ಮುಖದಲ್ಲೊಂದು ಕಿರುನಗೆಃ ನಮ್ಮನ್ನೂ ಗುರುತಿಸುವವರಿದ್ದಾರಲ್ಲ ಎಂಬ ಭಾವ..
ಯಾವುದೇ ವೃತ್ತಿಯನ್ನು ನಾವು ಕಡೆಗಣಿಸುವಂತಿಲ್ಲ. ಅದೇ ವೃತ್ತಿ ನಿರತರನ್ನೂ.. ಸಮಾಜಕ್ಕೆ ಅವರು ಅವರದ್ದೇ ಆದ ಕೊಡುಗೆ ನೀಡುತ್ತಿರುತ್ತಾರೆ. ಆದರೆ, ನಗರದ ಬಿರುಸಿನ ಜನಜೀವನದಲ್ಲಿ ಸ್ವಾರ್ಥದ ಹೊರತು ಬೇರೇನೂ ಕಾಣಲ್ಲ. ಯಾರು ಏನೇ ಕೆಲಸ ಮಾಡಿದರೂ ಅವರು ಅದಕ್ಕೆ ಪ್ರತಿಫಲ(ಹಣ) ಪಡೆಯುತ್ತಾರಲ್ಲವೇ ಎಂಬ ಮನೋಭಾವ. ಆದರೆ, ಮಂಗಳವಾರ ಕಂಡ ದೃಶ್ಯ ನಿಜಕ್ಕೂ ನಗರದ ಮಕ್ಕಳಲ್ಲಿ ಇಂಥ ಸಂಸ್ಕೃತಿ ಬೆಳೆಸುವ ಪ್ರಯತ್ನವೂ ನಡೆಯುತ್ತಿದೆಯಲ್ಲವೇ ಎಂದೆನಿಸಿತು.
ಹೌದು.. ಅದು ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ. ಶಾಲಾ ಮಕ್ಕಳು ಪೌರಕಾರ್ಮಿಕರನ್ನು ಅಭಿನಂದಿಸಿದ ಕ್ಷಣ ಅದು.. ಒಂದು ಗುಲಾಬಿ, ಗ್ರೀಟಿಂಗ್ ಕಾರ್ಡ್‌ನ್ನು ಆ ಮಕ್ಕಳು ಪೌರಕಾರ್ಮಿಕರ ಕೈಗೆ ಇತ್ತು ಧನ್ಯವಾದಗಳು ಎಂದು ಹೇಳಿದಾಗ ಅವರ ಮುಖದಲ್ಲಿ ಮಿನುಗಿದ ಆ ನಗು.. ಜತೆಗೆ ಒಂದಿಷ್ಟು ಸಿಹಿ ಹಂಚಿದ್ದಂತೂ ಆ ಖುಷಿಗೆ ಇನ್ನಷ್ಟು ಮೆರುಗು ನೀಡಿತ್ತು.
ಅವರ ಎಲ್ಲ ನೋವುಗಳನ್ನೂ ಮರೆಸಿದಂತಿತ್ತು. ನಗರದ ಮತ್ತು ಮನೆಮನೆಗಳ ಕಸವನ್ನು ಸಂಗ್ರಹಿಸಿ ಸ್ವಚ್ಛತೆಯ ಕಾರ್ಯದಲ್ಲಿ ಅವರ ಕೊಡುಗೆಯನ್ನು ಯಾರೂ ಸ್ಮರಿಸುತ್ತಿರಲಿಲ್ಲ. ಅವರಿಲ್ಲದಾಗ ಕಸ ಹಾಗೇ ಉಳಿದಾಗ ಮಾತ್ರ ಅವರಿಗೆ ಹಿಡಿ ಶಾಪ ಹಾಕುತ್ತಿದ್ದವರನ್ನು ನೆನಪಿಸುವಂತಾಗಿತ್ತು. ಅವರು ಈ ಕಾರ್ಯಕ್ರಮ ನೋಡಬೇಕು ಎಂಬ ಭಾವನೆಯೂ ಆ ಪೌರ ಕಾರ್ಮಿಕರ ಮನದಲ್ಲಿ ಹರಿದಾಡಿರಲೂಬಹುದು. ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮೈಸೂರು ನಾರಾಯಣ, ಮಕ್ಕಳ ಈ ಕಾರ್ಯವನ್ನು ಮೆಚ್ಚಿ ಶ್ಲಾಘಿಸಿದ್ದಾರೆ.
ಅಂದ ಹಾಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಚಿಲ್ಡ್ರನ್'ಸ್ ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‍ನೆಸ್(ಸಿಎಂಸಿಎ) ಎಂಬ ಎನ್‌ಜಿಒ. ಸತತ ಏಳನೇ ವರ್ಷ ಈ ಕಾರ್ಯಕ್ರಮ ನಡೆಸಿದ್ದು, ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆ ಮಕ್ಕಳು ಪಾಲ್ಗೊಂಡಿದ್ದರು. ಬೆಂಗಳೂರಿನಲ್ಲಿ ಸಿಎಂಸಿಎ ಜತೆಗೆ ನೋಂದಾಯಿಸಲ್ಪಟ್ಟ ೧೦೦ ಶಾಲೆಗಳ ೫೦೦೦ ಮಕ್ಕಳು ಈ ತಿಂಗಳು ಪೂರ್ತಿ ಅವರವರ ವ್ಯಾಪ್ತಿಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಿದ್ದಾರೆ. ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಜವಾಬ್ದಾರಿ, ಪ್ರತಿಯೊಂದು ವೃತ್ತಿ ಮತ್ತು ವೃತ್ತಿಪರರನ್ನು ಗೌರವಿಸುವ ಭಾವನೆ ಬೆಳೆಸುವುದಕ್ಕಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದಾಗಿ ಹೇಳುತ್ತಾರೆ ಎನ್‌ಜಿಒ ಪದಾಧಿಕಾರಿಗಳು.