Untitled Document
Sign Up | Login    
ಸಂಗೀತ ಕೃಪಾ ಕುಟೀರ ಮತ್ತು ಸಾಧನೆಯ ಹಾದಿ


ಉದ್ಯಾನ ನಗರಿಯಲ್ಲಿ ಸದ್ದಿಲ್ಲದೇ ನಿರಂತರ ಸಂಗೀತ ಸೇವೆಯಲ್ಲಿ ತೊಡಗಿರುವ ಸಂಸ್ಥೆ ’ಸಂಗೀತ ಕೃಪಾ ಕುಟೀರ’. ನಗರದಲ್ಲಿ ಹಿಂದೂಸ್ತಾನಿ ಸಂಗೀತದ ಬೀಜಬಿತ್ತಿ ನೀರೆರೆದು ಪೋಷಿಸಿದವರಲ್ಲಿ ಪ್ರಮುಖರಾದ ಸಂಗೀತ ಮಹಾಮಹೋಪಾದ್ಯಾಯ ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿಗಳ ಕೃಪಾಶೀರ್ವಾದದೊಂದಿಗೆ 1984ರ ಫೆಬ್ರುವರಿ 5ರಂದು ವಿದ್ವಾನ್ ಗುಂಡಾಶಾಸ್ತ್ರಿಗಳು ಪ್ರಾರಂಭಿಸಿದ ಸಂಸ್ಥೆ ಇದು. ಅಂದಿನಿಂದ ಇಂದಿನ ವರೆಗೂ ಪ್ರತೀ ತಿಂಗಳೂ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಂಗೀತ ಪ್ರಿಯರಿಗೆ ಸಂಗೀತ ರಸದೌತಣ ನೀಡುತ್ತಾ ಬಂದಿದೆ. ಅಲ್ಲದೇ ಹಿರಿ ಕಿರಿಯ ಕಲಾವಿದರಿಗೆ ವೇದಿಕೆ ಒದಗಿಸಿ ಪ್ರೋತ್ಸಾಹಿಸುತ್ತಾ ಬೆಂಗಳೂರಿನ ಪ್ರಮುಖ ಸಂಗೀತ ಸಂಸ್ಥೆಗಳಲ್ಲಿ ಒಂದಾಗಿ ರೂಪುಗೊಂಡಿದೆ.

32 ವರ್ಷಗಳಿಂದ ಭಾರತೀಯ ಸಂಗೀತ ಪದ್ದತಿಯ ಕವಲುಗಳಾದ ಹಿಂದೂಸ್ತಾನೀ ಹಾಗೂ ಕರ್ನಾಟಕೀ ಶಾಸ್ತ್ರೀಯ ಶೈಲಿಯ ಸಂಗೀತ ಕಾರ್ಯಕ್ರಮಗಳನ್ನು ಪ್ರತೀ ತಿಂಗಳೂ ಆಯೋಜಿಸುತ್ತಾ ಸಂಗೀತ ಪ್ರಿಯರಿಗೆ ರಸದೌತಣವನ್ನು ನೀಡುತ್ತಾ ಬಂದಿದೆ. ಇದುವರೆಗೆ ೩೮೦ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಿ ೫೦ಕ್ಕೂ ಹೆಚ್ಚು ಹಿರಿಯ ಸಂಗೀತ ಕಲಾವಿದರನ್ನು ’ಸಂಗೀತ ಕಲಾರವಿಂದ’ ಉಪಾದಿಯೊಂದಿಗೆ ಗೌರವಿಸಿದೆ. ಜೊತೆಗೆ ವಿದ್ಯಾ ಕ್ಷೇತ್ರ, ಕೀರ್ತನೆ, ಸಾರ್ವಜನಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಿದೆ. ಕುಟೀರವು ಸ್ವಾಮಿ ವಿವೇಕಾನಂದ, ಸಂಗೀತ ಪಿತಾಮಹ ಶ್ರೀ ವಾದಿರಾಜ, ಯತಿವರೇಣ್ಯ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನೂ ಪೂಜ್ಯ ಪಂಡಿತ್ ಆರ್.ವಿ.ಶೇಶಾದ್ರಿ ಗವಾಯಿಗಳ ಪುಣ್ಯ ಸ್ಮರಣೆ ಸೇರಿದಂತೆ ಹಲವು ಸಾಧಕರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.

ಇದೇ ಏಪ್ರಿಲ್ 16 ಹಾಗೂ 17ರಂದು ಸಂಗೀತ ಕೃಪಾ ಕುಟೀರವು 32ನೇ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಂಡಿದೆ. 17ನೇ ತಾರೀಕು ಭಾನುವಾರದಂದು ಬನಶಂಕರಿ 1ನೇ ಹಂತದಲ್ಲಿರುವ ಸ್ವಾಮಿ ವಿವೇಕಾನಂದ ವಿದ್ಯಾಶಾಲಾ ಆವರಣದಲ್ಲಿ, ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಪರಮ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ಅವರ ಅಧ್ಯಕ್ಷತೆಯಲ್ಲಿ ಸಂಜೆ 5:00 ಗಂಟೆಯಿಂದ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ವಿದುಷಿ ವಸಂತಮಾಧವಿ.ಟಿ.ಎಸ್ ಅವರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಲ್ಲಿಸಿದ ಸೇವೆಗಾಗಿ ಹಾಗೂ ಪಂಡಿತ್ ಡಿ.ಕುಮಾರ ದಾಸ್ ಅವರಿಗೆ ಹಿಂದೂಸ್ತಾನೀ ಸಂಗೀತ ಸಾಧನೆಗಾಗಿ ಸಂಗೀತ ಕೃಪಾ ಕುಟೀರವು ’ಸಂಗೀತ ಕಲಾರವಿಂದ’ ಅಭಿದಾನವನಿತ್ತು ಗೌರವಿಸುತ್ತಿದೆ. ಕಾರ್ಯಕ್ರಮಕ್ಕೆ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ.ಎಲ್.ರವಿಸುಬ್ರಹ್ಮಣ್ಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಅಂದು ವಿದುಷಿ ವಸಂತಮಾಧವಿಯವರ ಗಾಯನ ಕಚೇರಿಯೂ ಇರಲಿದೆ ಮತ್ತು ಅದಕ್ಕೂ ಮುಂಚಿನ ದಿ ನ ಶನಿವಾರ ಸಂಜೆ 5:00 ಗಂಟೆಯಿಂದ ಪಂಡಿತ್ ಡಿ. ಕುಮಾರದಾಸರು ಗಾಯನ ಕಚೇರಿ ನಡೆಸಿಕೊಡಲಿದ್ದಾರೆ.

ನಿರಂತರ ಸಂಗೀತ ಶಾರದೆಯ ಕೈಂಕರ್ಯದಲ್ಲಿ ತೊಡಗಿರುವ ಸಂಗೀತ ಕೃಪಾ ಕುಟೀರದ ಆಧಾರ ಸ್ಥಂಭ ವಿದ್ವಾನ್ ಎನ್.ಎಸ್. ಗುಂಡಾಶಾಸ್ತ್ರಿಗಳು. ದಿವ್ಯತ್ರಯರನ್ನು ನಂಬಿ ನಡೆಯುವ ಇವರು ಸರಳ-ಜೀವನ, ಉನ್ನತ-ವಿಚಾರಗಳನ್ನು ಮೈಗೂಡಿಸಿಕೊಂಡವರು. ಉತ್ತಮ ತಬಲಾ ವಾದಕರಾದ ಇವರಿಗೆ ಸ್ವಯಂ ಸಾತ್ ಸಂಗತ್ ಅಥವಾ ಸೋಲೋ ಕಾರ್ಯಕ್ರಮಗಳನ್ನು ನೀಡುವುದಕ್ಕಿಂತ ಹೆಚ್ಚಾಗಿ ಶಿಷ್ಯರನ್ನು ತಯಾರು ಮಾಡುವುದರಲ್ಲಿಯೇ ಹೆಚ್ಚು ಆಸಕ್ತಿ. ಇವರ ಮಾರ್ಗದರ್ಶನದಲ್ಲಿ ಹಲವಾರು ವಿದ್ಯಾರ್ಥಿಗಳು ತಬಲಾವಾದನವನ್ನೇ ವೃತ್ತಿಯಾಗಿಸಿಕೊಂಡು ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

"ಪ್ರತಿಯೊಬ್ಬರಲ್ಲೂ ಅಗಾಧವಾದ ಶಕ್ತಿ ಇದೆ, ವಿವೇಕರ ಮಾರ್ಗದಲ್ಲಿ ನಡೆಯುವವರ ಪದಕೋಶದಲ್ಲಿ ಆಗದು ಎಂಬ ಶಬ್ಧವೇ ಇರದು, ಉತ್ತಿ?ತ ಜಾಗೃತಾ ಪ್ರಾಪ್ಯ ವರಾನ್ ನಿಭೋದತ ಇತ್ಯಾದಿಯಾಗಿ ಸ್ವಾಮಿ ವಿವೇಕಾನಂದರ ಮಾತುಗಳನ್ನು ನೆನಪಿಸುತ್ತಾ ಸದಾ ಸಾಧನೆಗೆ ಪ್ರೇರಣೆ ನೀಡುವ ಮೂಲಕ ಅವರ ಬಳಿ ಪಾಠಕ್ಕೆ ಬರುವವರಿಗೆ ಜೀವನ ಕಲೆಯನ್ನೂ ಬೋಧಿಸುತ್ತ ಉತ್ತಮ ಗುರು ಎನಿಸಿಕೊಂಡಿದ್ದಾರೆ.

ವಿದುಷಿ ವಸಂತಮಾಧವಿ ಟಿ.ಎಸ್

ವಿದುಷಿ ವಸಂತಮಾಧವಿ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕಲಾವಿದೆ. ಇವರು ತಮ್ಮ ಸಂಗೀತ ಕಲಿಕೆಯನ್ನು ಆರಂಭಿಸಿದ್ದು ಐದರ ಎಳವೆಯಲ್ಲಿಯೇ. ತೆಲಗಿನ ಖ್ಯಾತ ವಿದ್ವಾಂಸರಾದ ವಿದ್ವಾನ್ ಶ್ರೀನಿವಾಸ್ ರಾಘವಾಚಾರ್ ಮತ್ತು ವಿದ್ವಾನ್ ಗೋಪಾಲಕೃಷ್ಣ ಆಚಾರ್, ನಂತರ ’ಗಾನಕಲಾ ಸಿಂಧು’ ’ಗಾನಕಲಾಕುಶಲ’ ಡಿ.ಸುಬ್ಬರಾಮಯ್ಯ ಅವರ ಬಳಿಯಲ್ಲಿ.

ವಸಂತಮಾಧವಿ ಅವರದ್ದು ಬಹುಮುಖ ಪ್ರತಿಭೆ. ಉತ್ತಮ ಗಾಯಕರಾದ ಅವರು ಸಂಗೀತ ಸಂಯೋಜಕರೂ, ಬರಹಗಾರರೂ, ಸಂಗೀತ ಶಾಸ್ತ್ರಜ್ಞರೂ, ಕಾರ್ಯಕ್ರಮ ಆಯೋಜಕರೂ ಹೌದು. ಜೊತೆಗೆ ಇವೆಲ್ಲವಕ್ಕೂ ಕಳಸವಿಟ್ಟಂತೆ ಹಲವಾರು ಶಿಷ್ಯರನ್ನು ತಯಾರು ಮಾಡಿದ ಗುರು.

ಬೆಂಗಳೂರು ಆಕಾಶವಾಣಿಯಲ್ಲಿ ಸಂಗೀತ ಸಂಯೋಜಕಿಯಾಗಿ, ನಿಲಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ದೂರದರ್ಶನದಲ್ಲಿ ಕೂಡ ಇವರ ಅನೇಕ ಕಾರ್ಯಕ್ರಮಗಳು ಮೂಡಿಬಂದಿವೆ. ಅವುಗಳಲ್ಲಿ ಇತ್ತೀಚೆಗೆ ಬೆಂಗಳೂರು ಆಕಾಶವಾಣಿಯಲ್ಲಿ ಮೂಡಿಬಂದ ’ಅಮೃತವರ್ಷಿಣಿ’ ಕಾರ್ಯಕ್ರಮ ವಿಶೇಷವಾದದ್ದು. ನವರಾತ್ರಿಯಲ್ಲಿ ನಡೆಸಿಕೊಟ್ಟ ’ಶಿವೆ ವೈಭವೆ’ ಕಾರ್ಯಕ್ರಮ ಬೆಂಗಳೂರು, ಮೈಸೂರು, ಪಾಂಡಿಚೇರಿ ಮತ್ತಿತರ ಆಕಾಶವಾಣಿ ಕೇಂದ್ರಗಳಲ್ಲಿ ಪ್ರಸಾರಗೊಡು ಬಹು ಜನಪ್ರಿಯತೆಯನ್ನೂ ಗಳಿಸಿತು. ಇದಿರಾಗಾಂಧಿ ಓಪನ್ ಯುನಿವರ್ಸಿಟಿಯ ಜ್ಞಾನವಾಣಿಯಲ್ಲಿ ಮೂಡಿಬಂದ ಇವರ ಸಂಗೀತ ಪಾಠ ಬಹು ಮನ್ನಣೆ ಪಡೆಯಿತು.

ಸಂಸ್ಕೃತ ಕೋವಿದರೂ ಆದ ವಸಂತಮಾಧವಿಯವರು ಸಂಸ್ಕೃತ, ಕನ್ನಡ, ತೆಲಗಿನಲ್ಲಿ ಅವರು ಹಲವಾರು ಗೀತೆಗಳನ್ನೂ ಕೃತಿಗಳನ್ನೂ ಸಂಯೋಜಿಸಿದ್ದಾರೆ. ’ವಾಗ್ಗೇಯ ರತ್ನಾವಳೀ’ ವಸಂತ ಮಾಧವಿಯವರು ರಚಿಸಿ ಸಂಯೋಜಿಸಿದ ಗೀತೆಗಳ ಸಂಗ್ರಹ. ಎರಡು ಅವತರಣಿಕೆಗಳಲ್ಲಿದೆ. ಹಾಡುಗಾರಿಕೆಯಲ್ಲಿ ಇವರು ಸಂಗೀತದ ರಾಗ ಭಾವಗಳನ್ನು ಗಮಕದಲ್ಲಿಯೂ, ಆಲಾಪ, ನೆರವಲ್ ಹಾಗೂ ತಾನ್‌ಗಳ ಮೂಲಕವೂ ತೋರುವ ಪರಿ ಅನನ್ಯ. ಕೇಳಗರನ್ನು ಮಂತ್ರಮುಗ್ಧಗೊಳಿಸುವಂತದ್ದು.

ವಿದುಷಿ ವಸಂತಮಾಧವಿಯವರ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಸಂಗೀತ ವಾಗ್ಗೇಯ ಭೂಷಿಣಿ, ಶಾಸ್ತ್ರ ಕೌಸ್ತುಭ, ಸ್ವರ ಭೂಷಿಣಿ, ಕನಾಟಕ ಸರ್ಕಾರದ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮುಖ್ಯವಾದವುಗಳು.

ವಸಂತಮಾಧವಿಯವರು ದೇಶ ವಿದೇಶದ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದೇ ಅಲ್ಲದೇ ಸಂಗೀತ ಸಂಬಂಧೀ ಉಪನ್ಯಾಸಗಳನ್ನೂ, ಕಾರ್ಯಾಗಾರಗಳನ್ನೂ ನಡೆಸಿಕೊಟ್ಟು ಕರ್ನಾಟಕ ಸಂಗೀತದ ಘಮವನ್ನು ಜಗತ್ತಿನ ಹಲವೆಡೆ ಪಸರಿಸಿದ್ದಾರೆ. ಶ್ರೀ.ಡಿ.ಸುಬ್ಬರಾಮಯ್ಯ ಫೈನ್ ಆರ್ಟ್ಸ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದಾರೆ. ಈ ಸಂಗೀತ ಸಂಸ್ಥೆ ತನ್ನದೇ ಆದ ಪಠ್ಯಕ್ರಮವನ್ನು ಹೊಂದಿದೆ. ಸಂಗೀತದಲ್ಲಿ ಹೆಚ್ಚಿನ ಅಭ್ಯಾಸ ಮಾಡುವವರಿಗೆ ಅವರ ಈ ಸಂಸ್ಥೆ ವಿದ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹಿಸುತ್ತಿದೆ.
ವಿದುಷಿ ವಸಂತ ಮಾಧವಿಯವರು ’ರಾಗಶ್ರೀ ಕಾಲೇಜ್ ಆಫ್ ಮ್ಯೂಸಿಕ್’ ಎಂಬ ಸಂಗೀತ ಶಾಲೆಯನ್ನು ಸ್ಥಾಪಿಸಿ ಅದರ ಪ್ರಾಂಶುಪಾಲರಾಗಿ ಹಲವಾರು ವಿದ್ಯಾರ್ಥಿಗಳನ್ನು ಗಾಯನ, ವಾದನದಲ್ಲಿ ತಯಾರು ಮಾಡುತ್ತಾ ಪ್ರತೀ ವರ್ಷವೂ ’ಪ್ರತಿಭಾ ಉತ್ಸವ’ವನ್ನು ಹಮ್ಮಿಕೊಳ್ಳುವ ಮೂಲಕ ಪರಿಣಿತ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುತ್ತಾ ಬಂದಿದ್ದಾರೆ. ಸಂಗೀತ ಚಿಕಿತ್ಸೆ : ಇನ್ನು ಸಂಗೀತ ಚಿಕಿತ್ಸೆಯಲ್ಲಿ ಆಸಕ್ತಿಯನ್ನು ಹೊಂದಿದ ಇವರು ಪ್ರಾರಂಭಿಕ ಹಂತದಲ್ಲಿರುವ ಅಸ್ತಮಾ, ಬ್ರಾಂಕೈಟೀಸ್, ಟಾನ್ಸಿಲ್, ಬಿಪಿ ಮುಂತಾದವುಗಳಿಗೆ ಸಂಗೀತ ಚಿಕಿತ್ಸೆ ಪರಿಣಾಮಕಾರಿ ಎಂಬುದನ್ನು ಸಾಬೀತು ಮಾಡಿ ತೋರಿಸುತ್ತಾರೆ.

ಸಂಗೀತ ಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿದ ಅವರು ಭಾರತ ಭಾರತಿ ಸಂಗೀತ ಸೇವಾ ಪ್ರತಿ?ನವು ತ್ಯಾಗರಾಜರ ಜೀವನಾಧಾರಿತ "ತ್ಯಾಗರಾಜ ಯೋಗ ವೈಭವಂ" ಸಮಗ್ರ ಸಂಪುಟ ಹೊರತರುವ ಸಂದರ್ಭದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೇ "ಶ್ರೀ ಶ್ಯಾಮ ವಾಗ್ಗೇಯ ವೈಭವಂ" ಕೃತಿಯ ಮುಖ್ಯ ಸಂಪಾದಕರಾಗಿ ಹಾಗೂ ಸಂಕಲನಕಾರರಾಗಿಯೂ ಕೌಶಲ್ಯತೆ ಮೆರೆದಿದ್ದಾರೆ. ಸಂಗೀತ ಸೀನಿಯರ್ ಮತ್ತು ಪ್ರವೀಣ ವಿಭಾಗದ ಪಠ್ಯಕ್ರಮ ರಚನೆ ಪರೀಕ್ಷಾ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ವಿದುಷಿ ವಸಂತ ಮಾಧವಿಯವರು ರಾಜ್ಯ ಸಂಗೀತ ನೃತ್ಯ ಅಕಾಡೆಮಿ 60-70ರ ದಶಕದಲ್ಲಿ ವಿದ್ವಾನ್ ಮತ್ತೂರು ಶಂಕರ ಮೂರ್ತಿಯವರ ಪುಸ್ತಕದಿಂದ ಸಂಗ್ರಹಿಸಿ 9 ಸಂಪುಟಗಳಲ್ಲಿ ಹೊರತಂದಿರುವ ’ಕರ್ನಾಟಕ ಸಂಗೀತ ಸಂಪದ’ ಮಾಲಿಕೆಗೆ ಮುಖ್ಯ ಸಂಪಾದಕಿಯಾಗಿ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಅವರು ರಚಿಸಿದ "ಥಿಯರಿ ಆಫ್ ಮ್ಯೂಸಿಕ್" ’ಸಂಗೀತ ಶಾಸ್ತ್ರ’ ಪುಸ್ತಕ ಕರ್ನಾಟಕ ಸಂಗೀತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಬಹು ಉಪಯೋಗಿ. ಸಂಗೀತ ನೃತ್ಯ ಅಕಾಡೆಮಿಯ ಪುರಸ್ಕೃತರ ಬಗ್ಗೆ ಸುವರ್ಣಕರ್ನಾಟಕ ವಿಶೇಷ ಸಂಚಿಕೆಯಲ್ಲಿ ಅವರು ಬರೆದ ಲೇಖನ, ವಿಶಿಷ್ಠವಾದುದು. ’ಅನನ್ಯ ಅಭಿವ್ಯಕ್ತಿ’ ಮಾಸಿಕದಲ್ಲಿ ಹಿಂದಿನ ತಲೆಮಾರಿನ ಸಂಗೀತಗಾರರು ಮತ್ತು ಸಂಗೀತ ಶಾಸ್ತ್ರಜ್ಞರ ಬಗ್ಗೆ ಮೂಡಿ ಬರುತ್ತಿದ್ದ ’ಅವಿಸ್ಮರಣೀಯರು’ ಅವರ ಜನಪ್ರಿಯ ಅಂಕಣ. ಜನ್ಯ ರಾಗಗಳ ಕುರಿತಾದ ಅವರ ಲೇಖನಗಳು ಮಾಹಿತಿ ಪೂರ್ಣ.

ಪಂಡಿತ್ ಡಿ.ಕುಮಾರ ದಾಸ್

ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮ ವಿಶಿಷ್ಠವಾದ ಗಾಯನ ಶೈಲಿ ಹಾಗೂ ಕಂಠಸಿರಿಯಿಂದ ಯಿಂದ ಚಿರಪರಿಚಿತರಾದವರು ಪಂಡಿತ್ ಕುಮಾರ ದಾಸ್‌ರವರು.

ಕುಮಾರದಾಸ್.ಡಿ ಅವರು ಮೂಲತಃ ಉತ್ತರ ಕರ್ನಾಟಕದ ಬಳ್ಳಾರಿಯ ಯೆಲಬೆಂಚಿಯವರು. ಇವರು ಪದವಿಯನ್ನು ಪಡೆದದ್ದು ಸಂಗೀತದಲ್ಲಿಯೇ. ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಬಳಿಯಲ್ಲಿ ಸುಮಾರು 15 ವರ್ಷಕ್ಕೂ ಹೆಚ್ಚು ಕಾಲ ಗುರುಕುಲ ಮಾದರಿಯಲ್ಲಿ ಸಂಗೀತ ವಿದ್ಯೆ ಕಲಿತು ವಿದ್ವತ್ ಪದವಿಯನ್ನು ಪಡೆದರು. ತದನಂತರ ಗ್ವಾಲಿಯರ್ ಮತ್ತು ಕಿರಾನಾ ಗರಾನಾಗಳಲ್ಲಿಯೇ ಮುಂಬೈ ಗಂಧರ್ವ ಮಹಾವಿದ್ಯಾಲಯದಲ್ಲಿ ಉನ್ನತ ದರ್ಜೆಯಲ್ಲಿ ’ಸಂಗೀತ ವಿಶಾರದ’ ಪದವಿಯನ್ನು ತಮ್ಮದಾಗಿಸಿಕೊಂಡ ಕುಮಾರ ದಾಸರು ಭಾರತ ಸರ್ಕಾರ ನಡೆಸುವ ಸಂಗೀತ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಲ್ ಇಂಡಿಯಾ ರೆಡಿಯೋದಲ್ಲಿ ’ಎ ಗ್ರೇಡ್’ ನಿಲಯ ಕಲಾವಿದರಾಗಿ ನೇಮಕಗೊಂಡ ಅವರು ರೇಡಿಯೋ ಹಾಗೂ ದೂರದರ್ಶನದ ಮಾಧ್ಯಮದ ಮೂಲಕ ಕೇಳುಗರಿಗೆ, ನೋಡುಗರಿಗೆ ಶಾಸ್ತ್ರೀಯ ಸಂಗೀತದ ಹುಚ್ಚು ಹಿಡಿಸಿದವರು. ಸಂಗೀತ ಪ್ರೇಮಿಗಳನ್ನು ತಮ್ಮ ಅದ್ಭುತ ಕಂಠ ಸಿರಿಯಿಂದ ರಂಜಿಸಿದವರು.

ಕುಮಾರ ದಾಸರು ದಾಸರ ಪದಗಳು, ವಚನಗಳು ಮತ್ತು ಮಿರಾಭಜನ್‌ಗಳನ್ನು ಭಾವ ತುಂಬಿ ಹಾಡುವ ಮೂಲಕ ಕೇಳುಗರನ್ನು ಭಕ್ತಿ ಭಾವದಲ್ಲಿ ತೇಲಿಸುತ್ತಾರೆ. ಶಾಸ್ತ್ರೋಕ್ತ ರೀತಿಯಲ್ಲಿ ರಾಗಗಳನ್ನು ಬೆಳೆಸಿ ಜಬರ್ದಸ್ತ್ ತಾನಗಳನ್ನು ಹಾಡುವುದರಲ್ಲಿ ಸಿದ್ಧಹಸ್ತರು.

ಕುಮಾರ ದಾಸರ ಶಾಸ್ತ್ರೀಯ ಸಂಗೀತ ಕಚೇರಿಯಿದೆಯೆಂದರೆ ಸಹೃದಯರಿಗಂತೂ ರಸದೌತಣವೇ ಸರಿ. ತಮ್ಮ ವಿಶಿಷ್ಠ ಹಾಡುಗಾರಿಕೆಯ ಮೂಲಕ ದೇಶದ ಉದ್ದಗಲಕ್ಕೂ ವಿವಿಧ ವೇದಿಕೆಗಳಲ್ಲಿ ಸಂಗೀತ ಸುಧೆ ಹರಿಸಿ ತಮ್ಮದೇ ಆದ ಅಭಿಮಾನಿ ವರ್ಗವನ್ನೂ ಸೃಷ್ಟಿಸಿಕೊಂಡಿದ್ದಾರೆ. ಧಾರವಾಡ ಆಕಾಶವಾಣಿಯಲ್ಲಿ ನಿಲಯ ಕಲಾವಿದರಾಗುವುದಕ್ಕೂ ಮುಂಚೆ ಕುಮಾರದಾಸರು ಗದಗದ ವಿಜಯ ಕಲಾಮಂದಿರದಲ್ಲಿ 1979-1986ರ ಅವಧಿಯಲ್ಲಿ ಸಂಗೀತ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ಹಲವಾರು ಶಿಷ್ಯರನ್ನು ತಯಾರು ಮಾಡಿದ್ದಾರೆ. ತದನಂತರದಲ್ಲಿ ದಾರವಾಡ ಆಕಾಶವಾಣಿ ಕೇಂದ್ರದಲ್ಲಿ ಹಿಂದೂಸ್ಥಾನಿ ಸಂಗೀತದಲ್ಲಿ ಎ ಗ್ರೇಡ್ ನಿಲಯ ಕಲಾವಿಧರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ.

ಪ್ರಶಸ್ತಿಗಳು: 1977ರಲ್ಲಿ ಸ್ವತಃ ಪುಟ್ಟರಾಜ ಗವಾಯಿಗಳಿಂದ ಸ್ವರ್ಣ ಪದಕ, ’ಗಾನ ಕುಶಲ’, ’ಸ್ವರಶ್ರೀ’, ’ಪಂಡಿತ’ ಪದವಿ, ರಮಣಶ್ರೀ’, ಕನಕ ಪುರಸ್ಕಾರ’, ’ಚಂದ್ರಹಾಸ’ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಳಗೊಂಡಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

ಶಿಷ್ಯರಿಗೆ ನೆಚ್ಚಿನ ಗುರು : ಸಂಗೀತ ಶಾಸ್ತ್ರ ಹಾಗೂ ಪ್ರಯೋಗ ಎರಡರಲ್ಲೂ ಪ್ರಾವಿಣ್ಯತೆ ಪದೆದಿರುವ ಅವರ ಬಳಿ ನಿತ್ಯವೂ ವಿದ್ಯಾರ್ಥಿಗಳಷ್ಟೇ ಅಲ್ಲದೇ ಹಿರಿ ಕಿರಿಯ ಸಂಗೀತಗಾರರು ಪಾಠಹೇಳಿಸಿಕೊಂಡು ಸಲಹೆ-ಸೂಚನೆ, ಮಾರ್ಗದರ್ಶನ ಪಡೆಯುತ್ತಾರೆ.ಗಾಯಕರು ಮಾತ್ರವಲ್ಲದೇ ವಾದಕರೂ ಬಂದು ಅವರಲ್ಲಿ ತರಬೇತಿ ಪಡೆಯುತ್ತಾರೆ. ತಮ್ಮ ಸರಳ ಹಾಗೂ ನಿಗರ್ವಿ ವ್ಯಕ್ತಿತ್ವದಿಂದಾಗಿ ಶಿಷ್ಯರ ಅಚ್ಚುಮೆಚ್ಚಿನ ಗುರುಗಳಾಗಿರುವ ಅವರು ಹೊಸಬರನ್ನು ಬೆನ್ನು ತಟ್ಟಿ ಕಲೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಾರೆ.

 

Author : ವಿದ್ಯಾ ಭಟ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited