ಅಕ್ಷಯ ತೃತೀಯ ದಿನದಂದು ಹೀಗೊಂದು ಒಳ್ಳೆಯ ಚಿಂತನೆ..
ನಮ್ಮ ದೇಶದಲ್ಲಿ ಆಚರಿಸಲ್ಪಡುವ ಎಲ್ಲಾ ಹಬ್ಬಗಳಲ್ಲಿಯೂ ಅದೆಷ್ಟು ಜನ ನಿಷ್ಠೆ ಹಾಗೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೋ ಗೊತ್ತಿಲ್ಲ... ಆದರೆ ವರ್ಷದಲ್ಲಿ ಆ ಒಂದು ದಿನ ಯಾವುದೇ ಒಳ್ಳೆಯ ವಸ್ತುವನ್ನು ಗಳಿಸಿದರೆ ವರ್ಷವಿಡೀ ಅದು ಅಗಣಿತ ಫಲನೀಡುವ ಹಬ್ಬದಲ್ಲಿ ಅದೇ.. ಅಕ್ಷಯ ತೃತೀಯ ದಿನದಂದು ಖಂಡಿತವಾಗಿಯೂ ಎಲ್ಲರೂ ಸಹ ಅತ್ಯುತ್ಸಾಹದಿಂದ ಪಾಲ್ಗೊಂಡು ತಮಗೆ ಬೇಕಿರುವ ಸಂಪತ್ತನ್ನು ಅಂದು ಖರೀದಿಸಿ ಆನಂದ ಪಡುತ್ತಾರೆ.
ಈ ಬಾರಿ ಮೇ.12-13ರಂದು ಅಕ್ಷಯ ತೃತೀಯ ಅಥವಾ ಅಕ್ಷಯ ತದಿಗೆ ಸಂಭ್ರಮ ಚಿನ್ನಪ್ರಿಯರ ಸಡಗರವನ್ನು ಇಮ್ಮಡಿಗೊಳಿಸಿದೆ. ಇತ್ತೀಚೆಗಷ್ಟೇ ಚಿನ್ನದ ಬೆಲೆ ಇಳಿಕೆಯಾಗಿರುವುದೂ ಸಹ ಬಂಗಾರಪ್ರಿಯಯಲ್ಲಿ ಅಕ್ಷಯ ತೃತೀಯ ಸಂಭ್ರಮವನ್ನು ದ್ವಿಗುಣಗೊಳಿಸಿರುವಲ್ಲಿ ಯಾವುದೇ ಅನುಮಾನ ಇಲ್ಲ. ಈ ಹಿನ್ನೆಲೆಯಲ್ಲಿ ಅಕ್ಷಯ ತೃತೀಯವನ್ನು ಸ್ವಾಗತಿಸುವ ಸಂಭ್ರಮದ ಸಿದ್ಧತೆ ನಡೆದಿದೆ.
ಭಾರತೀಯ ಪರಂಪರೆಯಲ್ಲಿ ಈ ಅಕ್ಷಯ ತೃತೀಯಕ್ಕೆ ಅನನ್ಯ, ಭಾವನಾತ್ಮಕ ಸಂಬಂಧವಿದೆ. ಆ ಸುದಿನದಂದು ನಿರ್ವಹಿಸುವ ಎಲ್ಲಾ ಕಾರ್ಯಗಳಿಗೂ ಸಹ ಅಕ್ಷಯವಾದ ಫಲ ದೊರೆಯುವುದು ಎಂಬ ಸನಾತನ ನಂಬಿಯೇ ಭಾನವಾತ್ಮಕ ಪ್ರಾಧಾನ್ಯಕ್ಕೆ ಕಾರಣ ಎನ್ನಬಹುದು.
ಅಕ್ಷಯ ತೃತೀಯ ಎಂದರೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುವುದೇ ಲೌಕಿಕವಾದ ಸಂಪತ್ತಿನ ಚಿಂತೆ. ಈಗಾಗಲೇ ಹೇಳಿದಂತೆ ಚಿನ್ನ, ಬೆಳ್ಳಿ, ನಿವೇಶನ.. ಹೀಗೆ ಸಂಪತ್ತನ್ನು ಅಂದಿನ ದಿನ ಅಧಿಕಗೊಳಿಸಲು ಎಲ್ಲರೂ ಸಹ ಯತ್ನಿಸುತ್ತಾರೆ. ಇದು ಪ್ರತಿ ಅಕ್ಷಯ ತೃತೀಯದಲ್ಲೂ ಸಹ ಕಂಡುಬರುವ ಸಾಮಾನ್ಯವಾದ ದೃಶ್ಯಾವಳಿಗಳು.
ಆದರೆ ಮತ್ತೊಂದು ದೃಷ್ಠಿಯಿಂದ ನೋಡಿದರೆ ಸಾಮಾಜಿಕ ಅಭ್ಯುದಯಕ್ಕಾಗಿ ಅಥವಾ, ಸಮಾಜಕ್ಕೆ ಒಳಿತಾಗುವ ರೀತಿ ಈ ಅಕ್ಷಯ ತೃತೀಯ ದಿನದಂದು ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ನಿರ್ವಹಿಸಿದ್ದಾರೆಯೇ? ಬಹುಶಃ ಈ ಪ್ರಶ್ನೆಗೆ ಉತ್ತರ ತೀರಾ ಕಡಿಮೆ ಎಂದೇ ಹೇಳಬಹುದು.
ಪ್ರತಿ ವರ್ಷ ಅಕ್ಷಯ ತೃತೀಯ ದಿನದಂದು ಚಿನ್ನ ಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ, ಹಾಗೆಯೇ ಚಿನ್ನದ ಬೆಲೆಯೂ ಕೂಡಾ.. ಇದು ಬರಿ ಸಂಪತ್ತಿಗೆ ಪರ್ಯಾಯವಾಗಿರುವ ಚಿನ್ನದ ಕಥೆಯಲ್ಲ. ಬೇರೆ ಯಾವುದೇ ವಸ್ತುಗಳನ್ನು ಖರೀದಿಗಳಲ್ಲಿ ಖಂಡಿತವಾಗಿಯೂ "ಅಕ್ಷಯ" ಫಲ ಪ್ರಾಪ್ತಿಯಾಗುತ್ತಲೇ ಬಂದಿದೆ. ಆದರೆ ಪ್ರಮುಖವಾಗಿ ಗಮನಿಸಬೇಕಾದ ವಿಷಯವೆಂದರೆ ಚಿನ್ನ, ಮತ್ತಿತರ ಸಂಪತ್ತನ್ನು ವೃದ್ಧಿಗೊಳಿಸುವ ವಸ್ತುಗಳನ್ನು ಖರೀದಿಸುವುದರ ಜೊತೆಗೆ ತನ್ನನ್ನು ತಾನು ಉತ್ತಮ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಅಕ್ಷಯ ತೃತಿಯಾದ ದಿನ ಏಕೆ ಪ್ರಯತ್ನಿಸಿಕೊಳ್ಳಬಾರದು?
ಸಮಾಜಕ್ಕೆ ಒಳಿತಾಗುವ ಕೆಲಸ ಎಂದರೆ ತಮ್ಮ ತಮ್ಮ ಕೆಲಸಗಳನ್ನು ಬಿಟ್ಟು ಹೋಗುವುದು ಎಂದಲ್ಲ. ಬದಲಾಗಿ ಅಕ್ಷಯ ತೃತೀಯ ದಿನದಂದು ಚಿನ್ನ, ನಿವೇಶನ ಕೊಳ್ಳಬಾರದು ಎಂದೂ ಅರ್ಥವಲ್ಲ. ಇವೆಲ್ಲದರ ಜೊತೆಗೆ ಒಂದಿಷ್ಟು ಸಮಾಜಕ್ಕೆ ನಮ್ಮಿಂದ ಉಪಯುಕ್ತವಾಗುವಂಥಹ ನಿರ್ಧಾರಗಳನ್ನು ತೆಗೆದುಕೊಂಡರೆ ಅದೇ ಮುಂದೆ ಸಮಾಜದ ಒಳಿತಿಗಾಗಿ ಅಕ್ಷಯ ಫಲ ಏಕೆ ನೀಡಬಾರದು?
ಅಕ್ಷಯ ತೃತಿಯದಂದು ಯಾವುದೇ ಸಂಪತ್ತು ಖರೀದಿಸಿದರೆ ಅದು ಅಕ್ಷಯವಾಗುವುದಾದರೆ ನಮ್ಮ ಸಮಾಜದಲ್ಲಿ ಇದು ಸರಿಯಿಲ್ಲ ಅದು ಸರಿಯಿಲ್ಲ ಎಂದು ಹೇಳುವವರು ಎಂದಾದರೂ ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅಂದು ಪ್ರಯತ್ನಿಸಿದ್ದಾರೆಯೇ...? ಹೋಗಲಿ, ಭ್ರಷ್ಟಾಚಾರ ನಮಗೆಲ್ಲರಿಗೂ ಒಂದು ದೊಡ್ಡ ಸವಾಲು, ಇದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಈ ಅಕ್ಷಯ ತೃತಿಯ ದಿನದಂದು ನಾನು ಮುಂದಿನ ದಿನಗಳಲ್ಲಿ ಭ್ರಷ್ಟಾಚಾರವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಭ್ರಷ್ಟಾಚಾರವನ್ನು ಕೊನೆಗಾಣಿಸುವ ಒಂದು ಪ್ರಯತ್ನ ಮಾಡಲಿ ನೋಡೋಣ....
ಇಷ್ಟೆಲ್ಲಾ ಇರಲಿ ಒಬ್ಬ ಸಾಮಾನ್ಯ ಪ್ರಜೆ, ಪ್ರಜಾ ಸೇವಕ(ರಾಜಕಾರಣಿ) ಯಾವುದೇ ಅನ್ಯಾಯವನ್ನು ಸಹಿಸುವುದಿಲ್ಲ ನ್ಯಾಯವಾಗಿ ಅಥವಾ ಒಳ್ಳೆಯ ಮಾರ್ಗದಲ್ಲಿ ನಡೆಯುತ್ತೇವೆ ಎಂದು ಈ ಅಕ್ಷಯಾ ತೃತೀಯಾದಿನದಂದು ನಿರ್ಧಾರ ಮಾಡಿ ಅಂತೆಯೇ ನಡೆದುಕೊಂಡರೆ ಸಮಾಜದಲ್ಲಿ ಸುವ್ಯವಸ್ಥೆ ಸ್ಥಾಪನೆಯಾಗುವುದಿಲ್ಲವೇ..?
ಆದರೆ ಇಂದಿನ ವ್ಯವಸ್ಥೆಯಲ್ಲಿ ಈ ರೀತಿಯ ಯೋಚನೆಗಳನ್ನು ಪಾಲಿಸುವುದಕ್ಕೆ ಬಹಳ ಕಷ್ಟದ ಸ್ಥಿತಿಗಳಿವೆ. ಒಬ್ಬರೋ ಇಬ್ಬರೋ ಈ ರೀತಿ ಅಕ್ಷಯ ತೃತೀಯ ದಿನದಂದು ನಿರ್ಧಾರ ಮಾಡಿದರೆ ಅದು ಪ್ರಯೋಜನವಾಗುವುದಿಲ್ಲ. ಇಡೀ ಸಮಾಜವೇ ಆ ಸುದಿನದಂದು ಒಳ್ಳೆಯ, ಸಮಾಜಕ್ಕೆ ಉತ್ತಮ ಕೆಲಸವನ್ನು ಮಾಡಲಿದ್ದೇವೆ ಎಂದು ಸಂಕಲ್ಪಿಸಿದಲ್ಲಿ ಮಾತ್ರ ಚಿನ್ನ, ಬೆಳ್ಳಿ, ವಜ್ರ ವೈಡೂರ್ಯ ಸೇರಿದಂತೆ ಅಭಿವೃದ್ಧಿ, ಮಾನವಿಯತೆಯೂ ಸಹ ಅಕ್ಷಯವಾಗಿ ಬೆಳೆಯುತ್ತದೆ.
ಸರಿ, ಹಾಗಿದ್ದರೆ ಈ ಅಕ್ಷಯ ತೃತೀಯವನ್ನು ನಾವು ಬರಿ ಲೌಕಿಕ ಸಂಪತ್ತಿನ ವೃದ್ಧಿಗೆ ಸೀಮಿತಗೊಳಿಸದೇ ಮಾನವಿಯತೆ, ಒಳ್ಳೆಯ ವ್ಯವಸ್ಥೆ, ನಾವು ಮಾಡುವ ಪ್ರತಿ ಕೆಲಸಗಳಲ್ಲಿಯೂ ನಮಗೆ ಹಾಗೂ ಇತರರಿಗೆ ಒಳ್ಳೆಯದನ್ನು ಕಾಣುತ್ತಾ ಒಳ್ಳೆಯದನ್ನು ಬಯಸುತ್ತಾ ಆಚರಿಸೋಣ ಅಲ್ಲವೆ?..
ನಿಮಗೆಲ್ಲರಿಗೂ ಅಕ್ಷಯ ತದಿಗೆಯ ಶುಭಾಶಯಗಳು. ಒಳ್ಳೆಯದೆಲ್ಲವೂ ಅಕ್ಷಯವಾಗಲಿ ಎಂದು ಆಶಿಸೋಣ...
Author : Bangalore waves