Untitled Document
Sign Up | Login    
ಸಮಾಜ ಘಾತುಕ ಶಕ್ತಿಗಳ ರಕ್ಷಣೆಗೆ ನಿಂತಿದೆಯೆ ಸರಕಾರ?

ರಾಘವೇಶ್ವರಭಾರತೀ ಶ್ರೀಗಳನ್ನು ಹೋಲುವ ನಕಲಿ ವೇಷಧಾರಿ

ದುಷ್ಟರನ್ನು, ಸಮಾಜ ಘಾತುಕ ಶಕ್ತಿಗಳನ್ನು ಹತ್ತಿಕ್ಕಿ ಪ್ರಜೆಗಳಿಗೆ ನ್ಯಾಯ ಒದಗಿಸುವುದು, ಅವರ ಹಿತಾಸಕ್ತಿಗಳನ್ನು ರಕ್ಷಿಸುವುದು ಸರಕಾರದ ಕರ್ತವ್ಯ ಅಂತ ನಾವೆಲ್ಲ ನಂಬಿದ್ದೇವೆ. ಅಂಥದ್ದರಲ್ಲಿ ಜನರು ಚುನಾಯಿಸಿದ ಸರಕಾರವೇ ಧಗಾಕೋರರ, ಸಮಾಜ ಘಾತುಕರ ರಕ್ಷಣೆಗೆ ನಿಂತರೆ ಏನಾಗುತ್ತದೆ? ಆಗಬಾರದ್ದು ಆಗುತ್ತದೆ.. ದುರದೃಷ್ಟವಶಾತ್ ಕರ್ನಾಟಕದಲ್ಲಿ ಅದೇ ಆಗಿದೆ. ನಮ್ಮ ಘನ ಸರಕಾರ ಯಾವುದೇ ಕಾರಣವನ್ನೂ ನೀಡದೆ, ನ್ಯಾಯಾಲಯದಲ್ಲಿ ವಿಚಾರಣೆಯ ಅಂತಿಮ ಹಂತದಲ್ಲಿದ್ದ, ಆರೋಪಿಗಳಿಗೆ ಶಿಕ್ಷೆಯಾಗುವುದು ಖಚಿತ ಎಂಬ ಪ್ರಕರಣವನ್ನು ಏಕಾಏಕಿ ಹಿಂಪಡೆದು ಶಿಷ್ಠರ ರಕ್ಷಣೆಗೆ ಬದಲಾಗಿ ದುಷ್ಠರ ರಕ್ಷಣೆಗೆ ಮುಂದಾಗಿ ಹೊಸ ಇತಿಹಾಸವನ್ನೇ ಬರೆಯಹೊರಟಿದೆ. ಕಾನೂನು ವಲಯವೂ ಸೇರಿದಂತೆ ಎಲ್ಲರ ಮನದಲ್ಲಿ 'ಹೀಗೂ ಉಂಟೇ' ಎನ್ನುವಂತೆ ವರ್ತಿಸಿದೆ.

ಹೌದು. ಇಂಥದ್ದೊಂದು ಪ್ರಮಾದ ಅಥವಾ ಅನ್ಯಾಯ ಸರಕಾರದ ವತಿಯಿಂದ ಆಗಿಬಿಟ್ಟಿದೆ. 2010ರಲ್ಲಿ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ತೇಜೋವಧೆ ಮಾಡುವ ಉದ್ದೇಶದಿಂದ ಅಶ್ಲೀಲ ನಕಲಿ ಸಿಡಿ ಸೃಷ್ಟಿಸಿ ಅದನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿ, ಆ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವ ಹೀನ ಕೃತ್ಯದಲ್ಲಿ ತೊಡಗಿದ್ದ ಜನರು ಪೊಲೀಸರ ಕ್ಷಿಪ್ರ, ದಕ್ಷ ಕಾರ್ಯಾಚರಣೆಯ ಪರಿಣಾಮ ಸಿಕ್ಕಿಬಿದ್ದು ನ್ಯಾಯಾಲಯದ ಕಟಕೆಟೆ ಏರಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಿಂದೂ ಸಮಾಜದ ಅತ್ಯಂತ ಗೌರವಾನ್ವಿತ, ಪ್ರಸಿದ್ಧ ಯತಿಗಳಲ್ಲೊಬ್ಬರಾದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ವಿರುದ್ಧ ನಡೆದ ಈ ಷಡ್ಯಂತ್ರ ಆಗಿನ ಸರಕಾರವನ್ನೂ ಎಚ್ಚರಿಸಿತ್ತು. ಹಾಗಾಗಿ ವಿಶೇಷ ಅಭಿಯೋಜಕರನ್ನು ಈ ಪ್ರಕರಣದ ವಿಚಾರಣೆಗಾಗಿ ನೇಮಿಸಿ ಶ್ರೀಗಳಿಗೆ, ಅವರ ಲಕ್ಷಾಂತರ ಭಕ್ತ ಶಿಷ್ಯರಿಗೆ, ಸಮಾಜಕ್ಕೆ ನ್ಯಾಯ ಒದಗಿಸುವ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿತ್ತು. ಅದರಂತೆ ಕಾನೂನಿನ ಪ್ರಕ್ರಿಯೆ ಮುಂದುವರಿಯಿತು. ಈ ಮಧ್ಯೆ ಆರೋಪಿಗಳು ಹಲವಾರು ಬಾರಿ ಕಾನೂನಿನ ಕಬಂಧಬಾಹುಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಿದರೂ ತನಿಖಾಧಿಕಾರಿಗಳು ಕಲೆಹಾಕಿದ ಸಾಕ್ಷ್ಯಗಳು ಅಷ್ಟೊಂದು ಪ್ರಬಲವಾಗಿದ್ದುದರಿಂದ ಅವರು ಸಫಲರಾಗಲಿಲ್ಲ. ಈಗ ಪ್ರಕರಣದ ವಿಚಾರಣೆ ಅಂತಿಮ ಹಂತ ತಲುಪಿದ್ದು, ಆರೋಪಿಗಳಿಗೆ ಶಿಕ್ಷೆ ಖಚಿತ ಎನ್ನುವಂತಿದೆ. ಹಾಗಾದರೆ ಈ ಘಟ್ಟದಲ್ಲಿ ಯಕಃಶ್ಚಿತ್ ಕೆಲವು ಕ್ರಿಮಿನಲ್ ಆರೋಪಿಗಳ ರಕ್ಷಣೆಗೆ ಸರಕಾರ ಏಕೆ ಮುಂದಾಯಿತು? ಅದರಲ್ಲೂ, ಪ್ರತಿಷ್ಠಿತ ಮಠಾಧೀಶರೊಬ್ಬರ ಚಾರಿತ್ರ್ಯಹರಣ ಮಾಡುತ್ತಿದ್ದವರ ಪರವಾಗಿ ಸರಕಾರ ಯಾಕೆ ನಿಂತಿತು?. ಯಾವುದೇ ಸಕಾರಣ ನೀಡದೆ, ಈ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯುವುದಕ್ಕೆ ಕಾರಣ ಏನು?..

ರಾಜಕೀಯ ಪ್ರತಿಭಟನೆ, ಕೋಮು ಗಲಭೆ, ವಿದ್ಯಾರ್ಥಿ ಚಳುವಳಿ, ರೈತರ ಆಂದೋಲನ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹೂಡಿದ ಮೊಕದ್ದಮೆಗಳನ್ನು ಸಾರ್ವಜನಿಕ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡು ವಾಪಸ್ ಪಡೆದಿರುವುದು ಈ ಹಿಂದೆ ಸಾಕಷ್ಟು ಬಾರಿ ನಡೆದಿದ್ದು, ಯಾರೂ ಆಕ್ಷೇಪಿಸುವಂತಿರಲಿಲ್ಲ. ಆದರೆ, ಸಮಾಜಘಾತುಕ ಕೃತ್ಯಕ್ಕೆ ಸಂಬಂಧಿಸಿದ ಕ್ರಿಮಿನಲ್ ಆರೋಪ ಹೊತ್ತಿರುವ, ಅದರಲ್ಲೂ ಅವರೇನೂ ಸುಪ್ರಸಿದ್ಧ ಅಥವಾ ಪ್ರಭಾವಶಾಲಿ ವ್ಯಕ್ತಿಗಳೂ ಅಲ್ಲದಿರುವಾಗ ಅವರ ಮೇಲಿರುವ ಕೇಸುಗಳನ್ನು ಇದ್ದಕ್ಕಿದ್ದ ಹಾಗೆ ಹಿಂಪಡೆಯುವುದರ ಹಿಂದಿನ ಮರ್ಮವೇನು?. ಇದು ಯಾರ ಲಾಭಕ್ಕಾಗಿ ಮಾಡಿದ ನಿರ್ಧಾರ? ಕ್ರಿಮಿನಲ್ ಗಳ ವಿರುದ್ಧ ನಡೆಯುತ್ತಿರುವ ಮೊಕದ್ದಮೆ ವಾಪಸ್ ಪಡೆಯುವುದರಲ್ಲಿ ಸಾರ್ವಜನಿಕ ಹಿತಾಸಕ್ತಿಯೇನಾದರೂ ಇದೆಯೆ?. ಇದ್ದಲ್ಲಿ ಇನ್ನಿತರ ಇಂತಹ ಕೇಸುಗಳಲ್ಲಿ ಸರಕಾರ ಇದೇ ರೀತಿಯ ನಿಲುವು ತೋರುತ್ತದೆಯೆ?. ಇಲ್ಲವಾದಲ್ಲಿ ಈ ಕೇಸು ಯಾಕೆ ವಿಶೇಷ?. ತುರಾತುರಿಯಲ್ಲಿ ಈ ನಿರ್ಧಾರ ಯಾಕೆ ತೆಗೆದುಕೊಳ್ಳಲಾಯಿತು?. ಇದು ಯಾರನ್ನು ಒಲಿಸಲು, ರಕ್ಷಿಸಲು ಅಥವಾ ಸಂತುಷ್ಟಪಡಿಸಲು ನಿರ್ಧರಿಸಿದ್ದು?. ಅಥವಾ ಇದರಿಂದ ಯಾರಿಗೆ (ಆರೋಪಿಗಳನ್ನು ಬಿಟ್ಟು) ಪ್ರಯೋಜನವಾಯಿತು? ಸರಕಾರ, ಅದರಲ್ಲೂ ಸಂಪುಟ ಸಭೆಯೇ ಈ ನಿರ್ಧಾರಕ್ಕೆ ಬರಬೇಕಾದರೆ ಅದರ ಹಿಂದೆ ಕೇವಲ ಕೆಲವು ಪುಡಿ ಕ್ರಿಮಿನಲ್ ಆರೋಪಿಗಳಷ್ಟೇ ಇರುವುದಕ್ಕೆ ಸಾಧ್ಯವೆ? ಇಲ್ಲವಾದಲ್ಲಿ ಅವರೆಲ್ಲ ಯಾರು? ಅವರ ಹಿತಾಸಕ್ತಿಗಳೇನು? ಸರಕಾರದ ಮೇಲೆ ಅಂಥ ಒತ್ತಡ, ಪ್ರಭಾವ ಬೀರಬೇಕಾದರೆ ಅವರು ಎಷ್ಟು ದೊಡ್ಡ ಕುಳಗಳಿರಬೇಕು?. ಸರಕಾರ ತನ್ನ ಪ್ರತಿಷ್ಠೆ, ಗೌರವವನ್ನೇ ಒತ್ತೆಯಿಟ್ಟು ಇಂಥಾ ನಿರ್ಧಾರಕ್ಕೆ ಬರಬೇಕಾದರೆ ಅದರ ಮೇಲಿದ್ದ ಒತ್ತಡ, ಪ್ರಭಾವ ಎಷ್ಟಿದ್ದಿರಬೇಕು?.

'ಧರ್ಮ ರಕ್ಷಕ'ರ ದಿವ್ಯ ಮೌನ

ಹಿಂದೂ ಧರ್ಮ, ಸಾಧು ಸಂತರ ಮಾನ ಹಾಗೂ ಈ ದೇಶದ ಭವ್ಯ ಸಂಸ್ಕೃತಿಯ ರಕ್ಷಣೆಗೆ ದೊಣ್ಣೆ ಹಿಡಿದು ಟೊಂಕ ಕಟ್ಟಿ ನಿಂತ 'ಸಂಘ'ಗಳ ಮಹಾ ದೇಶಭಕ್ತರಿಗೆ ಈ ಅನ್ಯಾಯ ಗೋಚರಿಸುತ್ತಿಲ್ಲ ಯಾಕೆ?. ಅವರು ಯಾರ ರಕ್ಷಣೆಗೆ ನಿಂತಿದ್ದಾರೆ?. ಸಮಾಜಕ್ಕಾಗಿ ಹಗಲಿರುಳೂ ದುಡಿಯುತ್ತಿರುವ ಸಂತರೊಬ್ಬರಿಗೆ, ಅವರ ಅಸಂಖ್ಯಾತ ಭಕ್ತ ಶಿಷ್ಯರಿಗೆ ಆಗುತ್ತಿರುವ ಅನ್ಯಾಯಕ್ಕೆ ಸ್ಪಂದಿಸದ ಈ ಜನರು ದೇಶದ ಸಂಸ್ಕೃತಿಯನ್ನು ಏನು ಉಳಿಸಿಯಾರು? ಅವರ ಅಜೆಂಡಾ ಏನು?. ಸಣ್ಣ ಮಗುವಿಗೂ ತಿಳಿಯುವ ಸತ್ಯವನ್ನು ಅರಿಯಲಾರದ ಈ 'ಸಮಾಜ ರಕ್ಷಕರು' ಅದೇನನ್ನು ಕಡಿದು ಗುಡ್ಡೆ ಹಾಕಬಲ್ಲರು?. 'ನಾವು ತಟಸ್ಥರು' ಎನ್ನುವ ಈ ಆಷಾಢಭೂತಿಗಳು ದೇಶವನ್ನೇನು ರಕ್ಷಿಸಿಯಾರು ಮಣ್ಣಾಂಗಟ್ಟಿ?.

ಆದರೆ, ಒಂದಂತೂ ಸತ್ಯ. ಈ ನಿರ್ಧಾರದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎನ್ನುವುದು ನಿಸ್ಸಂದೇಹ. ಹಾಗಾದರೆ ಅವರು ಯಾರು?. ರಾಮಚಂದ್ರಾಪುರ ಮಠದ ಹಾಗೂ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ವಿರುದ್ಧ ನಿರಂತರವಾಗಿ ಷಡ್ಯಂತ್ರಗಳು ನಡೆಯುತ್ತಿವೆ, ಅವುಗಳ ಹಿಂದೆ ಪ್ರಭಾವೀ ಶಕ್ತಿಗಳು ಇವೆ ಎನ್ನುವ ಮಠದ ಭಕ್ತ-ಶಿಷ್ಯರ ಆರೋಪಕ್ಕೆ ಈ ಘಟನೆ ಪುಷ್ಟಿಕೊಡುವುದಿಲ್ಲವೆ?. ಸಂತ್ರಸ್ಥರಿಗೆ ನ್ಯಾಯ ಪಡೆಯುವ ಹಕ್ಕಿಲ್ಲವೆ? ಶ್ರೀಗಳ ವಿರುದ್ಧ ಮಾಡಲಾಗಿರುವ ಅತ್ಯಾಚಾರ ಆರೋಪದ ಹಿಂದಿರುವ ಶಕ್ತಿಗಳು ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿವೆ, ಆ ಮೂಲಕ ಮಠದ ವಿರುದ್ಧ ನಿರಂತರ ಷಡ್ಯಂತ್ರ ನಡೆಯಿತ್ತಿದೆ ಎನ್ನುವ ಆರೋಪವನ್ನು ನಿರಾಕರಿಸುವ ಪ್ರಯತ್ನ ಇದು ಎಂದು ಮಠದ ಹಲವಾರು ಶಿಷ್ಯರು ಹೇಳುತ್ತಿರುವುದರಲ್ಲಿ ಸತ್ಯಾಂಶವಿದೆ ಅನಿಸುವುದಿಲ್ಲವೆ? ಪ್ರಶ್ನೆಗಳನ್ನು ಕೇಳಿದಷ್ಟೂ ಉತ್ತರ ಜಟಿಲವಾಗುತ್ತದೆ. ಆದರೂ ಉತ್ತರ ಹುಡುಕಲೇ ಬೇಕಾಗಿದೆ. ಇಲ್ಲವಾದಲ್ಲಿ ಸರಕಾರದ, ನ್ಯಾಯ ವ್ಯವಸ್ಥೆಯಲ್ಲೇ ಜನರಿಗೆ ನಂಬಿಕೆ ಕುಂಠಿತವಾಗುತ್ತದೆ.


(ಲೇಖನದ ಅಭಿಪ್ರಾಯಗಳಿಗೆ ಲೇಖಕರೇ ಜವಾಬ್ದಾರರಾಗಿರುತ್ತಾರೆ - ಸಂ)

 

Author : ಸಮಚಿತ್ತ 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited