ಚುನಾವಣೆಗೂ ಮುನ್ನ ಯುಗಾದಿ, ನಿಜಕ್ಕೂ ಇದೊಂದು ಹೊಸ ಯುಗದ ಆದಿ!
ಯುಗಾದಿಯೆಂದರೆ ಭಾರತೀಯರಿಗೆ ವಿಶೇಷವಾದ ಹಬ್ಬ. ಸುಖ-ದುಃಖಗಳನ್ನು ಸಮಾನವಾಗಿ ತೆಗೆದುಕೊಳ್ಳಬೇಕೆಂದು ಪ್ರತಿ ವರ್ಷವೂ ನೆನಪಿಸಿ ಹೋಗುವ ಹಬ್ಬ. ಹಿಂದಿನ ವರ್ಷದ ಸೋಲು-ಗೆಲುವು, ಕಷ್ಟ-ಸುಖಗಳನ್ನೊಮ್ಮೆ ಅವಲೋಕಿಸಿ ಮುಂಬರುವ ಹೊಸ ವರ್ಷವನ್ನು ಹೊಸ ಚೈತನ್ಯ, ಹುಮ್ಮಸ್ಸುಗಳೊಂದಿಗೆ ಎದುರಿಸಲು ಸಜ್ಜಾಗುವ ಸಮಯ. ಮಾಮೂಲಿ ದೈನಿಕಗಳಲ್ಲಿ ಕಳೆದು ಹೋದ ಜೀವಗಳು ಒಮ್ಮೆ ಮೈಕೊಡವಿ ಜಡ ಕಳೆದುಕೊಳ್ಳಲು ಒಂದು ನೆಪ. ಪ್ರತಿ ಹಬ್ಬಕ್ಕೂ ಅದರದೇ ಆದ ವಿಶೇಷತೆಗಳಿವೆ; ಹೊಸ ವರ್ಷದ ಪ್ರಾರಂಭ ಎಂಬುದು ಯುಗಾದಿಯ ವಿಶೇಷತೆ. ಪ್ರಕೃತಿಯೂ ಕೂಡ ಹಳೆಯದನ್ನು ತ್ಯಜಿಸಿ ಹೊಸ ಚಿಗುರನ್ನು ಹೊತ್ತು ನಿಲ್ಲುವ ಸಮಯ.
ಯುಗಾದಿಯನ್ನು ಆಂಧ್ರಪ್ರದೇಶದಲ್ಲಿ ಅದೇ ಹೆಸರಿನಿಂದ ಆಚರಿಸಲಾದರೆ, ದೇಶದ ವಿವಿಧೆಡೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಆಚರಿಸಲಾಗುತ್ತದೆ. ನಮ್ಮ ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡುಗಳಲ್ಲಿ "ಬಿಸು" ಹಾಗೂ "ಪುತ್ತಾಂಡ್" ಎಂಬ ಹೆಸರಿನಲ್ಲಿ ಸಂಭ್ರಮಾಚರಣೆ ಬೇರೆ ದಿನ ನಡೆಯುತ್ತದಾದರೂ, ಈ ಎಲ್ಲ ಹಬ್ಬಗಳ ಆಶಯವೂ ಒಂದೇ ಆಗಿದೆ - ಹೊಸ ವರ್ಷವನ್ನು ಎಲ್ಲರೂ ಜೊತೆಗೂಡಿ ಹುಮ್ಮಸ್ಸಿನಿಂದ ಸ್ವಾಗತಿಸುವುದು. ಈ ಹಬ್ಬದ ಜೊತೆಗೆ ಹಿಂದೂ ಪಂಚಾಂಗವೂ ಬದಲಾಗುವುದರಿಂದ ಕೆಲವೆಡೆ ಪಂಚಾಂಗ ಓದಿ, ಮುಂಬರುವ ವರ್ಷದ ಭವಿಷ್ಯವನ್ನು ಅರ್ಥ ಮಾಡಿಕೊಳ್ಳುವ ರೂಢಿ ಇದೆ. ಈ ಆಚರಣೆಗಳು ಏನೇ ಇದ್ದರೂ, ಯುಗಾದಿಯೆಂದರೆ ನಮಗೆ ಮೊದಲು ನೆನಪಾಗುವುದು ಬೇವು-ಬೆಲ್ಲ. ನಾಲಗೆಗೆ ಕಹಿಯಾದ ಬೇವು ಆರೋಗ್ಯಕ್ಕೆ ಬಹಳ ಒಳ್ಳೆಯದು, ಹಾಗೂ ಬೇಸಗೆಯಲ್ಲಿ ಬರಬಹುದಾದ ಕೆಲವು ಖಾಯಿಲೆಗಳನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ ಎಂದೂ ಹೇಳುತ್ತಾರೆ.
ಯುಗಾದಿ ಸಂಭ್ರಮ - ಬೇವು ಬೆಲ್ಲದೊಂದಿಗೆ ಆರಂಭ..
ಯುಗಾದಿ ಹಬ್ಬ ಎಲ್ಲರಲ್ಲೂ ವಿವಿಧ ರೀತಿಯ ನೆನಪುಗಳನ್ನು ಉಕ್ಕಿಸುತ್ತದೆ. ನಮ್ಮ ಪ್ರಸಿದ್ಧ ಚಲನಚಿತ್ರಗಳಲ್ಲಿ ಯುಗಾದಿ ಹಬ್ಬದ ಸನ್ನಿವೇಶಗಳ ಬಳಕೆಯಾಗಿದೆ. "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ" ಎಂಬ "ಕುಲವಧು" ಚಿತ್ರದಲ್ಲಿ ಬಳಕೆಯಾದ ವರಕವಿ ಬೇಂದ್ರೆಯವರ ಹಾಡು ಇಂದಿಗೂ ಪ್ರಸಿದ್ಧವಾಗಿದೆ. "ದೂರದ ಬೆಟ್ಟ" ಚಿತ್ರದಲ್ಲಿ ಹಬ್ಬ ಆಚರಿಸುವ ಶ್ರೀಮಂತಿಕೆ ಇಲ್ಲದಿದ್ದರೂ ತಮ್ಮ ಪ್ರೀತಿಯಿಂದಲೆ ಪ್ರತಿದಿನವನ್ನೂ ಸಂಭ್ರಮಿಸಬೇಕೆಂದು ಪಣತೊಟ್ಟ ರಾಜ್ ಕುಮಾರ್ - ಭಾರತಿ ಜೋಡಿ "ಹಸಿವಿನಲ್ಲು ಹಬ್ಬಾನೆ, ದಿನವು ನಿತ್ಯ ಉಗಾದಿನೆ" ಎಂದು ಹಾಡುವ ಸನ್ನಿವೇಶ ಯಾರು ತಾನೆ ಮರೆಯಲು ಸಾಧ್ಯ? ಕಾದ ಕಬ್ಬಿಣವನ್ನು ತಟ್ಟುವಾಗಿನ ಸದ್ದುಗಳನ್ನು ಹಾಡಿನ ಮಧ್ಯೆ ಸಂಗೀತದಂತೆ ಬಳಸಿ ಜಿ.ಕೆ.ವೆಂಕಟೇಶ್ ಕೊಟ್ಟಿರುವ ಸಂಗೀತ ಪರಿಣಾಮಕಾರಿಯಾಗಿದೆ. ಈಚೆಗೆ ನಮ್ಮ ಚಲನಚಿತ್ರಗಳಲ್ಲಿ ಹಬ್ಬಗಳ ಕುರಿತಾದ ಹಾಡುಗಳು ಕಡಿಮೆಯಾಗಿರುವುದಕ್ಕೆ ಬಹುಷಃ ಬದಲಾಗುತ್ತಿರುವ ನಮ್ಮ ಧೋರಣೆಯೇ ಕಾರಣವಿರಬಹುದು. ಬದಲಾಗುತ್ತಿರುವ ನಮ್ಮ ಆದ್ಯತೆಗಳಿಂದಾಗಿ ಹಬ್ಬದ ಸಂಭ್ರಮಾಚರಣೆ ನಮಗೆ ಅಷ್ಟು ಮುಖ್ಯವಾಗಿ ಕಾಣುತ್ತಿಲ್ಲವೇನೊ. ಅದೇನೇ ಇದ್ದರೂ ನಿತ್ಯವೂ ಹೊಸ ಆಕಾಂಕ್ಷೆ ಹಾಗೂ ಇನ್ನೂ ಹೆಚ್ಚಿನದೇನನ್ನೋ ಸಾಧಿಸುವ ಕನಸುಗಳನ್ನು ಹೊತ್ತು ಎಡೆಬಿಡದೆ ಓಡುತ್ತಿರುವ ಬೆಂಗಳೂರಿನಲ್ಲೂ ಕೂಡ ಜಯನಗರ, ಬಸವನಗುಡಿಗಳಂಥ "ಹಳೆ ಬೆಂಗಳೂರು" ಎಂದು ಕರೆಯಲ್ಪಡುವ ಸ್ಥಳಗಳಲ್ಲಾದರೂ ಯುಗಾದಿ ಹಬ್ಬದ ಸಂಭ್ರಮಾಚರಣೆ ಜೋರಾಗಿಯೇ ನಡೆಯುತ್ತಿದೆ.
ಯುಗಾದಿ ಹಬ್ಬಕ್ಕೆ ತಯಾರಿ..
ಯುಗಾದಿಯ ಸಂಭ್ರಮಾಚರಣೆಯ ಸಲುವಾಗಿ ಅಲ್ಲಲ್ಲಿ ಹಾಸ್ಯ ಸಮ್ಮೇಳನಗಳು ನಡೆಯುತ್ತವೆ. ಹಿಂದೆ ಯುಗಾದಿಯ ದಿವಸ ಆಕಾಶವಾಣಿಯಲ್ಲಿ ಕಾವ್ಯ ವಾಚನ, ಲಘು ಪ್ರಬಂಧ ವಾಚನ ಇತ್ಯಾದಿಗಳು ನಡೆಯುತ್ತಿದ್ದವು. ಇಂಥ ಕಾರ್ಯಕ್ರಮಗಳು ಕೂಡ ಹಿಂದೆ ಹಬ್ಬದ ಸಂಭ್ರಮಾಚರಣೆಯ ಭಾಗವಾಗಿದ್ದವು. ಈಗಂತೂ ನೂರೆಂಟು ರೇಡಿಯೋ, ದೂರದರ್ಶನ ವಾಹಿನಿಗಳಿವೆ, ಎಲ್ಲದರಲ್ಲೂ ಹಬ್ಬದ ವಿಶೇಷ ಕಾರ್ಯಕ್ರಮಗಳು ಇರುತ್ತವೆ. ವಿವಿಧ ವಾಹಿನಿಗಳಲ್ಲಿ ಬರುವ ಕೌಟುಂಬಿಕ ಧಾರಾವಾಹಿಗಳ ಪಾತ್ರಗಳೂ ಕೂಡ ಹಬ್ಬ ಆಚರಿಸಿಕೊಂಡು, ಪರಸ್ಪರ ಶುಭಾಶಯ ಕೋರಿಕೊಂಡು, ಬೇವು ಬೆಲ್ಲ ತಿಂದು ತಮ್ಮ ಎಂದಿನ ಕದನ-ಕೋಲಾಹಲಗಳಿಂದ ಒಂದು ಸಣ್ಣ ವಿರಾಮ ತೆಗೆದುಕೊಳ್ಳುತ್ತವೆ. ಮರುದಿನ ಮತ್ತೆ ಕದನಗಳು ಆರಂಭ!
ವಿಜಯನಾಮ ಸಂವತ್ಸರದಿಂದ ಜಯನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಈ ವರ್ಷದಲ್ಲಿ ಶೀಘ್ರದಲ್ಲೇ ಭಾರತದ ಪ್ರಧಾನ ಮಂತ್ರಿಯನ್ನು ನಿರ್ಧರಿಸುವ ಚುನಾವಣೆಗಳೂ ದೇಶದಾದ್ಯಂತ ನಡೆಯಲಿವೆ. ಭಾರತದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯ ಕಣ್ಣಲ್ಲೂ ಬದಲಾವಣೆಯ ನಿರೀಕ್ಷೆ, ಮನದಲ್ಲಿ ಹೊಸ ಆಸೆ, ಹೊಸ ಕನಸುಗಳು. ಬದಲಾವಣೆಯ ಭರವಸೆ ಕೊಡುವ ನಾಯಕರೂ ಹಲವರು. ಹಳೆಯ ತಪ್ಪುಗಳು ಮರುಕಳಿಸದಿರಲಿ. ಈ ಯುಗಾದಿಯ ಬಳಿಕ ಬರುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶ ನಿಜಕ್ಕೂ ಒಂದು ಹೊಸ ಯುಗದ ಆದಿಯಾಗುತ್ತದೆ ಎಂಬ ಆಶಾವಾದ ನಮ್ಮಲ್ಲಿರಲಿ. ಜಯನಾಮ ಸಂವತ್ಸರ ಭಾರತೀಯನ ಕನಸುಗಳನ್ನು ಸಾಕಾರಗೊಳಿಸಲಿ ಎಂದು ಆಶಿಸೋಣ!
Author : ಕಿರಣ್ ಕುಮಾರ್
Share :
More Articles From Art & Culture