Untitled Document
Sign Up | Login    
ಶಂಕರಾಚಾರ್ಯರ ಜಯಂತಿ: ವಿಶ್ವಮಟ್ಟದಲ್ಲಿ ತತ್ವಜ್ನಾನಿಗಳ ದಿನಾಚರಣೆ ನಡೆಯಲಿ

ಶ್ರೀ ಆದಿ ಶಂಕರಾಚಾರ್ಯರು

ಅವರು ಹರಿದು ಹಂಚಿಹೋಗುತ್ತಿದ್ದ ಧರ್ಮವನ್ನು ಪುನರ್ ಪ್ರತಿಷ್ಠಾಪಿಸಿದರು, ವಾಹನಗಳ ಸೌಲಭ್ಯದ ಕಲ್ಪನೆಯೂ ಇಲ್ಲದ ಸಂದರ್ಭದಲ್ಲಿ ದೇಶದ ಉದ್ದಗಲ ಕಾಲ್ನಡಿಯಲ್ಲಿ ಸಂಚರಿಸಿ ವಿಘಟಿಸಿ ಹೋಗಿದ್ದ ಭೂಪಟಕ್ಕೆ ದೇಶವೆಂಬ ಕಾನ್ಸೆಪ್ಟ್ ನೀಡಿದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಸನಾತನ ಧರ್ಮವನ್ನು ರಕ್ಷಿಸಿ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಜಗದ್ಗುರು ಶಂಕರಾಚಾರ್ಯರನ್ನು ಜನರು ತತ್ವಜ್ನಾನಿ ಎಂದು ಗೌರವಿಸಿ, ಶಂಕರನ ಅವತಾರವೆಂದೆ ಪೂಜಿಸಿದರು.

ವೈದಿಕ ಮತ ಪ್ರತಿಪಾದಕರಾದ ಶಂಕರಾಚಾರ್ಯರು, ಸನಾತನ ಧರ್ಮದಲ್ಲಿನ ಅನೇಕ ತಪ್ಪು ಆಚರಣೆಗಳನ್ನು ಸರಿಪಡಿಸಿ, ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗು ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಆದಿಶಂಕರರು ಭಗವದ್ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು. ಶಂಕರಾಚಾರ್ಯರು ಭೇಟಿ ನೀಡಿದ ಸ್ಥಳಗಳೆಲ್ಲ ಇದೀಗ ಆಧ್ಯಾತ್ಮಿಕ ಕೇಂದ್ರಗಳಾಗಿ ಜಗತ್ತಿಗೇ ಮಾರ್ಗದರ್ಶನ ಮಾಡುವುದರ ಜತೆ ಜತೆಯಲ್ಲಿ ಅಪಾರವಾದ ಜ್ನಾನ ಸಂಪತ್ತನ್ನು, ವಿದ್ಯಾ ಸಂಪತ್ತನ್ನು, ತತ್ತ್ವ ಜ್ಞಾನವನ್ನು ಧಾರೆ ಎರೆಯುವ ಕೇಂದ್ರಗಳಾಗಿ ರೂಪುಗೊಂಡಿವೆ. ಶಂಕರರ ಹೆಸರು ತತ್ವಜ್ನಾನಕ್ಕೆ ಅನ್ವರ್ಥವಾಗಿ ಉಳಿದುಕೊಂಡಿದೆ.
ಜಗತ್ತಿನ ಅಂಧಕಾರವನ್ನು ತೊಡೆದು ಜ್ಞಾನದ ಬೆಳಕನ್ನು ಚೆಲ್ಲಿದ ದೇವತಾ ಸ್ವರೂಪಿಯಾದ ಶಂಕಾರಾಚಾರ್ಯರು ಇಂದಿಗೂ ಆರಾಧಿಸಲ್ಪಡುತ್ತಿರುವುದು ಇದೇ ಕಾರಣಕ್ಕಾಗಿ. ಮಹಾನ್ ದೈವಭಕ್ತರಾಗಿದ್ದ ಅವರು ಎಲ್ಲ ದೇವರುಗಳೂ ಒಂದೇ ಮಾನವಕುಲವೆಲ್ಲ ಒಂದೇ ಎನ್ನುವ ಮೂಲಕ ಸಾಮಾಜಿಕ ನ್ಯಾಯದ ಬಗ್ಗೆ ಜನತೆಗೆ ಸಾರಿ ಹೇಳಿದ್ದರು. ಯಾವ ಪಂಥವನ್ನೂ ಹುಟ್ಟುಹಾಕದೆ ಎಲ್ಲ ಜಾತಿ ವರ್ಗಗಳನ್ನು ಸಮನಾಗಿ ಕಾಣಿರಿ. ಭಗವಂತನ ನಾಮಸ್ಮರಣೆಯಲ್ಲಿ ಜಾತಿ, ಭೇದಗಳು ಕೂಡದು. ಎಲ್ಲರಿಗೂ ಭಗವಂತನ ಪ್ರಾರ್ಥಿಸುವ ಪ್ರೀತಿಸುವ ಹಕ್ಕಿದೆ ಎಂಬ ಮಂತ್ರವನ್ನು ಜಗತ್ತಿಗೆ ಸಾರಿದ್ದಾರೆ.

ಏಳನೇ ಶತಮಾನದಲ್ಲಿ ಜಾತಿ ಹಾಗೂ ದೇವರುಗಳ ಹೆಸರಿನಲ್ಲಿ ನಡೆಯುತ್ತಿದ್ದ ಕಲಹ, ಘರ್ಷಣೆ ಹಾಗೂ ನರಬಲಿಗಳನ್ನು ತಡೆಯುವ ನಿಟ್ಟಿನಲ್ಲಿ ಜನರಿಗೆ ತಿಳಿ ಹೇಳಿದ ಶಂಕರರು ಈ ಮೂಲಕ ಸಮಾಜೋದ್ಧಾರಕರಾಗಿಯೂ ಸಮಾಜ ಸುಧಾರಕರಾಗಿಯೂ ಗುರುತಿಸಿಕೊಳ್ಳುತ್ತಾರೆ. ನರಬಲಿ ನೀಡುತ್ತಿದ್ದ ಕಾಪಾಲಿಗಳನ್ನೂ ತಮ್ಮ ಜ್ನಾನದಿಂದ ಬದಲಿಸಿದ ಶಂಕರಾಚಾರ್ಯರು, ಅವರಿಗೆ ಅರಿವು ಮೂಡಿಸಿದ್ದಲ್ಲದೆ ಕಾಪಾಲಿಗಳಿಗೂ ಗುರುಗಳಾಗಿ ಜಗವನ್ನು ಬೆಳಗಿದರು. ಇಡೀ ವಿಶ್ವಕ್ಕೇ ಬೆಳಕನ್ನು ನೀಡಿ ಜಗದ್ಗುರುಗಳೆನಿಸಿಕೊಂಡ ಶಂಕರಾಚಾರ್ಯರು ಇಂದು ಏಕೆ ಯಾವುದೋ ಒಂದು ವರ್ಗಕ್ಕೆ, ಅಥವಾ ಒಂದು ದೇಶಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಅವರು ಸೀಮಿತಗೊಂಡಿಲ್ಲ, ಸೀಮಿತಗೊಳಿಸಲಾಗಿದೆ. ಅವಕಾಶ ಸಿಕ್ಕಾಗಲೆಲ್ಲಾ ಶಂಕರರನ್ನು ಅವಹೇಳನ ಮಾಡುವ ಮೂಲಕ ಅವರನ್ನು ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ. ಇಂದಿಗೂ ಲೆಕ್ಕವಿಲ್ಲದಷ್ಟು ವಿದೇಶಿಗರು ತತ್ವಜ್ನಾನದ ಸಾರವನ್ನು ತಿಳಿಯಲು ಇದೇ ಶಂಕರಾಚಾರ್ಯರು ಸ್ಥಾಪಿಸಿರುವ ನಾಲ್ಕು ಆಮ್ನಾಯ ಪೀಠಗಳಿಗೆ ಭೇಟಿ ನೀಡುತ್ತಾರೆ. ತತ್ವಜ್ನಾನದ ಬಗ್ಗೆ ಶಂಕರರ ನಾಲ್ಕು ಆಮ್ನಾಯಪೀಠಗಳ ಪೀಠಾಧಿಪತಿಗಳನ್ನು ಸಂದರ್ಶಿಸಿ ಜ್ನಾನವೃದ್ಧಿಗೊಳಿಸಿಕೊಳ್ಳುತ್ತಿದ್ದಾರೆ. ಶಂಕರರಿಗೆ ಶರಣಾಗುತ್ತಿದ್ದಾರೆ. ಆದರೆ ಭಾರತದಲ್ಲೇ ಇರುವ ಮೂಢರಿಗೆ ಇನ್ನೂ ಜ್ನಾನೋದಯವಾಗಿಲ್ಲ. ಶಂಕರಾಚಾರ್ಯರ ಹೆಸರು ಕೇಳಿದರೇನೆ ಹೌಹಾರುತ್ತಾರೆ. ವಿನಾಕಾರಣ ಅವರ ವಿರುದ್ಧ ಮಾತನಾಡುತ್ತಾರೆ. ಬೌದ್ಧ ಧರ್ಮ ನಾಶವಾಗುವುದರಿಂದ ಹಿಡಿದು ಇಂದಿನ ಸಮಸ್ಯೆಗಳವರೆಗೆ ಪ್ರತಿಯೊಂದಕ್ಕೂ ಅವರೇ ಕಾರಣ ಎಂದು ದೂರಲಾಗುತ್ತದೆ. Don't answer the foolish arguments of fools, or you will become as foolish as they are ಎಂಬ ಮಾತಿನಂತೆ ಜಗತ್ತೇ ಪೂಜಿಸುವ ಶಂಕರಾಚಾರ್ಯರನ್ನು ನಿಂದಿಸುವವರ ಬಗ್ಗೆ ಪ್ರತಿಕ್ರಿಯೆ ನೀಡದೇ, ನಿರ್ಲಕ್ಷಿಸಿ, ಆಚಾರ್ಯರು ತೋರಿದ ಮಾರ್ಗದಲ್ಲೇ ಮುನ್ನಡೆದರೆ ಅದೇ ನಾವು ಶಂಕರಾಚಾರ್ಯರಿಗೆ ತೋರುವ ಗುರುಭಕ್ತಿಯಾಗಿದೆ.

ಇಷ್ಟಕ್ಕೂ ನಿಂದಿಸಿದರೆ ಅವರ ವಿದ್ವತ್ಪೂರ್ಣ ವ್ಯಕ್ತಿತ್ವಕ್ಕೆ ಕಿಂಚಿತ್ತೂ ಕುಂದುಂಟಾಗುವುದಕ್ಕೆ ಶಂಕರಾಚಾರ್ಯರೇನು ಸಾಮಾನ್ಯರೇ? ಅವರ ಕೀರ್ತಿ, ದೇಶೋವಿಶಾಲವಾದದ್ದು, ದೇಶೋವಿಶಾಲವೇ ವಿಶ್ವಕ್ಕೇ ತಿಳಿದಿರುವಂಥಹದ್ದು, ಆದರೂ ಏಕೆ ಆಚಾರ್ಯರು ಭಾರತಕ್ಕೆ ಸೀಮಿತಗೊಂಡಿದ್ದಾರೆ. ಈ ಹಿಂದಿನ ಸರ್ಕಾರವೇನೋ ಶೃಂಗೇರಿ ಗುರುಗಳ ಆಜ್ನೆಯಂತೆ ಕರ್ನಾಟಕದಲ್ಲಿ ಶಂಕರಾಚಾರ್ಯರ ಜನ್ಮದಿನವನ್ನು ತತ್ವಜ್ನಾನಿಗಳ ದಿನಾಚರಣೆ ಎಂದು ಆಚರಿಸಲು ಆದೇಶ ಹೊರಡಿಸಿ, ಇಂದಿಗೂ ಮುಂದುವರೆದುಕೊಂಡು ಬಂದಿದೆ. ಇದನ್ನು ವಿಶ್ವದ ಮಟ್ಟಲ್ಲೇಕೆ ಆಚರಿಸಬಾರದು? ಆ ಮೂಲಕ ಜಗತ್ತಿಗೇ ತತ್ವಜ್ನಾನದ ಬೆಳಕನ್ನು ನೀಡಿದ ಪ್ರಖರ ವ್ಯಕ್ತಿತ್ವವನ್ನು ಮತ್ತಷ್ಟು ಏಕೆ ಮೆರೆಸಬಾರದು? ಹೌದು, ಕಳೆದ ಬಾರಿಗಿಂತಲೂ ಸನಾತನ ಧರ್ಮಕ್ಕೆ ಸಂಬಂಧಿಸಿದ ವಿಶೇಷ ದಿನಗಳ ಆಚರಣೆಗಳಲ್ಲಿ ಹುರುಪು ಮೂಡಿದೆ.

ಅಂತಹ ನಾಯಕತ್ವ ದೇಶಕ್ಕೆ ದೊರೆತಿದೆ. ಈ ಬಾರಿಯಿಂದ ಪ್ರತಿ ಆಚರಣೆಯಲ್ಲೂ ಹೊಸ ಆಶಾಕಿರಣಗಳು ಮೂಡುತ್ತಿವೆ. ಭಾರತವೂ ಜಗದ್ಗುರುವಾಗಲು ತುದಿಗಾಲಲ್ಲಿ ನಿಂತಿದೆ. ಇತಿಹಾಸ ಮರುಕಳಿಸುವ ಸೂಚನೆ ದೊರೆತಿದೆ. ಭಾರತದ ಕೊಡುಗೆಯಾದ ಯೋಗವನ್ನು ವಿಶ್ವಮಟ್ಟದಲ್ಲಿ ಕೊಂಡೊಯ್ದು, ವಿಶ್ವ ಸಂಸ್ಥೆಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಘೋಷಿಸಿದ್ದಾಯಿತು. ಶಾಲೆಗಳಲ್ಲಿ ವೈದಿಕ ಗಣಿತ ಕಲಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜರ್ಮನ್ ಭಾಷೆಗಿಂತಲೂ ಈ ವರ್ಷದಿಂದ ಸಂಸ್ಕೃತಕ್ಕೆ ಅದೇನೋ ಹೊಸ ಹೊಳಪು ಬಂದಂತೆ ಕಾಣುತ್ತಿದೆ. ದೇಶದ ನಾಯಕತ್ವ ಹೊತ್ತವರೂ ಹೋದಲ್ಲೆಲ್ಲಾ, ಭಾರತದ ಸನಾತನ ಸಂಶೋಧನೆಗಳು ಅತಿ ಪುರಾತನವಾದದ್ದು ಎಂದು ಮೌಲ್ಯಗಳನ್ನು ಕೊಂಡಾಡುತ್ತಿದ್ದಾರೆ. ರಾಜಕಾರಣಿಗಳಿಗೆ, ಎಡಪಂಥೀಯರಿಗೆ ವರ್ಜ್ಯವಾಗಿದ್ದ ಸಂತರನ್ನು ನೆನೆಸಿಕೊಳ್ಳುತ್ತಿದ್ದಾರೆ. ಸಂಸತ್ ನಲ್ಲೇ ನಿಂತು ದೇಶ ಕಟ್ಟಿರುವವರು ರಾಜಕಾರಣಿಗಳಲ್ಲಿ ಭಾರತದ ಋಷಿ ಮುನಿಗಳು, ಸಾಧು-ಸಂತರು ಎಂದು ನಿರ್ಬಿಢೆಯಿಂದ ಹೇಳುತ್ತಿದ್ದಾರೆ. ಅಲ್ಲದೇ ಏಕಂ ಸತ್ ವಿಪ್ರಾಃ ಬಹುದಾವದಂತಿಃ ಎಂಬಂತಹ ಸಂಸ್ಕೃತದ ಉದ್ಘಾರಗಳನ್ನು ಉದಾಹರಿಸುತ್ತಿದ್ದಾರೆ. ಕಾನ್ವೊಕೇಷನ್ ಗಳಿಗೆ ಹೋದರೆ, ಈ ಪದ್ಧತಿ ನಮ್ಮಲ್ಲಿ, ಅನ್ಯರಾಷ್ಟ್ರಗಳ ನಾಗರಿಕತೆ ಕಣ್ಣುಬಿಡುವುದಕ್ಕಿಂತಲೂ ಮೊದಲೇ ಇತ್ತು, ಬೇಕಾದರೆ ತೈತ್ತರೀಯ ಉಪನಿಷದ್ ಓದಿ ಎಂದು ವಿದ್ಯಾರ್ಥಿಗಳಿಗೆ ದೇಶಪ್ರೇಮವನ್ನು ತುಂಬುತ್ತಿದ್ದಾರೆ. ಎಷ್ಟೆಲ್ಲಾ ಸಕಾರಾತ್ಮಕ ಬೆಳವಣಿಗೆಗಳು! ಇದರಲ್ಲಿ ಶಂಕರಾಚಾರ್ಯರ ಜಯಂತಿಯನ್ನು ವಿಶ್ವಮಟ್ಟದಲ್ಲಿ ತತ್ವಜ್ನಾನಿಗಳ ದಿನವನ್ನಾಗಿ ಆಚರಿಸಲು ಘೋಷಣೆ ಮಾಡುವುದರತ್ತ ಕೇಂದ್ರ ಸರ್ಕಾರ ಗಮನ ಹರಿಸಲಿ, ಯೋಗವಾಯಿತು, ಶಂಕರಾಚಾರ್ಯರ ಜಯಂತಿಯನ್ನೂ ತತ್ವಜ್ನಾನಿಗಳ ದಿನವನ್ನಾಗಿ ಯು.ಎನ್ ಘೋಷಣೆ ಮಾಡಲಿ. ಹೇಗಿದ್ದರೂ ಭಾರತ ಜಗದ್ಗುರುವಾಗಬೇಕೆಂದು ಹೊರಟಿದೆ. ಜಗದ್ಗುರಿವಿನ ಜನ್ಮದಿನಾಚರಣೆಯ ಮೂಲಕವೇ ಇದು ಸಾಕಾರಗೊಳ್ಳಲಿ!

 

Author : ಶ್ರೀನಿವಾಸ್ ರಾವ್

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited