Untitled Document
Sign Up | Login    
ನಾವು ಇತಿಹಾಸದಿಂದ ಪಾಠ ಕಲಿಯಲೇ ಇಲ್ಲ !


ನಾವು ಇತಿಹಾಸದಿಂದ ಪಾಠ ಕಲಿಯಲೇ ಇಲ್ಲ !
ಒಮ್ಮೆ ನೆನಪಿಸಿಕೊಳ್ಳಿ,
ಅಲೆಕ್ಸಾಂಡರ್ ನ ದಾಳಿಯ ಕಾಲದಿಂದಲೂ ನಾವು ಸೋತಿದ್ದು ಶತ್ರುಗಳಿಗಲ್ಲ; ನಮ್ಮಲ್ಲಿನ ಸ್ವಾರ್ಥ, ಲೌಲ್ಯ, ಅಧಿಕಾರದಾಹ ಮೊದಲಾದ ದೌರ್ಬಲ್ಯಗಳಿಗೆ.
ಈಗ ಆಗುತ್ತಿರುವುದೂ ಅದೇ.

ಒಮ್ಮೆ ಲೆಕ್ಕ ಹಾಕಿ, ಅದೆಷ್ಟು ಅಧ್ವಾನಗಳು.

೧) ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ನಕ್ಷಲ್ ಕಾರ್ಯಾಚರಣೆ ಬಿರುಸಿನಿಂದ ನಡೆದಿತ್ತು, ಬಿಸಿಲೆ ಘಾಟ್ ಪ್ರದೇಶದ ದಟ್ಟ ಅರಣ್ಯದಲ್ಲಿ ನಕ್ಸಲ್ ಪ್ರಮುಖರ ಒಂದು ತಂಡವನ್ನು ಪೊಲೀಸರು ಸುತ್ತುಗಟ್ಟಿದ್ದರು. ಇನ್ನೊಂದು ದಿನ ಕಾರ್ಯಾಚರಣೆ ನಡೆದಿದ್ದಲ್ಲಿ ಕರ್ನಾಟಕದ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ ಪ್ರಮುಖರು ಪೊಲೀಸರಿಗೆ ಶರಣಾಗಬೇಕಿತ್ತು; ಇಲ್ಲವೇ ಎನ್ಕೌಂಟರ್ ಗೆ ಬಲಿಯಾಗಬೇಕಿತ್ತು. ಇಂಥ ನಿರ್ಣಾಯಕ ಹಂತದಲ್ಲಿ ಖುದ್ದು ಮುಖ್ಯಮಂತ್ರಿಗಳೇ ಕದನವಿರಾಮ ಘೋಷಿಸಿ, ಏಕಾಏಕಿ ಕಾರ್ಯಾಚರಣೆ ನಿಲ್ಲಿಸಲು ಆದೇಶಿಸಿದರು. ಇಂದು ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಜೀವಂತವಾಗಿದ್ದರೆ ಅದಕ್ಕೆ ಅಂದಿನ ಮುಖ್ಯಮಂತ್ರಿಗಳ ಅವಿವೇಕತನ ಕಾರಣವೇ ಹೊರತು, ನಕ್ಸಲೀಯರ ಬಲವಾಗಲಿ ಪೌರುಷವಾಗಲಿ ಅಲ್ಲ.

೨) ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲಂತೂ ನಕ್ಸಲ್ ಬೆಂಬಲಿಗರು, ನಕ್ಸಲೀಯರಿಗೆ ಹಣ, ಆಹಾರ ಪೂರೈಸುತ್ತಿದ್ದವರು, ಅಷ್ಟೇಕೆ, ಪ್ರಚ್ಛನ್ನ ನಕ್ಸಲೀಯರು ನೇರ ಆಡಳಿತದ ಪಡಸಾಲೆಗೇ ಬಂದು ಕುಳಿತುಬಿಟ್ಟರು. ಮೂಲ ಕಾಂಗ್ರೆಸ್ಸಿಗರನೇಕರಿಗೆ ಈ ಬೆಳವಣಿಗೆ ಬಿಸಿ ತುಪ್ಪವಾಯಿತು: ಅವರಿದನ್ನು ಸಹಿಸಲೂ ಆಗದೆ (ತಮ್ಮದೇ ಸರ್ಕಾರ ಎಂಬ ನೆಲೆಯಲ್ಲಿ) ವಿರೋಧಿಸಲೂ ಆಗದೆ ಚಡಪಡಿಸಿದರು. ಈಗಲೂ ಅವರ ಸ್ಥಿತಿಯಲ್ಲೇನೂ ಬದಲಾವಣೆ ಆಗಿಲ್ಲ, ಸದ್ಯಕ್ಕೆ ಆಗುವುದೂ ಇಲ್ಲ. ಕಾಂಗ್ರೆಸ್ಸಿನ ಕಥೆ ಹೀಗಾದರೆ, ರಾಜ್ಯದಲ್ಲಿನ ಅಧಿಕೃತ ವಿರೋಧಪಕ್ಷ ಬಿಜೆಪಿ ಮತ್ತು ಸೈದ್ಧಾಂತಿಕವಾಗಿ ನಕ್ಸಲಿಸಂ ಅನ್ನು ವಿರೋಧಿಸಿಕೊಂಡು ಬಂದ ಸಂಘಪರಿವಾರದಿಂದ ಕನಿಷ್ಠ ಪ್ರಮಾಣದ ವಿರೋಧವೂ ವ್ಯಕ್ತಗೊಳ್ಳಲಿಲ್ಲ. ಸಮಾಜಕಂಟಕರು ನೇರ ಆಡಳಿತದ ಅಂಗಳದಲ್ಲಿ ಕುಳಿತು ಸರ್ಕಾರಕ್ಕೇ ನಿರ್ದೇಶನ ಕೊಡತೊಡಗಿದರೂ ಇವರೆಲ್ಲ ಸರ್ವೇಂದ್ರಿಯಗಳನ್ನೂ ಮುಚ್ಚಿಕೊಂಡು ಮುಗುಮ್ಮಾಗಿ ಕುಳಿತರು. ಇಂತಹುದಕ್ಕೆಲ್ಲ ಮುಂದೆ ನಿಂತು ಪ್ರತಿಕ್ರಿಯಿಸುತ್ತಿದ್ದ ಭಜರಂಗದಳ, ಎಬಿವಿಪಿ ಮೊದಲಾದ ಪರಿವಾರ ಸಂಘಟನೆಗಳಂತೂ ಸತ್ತವರಂತೆ ನಟಿಸಿದವು. ಯಾತಕ್ಕಾಗಿ?

೩) ಅಧಿಕಾರದಲ್ಲಿರುವವರಂತೂ ತಾವೇನು ಮಾಡಿದರೂ ನಡೆಯುತ್ತದೆ ಎಂದು ಭಾಗ್ಯಗಳ ಮೇಲೆ ಭಾಗ್ಯಗಳನ್ನು ಘೋಷಿಸುತ್ತ ನಡೆದರು. ರಾಜ್ಯದಲ್ಲಿ ಕೋಮುಗಲಭೆಯನ್ನು ನಡೆಸಿದ, ಅಮಾಯಕರನ್ನು ಕೊಂದ, ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವವರಿಗೆ ಪ್ರಕರಣಗಳಿಂದ ಬಿಡುಗಡೆ ಭಾಗ್ಯವೂ ದೊರೆಯಿತು. ಆಗಲೂ ರಾಜ್ಯದಲ್ಲಿ ವಿರೋಧಪಕ್ಷ ಇದೆಯೆಂಬುದಾಗಲೀ ದೇಶಭಕ್ತ ಸಂಘಟನೆಗಳಿವೆ ಎಂಬುದಾಗಲೀ ಗೊತ್ತೇ ಆಗಲಿಲ್ಲ.

೪) ಇದರ ಮುಂದುವರಿದ ಭಾಗವಾಗಿ, "ನಕ್ಸಲೀಯರಿಬ್ಬರ ಶರಣಾಗತಿ" ಎಂಬ ದೊಡ್ಡ ಪ್ರಹಸನವೂ ನಡೆದುಹೋಯಿತು. ಆಗಲೂ ವಿರೋಧಪಕ್ಷ ಸುಮ್ಮನುಳಿಯಿತು. ರಾಜ್ಯಪಾಲರ ಮೂಲಕವಾದರೂ ಈ ಪ್ರಹಸನವನ್ನು ತಡೆಯುವ ಪ್ರಯತ್ನ ಮಾಡಬಹುದಿತ್ತು, ಅದನ್ನೂ ಮಾಡಲಿಲ್ಲ. ಇದಾಗಿ ಆರೆಂಟು ತಿಂಗಳು ಕಳೆಯುವಷ್ಟರಲ್ಲೇ ಚಿಕ್ಕಮಗಳೂರಿನ ಎಸ್ಪಿ ಸರಕಾರಕ್ಕೊಂದು ವರದಿ ಕಳುಹಿಸಿದರು: "ಶರಣಾಗತರಾಗಿರುವ ಇಬ್ಬರೂ ನಕ್ಸಲೀಯರು ಶರಣಾಗತಿ ಪ್ರಕ್ರಿಯೆಯಲ್ಲಿನ ಷರತ್ತುಗಳನ್ನು ಇದುವರೆಗೂ ಪಾಲಿಸಿಲ್ಲ. ಹಾಗಾಗಿ ಅವರ ಮೇಲಿನ ಪ್ರಕರಣಗಳನ್ನು ಸರ್ಕಾರ ವಾಪಾಸ್ ಪಡೆಯಬಾರದು" ಎಂದು. ಈಗಲಾದರೂ ವಿರೋಧಪಕ್ಷ ಇಡೀ ನಕ್ಸಲ್ ಶರಣಾಗತಿ ಪ್ರಹಸನವನ್ನೇ ರದ್ಧುಪಡಿಸಲು ಕೇಳಬಹುದಿತ್ತು, ರಾಜ್ಯಪಾಲರನ್ನೂ ಸಂಪರ್ಕಿಸಬಹುದಿತ್ತು. ಬಿಜೆಪಿ ಏನನ್ನೂ ಮಾಡಲಿಲ್ಲ. ಬಿಬಿಎಂಪಿ ಚುನಾವಣೆಯ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲೂ ಭಾಗಿಯಾಗುವ ಸಂಘ ಮತ್ತದರ ಪರಿವಾರ ಸಂಘಟನೆಗಳಿಗೂ ನಕ್ಸಲ್ ವಿಷಯದಲ್ಲಿ ಪ್ರತಿಕ್ರಿಯಿಸಬೇಕು ಎಂದು ಅನ್ನಿಸಲೇ ಇಲ್ಲ.

೫) ಅಧಿಕಾರಕ್ಕೇರಿದ ದಿನದಿಂದಲೂ ಬಂಜಗೆರೆ ಜಯಪ್ರಕಾಶ್ ಮೊದಲಾದವರು ಹಿಂದೂ ಧರ್ಮವನ್ನು, ಧಾರ್ಮಿಕ ಗ್ರಂಥಗಳನ್ನು ಅವಹೇಳನ ಮಾಡುತ್ತಲೇ ಬಂದಿದ್ದಾರೆ. ಸರ್ಕಾರದ ವೈಫಲ್ಯಗಳು ಚರ್ಚೆಗೆ ಬರದಂತೆ ನೋಡಿಕೊಳ್ಳುವುದಕ್ಕಾಗಿ ಭಗವಾನ್ ನೇತ್ರತ್ವದಲ್ಲಿ ರಚನೆಗೊಂಡಿರುವ " ವಿದೂಷಕ ಮಂಡಳಿ" ಯ ಕುರಿತು ಹೆಚ್ಚಿಗೆ ಹೇಳಬೇಕಾದ ಅಗತ್ಯ ಇಲ್ಲ. ಅವರು ಸ್ರಷ್ಟಿಸಿರುವ ವಿವಾದಗಳು, ಅಸಹಿಷ್ಣುತೆಯ ವಿರುದ್ಧವೂ ಬಲಪಂಥೀಯರಾರೂ ಚಕಾರ ಎತ್ತಲಿಲ್ಲ. ಭಗವಾನ್ ಸೇರಿ ಮೂರು ಜನ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿ ಮತ್ತದೇ ಅಪರಾಧವನ್ನು ಪುನರಾವರ್ತಿಸುತ್ತಿರುವಾಗಲೂ ಪ್ರತಿಕ್ರಿಯಿಸದಂತೆ ಸಂಘಪರಿವಾರವನ್ನು ನಿಯಂತ್ರಿಸುತ್ತಿರುವವರು ಯಾರು?

೬) ಒಂದೆಡೆ ಹಿಂದುಗಳಲ್ಲಿ ಧರ್ಮ-ಸಂಸ್ಕೃತಿಗಳ ವಿಷಯದಲ್ಲಿ ಗೊಂದಲ ನಿರ್ಮಾಣ ಮಾಡಿ, ತಾವು ತೋಡಿದ ಖೆಡ್ಡಾಕ್ಕೆ ಬಿದ್ದವರ ಕೈಗೆ ಬಂದೂಕು ಕೊಟ್ಟು ಕಾಡಿಗೆ ಕಳುಹಿಸುವ ದುರುದ್ದೇಶದಿಂದಲೇ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಬುದ್ಧಿಜೀವಿಗಳಿಗೆ ರಕ್ಷಣೆ ಒದಗಿಸುವ ಸರ್ಕಾರ ಇನ್ನೊಂದೆಡೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಅನುದ್ದಿಷ್ಟವಾಗಿ ಮಾತನಾಡಿದರೆ ಆತನನ್ನು ಬಂಧಿಸುತ್ತದೆ. ಇದಕ್ಕೇನೆನ್ನಬೇಕು? ಇದೆಲ್ಲವನ್ನೂ ನೋಡಿ ಸುಮ್ಮನಿರುವ ವಿರೊಧಪಕ್ಷಕ್ಕೇನೆನ್ನಬೇಕು ?

ಇನ್ನು, ರಾಮಚಂದ್ರಾಪುರ ಮಠದ ಸ್ವಾಮಿಗಳ ವಿರುದ್ಧದ ಪ್ರಕರಣದಲ್ಲಂತೂ ಏನೆಲ್ಲ ಆಗಿದೆ ಎನ್ನುವುದು ಗೊತ್ತೇ ಇದೆ. ಇದೀಗ ಮೂರು ವರ್ಷದ ಹಿಂದೆಯೇ ಸ್ವಾಮಿಗಳ ಚಾರಿತ್ರ್ಯವಧೆಗೆ ಪ್ರಯತ್ನಪಟ್ಟವರ ಮೇಲಿನ ಪ್ರಕರಣವನ್ನು ವಾಪಸ್ ಪಡೆಯುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ಇದೊಂದು ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು, ಸರ್ಕಾರದ ನಿಲುವು-ನಿರ್ಣಯಗಳ ಬಗೆಗೆ ಬಿಜೆಪಿ ಸೇರಿದಂತೆ ಸಂಘಪರಿವಾರದ ಮೌನ ಮತ್ತು ನಿಷ್ಕ್ರಿಯತೆಗೆ ಕಾರಣವೇನು ಎಂಬುದು ಸ್ಪಷ್ಟವಾಗುತ್ತದೆ. ನಕಲಿ ಸಿಡಿಯ ಮೂಲಕ ಮಾಡಲಾಗದ್ದನ್ನು ನಕಲಿ ಸಂತ್ರಸ್ತೆಯರ ಮೂಲಕ ಮಾಡುವ ಪ್ರಯತ್ನದಲ್ಲಿರುವ, ಸಂಘಪರಿವಾರದೊಳಗೆ ಉನ್ನತ ಜವಾಬ್ದಾರಿಗಳಲ್ಲಿರುವ ಕೆಲವು ವ್ಯಕ್ತಿಗಳ ಒಂದು "ದುಷ್ಟಕೂಟ " ಕರ್ನಾಟಕದಲ್ಲಿ ಆಡಳಿತದಲ್ಲಿರುವವರು ಮತ್ತು ಕೆಲವು ನಕ್ಸಲ್ ಮುಖವಾದ ಸಂಘಟನೆಗಳೊಂದಿಗೆ ಅವಕಾಶವಾದೀ "ಕೂಡಿಕೆ" ಮಾಡಿಕೊಂಡಿರುವುದು ಇಂದಿನ ಸ್ಥಿತಿಗೆ ಕಾರಣ. ಆ ದುಷ್ಟಕೂಟದಲ್ಲಿರುವವರೆಲ್ಲ ಕರ್ನಾಟಕದವರೇ ಆಗಿರುವುದರಿಂದ, ಬಿಜೆಪಿಯೂ ಸೇರಿ ರಾಜ್ಯದ ಸಂಘ ಪರಿವಾರದ ಸಂಘಟನೆಗಳ ನಾಯಕರೆಲ್ಲ ಸಿದ್ದರಾಮನ ಕತ್ತಲೆಭಾಗ್ಯದಲ್ಲಿ ಸುಖಿಸುತ್ತಿದ್ದಾರೆ !

ಜಗತ್ತಿಗೇ ಸಂಸ್ಕೃತ-ಸಂಸ್ಕೃತಿಯನ್ನು ಕಲಿಸುತ್ತೇವೆಂದು ದೊಡ್ದವರೆನಿಸಿಕೊಂಡ ಈ ಜನರ ಸ್ವಾರ್ಥಕ್ಕೆ, ಅಧಿಕಾರದಾಹಕ್ಕೆ, ಲೋಭಕ್ಕೆ ತೊಂಬತ್ತು ವರ್ಷಗಳ ಒಂದು ಸಂಘಟನೆ ಬಲಿಯಾಗುತ್ತಿರುವುದಲ್ಲದೆ, ಜವಾಬ್ದಾರಿ ನಿರ್ವಹಿಸಲಾರದ ವಿರೋಧಪಕ್ಷದಿಂದಾಗಿ ಇಡೀ ರಾಜ್ಯವೇ ಪೀಡೆಯನ್ನನುಭವಿಸುತ್ತಿದೆ. ಉರಿಮಜಲು ರಾಮಭಟ್ಟರು ವರ್ಷದ ಹಿಂದೆ ಬರೆದ ತಮ್ಮ ಆತ್ಮಕಥೆಯಲ್ಲಿ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದ್ದರು: " ಕೆಲವು ವ್ಯಕ್ತಿಗಳಿಗೆ ಇಂದು ಸಂಘದಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುವುದರಲ್ಲಿ ಆಸಕ್ತಿ ಇದ್ದಂತಿಲ್ಲ. ಅಂತಹ ವ್ಯಕ್ತಿಗಳು ರಾಜಕೀಯ ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮ ವೈಯಕ್ತಿಕ ಪ್ರಯೋಜನಕ್ಕಾಗಿ ಸಂಘದ ಹೆಸರು ಮತ್ತು ಶಕ್ತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಅವರಿಗೆ ದೇಶದ ಮತ್ತು ಸಂಘಟನೆಯ ಬಗೆಗಿನ ಚಿಂತನೆ ಗೌಣವಾಗಿದೆ"... "ಒಟ್ಟಾರೆಯಾಗಿ ಇಂದು ಸಂಘವು ನೈತಿಕವಾಗಿ ಪತನಗೊಂಡಿದೆ. ಇಂದು ಸಂಘವನ್ನು ಕುಲಗೆಡಿಸಿ ಕೆಲವರು ತಮ್ಮ ಯೋಜನೆಗಳಿಗೆ, ತಮ್ಮ ಪ್ರಭುತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಬಳಸುತ್ತಿದ್ದಾರೆ. ಈ ಉದ್ದೇಶದಿಂದ ತಮಗೆ ಬೇಕಾದಂತೆ ನಡೆಯುವವರನ್ನು ಅನುಕೂಲಕರ ಹಾಗು ಆಯಕಟ್ಟಿನ ಜಾಗಗಳಲ್ಲಿ ನೇಮಿಸಿಕೊಂಡಿದ್ದಾರೆ".

ಯಾರನ್ನು ದೂರುವುದು ?

(ಲೇಖನದ ಎಲ್ಲ ಅಭಿಪ್ರಾಯಗಳಿಗೂ ಲೇಖಕರೇ ಜವಾಬ್ದಾರರಾಗಿರುತ್ತಾರೆ - ಸಂ)

 

Author : ಗೌರೀಶ್ ಕೆ. 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited