ಕುಂಭಮೇಳದಲ್ಲಿ ಶಾಹಿ ಸ್ನಾನ
ಸನಾತನ ಧರ್ಮ- ಸಂಸ್ಕೃತಿಗಳ ತವರೂರು ಭಾರತದಲ್ಲಿನ ಪ್ರಯಾಗ, ಹರಿದ್ವಾರ, ಉಜ್ಜಯಿನಿ, ನಾಸಿಕಗಳಂತಹ ನದಿ ಸಂಗಮ ಕ್ಷೇತ್ರದಲ್ಲಿ ಶತಶತಮಾನಗಳಿಂದ ಕುಂಭಮೇಳ ಉತ್ಸವ ಆಚರಣೆ ನಡೆಯುತ್ತಿದೆ. ಲಕ್ಷಾಂತರ ಸಾಧು-ಸಂತರು ಒಂದೇ ಸ್ಥಳದಲ್ಲಿ ಸೇರುವ ಐತಿಹಾಸಿಕ ಕ್ಷಣಗಳಿಗೂ ಈ ಮಹಾಪರ್ವ ಸಾಕ್ಷಿಯಾಗುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ನದಿಗಳು ಮನುಷ್ಯರಿಗೆ ಮಾಡಿದ ಉಪಕಾರಕ್ಕಾಗಿ ಕೃತಜ್ಞತೆ ಸಲ್ಲಿಸಲು ನಮ್ಮ ಪೂರ್ವಜರು ವಿಶಿಷ್ಠ ಆಚರಣೆಗಳ ಪರಂಪರೆಯನ್ನು ರೂಪಿಸಿ, ಅನಾದಿಕಾಲದಿಂದಲು ಆಚರಿಸುತ್ತಾ, ಮುಂದುವರೆಸುತ್ತಾ ಬಂದಿದ್ದಾರೆ. ಹೀಗೆ ನದಿತೀರದಲ್ಲಿ ಜನಸಾಗರವೇ ಸೇರಿ ನಡೆಸುವ ಉತ್ಸವವೇ ಕುಂಭಮೇಳ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸಿಂಹಸ್ಥ ಕುಂಭಮೇಳ ಪುಣ್ಯ ತೀರ್ಥ ಸ್ನಾನಕ್ಕೆ ಶುಕ್ರವಾರ ಬೆಳಗ್ಗೆ ಚಾಲನೆ ದೊರೆತಿದೆ. 12 ವರ್ಷಕ್ಕೊಮ್ಮೆ ಬರುವ ಕುಂಭಮೇಳದ ಮೊದಲ ಶಾಹಿ ತೀರ್ಥಸ್ನಾನ ಪವಿತ್ರ ಕ್ಷೀಪ್ರಾ ನದಿಯಲ್ಲಿ ನಡೆಯುತ್ತಿದೆ. ಕೋಟ್ಯಂತರ ಭಾರತೀಯರು ಮಾತ್ರವಲ್ಲದೆ ವಿದೇಶಿಯರೂ ಶ್ರದ್ಧಾ, ಭಕ್ತಿಯಿಂದ ಪಾಲ್ಗೊಳ್ಳುವ ಕುಂಭಮೇಳ ಜಗತ್ತಿನ ಪಾಲಿಗೆ ಅಚ್ಚರಿಯ ವಿಷಯ.
ಉಜ್ಜಯನಿಗೂ ಶಿವನಿಗೂ ಅನಾದಿ ಕಾಲದ ಸಂಬಂಧ. ಇಲ್ಲಿ ಶಿವನು ಮಹಾಕಾಲೇಶ್ವರನ ರೂಪದಲ್ಲಿ ವಿರಾಜಮಾನನಾಗಿದ್ದಾನೆ. ಇಲ್ಲಿನ ಮಹಾಕಾಲೇಶ್ವರನ ಮಂದಿರ ಶ್ರದ್ಧೆಯ ಪ್ರತೀಕ, ಶಕ್ತಿಯ ಸ್ವರೂಪ. ಭಾರತದ ದ್ವಾದಶ ಜ್ಯೋತೀರ್ಲಿಂಗಗಳಲ್ಲಿ ಉಜ್ಜಯನಿಯ ಮಹಾಕಾಲೇಶ್ವರ ದೇವಾಲಯವೂ ಒಂದು. ಉಜ್ಜಯಿನಿ ಮಹಾಕಾಲನ ನಗರ, ಉಜ್ಜಯಿನಿ ಸಿದ್ಧಿಯ ನಗರ, ವಿಕ್ರಮಾದಿತ್ಯನ ನಗರ, ಕಾಳಿದಾಸನ ನಗರ. ಉಜ್ಜಯಿನಿ ಸಿಂಹಸ್ಥ ನಗರ. ’ಸಿಂಹಸ್ಥ' ಅರ್ಥಾತ್ ’ಕುಂಭ ಮಹಾ ಪರ್ವ’.
ಉಜ್ಜೈಯಿನಿಯ ಮಹಾಕಾಲ
ಪೌರಾಣಿಕ ಕಥೆಯ ಪ್ರಕಾರ ದೂರ್ವಾಸ ಮುನಿಯ ಶಾಪದಿಂದ ಇಂದ್ರ ಸೇರಿದಂತೆ ಇತರೆ ದೇವತೆಗಳು ದುರ್ಬಲರಾಗಿ ಹೋಗಿದ್ದರು. ಇದೇ ಸಂದರ್ಭಕ್ಕೆ ಹೊಂಚುಹಾಕುತ್ತಿದ್ದ ರಾಕ್ಷಸರು ದೇವತೆಗಳ ವಿರುದ್ಧ ಯುದ್ಧ ಮಾಡಿ ಜಯಶಾಲಿಯಾದರು. ಆಗ ಎಲ್ಲ ದೇವತೆಗಳು ಒಟ್ಟಾಗಿ ಭಗವಾನ್ ವಿಷ್ಣುವಿನ ಬಳಿ ತೆರಳುತ್ತಾರೆ. ದೈತ್ಯರ ಜತೆ ಸೇರಿ ಕ್ಷೀರಸಾಗರವನ್ನು ಮಂಥನ ಮಾಡಿ ಅಮೃತ ಹೊರತೆಗೆಯುವಂತೆ ವಿಷ್ಣು ದೇವತೆಗಳಿಗೆ ಸೂಚನೆ ನೀಡುತ್ತಾನೆ.
ದೇವತೆಗಳು ಅಸುರರೊಂದಿಗೆ ಸಂಧಾನ ಮಾಡಿಕೊಂಡು ಕ್ಷೀರಸಾಗರದ ಮಥನಕ್ಕೆ ಮುಂದಾಗುತ್ತಾರೆ. ಅಮೃತವಿದ್ದ ಕುಂಭ ಹೊರತೆಗೆಯುತ್ತಿದ್ದಂತೆ ದೇವತೆಗಳ ಸಲಹೆಯಂತೆ ಇಂದ್ರನ ಪುತ್ರ ಜಯಂತನು ಅಮೃತಕುಂಭ ಹೊತ್ತು ಆಕಾಶಕ್ಕೆ ಹಾರುತ್ತಾನೆ. ಈ ವೇಳೆ ದಾನವರ ಗುರು ಶುಕ್ರಾಚಾರ್ಯರ ಆದೇಶದಂತೆ ಅಸುರರು ಅಮೃತಕುಂಭ ಪಡೆಯಲು ಜಯಂತನನ್ನು ಬೆನ್ನಟ್ಟಿ ಆತನನ್ನು ಹಿಡಿಯುತ್ತಾರೆ. ಬಳಿಕ ಅಮೃತಕುಂಭವನ್ನು ತಮ್ಮದಾಗಿಸಿಕೊಳ್ಳಲು ದೇವ-ದಾನವರ ಮಧ್ಯೆ ನಿರಂತರವಾಗಿ ಯುದ್ಧ ನಡೆಯುತ್ತದೆ. ಈ ಯುದ್ಧದ ಸಮಯದಲ್ಲಿ ಇಂದ್ರನ ಪುತ್ರ ಜಯಂತ ಅಮೃತಕುಂಭ ತೆಗೆದುಕೊಂಡು ಓಡುತ್ತಿರುವಾಗ ಪೃಥ್ವಿಯ ನಾಲ್ಕು ಕಡೆ - ಪ್ರಯಾಗ, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ ದಲ್ಲಿ ಕುಂಭದಿಂದ ಅಮೃತದ ಹನಿಗಳು ಚೆಲ್ಲಿ, ಪವಿತ್ರ ನದಿಗಳು ಸೃಷ್ಟಿಯಾದವು. ಕಲಹವನ್ನು ಶಾಂತಗೊಳಿಸಲು ಮೋಹಿನಿಯ ರೂಪವನ್ನು ಧಾರಣೆ ಮಾಡಿದ ಭಗವಂತನು ಎಲ್ಲರಿಗೂ ಯಥಾಧಿಕಾರ ಅಮೃತವನ್ನು ನೀಡುತ್ತಾನೆ. ಅಲ್ಲಿಗೆ ದೇವ-ದಾನವರ ನಡುವಿನ ಯುದ್ಧ ಕೊನೆಗೊಳ್ಳುತ್ತದೆ.
ಗುರು ಕುಂಭರಾಶಿಯನ್ನು ಪ್ರವೇಶಿಸಿದಾಗ ಉಜ್ಜಯಿನಿಯಲ್ಲಿ ಕುಂಭಮೇಳ ನಡೆಯುವುದು ಪ್ರಥೀತಿ ಅಂತೆಯೇ ಈಗ ಕುಂಭಮೇಳ ಆರಂಭವಾಗಿದೆ. ಈ ಹಿಂದೆ 1980, 1992, 2004ರಲ್ಲಿ ಕುಂಭಮೇಳ ನಡೆದಿತ್ತು. ಕುಂಭದ ಆಯೋಜನೆಯಲ್ಲಿ ನವಗ್ರಹಗಳ ಪೈಕಿ ಸೂರ್ಯ, ಚಂದ್ರ, ಗುರು ಮತ್ತು ಶನಿಯ ಪಾತ್ರ ಮಹತ್ವದ್ದು ಎಂದು ನಂಬಲಾಗಿದೆ. ಕುಂಭಮೇಳದ ಅವಧಿಯಲ್ಲಿನ ಶಾಹಿಸ್ನಾನದಿಂದ ಮನುಷ್ಯ ಹುಟ್ಟು-ಸಾವಿನ ಚಕ್ರದಿಂದ ಮುಕ್ತನಾಗಿ ಮೋಕ್ಷ ಪಡೆಯುತ್ತಾನೆ ಎಂಬ ಅಚಲ ನಂಬಿಕೆ ಇದೆ. ಹಾಗಾಗಿ ಸಾಧು-ಸಂತರು ಸೇರಿದಂತೆ ಜನಸಾಮಾನ್ಯರೂ ಭಾರೀ ಸಂಖ್ಯೆಯಲ್ಲಿ ಆಗಮಿಸಿ ಪವಿತ್ರ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ. ಒಟ್ಟಿನಲ್ಲಿ ಕುಂಭಮೇಳ ಎಂದರೆ ಕೇವಲ ಭಕ್ತಿಯ ಸಂಗಮವಲ್ಲ, ಧರ್ಮದ ಆಚರಣೆಯಷ್ಟೇ ಅಲ್ಲ, ಅದು ವಿವಿಧ ಸಂಸ್ಕೃತಿಗಳ ಸಮಾಗಮ.