ವರ್ಷಾಂತ್ಯದಲ್ಲಿ ಬೆಂಗಳೂರಿನ ಸಾಹಿತ್ಯಲೋಕದತ್ತ ತಿರುಗಿ ನೋಡಿದಾಗ..
ಬೆಂಗಳೂರಿನ ಸಾಂಸ್ಕೃತಿಕ ಲೋಕ
ಬಹುಸಂಸ್ಕೃತಿಯ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯದ್ದೇ ಪಾರಮ್ಯವಾದರೂ, ಇತರೆ ಭಾಷಿಕರ ಸಾಹಿತ್ಯ ಸಂಭ್ರಮಕ್ಕೇನೂ ಕಡಿಮೆ ಇಲ್ಲ. ಇಂತಹ ಸಾಹಿತ್ಯ ಸಂಭ್ರಮ ಸಡಗರ 2013ರಲ್ಲೂ ಕಾಣಿಸಿದೆ. ಅನೇಕ ಪುಸ್ತಕ ಬಿಡುಗಡೆ, ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕೋತ್ಸವ ಹೀಗೆ ಒಂದೇ ಎರಡೇ ಸಂಭ್ರಮಗಳು.. ರವೀಂದ್ರ ಕಲಾಕ್ಷೇತ್ರದಿಂದ ಹಿಡಿದು ಬೆಂಗಳೂರಿನ ಮೂಲೆ ಮೂಲೆಯಲ್ಲಿರುವ ಸಣ್ಣ ಪುಟ್ಟ ವೇದಿಕೆಗಳಲ್ಲೂ ಕಾರ್ಯಕ್ರಮಗಳು ನಡೆದಿವೆ. ಇವೆಲ್ಲ ಸಂಭ್ರಮದ ನಡುವೆ ವರ್ಷಾಂತ್ಯದಲ್ಲಿ ಸಾಹಿತ್ಯ ಲೋಕಕ್ಕೆ ಆಘಾತ ನೀಡಿದ್ದು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ನಿಧನ. ಏತನ್ಮಧ್ಯೆ, ವಿವಾದಗಳೂ ಸಾಕಷ್ಟು ಪ್ರಚಾರಗಿಟ್ಟಿಸಿಕೊಂಡವು.
ಲೇಖಕಿಯರ ಸಮ್ಮೇಳನದ ಅಧ್ಯಕ್ಷೆ ಶ್ರೀಮತಿ ಸಾರಾ ಅಬೂಬಕರ್
ಸಂಭ್ರಮ ಸಡಗರ
೧ ಬೆಂಗಳೂರು ಸಾಹಿತ್ಯೋತ್ಸವ : ಸಿಲಿಕಾನ್ ಸಿಟಿ, ಕಾರ್ಪೊರೆಟ್ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದಿರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಈ ವರ್ಷ "ಬೆಂಗಳೂರು ಸಾಹಿತ್ಯೋತ್ಸವ" ನಡೆದಿದ್ದು, ಅದರಲ್ಲಿ ಸಾಹಿತ್ಯದ ಜತೆಗೆ ಸಿನಿಮಾ, ಲೈಂಗಿಕ ಸಾಹಿತ್ಯ ರಚನೆ ಮತ್ತು ಸಾಹಿತ್ಯ ಕೃತಿಗಳ ಪ್ರದರ್ಶನ ಮಾರಾಟಕ್ಕೂ ಅವಕಾಶ ಒದಗಿಸಿದ್ದು ವಿಶೇಷವಾಗಿತ್ತು.
೨ ಲೇಖಕಿಯರ ಸಮ್ಮೇಳನ : ಬಹಳ ವರ್ಷಗಳ ನಂತರ ಲೇಖಕಿಯರ ಸಮ್ಮೇಳನ ನಡೆದಿದ್ದು, ಇದು ಬೆಂಗಳೂರಿನಲ್ಲೇ(ನ.9-10) ನಡೆದಿರುವುದು ವಿಶೇಷ. ಮೂರು ದಿನಗಳ ಈ ಸಮ್ಮೇಳನದ ಅಧ್ಯಕ್ಷತೆಯನ್ನು ಸಾರಾ ಅಬೂಬಕರ್ ಅವರು ವಹಿಸಿದ್ದರು. ಜ್ಞಾನಪೀಠ ಪ್ರಶಸ್ತಿ ವಿಜೇತೆ ಪ್ರತಿಭಾ ರೇ ಅವರೂ ಸಮ್ಮೇಳನದಲ್ಲಿ ಭಾಗವಹಿಸಿದ್ದು ವಿಶೇಷ.
೩. ಜ್ಞಾನಪೀಠಿಗಳ ವಿಚಾರಸಂಕಿರಣ: ಬೆಂಗಳೂರು ವರ್ಷಾಂತ್ಯದಲ್ಲಿ ಜ್ಞಾನಪೀಠ ಪುರಸ್ಕೃತರ ವಿಚಾರಸಂಕಿರಣಕ್ಕೂ ವೇದಿಕೆಯಾಯಿತು. ಮೂರು ದಿನಗಳ ವಿಚಾರ ಸಂಕಿರಣದಲ್ಲಿ ಸಾಹಿತ್ಯ ಲೋಕ ಮತ್ತು ರಾಜಕಾರಣದ ಬಗ್ಗೆ ಬಹುವಾಗಿ ಚರ್ಚೆ ನಡೆಯಿತು. ಇದೊಂದು ರೀತಿಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಮಾರ್ಗದರ್ಶನ ಮಾಡುವಂಥ ಕಾರ್ಯಕ್ರಮವಾಗಿ ಮೂಡಿದ್ದು ವಿಶೇಷ.
ಪ್ರಶಸ್ತಿ ಪುರಸ್ಕಾರಗಳು
ಇವುಗಳ ವಿಚಾರಕ್ಕೆ ಬಂದರೆ, ದೇವನೂರು ಮಹಾದೇವ ಮತ್ತು ಕೆ.ಪಿ.ರಾವ್ ಅವರಿಗೆ "ನಾಡೋಜ" ಗೌರವ, ಸಿ.ಎನ್.ರಾಮಚಂದ್ರ ಅವರ "ಆಖ್ಯಾನ-ವ್ಯಾಖ್ಯಾನ" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಕೇಂದ್ರ ಬಾಲ ಸಾಹಿತ್ಯ ಪುರಸ್ಕಾರ, ಲಕ್ಕೂರು ಸಿ.ಆನಂದ್ ಅವರಿಗೆ ಯುವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಕನ್ನಡ ಸಾಹಿತ್ಯದ ಗರಿಮೆ ಹೆಚ್ಚಿಸಿವೆ.
ವಿವಾದಗಳು
೧ ಹಿಂದುಗಳ ಪ್ರಥಮಾರಾಧ್ಯ ದೇವರಾದ ಗಣೇಶನನ್ನು ಖಳನಂತೆ ಚಿತ್ರಿಸಿದ ವಿವಾದಿತ ಕೃತಿ"ಢುಂಢಿ" ಗಣೇಶನ ಹಬ್ಬದ ಆಸುಪಾಸಿನಲ್ಲೇ ಬಿಡುಗಡೆಯಾಯಿತು. ಇದು ವಿವಾದಕ್ಕೀಡಾಗಿ ಕೃತಿಯ ಲೇಖಕ ಯೋಗೇಶ್ ಮಾಸ್ಟರ್ ರಾತ್ರೋ ರಾತ್ರಿ ಕುಖ್ಯಾತಿ ಪಡೆದರು. ಇದರ ಮಾರಾಟಕ್ಕೆ ಕೋರ್ಟ್ ತಡೆ ನೀಡಿದ್ದರಿಂದ ವಿವಾದ ತಣ್ಣಗಾಯಿತು.
೨. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕುರಿತು ಜ್ಞಾನಪೀಠ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿ ನೀಡಿದ ಹೇಳಿಕೆಯೂ ವಿವಾದಕ್ಕೀಡಾಯಿತು. ಈ ನಡುವೆ, ಇನ್ನೋರ್ವ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ "ಟಿಪ್ಪು ಸುಲ್ತಾನ್" ನಾಟಕವನ್ನೇ ಬಳಸಿಕೊಂಡು ಅವರನ್ನೇ ಟೀಕಿಸುವ ಪ್ರಯತ್ನ ನಡೆದಿದ್ದೂ ವಿವಾದದ ಕಿಡಿ ಹಚ್ಚಿತು.
೩. ಪುಸ್ತಕೋತ್ಸವ ವಿವಾದ: ಬೆಂಗಳೂರು ಅರಮನೆ ಮೈದಾನವನ್ನು ವಾಣಿಜ್ಯಚಟುವಟಿಕೆ ನೀಡಬಾರದೆಂಬ ಕೋರ್ಟ್ ಆದೇಶದ ಮೇರೆಗೆ ಸರ್ಕಾರ ಬೆಂಗಳೂರು ಪುಸ್ತಕೋತ್ಸವಕ್ಕೆ ೧೦ ದಿನಗಳ ಬದಲು ಮೂರು ದಿನದ ಅವಕಾಶ ನೀಡುವುದಾಗಿ ಘೋಷಿಸಿತು. ಇದು ವಿವಾದಕ್ಕೀಡಾಗಿದ್ದು, ಈ ಬಾರಿ ಜನವರಿಯಲ್ಲಿ ಪುಸ್ತಕೋತ್ಸವ ನಡೆಯುವುದು ಅನುಮಾನ.
Author : ಬೆಂ.ಸ.