ಸೋಂದಾ ನಾರಾಯಣ ಭಟ್ಟರ ಯತಾರ್ಥ ಜೀವನ, ಕೃತಾರ್ಥ ಬರಹಗಳು
ಸೋಂದಾ ನಾರಾಯಣ ಭಟ್
ಮಂಗಳೂರಿನ ಪ್ರತಿಷ್ಠಿತ ಗೋವಿಂದ ದಾಸ್ ಕಾಲೇಜು.. ಆಗಿನ್ನೂ ಸಂಸ್ಕೃತವನ್ನು ಕೇಸರಿಕರಣಗೊಳಿಸುವ, ಸೆಕ್ಯುಲರ್ ಹೆಸರಿನಲ್ಲಿ ಸಂಸ್ಕೃತದ ಶ್ಲೋಕಗಳನ್ನು ಅಳಿಸಿ ಹಾಕುವ ಇಂದಿನ ಪದ್ಧತಿ ಮಂಗಳೂರಿನಲ್ಲಿರಲಿಲ್ಲ. ಹಾಗಿದ್ದರೂ ಪ್ರತಿಷ್ಠಿತ ಗೋವಿಂದಾಸ್ ಕಾಲೇಜು ಆಡಳಿತ ಮಂಡಳಿ ಧ್ವಜಸ್ಥಂಬದ 4 ಸಿಂಹಗಳ ಕೆಳಗಿರುವ ಸತ್ಯಂ ಶಿವಂ ಸುಂದರಂ ಎಂಬ ಸಂಸ್ಕೃತ ಶ್ಲೋಕವನ್ನು ತೆಗೆದು ಹಾಕಬೇಕೆಂಬ ಮಹತ್ವದ ನಿರ್ಧಾರ ಕೈಗೊಂಡಿತ್ತು. ಕಾಲೇಜು ಮಂಡಳಿಯ ನಿರ್ಧಾರವನ್ನು ಇಡೀ ಕಾಲೇಜಿನ ಹಲವು ಸಿಬ್ಬಂಧಿಗಳು ಅನುಮೋದಿಸಿದ್ದೂ ಆಯಿತು, ಆದರೆ ಅದೇ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದವರೊಬ್ಬರು ಕಾಲೇಜು ಆಡಳಿತ ಮಂಡಳಿ ನಿರ್ಧಾರಕ್ಕೆ ಸೆಡ್ಡು ಹೊಡೆದು ನಿಂತ್ತಿದ್ದರು. ವೇದಸೂಕ್ತವನ್ನು ಅಳಿಸಲು ನಾವ್ಯಾರು ಎಂದು ಆಡಳಿತ ಮಂಡಳಿಗೆ ಖಡಕ್ ಪ್ರಶ್ನೆ ಹಾಕಿದರು. ಸಂಸ್ಕೃತ ಪ್ರಾಧ್ಯಾಪಕರ ಮಾತು ಕೇಳಲು ಆಡಳಿತ ಮಂಡಳಿ ಸಿದ್ಧವಿರಲಿಲ್ಲ ನಿರ್ಧಾರವನ್ನು ಜಾರಿಗೆ ತರುವುದಾಗಿಯೇ ಪಟ್ಟು ಹಿಡಿಯಿತು. ಇತ್ತ ಸಂಸ್ಕೃತ ಪ್ರಾಧ್ಯಾಪಕರೂ ಆಡಳಿತ ಮಂಡಳಿ ವಿರುದ್ಧವೇ ಪ್ರತಿಭಟನೆಗೆ ನಿಂತರು, ಕಾಲೇಜು ವಿದ್ಯಾರ್ಥಿಗಳು ಸಂಸ್ಕೃತ ಪ್ರಾಧ್ಯಾಪಕರ ಬೆನ್ನಿಗೆ ನಿಂತರು. ಆ ಪ್ರಾಧ್ಯಾಪಕರಿಗೆ ದೊರೆತ ವಿದ್ಯಾರ್ಥಿಗಳ ಬೆಂಬಲದ ಮುಂದೆ ಕಾಲೇಜು ಆಡಳಿತ ಮಂಡಳಿ ಮಂಡಿಯೂರಬೇಕಾಯಿತು. ಇಂದಿಗೂ ಗೋವಿಂದ ದಾಸ್ ಕಾಲೇಜಿನಲ್ಲಿ ಸತ್ಯಂ ಶಿವಂ ಸುಂದರಂ ಎಂಬ ವೇದೋಕ್ತಿ ರಾರಾಜಿಸುತ್ತಿದೆ. ಕಾರಣ ಡಾ.ಸೋಂದಾ ನಾರಾಯಣ್ ಭಟ್.
'ಅಸೀಮಾ' ಮಾಸಪತ್ರಿಕೆಯ ಸಂಪಾದಕರಾಗಿದ್ದ ಸೋಂದಾ ನಾರಾಯಣ ಭಟ್ಟರು ಎಂದರೆ ಹಾಗೆಯೇ, ಮೃಧು ಭಾಷಿ, ಸಂಸ್ಕೃತದಲ್ಲಿ ಡಾಕ್ಟರೇಟ್ ಪಡೆದು ದೇವಭಾಷೆಯ ಮೇಲೆ ಅಗಾಧ ಪಾಂಡಿತ್ಯ ಹೊಂದಿದವರು. ಕರೆಯದೇ ವಿದ್ಯಾರ್ಥಿಗಳ ದಂಡೇ ಅವರಿದ್ದ ಕಡೆ ಸೇರುತ್ತಿತ್ತು. ಕಪಟವಿಲ್ಲದ ವ್ಯಕ್ತಿತ್ವವಾದರೂ ಕಪಟವನ್ನು ಸಹಿಸದ ಸೂಕ್ಷ್ಮತೆ ನಾರಾಯಣ ಭಟ್ಟರದ್ದು. ಭಾರತಕ್ಕೆ ಸಂಸ್ಕೃತ ಭಾಷೆಯ ಅಗತ್ಯತೆ ಎಷ್ಟಿದೆಯೋ ಭಾರತೀಯತೆಗೆ ಸೋಂದಾ ನಾರಾಯಣ ಭಟ್ಟರ ವ್ಯಕ್ತಿತ್ವದ ಅಗತ್ಯತೆಯೂ ಅಷ್ಟೇ ಪ್ರಮುಖ.
ಅವರ ಲೇಖನಗಳನ್ನು ಓದಿದವರಿಗೆ ಸಂಸ್ಕೃತದ ಬಗ್ಗೆ ಯೋಚಿಸಿದಾಗಲೆಲ್ಲಾ ತಪ್ಪದೇ ಸೋಂದಾ ಭಟ್ಟರು ನೆನಪಾಗುತ್ತಾರೆ. ಅಥವಾ ಸೋಂದಾ ನಾರಾಯಣ ಭಟ್ಟರನ್ನು ನೆನೆದಾಗ ಸಂಸ್ಕೃತದ ಪ್ರಸ್ತುತತೆ ಅರಿವಾಗುತ್ತದೆ. ನಾರಾಯಣ ಭಟ್ಟರು ಹೆಚ್ಚು ಪ್ರಚಾರ ಗಳಿಸಿಲ್ಲವಾದರೂ ಅತ್ಯಂತ ಮೇಲ್ಮಟ್ಟದಲ್ಲಿ ನಿಲ್ಲುವ ವ್ಯಕ್ತಿತ್ವದವರು. ಭಟ್ಟರು ಬೆಳೆದುಬಂದ ವಾತಾವರಣೆವೇ ಹಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂಧದ ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರು ಭೈರುಂಬೆ,ಶಿರಸಿ,ಧಾರವಾಡಗಳಲ್ಲಿ ವ್ಯಾಸಂಗ ಮಾಡಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನೂ ಡಾಕ್ಟೊರೇಟನ್ನೂ ಗಳಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನ ಗೋವಿಂದದಾಸ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ಸಂಸ್ಕೃತವನ್ನು ಮೂಲದಿಂದಲೇ ಓದುತ್ತಿದ್ದ ನಾರಾಯಣ ಭಟ್ಟರು, ದೇವನಾಗರಿ ಲಿಪಿಯಲ್ಲಿ ಕೈಬರಹದಲ್ಲೇ ಪಿಹೆಚ್ ಡಿ ಬರೆದು ಡಾಕ್ಟೊರೇಟ್ ಸಂಪಾದಿಸಿದ್ದು ವಿಶಿಷ್ಟ. ಅಸೀಮಾ ಸಂಪಾದಕರಾಗಿ ಕೆಲಸ ನಿರ್ವಹಿಸಿ ಸಂಪಾದಕೀಯ ಬರಹಗಳಿಂದ ಸಂಸ್ಕೃತದ ಮೂಲಕವೇ ಕನ್ನಡವನ್ನು ಶ್ರೀಮಂತಗೊಳಿಸಿದರು. ಸಂಸ್ಕೃತ ಜ್ಞಾನದಿಂದ ಕನ್ನಡದ ಸೊಗಡು ಉಳಿವು ಸಾಧ್ಯವಿಲ್ಲವೆಂದು ವಾದಿಸುವವರು ಅಸೀಮಾದ ಸಂಪಾದಕೀಯ ಸಂಗ್ರಹ ಅಕ್ಷಿಪಥವನ್ನು ಓದಲೇಬೇಕು.
ನಾರಾಯಣ ಭಟ್ಟರ ಸಂಸ್ಕೃತದ ಮೇಲಿನ ಭಾಷಾಪ್ರಭುತ್ವಕ್ಕೆ ನಿದರ್ಶನವೆಂಬಂತೆ ಹೀಗೊಂದು ಘಟನೆ ನಡೆಯಿತು. ಒಮ್ಮೆ ಕಟಿಲು ಕ್ಷೇತ್ರದಲ್ಲಿ ಶತಾವಧಾನಿ ಡಾ.ಆರ್.ಗಣೇಶ್ ಅಷ್ಟಾವಧಾನ ನಡೆಸಿಕೊಡುತ್ತಿದ್ದರು. ಪೃಚ್ಛಕರ ಪೈಕಿ ಭಟ್ಟರೂ ಒಬ್ಬರಾಗಿದ್ದರು. ಅವಧಾನದ ಒಂದು ಅಂಗವಾಗಿದ್ದದ್ದು ಚಿತ್ರಕಾವ್ಯ. ಚಿತ್ರಕಾವ್ಯರಚನೆಯೋ ದೊಡ್ಡ ಕವಿಗಳ ಪ್ರತಿಭೆಗೂ ಅಸಾಮಾನ್ಯ ಪಂಥಾಹ್ವಾನವೇ ಸರಿ. ಪೃಚ್ಛಕರ ಕೋರಿಕೆಯಂತೆಯೇ ಅವಧಾನಿಗಳು ಪದ್ಮಬಂಧ ಎಂಬ ವಿನ್ಯಾಸದಲ್ಲಿ ಪದ್ಯರಚನೆ ಮಾಡಿ ನಿವೇದಿಸಿದರು. ಎಲ್ಲರೂ ತಲೆದೂಗಿದರು ನಾರಾಯಣ ಭಟ್ಟರು ಮಾತ್ರ ಇನ್ನೆರಡು ರೀತಿಯಲ್ಲಿ ಪರ್ಯಾಯವಾಗಿ ಅದೇ ಜಟಿಲ ಬಂಧದ ರಚನೆ ಮಾಡಿ ಶತಾವಧಾನಿಗಳನ್ನು ವಿಸ್ಮಯಗೊಳಿಸಿದ್ದರು. ಅವಧಾನ ಕಲೆಯನ್ನು ಸದ್ದಿಲ್ಲದೇ ಸಿದ್ಧಿಸಿಕೊಂಡಿದ್ದರು. ಸಂಸ್ಕೃತ ಭಾಷೆಯ ಮೇಲಿನ ಅವರ ಪ್ರಭುತ್ವ ಅತ್ಯುನ್ನತ ಸ್ಥಾನಗಳಲ್ಲಿ ಅಸೀನರಾಗಿಸುತ್ತಿತ್ತಾದರೂ ಜನಜಾಗೃತಿ ಸಾಹಿತ್ಯದ ಸಜ್ಜಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದಲೇ ನಾರಾಯಣ ಭಟ್ಟರು ಸಮಾಜಾಭಿಮುಖತೆಯ ಮೂರ್ತರೂಪವಾಗಿದ್ದಾರೆ.
ಪದ್ಯಬರೆಯುವುದು ನಾರಾಯಣ ಭಟ್ಟರಿಗೆ ಇದ್ದ ಮತ್ತೊಂದು ವೈಶಿಷ್ಟ್ಯ. ಅನ್ನಿಸಿದ್ದನ್ನು ತಕ್ಷಣವೇ ಗೀಚಿಡುವ ವ್ಯಕ್ತಿತ್ವ ಅವರದ್ದು. ಅದೆಷ್ಟೋ ಪದ್ಯಗಳೆಲ್ಲವೂ ಇಂದಿಗೂ ಸ್ವಯಂ ಸೇವಕರಲ್ಲಿ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುವ ಹಾಡಾಗಿ ಪರಿವರ್ತನೆಯಾಗಿದೆ. ಅವರ ಸಂಪಾದಕೀಯದಲ್ಲಿ ಮೂಡಿ ಬಂದ ಅಸೀಮಾ ಪತ್ರಿಕೆ ವೈಚಾರಿಕ ಕ್ರಾಂತಿಯನ್ನುಂಟು ಮಾಡಿತ್ತು. ಅಸೀಮಾದಲ್ಲಿ ಬರೆಯುವುದೆಂದರೆ ಅದೊಂದು ಪ್ರತಿಷ್ಠೆಯ ವಿಷಯವಾಗಿರುತ್ತಿತ್ತು.
ನಮ್ಮ ಪೂರ್ವಜರ ಸಾಧನೆಗಳನ್ನು ಅಲ್ಲಗಳೆದು ಹೀಯಾಳಿಸಿ ಗೊಡ್ಡೆದ್ದು ಜರೆದವರಿಗೆ "ಧೀರಾ: ಪರಿಜಾನಂತಿ" ಎಂದು ವಿಜ್ನಾನ-ಜ್ನಾನದಲ್ಲಿ ಜಗತ್ತಿಗೆ ಬದುಕಿನ ಮೇಲ್ಪಂಕ್ತಿ ತೋರಿದ ಉದಾರಚರಿತರ ನಾಡು ಇದಾಗಿತ್ತೆಂಬುದು ಮುಚ್ಚಿಡಲಾರದ ಸತ್ಯ ಎಂದು ತೋರಿದವರು ಸೋಂದಾ ನಾರಾಯಣ ಭಟ್ಟರು. ಅಷ್ಟಕ್ಕೇ ನಿಲ್ಲದೆಂಬಂತೆ ಅತೋ ಭ್ರಷ್ಟಃ ತತೋ ಭ್ರಷ್ಟಃ ಎಂದು ನಮ್ಮ ಪೂರ್ವಜರ ಚಿಂತನದ ಅನುಭವದ ರಸಗಟ್ಟಿಗಳನ್ನು ನಮ್ಮ ಶಿಕ್ಷಣದಲ್ಲಿ ಮತ್ತೆ ಅಳವಡಿಸಲು ನಾವೇ ವಿಫಲರಾಗಿದ್ದೇವೆ ಎಂದು ನ್ಯೂನತೆಗಳನ್ನು ತೋರಿ ಮಾರ್ಗದರ್ಶಕರಾದರು. ಅವರ ಸ್ನೇಹವಲಯಕ್ಕೆ ಸೇರಿದವರ ಮನಸುಗಳಲ್ಲಿ ಸಹಜ ಕೋಮಲತೆ ಜೀವನಪ್ರೀತಿ ಶಿಸ್ತು ಸಮಾಜರ್ಪಣಾಭಾವ ಗಾಢವಾಗಿ ಅಚ್ಚೊತ್ತಿದೆ. ಯಾವುದೇ ಬೇಧಭಾವಗಳಿಲ್ಲದೇ ಎಲ್ಲರೂ ಭಟ್ಟರ ಪ್ರೀತಿಯ ಕಕ್ಷೆಗೆ ಒಳಪಡುತ್ತಿದ್ದರು. ಅಭಿಪ್ರಾಯನಿವೇದನೆಯಲ್ಲಿ ನಯವಂತಿಕೆ ಇರಬೇಕೆಂಬುದು ಅವರ ನಿರಂತರ ಆಗ್ರಹವಾಗಿತ್ತು. ಈ ಮೂಲಕ ಸೃಜನಶೀಲ ಪತ್ರಕರ್ತರಿಗೆ ಎಂದಿಗೂ ಸೋಂದಾ ಜಿ ಪ್ರೇರಕ ಶಕ್ತಿಯಾಗಿದ್ದರು. ನಾರಾಯಣ ಭಟ್ಟರು ತಮ್ಮ ಪಾಂಡಿತ್ಯ, ಪ್ರತಿಭೆಯನ್ನು ಸಮಾಜಕ್ಕೆ ಅರ್ಪಿಸಿದವರು. ರಾಷ್ಟ್ರ ಸಂಸ್ಕೃತಿ ಬಗ್ಗೆ ಚಿಂತಿಸಿದಾಗ ಸೋಂದಾ ಭಟ್ಟರು ಬರೆದ 'ಏಕಸಂಸ್ಕೃತಿ-ಏಕರಾಷ್ಟ್ರ', ಪಾಪಕ್ಕೆಂತು ಪರಿಮಾರ್ಜನೆ ನೆನಪಿಗೆ ಬರುತ್ತದೆ. ಭಾಷೆ ಸಾಹಿತ್ಯ ಓದಿದಾಗ ಭಾರತಸ್ಯ ಪ್ರತಿಷ್ಠೇ ದ್ವೇ, ಸತ್ಯಾತ್ ನ ಪ್ರಮದಿತವ್ಯಂ ಎಂಬ ಸಾಲುಗಳು ಕಾಡುತ್ತದೆ. ಹಿಂದು ಭಾರತದ ಕನಸು ಕಂಡಾಗಲೆಲ್ಲ ಸೋಂದಾ ನಾರಾಯಣ ಭಟ್ಟರ ಆಪ್ತವಾಕ್ಯಂ ಪ್ರಮಾಣಮ್, ಗ್ರಾಮಸರ್ಗ ಲೇಖನ ಗಾಢವಾಗುತ್ತದೆ. ಸೋಂದಾ ನಾರಾಯಣ ಭಟ್ಟರನ್ನು ನೆನೆದಾಗ ಯತಾರ್ಥ ಬದುಕು ಕೃತಾರ್ಥ ಬರಹಗಳೇ ಚಿತ್ತ ಪರಿಧಿಯನ್ನು ಆವರಿಸಿಕೊಳ್ಳುತ್ತದೆ. ಆಧುನಿಕ ಜಗತ್ತಿನಲ್ಲಿ ಸಂಸ್ಕೃತ, ರಾಷ್ಟ್ರೀಯತೆಯ ಬಗೆಗೆ ಯೋಚಿಸಿದಾಗಲೆಲ್ಲ ವಿದ್ವತ್ ಶಿಖರದಂತಿದ್ದ ಸೋಂದಾ ನಾರಾಯಣ ಭಟ್ಟರ ನೆನೆಪು ಕಾಡುತ್ತದೆ. ಇಂದಿಗೆ ಸೋಂದಾ ನಾರಾಯಣ ಭಟ್ಟರಿಲ್ಲದೇ 1೦ ವರ್ಷ ಕಳೆದಿವೆ. ಮೌಲ್ಯ ಪ್ರಜ್ನೆಯನ್ನೇ ಉಸಿರಾಗಿಸಿಕೊಂಡಿದ್ದ ಅವರ ಅಕ್ಷಿಪಥ ನಮ್ಮನ್ನು ಎಂದೆಂದಿಗೂ ಸರಿಯಾದ ಪಥದಲ್ಲೇ ಮುನ್ನಡೆಸುತ್ತಿರುತ್ತದೆ.
Author : ಶ್ರೀನಿವಾಸ್ ರಾವ್
Share :
More Articles From Art & Culture