪುನಃ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತು. ಅಲ್ಲಿಂದ ಗೋಕರ್ಣದಲ್ಲಿ ಬದಲಾವಣೆಯ ಪರ್ವ ಆರಂಭವಾಯ್ತು. ಅಲ್ಲಿನ ಮಾಜಿ ಜಿಲ್ಲಾಧಿಕಾರಿಯೇ ಹೇಳಿದಂತೆ ಅಲ್ಲಿ ಪವಾಡ ಸದೃಶ ಬದಲಾವಣೆಗಳಾದವು!

ಶ್ರೀಗಳ ಸಮಾಜಮುಖಿ ಕಾರ್ಯಗಳು ಸಹಜವಾಗಿಯೇ "ಸ್ಥಾಪಿತ ಹಿತಾಸಕ್ತಿ"ಗಳ ಕೆಂಗಣ್ಣಿಗೆ ಗುರಿಯಾದವು. ಮಠದ ಕಾರ್ಯಕರ್ತರ ಮೇಲೆ ಹಲ್ಲೆ, ಬೆಂಕಿ ಹಚ್ಚಿ ಕೊಲ್ಲುವ ಯತ್ನ, ಬೆದರಿಕೆ, ನಿರಂತರ ಕಾನೂನಾತ್ಮಕ ಸವಾಲುಗಳು, ಇಷ್ಟಕ್ಕೇ ನಿಲ್ಲದೆ ಶ್ರೀಗಳ ಹೆಸರಿಗೇ ಮಸಿಬಳಿಯುವ "ನಕಲಿ ಅಶ್ಲೀಲ ಸಿಡಿ" ತಯಾರಿಕೆ (ರಾಘವೇಶ್ವರ ಶ್ರೀಗಳ ತೇಜೋವಧೆ ಯತ್ನ: ನಕಲಿ ಸಿಡಿ ಪ್ರಕರಣದ ಸಮಗ್ರ ವಿವರ ) ಹೀಗೆ, ದಾಳಿಗಳು ನಿರಂತರವಾಗಿ ಮಠದ ಮೇಲೆ ನಡೆದವು! ಇವೆಲ್ಲವುಗಳ ಹಿಂದೆ ಇದ್ದಿದ್ದು ಗಣಿ, ಡ್ರಗ್, ಗೋಮಾಂಸ ಮಾಫಿಯಾಗಳಷ್ಟೇ ಅಲ್ಲದೇ ಪಾರಂಪರಿಕವಾಗಿ ಮಠದ ಮೇಲೆ ಈರ್ಷೆಯಿದ್ದ ಕೆಲವು ನೆರೆ"ಹೊರೆ"ಯ ಧಾರ್ಮಿಕ ಸಂಸ್ಥೆ(ಮಠ)ಗಳೂ 'ಹಿಂಬಾಗಿಲ ಬೆಂಬಲ' ನೀಡಿದ್ದು ದುರ್ದೈವ! "ದುಷ್ಟಕೂಟ"ಗಳು ಒಂದೊಂದಾಗಿ ದಾಳಿ ಮಾಡಿ ವಿಫಲವಾದಾಗ ಎಲ್ಲರೂ ಸೇರಿ ಹೂಡಿದ ಷಡ್ಯಂತ್ರವೇ "ಅಪರೇಷನ್ ಪೀಠತ್ಯಾಗ"!! ಪೀಠವನ್ನೇ ತಮ್ಮ ವಶಕ್ಕೆ ತೆಗೆದುಕೊಂಡರೆ ದುಷ್ಟಕೂಟದ ಎಲ್ಲರಿಗೂ ಅವರವರಿಗೆ ಬೇಕಾಗಿದ್ದು ಸಿಗುತ್ತದೆ ಎಂಬ ಹುನ್ನಾರ! ಈ ಸಾರಿ ದುಷ್ಟಕೂಟಗಳ ನೇತೃತ್ವ ವಹಿಸಿದ್ದು ಧರ್ಮ ರಕ್ಷಣೆಗೆಂದೇ ಇರುವ 'ಸಂಘಟನೆ'ಯೊಂದರ ಕೆಲವು ಮೀರ್ ಸಾಧಿಕ್, ಜಯಚಂದ್ರರು! "ನಕಲಿ ಸಾಕ್ಷ್ಯ ಸೃಷ್ಠಿ"ಗೆ ಸಿದ್ಧತೆಗಳು ಭರದಿಂದ ಸಾಗಿದವು!

ಅದು 2014 ಜುಲೈ, ಹೊನ್ನಾವರದ ಕೆಕ್ಕಾರಿನಲ್ಲಿ ಪ್ರತಿವರ್ಷದಂತೆ ಶ್ರೀಗಳು ಚಾತುರ್ಮಾಸ್ಯ ವೃತದಲ್ಲಿದ್ದರು‌. ಮಠವು ನಡೆಸುತ್ತಿದ್ದ ರಾಮಕಥಾ ಕಲಾವಿದರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಅನಾಮಧೇಯ ಬೆದರಿಕೆ ಕರೆಗಳು ಬರಲಾರಂಭಿಸಿದವು‌. ಕಳವಳಗೊಂಡ ಕಲಾವಿದರು ತಮ್ಮ ಸಮೀಪದ ಠಾಣೆಗಳಲ್ಲಿ ದೂರು ದಾಖಲಿಸಿದರು. ಇದೇ ಸಮಯದಲ್ಲಿ ಶ್ರೀಪರಿವಾರದ ವ್ಯವಸ್ಥಾಪಕರಿಗೆ ದಿವಾಕರ ಶಾಸ್ತ್ರೀ ಎಂದು ಹೇಳಿಕೊಂಡ ವ್ಯಕ್ತಿಯು ಕರೆಮಾಡಿ "ಮೂರು ಕೋಟಿ ರೂ. ಕೊಡಿ ಇಲ್ಲವೇ, ಶ್ರೀಗಳ ಮೇಲೆ ಅತ್ಯಾಚಾರ ಆರೋಪ ಮಾಡಿ ಜೈಲಿಗೆ ಕಳಿಸುತ್ತೇವೆ" ಎಂದು ಬೆದರಿಕೆ ಬರುತ್ತದೆ. ದಿ. 17-8-2014 ರಂದು ಮಠದ ಕಡೆಯಿಂದ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಿಸಲ್ಪಟ್ಟು, ಪ್ರಾಥಮಿಕ ತನಿಖೆಯಲ್ಲಿ ಬೆದರಿಕೆ ಕರೆ ಧೃಡಪಟ್ಟು ಹೆಚ್ಚಿನ ವಿಚಾರಣೆಗೆ ಪ್ರೇಮಲತಾ-ದಿವಾಕರ್ ದಂಪತಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿ ಹೊನ್ನಾವರಕ್ಕೆ ಕರೆತರುತ್ತಾರೆ. ಆಗ ನಡೆದ ವಿಚಾರಣೆಯ ವೇಳೆಯೇ ಬಯಲಾದ "ಷಡ್ಯಂತ್ರ"ದ ಜಾಲವನ್ನು ಕಂಡು ಪೋಲೀಸ್ ಇಲಾಖೆಯೇ ಬೆಚ್ಚಿಬೀಳುತ್ತದೆ! ಕರೆಪಟ್ಟಿ ಹೊಂದಾಣಿಕೆ, ಈಮೇಲ್ ಗಳಲ್ಲಿ "ನಕಲಿ ಅತ್ಯಾಚಾರ"ದ ಆರೋಪ ದಾಖಲಿಸಲು ವಕೀಲರೊಡನೆ ಚರ್ಚಿಸಿ ನಡೆಸಿದ ತಯಾರಿ, ದಿನಾಂಕಗಳ ಹೊಂದಾಣಿಕೆಗಾಗಿ ಬಿಟ್ಟಸ್ಥಳಗಳು ಮುಂತಾದ ಪ್ರಬಲ ಆಧಾರಗಳು ಉಚ್ಛನ್ಯಾಯಾಲಯದಲ್ಲಿ ಸಲ್ಲಿಸಲ್ಪಟ್ಟು ಸ್ವತಃ ದಿವಾಕರ ಶಾಸ್ತ್ರೀ ಮತ್ತು ಆತನ ವಕೀಲರೂ 'ತಾವು ಶ್ರೀಗಳ ವಿರುದ್ಧ ಷಡ್ಯಂತ್ರ ನಡೆಸಿದ್ದು ನಿಜ' ಎಂದು ಒಪ್ಪಿ, ಸಹಿಹಾಕುತ್ತಾರೆ! ಅದು ಪಂಚನಾಮೆಯಾಗಿದೆ!

ಆದರೆ ಇದೇ ವೇಳೆಗೆ, (ಅಂದರೆ, ಬ್ಲ್ಯಾಕ್ ಮೇಲ್ ಕೇಸ್ ದಾಖಲೆಯಾಗಿ ದಿವಾಕರ್ ದಂಪತಿಗಳು ಜೈಲು ಸೇರಿದ ನಂತರ) ಪ್ರೇಮಲತಾ-ದಿವಾಕರರ ಪುತ್ರಿ ಅಂಶುಮತಿಯು ದಿನಾಂಕ 26-8-2014ರಂದು, 'ಶ್ರೀಗಳು ತನ್ನ ತಾಯಿಗೆ ಕಿರುಕುಳ ಕೊಡುತ್ತಿದ್ದರು' ಎಂದು ಬನಶಂಕರಿ ಠಾಣೆಯಲ್ಲಿ ದೂರು ನೀಡುತ್ತಾಳೆ. ಇದಾದ ಬಳಿಕ ದಿನಾಂಕ 31-8-2014ರಂದು ಮಠಕ್ಕೆ ಹೊರಟಿದ್ದ ಶ್ಯಾಮಶಾಸ್ತ್ರೀ (ದಿವಾಕರರ ತಮ್ಮ) ನಿಗೂಢವಾಗಿ ಅಸಹಜ ಸಾವಿಗೀಡಾಗುತ್ತಾರೆ! ಈ ಮೂರೂ ಪ್ರಕರಣಗಳನ್ನು ಸರ್ಕಾರ ಸಿ.ಆಯ್.ಡಿ. ಗೆ ವರ್ಗಾಯಿಸುತ್ತದೆ. ಸಮಾಜದಲ್ಲಿ ಶ್ರೀಗಳ ತೇಜೋವಧೆ ಮಾಡುವ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆದವು! "ಬೆದರಿಕೆ ಪ್ರಕರಣ"ದಲ್ಲಿ ಪ್ರಬಲ ಆಧಾರಗಳು ಇದ್ದರೂ ಕೂಡ ಅದನ್ನು ಲೆಕ್ಕಿಸದ ತನಿಖಾ ಸಂಸ್ಥೆ ಕೇವಲ 'ನಕಲಿ ಅತ್ಯಾಚಾರ' ಪ್ರಕರಣದ ಮೇಲೆ ಆರೋಪಪಟ್ಟಿ ಸಲ್ಲಿಸಿತು! "ಶಾಮ್ ಶಾಸ್ತ್ರಿ ಸಾವು ಮತ್ತು ಮಠವು ದಾಖಲಿಸಿದ ಬೆದರಿಕೆ ಪ್ರಕರಣದ ತನಿಖೆ ಎಲ್ಲಿಯವರೆಗೆ ಬಂತು?" ಎಂದು ಪ್ರಶ್ನಿಸಿದ ನ್ಯಾಯಾಧೀಶರು ಊಟ ಮಾಡಿ ಬರುವುದರೊಳಗೆ ಪ್ರಕರಣದಲ್ಲಿ ಹಿಂದೆ ಸರಿದಿದ್ದು ಇನ್ನೂ ನಿಗೂಢ! ಕೊನೆಗೂ ದಿನಾಂಕ 31-3-2016ರಂದು 'ಶ್ರೀಗಳ ಮೇಲಿನ ಅತ್ಯಾಚಾರ ಆರೋಪ ನಿರಾಧಾರ ಮತ್ತು ಅನೇಕ ಸಾಕ್ಷ್ಯಗಳು ಸೃಷ್ಠಿಸಲ್ಪಟ್ಟದ್ದು' ಎಂದ ಸೆಷನ್ ಕೋರ್ಟ್ "ಈ ಪ್ರಕರಣವು ವಿಚಾರಣೆಗೆ ಯೋಗ್ಯವಲ್ಲ" ಎಂದು ಕೈಬಿಡುತ್ತದೆ. ಈಮೂಲಕ ಶ್ರೀಗಳ ಮೇಲೆ ದಾಖಲಾದ ಪ್ರತಿದೂರಿನಲ್ಲಿ ಹುರುಳಿಲ್ಲವೆಂದು ವೇದ್ಯವಾಯಿತು! ಅಲ್ಲದೆ, ಇದರಿಂದ ಮಠದ ಮೇಲೆ ಷಡ್ಯಂತ್ರ ನಡೆಯುತ್ತಿರುವುದೂ ಸಾಭೀತಾಯ್ತು...! (ಶ್ರೀಮಠದ ವಿರುದ್ಧದ ಷಡ್ಯಂತ್ರ ಸಾಬೀತು!)

ಹಾಗಾದರೆ ಈ ಷಡ್ಯಂತ್ರದ ಸೂತ್ರದಾರರು ಯಾರು? ಯಾರು ಶ್ರೀಗಳ ಪೀಠತ್ಯಾಗವನ್ನೇ ಗುರಿಯಾಗಿಸಿ ಈ ಎಲ್ಲಾ ಸಂಚು ಹೂಡಿದ್ದಾರೆ? ಶಾಮಶಾಸ್ತ್ರೀ ನಿಗೂಢ ಸಾವಿನ ಹಿಂದಿನ ರಹಸ್ಯವೇನು? ಯಾರು ತಮ್ಮ ವ್ಯವಸ್ಥಿತ ಪ್ರಭಾವದ ಮೂಲಕ ತನಿಖೆಯನ್ನೇ ದಾರಿತಪ್ಪಿಸಿದ್ದರು? ಮಾಜೀ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ಅವರು ಸಮಾಜವನ್ನೇ ದಾರಿತಪ್ಪಿಸುವಂಥ ಹೇಳಿಕೆ ನೀಡಿದ್ದೇಕೆ? ಐವರು ನ್ಯಾಯಾಧೀಶರುಗಳು ವಿಚಾರಣೆಯಿಂದ ಹಿಂದೆ ಸರಿದಿದ್ದು ಯಾಕೆ? ಮಾಜಿ ಗೃಹಸಚಿವ ಕೆ.ಜೆ.ಜಾರ್ಜ್ ರವರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಕಾನೂನು ಸಲಹೆಗಳನ್ನೂ ಧಿಕ್ಕರಿಸಿ 'ನಕಲಿ ಅಶ್ಲೀಲ ಸಿಡಿ' ಪ್ರಕರಣವನ್ನು ಕೈಬಿಟ್ಟಿದ್ದು ಯಾಕೆ? ಯಾರ ಒತ್ತಡದ ಮೇರೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಈ ಹುಸಿ ಆರೋಪ ದಾಖಲಿಸಿದ ಮಹಿಳೆಯ ಕುರಿತು ಅಷ್ಟು ಮುತುವರ್ಜಿ ವಹಿಸಿದ್ದು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಅಷ್ಟೇ ಅಲ್ಲ, ತೆರೆಮರೆಯಲ್ಲಿ ಆಟ ಆಡುತ್ತಿದ್ದವರು ಈ ಸಮಾಜದ ಎದುರು ಬೆತ್ತಲಾಗಬೇಕಿದೆ! ಯಾಕೆಂದರೆ ಇದು ಒಬ್ಬ ವ್ಯಕ್ತಿಯ ಪ್ರಶ್ನೆಯಲ್ಲ; ಇಂದು ಇಲ್ಲಿ ಆಗಿದ್ದು ನಾಳೆ ಇನ್ನೊಬ್ಬರಿಗೆ ಆಗಬಹುದು! "ಒಂದು ವೇಳೆ ಈ ಷಡ್ಯಂತ್ರ ಸಫಲವಾಗಿದ್ದರೆ ನಾಶವಾಗುತ್ತಿದ್ದದ್ದು ಅವಿಚ್ಛಿನ್ನವಾದ ಗುರುಪರಂಪರೆ ಮತ್ತು ಅಸಂಖ್ಯಾತ ಜನರ ಶೃದ್ಧೆ, ನಂಬಿಕೆಗಳು"!


(ಲೇಖನದ ಒಟ್ಟೂ ಅಭಿಪ್ರಾಯಗಳು ಲೇಖಕರದ್ದೇ ಆಗಿರುತ್ತದೆ -ಸಂ.)

 

Author : ಮಂಜುನಾಥ ಹೆಗಡೆ 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited