Untitled Document
Sign Up | Login    
ಹೋಳಿ.. ಬಣ್ಣದೋಕುಳಿ..

ಹೋಳಿಯಲ್ಲಿ ರಂಗೇರಿದ ಸ್ನೇಹ ಸಿಂಚನ....

ಬಣ್ಣಗಳ ಹಬ್ಬ ಹೋಳಿ ಹಬ್ಬ. ಉಲ್ಲಾಸ ತುರುವ ಬಣ್ಣಗಳ ಎರಚಾಟದ ಮನೋರಂಜನೆಯ ನಂತರ ಸ್ನಾನ ಮಾಡಿ ದೇವರ ಪೂಜೆ ನೆರವೇರಿಸುವುದು ಹೋಳಿ ಹಬ್ಬದ ವಿಶೇಷ. ವಿವಿಧ ಬಣ್ಣಗಳ ಓಕುಳಿ ಹರಿಸಿ ಇಡಿ ವರ್ಷ ಸಂತೋಷದ ಕೋಡಿಯೇ ಹರಿಯಲಿ ಎಂದು ಹಾರೈಸುವ ರಂಗಿನ ಹಬ್ಬ ಇದು.

ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಮಾತ್ರ ಆಚರಣೆಯಲ್ಲಿದ್ದ ಹೋಳಿ ಹಬ್ಬವನ್ನು ಈಗ ಭಾರತದಾದ್ಯಂತ ಆಚರಿಸಲಾಗುತ್ತಿದೆ. ಯುವಕ ಯುವತಿಯರಿಗೆಲ್ಲ ಮೋಜು ತರುವ ಹರ್ಷದ ಹಬ್ಬ ಇದಾಗಿರುವುದರಿಂದ ಸುಲಭವಾಗಿ ಈ ಹಬ್ಬ ದೇಶದೆಲ್ಲಡೆ ಪಸರಿಸಿದೆ. ಬಣ್ಣಗಳೊಂದಿಗೆ ಓಕುಳಿ ಆಡಿ, ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಖುಷಿಪಟ್ಟು ಈ ಹಬ್ಬವನ್ನಾಚರಿಸಲಾಗುತ್ತದೆ.

ಪಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯ ದಿವಸ ಹೋಳಿಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಕಾಮನ ಹಬ್ಬವೆಂದೂ ಕರೆಯಲಾಗುತ್ತದೆ.

ಹರ್ಷ ತರುವ ಬಣ್ಣಗಳ ಹಬ್ಬ..
ಕಾಮನ ಹಬ್ಬವೆಂದೂ ಕರೆಯಲ್ಪಡುವ ಹೋಳಿ ಆಚರಣೆಯ ಹಿಂದೆ ಒಂದು ಕಥೆಯಿದೆ. ತಾರಕಾಸುರನೆಂಬ ರಾಕ್ಷಸನು ತಪಸ್ಸುಮಾಡಿ ಬ್ರಹ್ಮನನ್ನು ಒಲಿಸಿಕೊಂಡು ತನಗೆ ಸಾವು ಬಾರದಂತೆ ಅನುಗೃಹಿಸು ಎಂದು ಬೇಡುತ್ತಾನೆ. ಅದಕ್ಕೆ ಬ್ರಹ್ಮ ಸಾವು ಎಲ್ಲರಿಗೂ ನಿಶ್ಚಿತ ಸಾವು ಬಾರದಂತೆ ತಡೆಯಲು ಸಾಧ್ಯವಿಲ್ಲ ಎನ್ನುತ್ತಾನೆ. ಆಗ ತಾರಕಾಸುರನು, ಶಿವನಿಗೆ ಏಳು ದಿನದಲ್ಲಿ ಜನಿಸಿದ ಮಗನಿಂದ ನನಗೆ ಸಾವು ಬರುವಂತೆ ಮಾಡು ಎಂದು ವರ ಬೇಡುತ್ತಾನೆ. ಅದಕ್ಕೆ ಬ್ರಹ್ಮ ಒಪ್ಪಿ ವರ ನೀಡುತ್ತಾನೆ. ಬ್ರಹ್ಮನಿಂದ ವರ ಪಡೆದಿರುವ ತಾರಕಾಸುರ ಅಹಂಕಾರದಿಂದ ಲೋಕದೆಲ್ಲಡೆ ಉಪಟಳ ನೀಡುತ್ತಿರುತ್ತಾನೆ.

ಆಗ ದೇವತೆಗಳೆಲ್ಲ ಸಹಾಯ ಕೋರಿ ಶಿವನಲ್ಲಿಗೆ ಹೋದಾಗ ಶಿವ ಭೋಗಸಮಾಧಿಯಲ್ಲಿರುತ್ತಾನೆ. ಶಿವ ಭೋಗಸಮಾಧಿಯಿಂದ ಎದ್ದು ಪಾರ್ವತಿಯಲ್ಲಿ ಮೋಹಗೊಂಡು ಸೇರುವಂತೆ ಮಾಡುವುದಕ್ಕಾಗಿ ದೇವತೆಗಳೆಲ್ಲ ಸೇರಿ ರತಿ ಮನ್ಮಥರನ್ನು ಒಪ್ಪಿಸುತ್ತಾರೆ. ಪುಣ್ಯಕಾರ್ಯ ಮಾಡಲು ರತಿ ಮನ್ಮಥರು ಒಪ್ಪುತ್ತಾರೆ. ಅದರಂತೆ ಧ್ಯಾನಸ್ಥ ಸ್ಥಿತಿಯಲ್ಲಿದ್ದ ಮಹಾದೇವನ ಎದುರು ನೃತ್ಯ ಮಾಡಿ, ಹೂವಿನ ಬಾಣ ಬಿಟ್ಟು ಶಿವನ ಧ್ಯಾನಕ್ಕೆ ಭಂಗ ತರುತ್ತಾರೆ. ಇದರಿಂದ ಕುಪಿತಗೊಂಡ ಶಿವ ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ಸುಟ್ಟುಬಿಡುತ್ತಾನೆ. ನಂತರ ರತಿ ಪತಿಭಿಕ್ಷೆ ಬೇಡಿದಾಗ ಅವಳಿಗೆ ಮಾತ್ರ ಮನ್ಮಥ ಕಾಣುವಂತೆ ವರ ನೀಡುತ್ತಾನೆ.
ರಂಗಿನಾಟದ ಮೋಜು ಮಸ್ತಿ..
ಮನ್ಮಥನಿಗೆ ಕಾಮ ಎಂಬ ಹೆಸರಿದೆ. ಹೀಗಾಗಿ ಕಾಮ ಶಿವನ ಕೆಂಗಣ್ಣಿಗೆ ಗುರಿಯಾಗಿ ಸುಟ್ಟುಹೋದ ದಿನವನ್ನು ಕಾಮನ ಹಬ್ಬವಾಗಿ ಆಚರಿಸುತ್ತಾರೆ. ಹೀಗಾಗಿ ಕಾಮನನ್ನು ಸುಟ್ಟು ಹೋಳಿಹುಣ್ಣಿಮೆ ಆಚರಿಸುವ ಪದ್ಧತಿ ಆಚರಣೆಯಲ್ಲಿ ಬಂದಿದೆ.

ಹೋಳಿ ಹಬ್ಬಕ್ಕಾಗಿ ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿ ಗುಲಾಲು ತಯಾರಿಸಿಕೊಂಡು ಓಕುಳಿಯಾಡುವ ಸಂಪ್ರದಾಯವಿದೆ. ಈಗೀಗ ಕೃತಕ ಬಣ್ಣಗಳನ್ನು ಎರಚಾಟಕ್ಕೆ ಹೆಚ್ಚಾಗಿ ಬಳಸಲಾಗುತ್ತದೆ. ಉತ್ತರ ಪ್ರದೇಶದಲ್ಲಿ ವಿಜ್ರಂಭಣೆಯಿಂದ ಆಚರಿಸಲ್ಪಡುವ ಹೋಳಿಯಲ್ಲಿ ವಿಶೇಷ ಖಾದ್ಯಗಳನ್ನೂ ಮಾಡಲಾಗುತ್ತದೆ. ಜೋಳದ ಹಿಟ್ಟಿನ ಗುಜಿಯಾ ಹಾಗೂ ಪಾಪ್ಡಿ ಹೋಳಿಹಬ್ಬದ ವಿಶೇಷ ತಿಂಡಿಗಳು.

ನಮ್ಮ ರಾಜ್ಯದಲ್ಲಿಯೂ ದಕ್ಷಿಣ ಕರ್ನಾಟಕದಲ್ಲಿಯೂ ಹಲವೆಡೆ ಹೋಳಿಯ ವಿಶಿಷ್ಠ ಆಚರಣೆಯಿಂದೆ. ಊರ ದೇವಸ್ಥಾನದ ಮುಂದೆ ಹೋಳಿ ಹುಣ್ಣಿಮೆಯ ಸಾಯಂಕಾಲ ಹೋಳಿಯನ್ನು ಹೊತ್ತಿಸಲಾಗುತ್ತದೆ. ಹೋಳಿ ಎಂದರೆ ಕಾಮನ ಪ್ರತಿರೂಪ. ಇದನ್ನು ಔಡಲಗಿಡ, ತೆಂಗಿನಗಿಡ, ಅಡಿಕೆಗಿಡ ಅಥವಾ ಕಬ್ಬನ್ನು ಮಧ್ಯ ನಿಲ್ಲಿಸಿ, ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ಕಟ್ಟಿ. ಸುಲಭವಾಗಿ ದಹನವಾಗುವ ರೀತಿಯಲ್ಲಿ ರಚಿಸಲಾಗಿರುತ್ತದೆ.
ನಂತರ ಇದನ್ನು ಊರ ಮುಖಂಡ ಪೂಜೆ ಮಾಡಿ, ನೈವೇದ್ಯ ನೀಡಿ, ಹೋಳಿಯನ್ನು ಹೊತ್ತಿಸುತ್ತಾನೆ. ಹೋಳಿ ಹೊತ್ತಿಕೊಂಡಾಗ ಅದರ ಸುತ್ತ ಪ್ರದಕ್ಷಿಣೆ ಹಾಕಲಾಗುತ್ತದೆ. ನಂತರ ಪ್ರಸಾದದ ರೂಪದಲ್ಲಿ ತೆಂಗಿನ ಕಾಯಿ, ಹಲಸು ಮುಂತಾದ ಹಣ್ಣುಗಳನ್ನು ಹಂಚಲಾಗುತ್ತದೆ.
ಹೋಳಿ ಹುಣ್ಣಿಮೆಯ ರಾತ್ರಿಯನ್ನು ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿ ಆಚರಿಸಲಾಗುತ್ತದೆ.

ಭಾರತದಾದ್ಯಂತ ಆಚರಿಸಲ್ಪಡುವ ಮನೋರಂಜನೆಯ ಹಬ್ಬ ಹೋಳಿ ಹಬ್ಬ ವರ್ಷಪೂರ್ತಿ ಹರ್ಷ ತರಲಿ, ಓಕುಳಿಯಾಡಿ ಖುಷಿಪಟ್ಟ ಎಲ್ಲರಲ್ಲಿಯೂ ಇಡೀ ವರ್ಷಪೂ ಹರ್ಷದ ರಂಗು ಮಾಸದಿರಲಿ ಎಂಬುದು ನಮ್ಮ ಹಾರೈಕೆ.

ಹೋಳಿ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited