ಬಡಗುತಿಟ್ಟು ಯಕ್ಷಗಾನದ ದೃಶ್ಯ
ಯಕ್ಷಗಾನ - ಇದೊಂದು ಗಂಡು ಕಲೆ. ಕರ್ನಾಟಕದ ಅತ್ಯಂತ ವಿಶಿಷ್ಠ ಕಲೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲಿ ಯಕ್ಷಗಾನ ಅತೀ ಪ್ರಮುಖವಾದದ್ದು. ನಮ್ಮ ಸಂಸ್ಕೃತಿ, ಆಚರಣೆ ಮತ್ತು ಸಂಪ್ರದಾಯವನ್ನು ಮೈವೆತ್ತಿರುವ ಯಕ್ಷಗಾನ ಕಲೆ ನಮ್ಮ ನಾಡಿನ ವಿಶೇಷತೆಗಳಲ್ಲೊಂದು.
ಯಕ್ಷಗಾನ ಅಂದರೆ ಬರಿಯ ನರ್ತನವಲ್ಲ, ಬರಿಯ ಗಾಯನವಲ್ಲ, ಸಂಭಾಷಣೆ ಭರಿತ ಬರಿಯ ಅಭಿನಯವೂ ಅಲ್ಲ, ಗಾಯನ, ವಾದನ, ನರ್ತನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಹೊಂದಿರುವ ರಂಗಭೂಮಿಯ ಕಲಾಪ್ರಕಾರ. ತನ್ನೆಲ್ಲ ವಿಶೇಷತೆಗಳನ್ನೂ ಸಮತೋಲನದಿಂದ ಸಮನ್ವಯಗೊಳಿಸಿ ರಂಗಪ್ರಯೋಗ ಮಾಡಲಾದ ಅದ್ಭುತ ಕಲೆ.
ಸಂಸ್ಕೃತಿಯೊಂದಿಗೆ ಹೊಸೆದುಕೊಂಡಿರುವ ಸಮರ್ಥ ಕಲೆಯೇ ಯಕ್ಷಗಾನ. ಮುಖ್ಯವಾಗಿ ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು, ಕಾಸರಗೋಡು ಜಿಲ್ಲೆಗಳಲ್ಲಿ ಪ್ರಚಲಿತವಿರುವ ಯಕ್ಷಗಾನ ಅಲ್ಲಿಯ ಜನರ ಜೀವನಾಡಿ.
ತೆಂಕುತಿಟ್ಟು ಯಕ್ಷಗಾನದ ವೇಷಧಾರಿಯ ನೋಟ
ಯಕ್ಷಗಾನದಲ್ಲಿ ತೆಂಕುತಿಟ್ಟು, ಬಡಗುತಿಟ್ಟು ಹಾಗೂ ಉತ್ತರತಿಟ್ಟು ಎಂಬ ವಿಧಗಳಿಗೆ. ಪಾತ್ರಧಾರಿ ಅಭಿನಯಿಸುವ ರೀತಿ, ವೇಷಭೂಷಣಗಳಲ್ಲಿ ಭಿನ್ನತೆ, ಹಾಗೂ ಭಾಗವತಿಕೆಯಲ್ಲಿ ವ್ಯತ್ಯಾಸವಿರುವ ಈ ಮೂರೂ ವಿಧಗಳೂ ಕೂಡ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ.
ಯಕ್ಷಗಾನದ ಇತಿಹಾಸ ಕೂಡ ಪುರಾತನವಾದದ್ದು. ತಂಜಾವೂರಿನ ಅರಸರು, ಮೈಸೂರಿನ ಮುಮ್ಮುಡಿ ಕೃಷ್ಣರಾಜರು, ಸಾಹಿತ್ಯದಲ್ಲಿ ಗಣ್ಯಸ್ಥಾನ ಗಳಿಸಿದ ಮುದ್ದಣಾದಿಗಳು ಯಕ್ಷಗಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಇದು ಜಾನಪದ ಕಲೆಯೇ ಅಥವಾ ಶಾಸ್ತ್ರೀಯ ಕಲೆಯೇ ಎಂಬುದರ ಕುರಿತು ಚರ್ಚೆಗಳಿವೆ. ಆದರೆ, ಯಕ್ಷಗಾನ ಕಲಾವಿದರು ಹಾಗೂ ಅಧ್ಯಯನಕಾರರ ಪ್ರಕಾರ, ಈ ಕಲೆ ಸಂಗೀತದ ದೃಷ್ಟಿಯಿಂದ ಶಾಸ್ತ್ರೀಯ ಸಂಗೀತದಂತೆಯೇ ದೇಶೀ ಸಂಗೀತದ ಒಂದು ಪ್ರಕಾರವೇ ಹೊರತು ಶುದ್ಧ ಜಾನಪದವಲ್ಲ. ಶುದ್ಧ ಜಾನಪದವೆಂದರೆ ಗ್ರಂಥಸ್ಥವಲ್ಲದ ಮತ್ತು ಕೇವಲ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ಸಾಗಿಸಬಹುದಾದಂತುಹುದು ಎಂದರ್ಥ. ಯಕ್ಷಗಾನವು ಈ ರೀತಿಯ ಶುದ್ಧ ಜಾನಪದವಂತೂ ಅಲ್ಲ ಎಂಬುದು ಹಲವರ ಅಭಿಪ್ರಾಯ.
ಯಕ್ಷಗಾನದ ಅಂಗಗಳಾದ ಕುಣಿತ, ಸಂಗೀತ, ಉಡುಗೆ, ಅಲಂಕಾರಗಳು ವಿಶೇಷ ರೀತಿಯ ವಿಕಾಸ ಹೊಂದಿದ್ದು, ದೀರ್ಘಕಾಲದ ಬೆಳವಣಿಗೆಯಿಂದಲೇ ವಿಕಾಸವಾದ ಕಲೆ ಎಂದು ಅಭಿಪ್ರಾಯಪಟ್ಟಿರುವ ಡಾ.ಶಿವರಾಮ ಕಾರಂತರು, ಯಕ್ಷಗಾನ ಜನಪದ ಪೋಷಣೆಯಿಂದ ಬೆಳೆದು ಬಂದ ಶಾಸ್ತ್ರೀಕಲೆ ಎಂದು ಬಣ್ಣಿಸಿದ್ದರು.
ಯಕ್ಷಗಾನ ಯಕ್ಷನೃತ್ಯವಾಗುವ ಮೊದಲು ಕೇವಲ ಗಾಯನ ಸಂಪ್ರದಾಯವಾಗಿತ್ತು ಎಂಬುದಕ್ಕೆ ಹಳೆಯ ಗೃಂಥಗಳಲ್ಲಿ ಸಾಕಷ್ಟು ಪುರಾವೆಗಳಿವೆ. ಹಲವು ಶತಮಾನಗಳ ಹಿಂದೆ ಯಕ್ಷಗಾನ ಬರಿಯ ಗಾಯನವಾಗಿದ್ದು, ಇಂದಿನ ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಪ್ರಕಾರಗಳಂತೆಯೇ ಪ್ರತ್ಯೇಕ ಸಂಗೀತ ಪ್ರಕಾರ ಎಂದೆನಿಸಿಕೊಂಡಿತ್ತು ಎಂದು ಡಾ.ಶಿವರಾಮ ಕಾರಂತರು ಯಕ್ಷಗಾನದ ಹುಟ್ಟಿನ ಬಗ್ಗೆ ವಿವರಿಸಿದ್ದರು.
ಯಕ್ಷಗಾನಕ್ಕೆ ಪೌರಾಣಿಕ ಕಥೆಯೇ ಆಗಬೇಕೆಂದೇನೂ ನಿಯಮವಿಲ್ಲ. ಐತಿಹಾಸಿಕ, ಸಾಮಾಜಿಕ ಕಥೆಯನ್ನೂ ಕೂಡ ಯಕ್ಷಗಾನದಲ್ಲಿ ಬಿಂಬಿಸಬಹುದು. ಇತ್ತೀಚೆಗೆ ಅಂತಹ ಪ್ರಯೋಗಗಳೂ ಕೂಡ ಸಾಕಷ್ಟು ನಡೆಯುತ್ತಿವೆ. ಆದರೆ ಸಾಮಾನ್ಯವಾಗಿ ಯಕ್ಷಗಾನ ಪೌರಾಣಿಕ ಕಥೆಗಳನ್ನೇ ಆಧರಿಸಿರುತ್ತದೆ. ರಾಮಾಯಣ, ಮಹಾಭಾರತದ ಕಥೆಗಳ ಭಾಗಗಳನ್ನು ಆಯ್ದುಕೊಂಡು ಯಕ್ಷಗಾನದ ಮೂಲಕ ಬಿಂಬಿಸಲಾಗುತ್ತದೆ. ತನ್ನದೇ ಶೈಲಿಯ ಹಾಡು, ಅಭಿನಯ, ನೃತ್ಯಗಳೊಂದಿಗೆ ಪ್ರದರ್ಶನಗೊಳ್ಳುವ ಕಥಾನಕವನ್ನು ಪ್ರಸಂಗ ಎಂದು ಕರೆಯುತ್ತಾರೆ.
ಯಕ್ಷಗಾನದ ಸೂತ್ರಧಾರಿಯೇ ಭಾಗವತ. ಆತನೇ ಯಕ್ಷಗಾನದ ಕಥಾನಕವನ್ನು ಪ್ರಾರಂಭದಿಂದ ಕೊನೆಯ ತನಕ ಒಯ್ಯುವವನು. ಕಥೆಯನ್ನು ಹಾಡಿನಲ್ಲಿ ಹೇಳುತ್ತಾ, ಪಾತ್ರಧಾರಿಗಳಿಗೆ ಮಾರ್ಗದರ್ಶಿಯಾಗಿರುತ್ತಾನೆ. ಭಾಗವತಿಕೆ ಯಕ್ಷಗಾನದ ಜೀವಾಳ ಎಂದರೂ ತಪ್ಪಿಲ್ಲ.
ಕರಾವಳಿ ಕರ್ನಾಟಕದ ಪ್ರಮುಖ ಕಲೆ ಯಕ್ಷಗಾನ
ರಾಗ, ತಾಳಗಳ ವಿಷಯಗಳನ್ನು ಗಮನಿಸಿದಾಗ ಯಕ್ಷ ಸಂಗೀತ ಕರ್ನಾಟಕ ಸಂಗೀತಕ್ಕೆ ಸಮೀಪವಿದೆ. ಆದರೆ ತನ್ನದೇ ಆದ ವಿಶಿಷ್ಟ ಗಮಕ ಹಾಗೂ ಆಲಾಪನಾ ಕ್ರಮದಿಂದಾಗಿ ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತಕ್ಕಿಂತಲೂ ಭಿನ್ನವಾಗಿದೆ.
ಭಾಗವತರೊಂದಿಗೆ ಯಕ್ಷಗಾನದ ಗತ್ತಿನ ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗುವವರು ಹಿಮ್ಮೇಳದವರು. ಹಿಮ್ಮೇಳ ಅಂದರೆ, ವಿಶೇಷವಾಗಿ ಯಕ್ಷಗಾನದಲ್ಲಿ ಬಳಸಲ್ಪಡುವ ಚಂಡೆ, ಮೃದಂಗ, ಮದ್ದಲೆ, ತಾಳ, ಜಾಗಟೆ ಮುಂತಾದ ಸಂಗೀತ ಉಪಕರಣಗಳನ್ನು ನುಡಿಸುವ ಕಲಾವಿದರು. ಚಂಡೆ, ಮೃದಂಗದ ಶಬ್ಧವೇ ಯಕ್ಷಗಾನಕ್ಕೊಂದು ಗತ್ತು. ಅದೇ ಯಕ್ಷಗಾನದ ಸೌಂದರ್ಯ.
ಭಾಗವತರು ಕಾವ್ಯದ ಮೂಲಕ ಬಣ್ಣಿಸಿದ ಕಥಾನಕವನ್ನು ಪಾತ್ರಧಾರಿಗಳು ಮಾತಿನ ಮೂಲಕ ವಿವರಿಸುತ್ತಾ, ಚಂಡೆ ಮೃದಂಗದ ತಾಳಕ್ಕೆ ಹೆಜ್ಜೆ ಹಾಕುತ್ತಾರೆ.
ಪಾತ್ರಧಾರಿಗಳ ವೇಷಗಳೂ ಹಾಗೇ ತೆಂಕು, ಬಡಗು ಹಾಗೂ ಉತ್ತರ ತಿಟ್ಟುವಿನ ಯಕ್ಷಗಾನದಲ್ಲಿ ಸ್ವಲ್ಪ ಭಿನ್ನತೆಗಳಿದ್ದರೂ, ಆ ಎಲ್ಲ ವೇಷಭೂಷಗಳ ವೈಭವೂ ಅಷ್ಟೇ ಆಕರ್ಷಣೀಯ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರತಿಯೊಂದು ಪಾತ್ರಕ್ಕೆ ತಕ್ಕ ವೇಷಗಳು ಹಾಗೂ ಮುಖವರ್ಣಿಕೆಯಿರುತ್ತದೆ. ಅಂತಹ ವಿಶಿಷ್ಟತೆಯಿಂದಲೇ ಯಕ್ಷಗಾನ ಪ್ರಸಿದ್ಧಿಪಡೆದಿದೆ.
ತಾಳಮದ್ದಲೆಯೂ ಕೂಡ ಯಕ್ಷಗಾನದ ಒಂದು ವಿಭಾಗ. ಇಲ್ಲಿ ಪಾತ್ರಧಾರಿಗಳಿರುವುದಿಲ್ಲ. ಬದಲಾಗಿ ಅರ್ಥಧಾರಿಗಳಿರುತ್ತಾರೆ. ಭಾಗವತ, ಹಿಮ್ಮೇಳ ಹಾಗೂ ಅರ್ಥಧಾರಿಯಿಂದ ನಡೆಯುವ ಪ್ರಸಂಗವನ್ನೇ ತಾಳಮದ್ದಲೇ ಅಂತ ಕರೆಯಲಾಗುತ್ತದೆ.
ದಿ.ಕೆರೆಮನೆ ಶಿವರಾಮ ಹೆಗಡೆ, ದಿ.ಕೆರೆಮನೆ ಮಹಾಬಲ ಹೆಗಡೆ, ದಿ,ಕೆರೆಮನೆ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ಐರೋಡಿ ರಾಮ ಗಾಣಿಗ, ಮಂಟಪ ಪ್ರಭಾಕರ ಉಪಾಧ್ಯಾಯ, ಗೋಡೆ ನಾರಾಯಣ ಹೆಗಡೆ, ಬಳ್ಕೂರು ಕೃಷ್ಣಯಾಜಿ ಈ ಮುಂತಾದವರು ಯಕ್ಷಗಾನ ಲೋಕದ ಮೇರು ಕಲಾವಿದರು. ಅದ್ಭುತ ಕಲಾವಿದ ಕೆರೆಮನೆ ಶಂಭು ಹೆಗಡೆ, ಯಕ್ಷ ಲೋಕಕ್ಕೆ ನೀಡಿದ ಕೊಡುಗೆ ಅಪಾರ.
ಯಕ್ಷಗಾನದಲ್ಲಿ ಬರಿಯ ಮನೋರಂಜನೆಯೊಂದೇ ಇಲ್ಲ, ಇದರಲ್ಲಿ ಜ್ಞಾನವಿದೆ. ಶತ ಶತಮಾನಗಳಿಂದ ಯಕ್ಷಕಲೆಯ ಅಭಿವೃದ್ಧಿಗಾಗಿ ಅದೆಷ್ಟೋ ಕಲಾವಿದರು, ಸಾಹಿತಿಗಳು ಅಧ್ಯಯನಕಾರರು ಶ್ರಮಿಸಿದ್ದಾರೆ. ಇದೊಂದು ಶುದ್ಧ ಜ್ಞಾನದ ಕಲೆ, ರಾಜರ ಕಾಲದಿಂದಲೂ ಸಮಾಜದಲ್ಲಿ ಅತ್ಯಂತ ಗೌರವ ಪಡೆದುಕೊಂಡಿದ್ದ ಸಮೃದ್ಧವಾದ, ಶ್ರೀಮಂತ ಕಲೆಯೊಂದು ನಮ್ಮ ನಾಡಿನಲ್ಲಿ, ನಮ್ಮ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ ಎಂಬುದು ನಮ್ಮೆಲ್ಲರ ಹೆಮ್ಮೆಯೇ ಸರಿ.
Author : ಅಮೃತಾ ಹೆಗಡೆ