Untitled Document
Sign Up | Login    
ಐತಿಹಾಸಿಕ ಬೆಂಗಳೂರು ಕರಗ ನೋಡ ಬನ್ನಿ

ಧರ್ಮರಾಯನ ಗುಡಿ

ಸಿಲಿಕಾನ್ ಸಿಟಿ ಬೆಂಗಳೂರಿನ ಧಾರ್ಮಿಕ ಆಚರಣೆಗಳಲ್ಲಿ ಕರಗ ಮಹೋತ್ಸವಕ್ಕೆ ಅಗ್ರಸ್ಥಾನ. ಕರಗದ ಮೇಲೆ ರಸ್ತೆಗಳ ಇಕ್ಕೆಲಗಳಲ್ಲಿ ನೆರೆಯುವ ಜನರು ಎರಚುವ ಮಲ್ಲಿಗೆಯ ಮೊಗ್ಗುಗಳು ಕರಗ ನೆನೆದೊಡನೆ ಅವರ ಮನದಲ್ಲಿ ಕುಣಿಯಲಾರಂಬಿಸಿರುತ್ತವೆ. ಬಿಬಿಎಂಪಿ ಕೇಂದ್ರ ಕಚೇರಿಗೆ ಅನತಿ ದೂರದಲ್ಲೇ ಇರುವ ನಗರ್ತ ಪೇಟೆಯಲ್ಲಿರುವ ಪುರಾತನ ದೇವಾಲಯ ಧರ್ಮರಾಯನ ಗುಡಿ ಕರಗ ಮಹೋತ್ಸವದ ಕೇಂದ್ರಬಿಂದು.

ವಿಜಯನಗರ ಶೈಲಿಯಲ್ಲಿರುವ ಪ್ರಧಾನ ರಾಜಗೋಪುರ ಪಕ್ಕದಲ್ಲಿ ಎರಡು ಅದೇ ಮಾದರಿಯ ಚಿಕ್ಕ ರಾಜಗೋಪುರ ಒಳಗೊಂಡ ಹೊರನೋಟವಿರುವ ಈ ಸುಂದರ ದೇವಾಲಯದಲ್ಲಿ ಪಾಂಡವರಲ್ಲಿ ಅಗ್ರಜನಾದ ಧರ್ಮರಾಯನ ಗುಡಿ ಎಂದೇ ಜಗದ್ವಿಖ್ಯಾತ. ಗಂಗರು, ಪಲ್ಲವರು, ವಿಜಯನಗರದರಸರ ಕಾಲದ ಶೈಲಿಯನ್ನು ಸಮೀಕರಿಸಿಕೊಂಡಿರುವ ಈ ದೇವಾಲಯವನ್ನು ಯಾರು ಕಟ್ಟಿಸಿದರು, ಯಾವಾಗ ಕಟ್ಟಿಸಿದರು ಎಂಬ ಬಗ್ಗೆ ನಿಖರ ಮಾಹಿತಿ ದೊರಕುವುದಿಲ್ಲ. ದೇವಾಲಯದಲ್ಲಿ ಗಣಪತಿ, ಶ್ರೀಕೃಷ್ಣ, ಮುತ್ಯಾಲಮ್ಮ, ಆದಿಶಕ್ತಿ, ಬ್ರಹ್ಮ, ವಿಷ್ಣು, ಮಹೇಶ್ವರರ ಕೆತ್ತನೆಗಳು ಹಾಗೂ ಮೂರ್ತಿಗಳಿವೆ.

ಈ ದೇವಾಲಯದಲ್ಲಿ ಧರ್ಮರಾಯ ಹಾಗೂ ದ್ರೌಪತಿಯ ಮೂರ್ತಿ ಇದೆ. ಚೈತ್ರಮಾಸದ ಹುಣ್ಣಿಮೆಯಂದು ನಡೆಯುವ ಕರಗ ಜಗದ್ವಿಖ್ಯಾತ.

ತಮಟೆಯ ಲಯಬದ್ಧ ಸ್ದ್ದಿಗೆ ತಕ್ಕಂತೆ ಕರಗ ನರ್ತಿಸುತ್ತಾ ಸಾಗುವುದು
ಈ ಕರಗವನ್ನು ಹೂವಿನ ಕರಗ, ದ್ರೌಪದಮ್ಮನ ಕರಗ ಎಂದು ಕರೆಯುತ್ತಾರೆ.

ಕರಗ ಎಂದರೇನು ?: ಕರಗ ಒಂದು ಜಾನಪದ ಹಾಗೂ ಧಾರ್ಮಿಕ ನೃತ್ಯಕಲೆ. ತಮಿಳುನಾಡಿನಲ್ಲಿ ವಿಶೇಷವಾಗಿ ಪ್ರಚಾರದಲ್ಲಿದ್ದ ಈ ಕಲೆ ಬೆಂಗಳೂರು ಧರ್ಮರಾಯನ ಕರಗದ ಮೂಲಕ ಜಗದ್ವಿಖ್ಯಾತವಾಗಿದೆ. ಬೆಂಗಳೂರಷ್ಟೇ ಅಲ್ಲದೆ ಕೋಲಾರ, ಚಿಕ್ಕಬೞಾಪುರ, ರಾಮನಗರ, ತುಮಕೂರು, ಮೈಸೂರು ಮೊದಲಾದ ಪ್ರದೇಶಗಳಲ್ಲೂ ಕರಗ ಚಾಲ್ತಿಯಲ್ಲಿದೆ.

ಹಿತ್ತಾಳೆಯ ಕೊಡವನ್ನು ಹೂಗಳಿಂದ ಸುಂದರವಾಗಿ ಕಿರೀಟದಂತೆ ಅಲಂಕರಿಸಿ, ತಲೆಯ ಮೇಲಿಟ್ಟುಕೊಂಡು ಕೈಬಿಟ್ಟು ಹಿರಿದ ಖಡ್ಗ ಹಿಡಿದು, ಹಸ್ತಮುದ್ರೆ, ಮುಖಮುದ್ರೆಗಳಿಂದ ಮಾಡುವ ನೃತ್ಯವೇ ಕರಗ. ಈ ಪೈಕಿ ಬೆಂಗಳೂರಿನ ಹೂವಿನ ಕರಗ ಹಲವು ವೈಶಿಷ್ಟ್ಯಗಳಿಂದ ಕೂಡಿದೆ.

ಬೆಂಗಳೂರು ಕರಗ : ಪ್ರತಿವರ್ಷ ಬೆಂಗಳೂರಿನ ನಗರ್ತ ಪೇಟೆಯಲ್ಲಿರುವ ಧರ್ಮರಾಯನ ದೇವಾಲಯದಲ್ಲಿ ಕರಗ ಆರಂಭವಾಗುತ್ತದೆ. ಚೈತ್ರಶುದ್ಧ ಸಪ್ತಮಿಯ ರಾತ್ರಿ ಧ್ವಜಾರೋಹಣ, ದ್ವಾದಶಿಯ ರಾತ್ರಿ ದೀಪಾರಾಧನೆ ನಡೆದು ಹುಣ್ಣಿಮೆಯ ರಾತ್ರಿ ಕರಗ ಮಹೋತ್ಸವ ನಡೆಯುತ್ತದೆ.

ಕರಗದ ನಿಮಿತ್ತ ಚೈತ್ರ ಬಹುಳ ಪಾಡ್ಯದ ರಾತ್ರಿ ಪುರಾಣ ನಿರೂಪಣೆ, ಬಿದಿಗೆಯ ಸಾಯಂಕಾಲ ವಸಂತೋತ್ಸವ ರಾತ್ರಿ ಧ್ವಜಾವತರಣ ಸೇರಿದಂತೆ ಒಟ್ಟು 9 ದಿನಗಳ ಕಾಲ ಕರಗ ಮಹೋತ್ಸವ ಜರುಗುತ್ತದೆ. ತ್ರಯೋದಶಿಯ ರಾತ್ರಿ ಸುಮಾರು 250ಕ್ಕೂ ಹೆಚ್ಚು ವೀರಕುಮಾರರು ಬಿಳಿ ವಸ್ತ್ರ ಧರಿಸಿ, ಕೆಂಪು ರೇಷ್ಮೆ ವಸ್ತ್ರವನ್ನು ಸೊಂಟಕ್ಕೆ ಕಟ್ಟಿ, ಮೈಸೂರು ಪೇಟತೊಟ್ಟು ಜಯಘೋಷಗಳೊಡನೆ ಅಲಗುಸೇವೆ ಮಾಡುತ್ತಾರೆ. ಈ ಮೆರವಣಿಗೆಯಲ್ಲಿ ಹಸಿ ಕರಗವೂ ನಡೆಯುತ್ತದೆ.
ತಮಟೆಯ ಲಯಬದ್ಧ ಸ್ದ್ದಿಗೆ ತಕ್ಕಂತೆ ಕರಗ ನರ್ತಿಸುತ್ತಾ ಸಾಗುವುದು
ಹುಣ್ಣಿಮೆಯ ಮಧ್ಯರಾತ್ರಿ ಧರ್ಮರಾಯನ ದೇವಾಲಯದಿಂದ ಆರಂಭಗೊಳ್ಳುವ ಕರಗ ಉತ್ಸವ ಬೆಳಗಾಗುವ ತನಕ ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕಾಟನ್‌ಪೇಟೆಯಲ್ಲಿರುವ ಮಸ್ತಾನ್ ದರ್ಗಕ್ಕೂ ಭೇಟಿ ನೀಡಿ, ಬೆಳಗ್ಗೆಯಾಗುವ ವೇಳೆಗೆ ದೇವಾಲಯಕ್ಕೆ ವಾಪಸಾಗುತ್ತದೆ. ಧ್ವಜಾವರೋಹಣದ ದಿನ ಕರಗವನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

ಕರಗದ ಐತಿಹ್ಯ : ಈ ಉತ್ಸವವನ್ನು ಆಚರಿಸುವವರು ದ್ರೌಪದಿಯ ಆರಾಧಕರಾದ ವಹ್ನಿ ಕುಲದವರಾದರೂ, ಜಾತಿ, ಮತ ಭೇದಗಳನ್ನು ಮರೆತು ಎಲ್ಲ ಧರ್ಮೀಯರೂ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಬೆಂಗಳೂರಿನ ಎಲ್ಲೆಡೆ ಹಲಗೆಯ ಡಂಕಣಕ್ಕ, ಡಂಕಣಕ್ಕ ಎಂಬ ಶಬ್ಧ ಮೊಳಗುತ್ತಿರುತ್ತದೆ. ಪುರಿ, ಬತಾಸು, ಕಲ್ಯಾಣಸೇವೆಗಳನ್ನು ಬೀದಿಯಲ್ಲಿ ರಾಶಿಹಾಕಿ ಮಾರುತ್ತಾರೆ. ಇಡೀ ರಾತ್ರಿ ಬೆಂಗಳೂರಿನಲ್ಲಿ ಜಾತ್ರೆಯ ಸಂಭ್ರಮ ಮೂಡುತ್ತದೆ.

ವಹ್ನಿಕುಲದವರು ಪಾಂಡವರ ಪತ್ನಿಯಾದ ದ್ರೌಪದಿಯನ್ನು ದೇವತೆಯೆಂದು ಆರಾಧಿಸಲೂ ಒಂದು ಕಥೆಯಿದೆ. ಪಾಂಡವರ ಸಹಿತಳಾಗಿ ದ್ರೌಪದಿ ಸ್ವರ್ಗಕ್ಕೆ ಹೊರಟಿದ್ದಾಗ ಆಕೆ ಎಲ್ಲರಿಗಿಂತಲೂ ಹಿಂದೆ ಬೀಳುತ್ತಾಳೆ. ದಿಕ್ಕುಕಾಣದೆ ದ್ರೌಪದಿಯು ದೇವತೆಗಳನ್ನು ಪ್ರಾರ್ಥಿಸುತ್ತಾಳೆ. ಆಗ ಆಕೆಯ ಸುತ್ತ ಖಡ್ಗ ಹಿರಿದ ವೀರಕುಮಾರರು ಉದ್ಭವಿಸಿ ಡಮರು, ತ್ರಿಶೂಲ, ಗಂಟೆ ಮೊದಲಾದವನ್ನು ಹಿಡಿದು ನರ್ತನ, ಭಜನೆ ಮಾಡುತ್ತಾ ಆಕೆಯೊಂದಿಗೆ ಸಾಗುತ್ತಾರೆ. ಆಗ ದ್ರೌಪದಿ ಸಂತುಷ್ಟಳಾಗಿ ಈ ನೃತ್ಯವನ್ನು ಎಲ್ಲೆಡೆ ಪ್ರಚಾರ ಮಾಡುವಂತೆ ಸೂಚಿಸುತ್ತಾಳೆ. ಇದುವೇ ಕರಗ.
ಮತ್ತೊಂದು ಕತೆಯ ರೀತ್ಯ ದ್ರೌಪದಿ ಸ್ವರ್ಗಾರೋಹಣ ಮಾಡುತ್ತಿದ್ದ ಕಾಲದಲ್ಲಿ ಮೂರ್ಛೆಹೋಗುತ್ತಾಳೆ. ಆಕೆ ಕಣ್ಣುಬಿಟ್ಟಾಗ ಪಾಂಡವರು ಅಲ್ಲಿರುವುದಿಲ್ಲ. ಆಗ ತಿಮಿರಾಸುರನೆಂಬ ರಕ್ಕಸನು ಆಕೆಯನ್ನು ಪೀಡಿಸುತ್ತಾನೆ. ಆಗ ತಿಮಿರಾಸುರನ್ನು ನಿಗ್ರಹಿಸಲು ದ್ರೌಪದಿಯು ವಿರಾಟರೂಪ ತಾಳಿ, ತಲೆಯ ಮೇಲೆ ಕುಂಭ ಧರಿಸಿ ನರ್ತಿಸುತ್ತಾಳೆ ಈ ಕುಂಭವೇ ಇಂದಿನ ಕರಗ ಎಂಬ ಹೇಳಿಕೆಯೂ ಇದೆ.

ಮತ್ಸ್ಯಯಂತ್ರ ಬೇಸಿದ ಅರ್ಜುನನ ವರಿಸಿದ ದ್ರೌಪದಿಯು ಕುಂತಿಯ ಮಾತಿನಂತೆ ಪಂಚಪಾಂಡವರನ್ನೂ ಮದುವೆಯಾಗುತ್ತಾಳೆ. ಎಲ್ಲ ಐವರ ಹೆಂಡತಿಯಾದ ದ್ರೌಪದಿ ಕಳಶವನ್ನು ತಲೆಯಮೇಲೆ ಹೊತ್ತು ಕುಣಿಯುತ್ತಾಳೆ. ಆ ಕಳಶವೇ ಇಂದಿನ ಕರಗಾರಾಧನೆ. ಒಟ್ಟಿನಲ್ಲಿ ಕರಗದ ಮೂಲ ಅಸ್ಪಷ್ಟವಾದರೂ, ಇದೊಂದು ಶಕ್ತಿದೇವಿಯ ಆರಾಧನೆಯ ಜಾನಪದ ನೃತ್ಯ ಎನ್ನಲಡ್ಡಿಯಿಲ್ಲ. ಇಲ್ಲಿ ಶಕ್ತಿದೇವತೆ ದ್ರೌಪದಿ. ವಹ್ನಿ ಕುಲದವರು ಮೂಲತಃ ಅಗ್ನಿ ಆರಾಧಕರು. ವಹ್ನಿಕುಲದ ಮೂಲಪುರುಷ ಅಗ್ನಿಸಂಭವನೆಂಬುದು ಅವರ ನಂಬಿಕೆ. ಹೀಗಾಗೆ ವಹ್ನಿಜೆಯಾದ (ಅಗ್ನಿಪುತ್ರಿ) ದ್ರೌಪದಿಯನ್ನು ಅವರು ಪೂಜಿಸುತ್ತಾರೆ.

 

Author : ನಾರಾಯಣ ಸ್ವಾಮಿ 

Author's Profile

ಕೆ.ಎಂ.ನಾರಾಯಣ ಸ್ವಾಮಿ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited