ಇಸ್ಲಾಂ ಸಂಸ್ಕೃತಿಯಲ್ಲಿಯ ವಿಶಿಷ್ಟ ಕಲೆ ಕವ್ವಾಲಿ
ಕವ್ವಾಲಿ ಇದೊಂದು ಸೂಫಿ ಭಕ್ತಿಪರಂಪರೆಯ ಸಂಗೀತ ಪ್ರಕಾರ. ಇಸ್ಲಾಂ ಆಧ್ಯಾತ್ಮ ಜಗತ್ತಿನಲ್ಲಿ ಪ್ರಾಶಸ್ತ್ಯ ಹೊಂದಿರುವ ಸಂಗೀತ ಪದ್ಧತಿ ಇದು. ಅತ್ಯಂತ ಅಪೂರ್ವ ಅಂದೆನಿಸುವ ಗಾನ ಮಾಧುರ್ಯದಿಂದ ಮನಸ್ಸಿನಲ್ಲಿರುವ ಭಕ್ತಿಯನ್ನು ಇಮ್ಮಡಿಗೊಳಿಸುವ ಸಂಗೀತ ಪದ್ಧತಿ ಕವ್ವಾಲಿ. ಈ ಸುಶ್ರಾವ್ಯ ಸಂಗೀತ ಪ್ರಕಾರವು ಉತ್ತರ ಏಷಿಯಾದಲ್ಲಿ ಅತಿ ಹೆಚ್ಚು ಪ್ರಖ್ಯಾತವಾಗಿದೆ.
ಇಸ್ಲಾಂ ಧರ್ಮದ ವಿಶೇಷ ಹಬ್ಬಗಳಲ್ಲಿ ಮತ್ತು ದರ್ಗಾಗಳಲ್ಲಿ ಅಲ್ಲಾನ ಹೊಗಳುತ್ತಾ, ಅಲ್ಲಾನ ಶಕ್ತಿಯನ್ನು ಗುಣಗಾನ ಮಾಡುತ್ತಾ ಹಾಡುವ ಸಂಸ್ಕೃತಿ ಕವ್ವಾಲಿ ಸಂಗೀತ ಪ್ರಕಾರದಲ್ಲಿ ಬೆಳೆದುಕೊಂಡು ಬಂದಿದೆ. ಸೂಫಿಪಂಥದಲ್ಲಿ ಕವ್ವಾಲಿಯನ್ನು ಒಂದು ಅತೀಂದ್ರಿಯ ಸಂದೇಶವನ್ನು ತಲುಪಿಸುವ ಮಾಧ್ಯಮವಾಗಿ ಬಳಸಲಾಗಿದೆ. ಗಾಯನದ ಮೂಲಕ ದೇವರನ್ನು ಸದಾ ಕಾಲ ನೆನೆಪಿಡಲು ಸಹಾಯ ಮಾಡುವ ಕವ್ವಾಲಿಯನ್ನು ಇಸ್ಲಾಂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಡಲಾಗುತ್ತದೆ. ಇವು ಭಕ್ತರ ಆಂತರಿಕ ಜ್ಞಾನದ ಜಾಗೃತಿಗೆ ಸಹಕರಿಸುತ್ತವೆ ಎಂದು ನಂಬಲಾಗಿದೆ. ಕವ್ವಾಲಿಯ ಸಾಹಿತ್ಯದಲ್ಲಿ ಇಸ್ಲಾಮ್ ಸಂಪ್ರದಾಯದ ಜ್ಞಾನೋದಯದ ನಾನಾ ಮಾರ್ಗಗಳನ್ನು ಸೂಚಿಸಲಾಗುತ್ತದೆ.
ಗುಂಪು ಹಾಡುಗಾರಿಕೆಯೇ ಕವ್ವಾಲಿಯ ವಿಶೇಷತೆ, ಒಬ್ಬ ಮುಖ್ಯ ಹಾಡುಗಾರನಿಗೆ ಸಾಥ್ ನೀಡುತ್ತಾ ದನಿಗೂಡಿಸುವ ಇತರ ಹಾಡುಗಾರರು ಕೇಳುಗರನ್ನು ಭಕ್ತಿ ಲೋಕಕ್ಕೆ ಕರೆದೊಯ್ಯುತ್ತವೆ. ನಿರ್ದಿಷ್ಠ ಸಂಗೀತದ ಉಪಕರಣಗಳನ್ನು ಬಳಸಿಕೊಂಡು ಗುಂಪಿನಲ್ಲಿ ಹಾಡಲ್ಪಡುವ ಇಂಥ ಸುಶ್ರಾವ್ಯ ಇಸ್ಲಾಂ ಭಕ್ತಿಗೀತೆಗಳಿಗೆ ತಮ್ಮದೇ ಆದ ಆಕರ್ಷಣೆಗಳಿವೆ. ಹಾಡುಗಾರರೊಂದೇ ಹಾಡದೇ, ಪ್ರೇಕ್ಷಕರೂ ಕೂಡ ದನಿಗೂಡಿಸುತ್ತಾರೆ, ಹೀಗಾಗಿ ಇಡೀ ಸಮೂಹವೇ ಭಕ್ತಿಯಲ್ಲಿ ಪಾಲ್ಗೊಳ್ಳುತ್ತದೆ.
700 ವರ್ಷದ ಇತಿಹಾಸವಿರುವ ಕವ್ವಾಲಿ ಸಂಗೀತ ಹುಟ್ಟಿದ್ದು ಪರ್ಷಿಯಾದಲ್ಲಿ. ಭಕ್ತಿ ಗೀತೆಗಳ ರೂಪದಲ್ಲಿ ಪರ್ಷಿಯಾದಲ್ಲಿ ಅಂದರೆ ಇಂದಿನ ಇರಾನ್ ಮತ್ತು ಅಫ್ಘಾನಿಸ್ತಾನ್‌ನಲ್ಲಿ ಚಾಲ್ತಿಯಲ್ಲಿದ್ದ ವಿಶಿಷ್ಠ ಸಂಗೀತ ಪ್ರಕಾರ 8ನೇ ಶತಮಾನದಲ್ಲಿ ಹುಟ್ಟಿದೆ ಎನ್ನಲಾಗಿದೆ. 11ನೇ ಶತಮಾನದಲ್ಲಿ ಕವ್ವಾಲಿ ಸಂಗೀತ ಪ್ರಕಾರ ಉತ್ತರ ಏಷಿಯಾಗಳಿಗೆ ಕವ್ವಾಲಿ ಸಂಗೀತ ಪದ್ಧತಿ ಪ್ರಚಾರ ಪಡೆಯಿತು. 13 ನೇ ಶತಮಾನದ ಹೊತ್ತಿಗೆ ಕವ್ವಾಲಿ ಭಾರತವನ್ನೂ ಪ್ರವೇಶ ಮಾಡಿತು. ಮಧ್ಯ ಏಷ್ಯಾ ಮತ್ತು ಟರ್ಕಿಯಲ್ಲಿ ಸಮಾ ಎಂಬ ಸಂಗೀತ ಪ್ರಕಾರವಿದೆ ಅದೂ ಕೂಡ ಈ ಕವ್ವಾಲಿ ಪದ್ಧತಿಯಿಂದಲೇ ಪ್ರಭಾವಿತಗೊಂಡ ಸಂಗೀತ ಪ್ರಕಾರ.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಒಂದೇ ರೀತಿಯ ಕವ್ವಾಲಿ ಪ್ರಕಾರ ಬಳಕೆಯಲ್ಲಿದ್ದು, ಅದನ್ನು ಕವ್ವಾಲಿಯ ಮೆಹ್ಫಿಲ್ ಎ ಸಮಾ ಎಂದು ಕರೆಯುತ್ತಾರೆ. ಕವ್ವಾಲಿಯ ಹಾಡುಗಳು ಸರ್ವೇ ಸಾಮಾನ್ಯವಾಗಿ ಉರ್ದು ಭಾಷೆಯಲ್ಲಿಯೇ ಇರುತ್ತವೆ. ಆದರೆ, ನಮ್ಮ ದೇಶದಲ್ಲಿ ಪಂಜಾಬಿ ಭಾಷೆಯ ಕವ್ವಾಲಿಗಳನ್ನೂ ಹಾಡುತ್ತಾರೆ. ಪ್ರಾದೇಶಿಕ ಭಾಷೆಗಳಲ್ಲಿಯೂ ಕವ್ವಾಲಿಗಳನ್ನು ಹಾಡಲಾಗುತ್ತದೆ ಆದರೆ, ಅವೆಲ್ಲ ಮೂಲ ಕವ್ವಾಲಿಗಳಿಗಿಂತ ಭಿನ್ನವಾಗಿರುತ್ತವೆ ಎಂಬುದು ಕವ್ವಾಲಿ ಅಭಿಮಾನಿಗಳ ಅಭಿಪ್ರಾಯ.
ಕವ್ವಾಲಿಗಳಲ್ಲಿಯೇ ವಿವಿಧ ಪ್ರಕಾರಗಳೂ ಇವೆ. ಅಲ್ಲಾಹ್‌ರನ್ನು ಹೊಗಳುವ ಹಮ್ದ್, ಮಹ್‌ಮದ್‌ನ ಗುಣಗಾನ ಮಾಡುವ ನಾತ್, ಮನ್‌ಕಾಬಾತ್, ಮರ್ಸಿಯಾ, ಗಝಲ್, ಕಾಫಿ, ಮುನಾದ್‌ಜತ್ ಈ ಮುಂತಾದ ವಿಧಗಳಿವೆ. ಈ ಎಲ್ಲಾ ಪ್ರಕಾರಗಳೂ ಕೂಡ ಅದರದ್ದೇ ಆದ ವಿಶೇಷತೆಗಳನ್ನು ಹೊಂದಿವೆ.
ಮುಸ್ಲಿಂ ಧಾರ್ಮಿಕ ನಂಬಿಗೆಗಳಲ್ಲಿ ಕವ್ವಾಲಿಗೆ ಪವಿತ್ರ ಸ್ಥಾನವಿದೆ. ಅಲ್ಲಾಹುವನ್ನು ನೆನೆದು, ಗುಣಗಾನ ಮಾಡುವ, ಮನೋರಂಜನೆಯ ಮೂಲಕ ಸಾಮೂಹಿಕವಾಗಿ ಅಲ್ಲಾಹ್‌ನನ್ನು ನೆನೆಯುವ ಈ ಸಂಗೀತ ಪ್ರಕಾರಕ್ಕೂ ಅಷ್ಟೇ ಜನಪ್ರಿಯತೆಯೂ ಇದೆ.
Author : ಅಮೃತಾ ಹೆಗಡೆ