Untitled Document
Sign Up | Login    
ಶ್ರೀ ಭಾರತೀ ತೀರ್ಥ ಗುರು ಕರಕಮಲ ಸಂಜಾತ....

ಶೃಂಗೇರಿ ಜಗದ್ಗುರುಗಳ ಉತ್ತರಾಧಿಕಾರಿ ವೆಂಕಟೇಶ್ವರ ಪ್ರಸಾದ ಶರ್ಮ

ಶಂಕರಾಚಾರ್ಯರು ಸ್ಥಾಪಿಸಿದ ದಕ್ಷಿಣಾಮ್ನಾಯ ಪೀಠ ತನ್ನ ಅನೂಚಾನ ಗುರುಪರಂಪರೆಯ ಆಚರಣೆಗಳನ್ನು ಮುಂದಿನ ತಲೆಮಾರಿಗೆ ವಹಿಸುವ ಪ್ರಕ್ರಿಯೆ ಕಾಲ ಸನ್ನಿಹಿತವಾಗಿದೆ. ಆ ಗುರುಪರಂಪರೆಗೆ ನೂತನ ಗುರುಗಳ ಸೇರ್ಪಡೆಯಾಗಲಿದೆ. ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಈಗಾಗಲೇ ಅಧಿಕೃತವಾಗಿ ಘೋಷಿಸಿ ಆಗಿದೆ. ಇನ್ನೇನಿದ್ದರೂ ತುರಿಯಾಶ್ರಮ ಸ್ವೀಕಾರವೊಂದೇ ಬಾಕಿ.

ತಿರುಪತಿ-ತಿರುಮಲ ದೇವಸ್ಥಾನ(ಟಿಟಿಡಿ) ವೇದಪಾಠಶಾಲೆಯ ಪ್ರಾಂಶುಪಾಲ ಹಾಗೂ ಧರ್ಮಪ್ರಚಾರ ಪರಿಷತ್ ನ ಯೋಜನಾ ಅಧಿಕಾರಿಯಾಗಿರುವ ಕುಪ್ಪಾ ಶಿವಸುಬ್ರಹ್ಮಣ್ಯ ಅವಧಾನಿ-ಸೀತಾ ನಾಗಲಕ್ಷ್ಮಿ ದಂಪತಿಗಳ ದ್ವಿತೀಯ ಪುತ್ರರಾದ ಕುಪ್ಪಾ ವೆಂಕಟೇಶ್ವರ ಪ್ರಸಾದ್ ಶರ್ಮಾ(21) ಜ.22, 23ರಂದು ಶೃಂಗೇರಿಯಲ್ಲಿ ಯೋಗಪಟ್ಟ ಪಡೆಯಲಿದ್ದು ಶೃಂಗೇರಿ ಗುರುಗಳ ಉತ್ತರಾಧಿಕಾರಿಯಾಗಲಿದ್ದಾರೆ. ಕುಪ್ಪಾ ಕೌಂಡಿನ್ಯ ಶರ್ಮರು ವೆಂಕಟೇಶ್ವರ ಪ್ರಸಾದ ಶರ್ಮರ ಅಣ್ಣ, ಕೃಷ್ಣಪ್ರಿಯ ಅಕ್ಕ.

ವೆಂಕಟೇಶ್ವರ ಪ್ರಸಾದ ಶರ್ಮರಿಗೆ ಶೃಂಗೇರಿ ಉತ್ತರಾಧಿಕಾರಿಗಳಾಗಲು ಅಗತ್ಯವಿರುವ ವೇದಾಭ್ಯಾಸ, ಕುಟುಂಬದ ವಾತಾವರಣದಲ್ಲೇ ಧಾರಾಳವಾಗಿ ದೊರೆತಿತ್ತು. ಶೃಂಗೇರಿ ಪೀಠಕ್ಕೆ ನಡೆದುಕೊಳ್ಳುವ ಕುಟುಂಬ. ತಿಳುವಳಿಕೆ ಬಂದಾಗಿನಿಂದಲೂ ಸನ್ಯಾಸದಲ್ಲಿ ಅತೀವ ಆಸಕ್ತಿ, ಅಜ್ಜ ರಾಮಗೋಪಾಲ ಸೋಮಯಾಜಿಗಳ ಅಣ್ಣ ಕುಪ್ಪಾ ವೆಂಕಟಾಚಲಪತಿ ಸೋಮಯಾಜಿ ಅವರು ಶೃಂಗೇರಿ ಜಗದ್ಗುರುಗಳಾಗಿದ್ದ ಅಭಿನವ ವಿದ್ಯಾತೀರ್ಥರ ಕಾಲದಲ್ಲಿ ಸನ್ಯಾಸ ಸ್ವೀಕರಿಸಿ ಬ್ರಹ್ಮಾನಂದ ತೀರ್ಥರೆಂಬ ಯೋಗಪಟ್ಟ ಪಡೆದು ವಿಜಯವಾಡದಲ್ಲಿದ್ದರು ಎಂಬುದು ವಿಶೇಷ.

1993ರಲ್ಲಿ ತಿರುಪತಿಯಲ್ಲಿ ಜನಿಸಿದ ಕುಪ್ಪಾ ವೆಂಕಟೇಶ್ವರ ಶರ್ಮಾ ಅವರಿಗೆ 5ನೇ ವಯಸ್ಸಿನಲ್ಲೇ ಬ್ರಹ್ಮೋಪದೇಶ(ಉಪನಯನ)ವಾಗಿತ್ತು. ಸಂಸ್ಕೃತ ಪಂಡಿತರಾಗಿದ್ದ ಅಜ್ಜ ರಾಮಗೋಪಾಲ ವಾಜಪೇಯಯಾಜಿಗಳೇ ವೆಂಕಟೇಶ್ವರ ಶರ್ಮರಿಗೆ ವೇದಾಧ್ಯಯನದಲ್ಲಿ ಪ್ರಥಮ ಗುರುಗಳು. ಸಂಧ್ಯಾವಂದನೆ, ಪ್ರಾಥಮಿಕ ಪಾಠಗಳನ್ನು ಕಲಿತಿದ್ದು ಅಜ್ಜನಿಂದ ತಂದೆ ಶಿವಸುಬ್ರಹ್ಮಣ್ಯ ಅವಧಾನಿಗಳ ಬಳಿ ವೇದಾಧ್ಯಯನವನ್ನು ಸಂಪೂರ್ಣವಾಗಿ ಮುಂದುವರೆಸಿದರು. ಶಿವಸುಬ್ರಹ್ಮಣ್ಯ ಅವಧಾನಿಗಳು ತಿರುಪತಿಯಲ್ಲೇ ನೆಲೆಸಿದ್ದು ಶಿಷ್ಯ ಸಮೂಹವನ್ನು ಹೊಂದಿದ್ದಾರೆ.

ವಿದ್ವತ್ ಕುಟುಂಬದ ಹಿನ್ನೆಲೆಯಿಂದ ಬಂದಿರುವ ವೆಂಕಟೇಶ್ವರ ಪ್ರಸಾದ್ ಶರ್ಮಾ ಅವರದ್ದು, ಶೃಂಗೇರಿ ಪೀಠಕ್ಕೆ ಹೇಳಿ ಮಾಡಿಸಿದಂತಹ ವ್ಯಕ್ತಿತ್ವ ಎನ್ನಬಹುದು. ವೇದವಿದ್ಯೆಯಲ್ಲಿ ಪ್ರಕಾಂಡ ಪಾಂಡಿತ್ಯ. ಮಿತ ಭಾಷಿ, ಸದಾ ಅಧ್ಯಯನ ನಿರತ, ಲೌಕಿಕ ವ್ಯವಹಾರಗಳಲ್ಲಿ ಹೆಚ್ಚು ಗಮನ ಕೊಡದೇ ಇರುವ ಇಂತಹ ಅಂಶಗಳೇ ಅವರನ್ನು ಶೃಂಗೇರಿ ಪೀಠಾಧಿಪತಿಯ ಉತ್ತರಾಧಿಕಾರಿ ಸ್ಥಾನದವರೆಗೂ ಕರೆತಂದಿದೆ. ಶಾಸ್ತ್ರಗಳಲ್ಲಿ ವೇದಾಂತವೇ ವೆಂಕಟೇಶ್ವರ ಪ್ರಸಾದ ಶರ್ಮ ಅವರ ನೆಚ್ಚಿನ ವಿಷಯ. ವೆಂಕಟೇಶ್ವರ ಶರ್ಮರಿಗೆ ಭಾಗವತ ಸಪ್ತಾಹದಲ್ಲಿಯೂ ಆಸಕ್ತಿ ಇತ್ತು. ಆಂಧ್ರದಲ್ಲಿ ಕೃಷ್ಣಾ ನದಿ ಸಮುದ್ರಕ್ಕೆ ಸೇರಿವ ಸಂಗಮವಿರುವ ಹಂಸಲದೇವಿ ಎಂಬ ಪ್ರದೇಶದಲ್ಲಿ ರಾಮಗೋಪಾಲ ಸೋಮಯಾಜಿಗಳು ನಡೆಸುತ್ತಿದ್ದ ಭಾಗವತ ಸಪ್ತಾಹ ವೆಂಕಟೇಶ್ವರ ಶರ್ಮರು ಆಸಕ್ತಿಯಿಂದ ಭಾಗವಹಿಸುತ್ತಿದ್ದರು.

ಶೃಂಗೇರಿ ಪೀಠದ ನಮ್ಮ ಮುಂದಿನ ಪೀಠಾಧಿಪತಿಗಳು ಶಾಸ್ತ್ರಾಭ್ಯಾಸ ಮಾಡಲು ಇಲ್ಲಿಗೆ ಆಗಮಿಸಿದ್ದು 2009ರಲ್ಲಿ. 2006 ರಿಂದ 2009 ಸಮಯದಲ್ಲಿ ಶಿವಸುಬ್ರಹ್ಮಣ್ಯ ಅವಧಾನಿಗಳು ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ಶೃಂಗೇರಿ ಮಠಕ್ಕೆ ಆಗಮಿಸುತ್ತಿದ್ದರು. ತಿರುಪತಿಯಲ್ಲಿ ವೇದಾಧ್ಯಯನ ಮಾಡುತ್ತಿದ್ದ ವೆಂಕಟೇಶ್ವರ ಪ್ರಸಾದರು ತಂದೆಯ ಜೊತೆಯಲ್ಲಿ ಶೃಂಗೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಗದ್ಗುರುಗಳಾಗಿದ್ದ ಭಾರತೀ ತೀರ್ಥ ಸ್ವಾಮಿಗಳವರಿಂದ ಗಾಢ ಪ್ರಭಾವಕ್ಕೊಳಗಾದರು. ಒಂದಿನಿತೂ ತಡ ಮಾಡದೇ ಜಗದ್ಗುರುಗಳ ಸಾನಿಧ್ಯದಲ್ಲೇ ಶಾಸ್ತ್ರಗಳನ್ನು ಅಭ್ಯಸಿಸುವ ಇಂಗಿತ ವ್ಯಕ್ತಪಡಿಸಿದರು. ವಿದ್ಯಾರ್ಥಿಯ ಇಂಗಿತಕ್ಕೆ ಜಗದ್ಗುರುಗಳ ಅಂಕಿತವೂ ದೊರೆಯಿತು. 2009ರ ಜೂನ್ ನಿಂದ ಇತರ ವಿದ್ಯಾರ್ಥಿಗಳೊಂದಿಗೆ ಶಾಸ್ತ್ರಾಧ್ಯಯನವೂ ಪ್ರಾರಂಭವಾಯಿತು. ಶೃಂಗೇರಿಯ ವಿದ್ವಾಂಸರಾದ ತಂಗಿರಾಲ ಶಿವಕುಮಾರ ಶರ್ಮ ಬಳಿ ಸಂಸ್ಕೃತ ಸಾಹಿತ್ಯ ಅಧ್ಯಯನ ನಡೆಸಿ ಸಂಸ್ಕೃತ ಪಾಂಡಿತ್ಯ ಪಡೆದ ಬಳಿಕ ವೆಂಕಟೇಶ್ವರ ಶರ್ಮರಿಗೆ ಸ್ವತಃ ಜಗದ್ಗುರುಗಳೇ ತರ್ಕಶಾಸ್ತ್ರವನ್ನು ಕಲಿಸಿದರು. ಸಂಸ್ಕೃತ ಪಾಂಡಿತ್ಯ ಪಡೆದ ಬಳಿಕ ಸ್ವತಃ ಜಗದ್ಗುರುಗಳೇ ತರ್ಕಶಾಸ್ತ್ರವನ್ನು ಕಲಿಸಿದರು. ಸತತ 5 ವರ್ಷಗಳು ನಡೆದ ಶಾಸ್ತ್ರ ಅಧ್ಯಯನದ ನಂತರ ಗುರುಭಕ್ತಿ, ವೇದಪಾಂಡಿತ್ಯ, ವೈರಾಗ್ಯವೇ ಮೊದಲಾದ ಜಗದ್ಗುರುಗಳ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡ ವೆಂಕಟೇಶ್ವರ ಪ್ರಸಾದರು ಶೃಂಗೇರಿ ಪೀಠಕ್ಕೆ ಉತ್ತರಾಧಿಕಾರಿಯಾಗಲಿದ್ದಾರೆ.

ಶೃಂಗೇರಿ ಜಗದ್ಗುರುಗಳೊಂದಿಗೆ ವೆಂಕಟೇಶ್ವರ ಪ್ರಸಾದ ಶರ್ಮ
ಶೃಂಗೇರಿ ಜಗದ್ಗುರುಗಳು ಆಸಕ್ತಿ ವಹಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ ಹಾಗೂ ಬಹುತೇಕ ಸಂದರ್ಭಗಳಲ್ಲಿ ಪೀಠಾಧಿಪತಿಗಳು ಸ್ವತಃ ಪಾಠ ಮಾಡುವ ವಿದ್ಯಾರ್ಥಿಗಳ ತಂಡದಲ್ಲೇ ಒಬ್ಬರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುತ್ತಾರೆ. ಅಭಿನವ ವಿದ್ಯಾತೀರ್ಥರಿಂದ ಕಲಿತ ಸೀತಾರಾಮಾಂಜನೇಯಲು ಮುಂದೆ ಭಾರತೀ ತೀರ್ಥರಾಗಿ ಶೃಂಗೇರಿಯ ಉತ್ತರಾಧಿಕಾರಿಯಾದರು. ಈಗ ಭಾರತೀ ತೀರ್ಥರಿಂದಲೇ ಶಾಸ್ತ್ರಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಒಬ್ಬರು ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಭಾರತೀ ತೀರ್ಥರಿಗೆ ಅವರ ಗುರುಗಳಾದ ಅಭಿನವ ವಿದ್ಯಾತೀರ್ಥರು ಸನ್ಯಾಸ ನೀಡುವ ಮೂಲಕ ಶೃಂಗೇರಿಯಲ್ಲಿ ಶಿಷ್ಯ ಪರಿಗ್ರಹ ಸಮಾರಂಭ ಬರೊಬ್ಬರಿ 40ವರ್ಷಗಳ ಹಿಂದೆ ನಡೆದಿತ್ತು. ಈಗ ಅಂಥದ್ದೇ ಒಂದು ಐತಿಹಾಸಿಕ ಘಟನೆಗೆ ಶೃಂಗೇರಿ ಶಿಷ್ಯವೃಂದ ಸಾಕ್ಷಿಯಾಗಲಿದೆ.

ಪೀಠಾಧಿಪತಿಗಳಾಗುವವರಿಗೆ ನ್ಯಾಯ, ವಿಶೇಷ, ಸಾಂಖ್ಯ, ಯೋಗ, ಮೀಮಾಂಸ, ವೇದಾಂತವೇ ಮೊದಲಾದ ಭಾರತೀಯ ತತ್ತ್ವಶಾಸ್ತ್ರದ 6 ಬಗೆಯ ದರ್ಶನಗಳ ಸಂಪೂರ್ಣ ಅಧ್ಯಯನ ಕಡ್ಡಾಯ. ಶೃಂಗೇರಿಗೆ ಬಂದ ಆರಂಭದಲ್ಲಿ ನ್ಯಾಯಶಾಸ್ತ್ರ ಅಧ್ಯಯನ ಮಾಡಿರುವ ವೆಂಕಟೇಶ್ವರ ಪ್ರಸಾದರು, ಪ್ರಸ್ತುತ ಮೀಮಾಂಸೆ ವೇದಾಂತ ಶಾಸ್ತ್ರದ ಅಧ್ಯಯನದಲ್ಲಿ ತೊಡಗಿದ್ದಾರೆ. 22,23ರಂದು ನಡೆಯಲಿರುವ ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಸ್ವತಃ ಭಾರತೀ ತೀರ್ಥ ಸ್ವಾಮಿಗಳು ಪ್ರಣವ ಮಹಾವಾಖ್ಯೋಪದೇಶ ನೀಡುವ ಮೂಲಕ ಶಿಷ್ಯ ಪರಿಗ್ರಹ ನಡೆಯುತ್ತದೆ. ಶೃಂಗೇರಿ ಗುರುಗಳ ಬಿರುದಾವಳಿಯಲ್ಲಿ ಹೇಳುವ ವ್ಯಾಖ್ಯಾನ ಸಿಂಹಾಸನಾಧೀಶ್ವರ ಎಂಬಂತೆ ಪ್ರಣವ ಮಹಾವಾಖ್ಯೋಪದೇಶದ ನಂತರ ವ್ಯಾಖ್ಯಾನ ಸಿಂಹಾಸನದ ಮೇಲೆ ಉತ್ತರಾಧಿಕಾರಿಗಳನ್ನು ಕುಳ್ಳಿರಿಸಿ ಸ್ವತಃ ಭಾರತೀ ತೀರ್ಥ ಮಹಾಸ್ವಾಮಿಗಳವರು ಅಭಿಷೇಕ ಮಾಡುತ್ತಾರೆ. ಈ ರೀತಿ ವ್ಯಾಖ್ಯಾನ ಸಿಂಹಾಸನದ ಮೇಲೆ ಯತಿಗಳನ್ನು ಕುಳ್ಳಿಸಿರು ಅಭಿಷೇಕ ಮಾಡುವುದು ಎರಡೇ ಬಾರಿ ಒಂದು ಹಿರಿಯ ಗುರುಗಳು ಉತ್ತರಾಧಿಕಾರಿಗೆ ಸನ್ಯಾಸ ನೀಡಿದ ಸಂದರ್ಭದಲ್ಲಿ, ಮತ್ತೊಂದು ಅದೇ ಉತ್ತರಾಧಿಕಾರಿ ಮುಂದೆ ಪೀಠಾರೋಹಣ ಮಾಡಿದ ಸಂದರ್ಭದಲ್ಲಿ. ಇದೇ ಸಂದರ್ಭದಲ್ಲೇ ಉತ್ತರಾಧಿಕಾರಿಗೆ ಯೋಗಪಟ್ಟ(ಸನ್ಯಾಸ ಆಶ್ರಮದ ಹೆಸರು)ವೂ ದೊರೆಯಲಿದೆ. ಆ ಕ್ಷಣದಲ್ಲಿ ಹಿರಿಯ ಜಗದ್ಗುರುಗಳಿಗೆ ಪ್ರೇರಣೆಯಾಗುವ ಭಾರತೀ, ಸರಸ್ವತೀ, ಆಶ್ರಮ, ಗಿರಿ, ತೀರ್ಥ, ಅರಣ್ಯ, ಪರ್ವತ, ಸಾಗರ, ಪುರಿ ವನ ಎಂಬ ದಶನಾಮಗಳಲ್ಲಿ ಒಂದು ಯೋಗಪಟ್ಟವನ್ನು ನೀಡುತ್ತಾರೆ. ಸನ್ಯಾಸದ ನಂತರವೂ ವೆಂಕಟೇಶ್ವರ ಪ್ರಸಾದರ ಶಿಕ್ಷಣ ಮುಂದುವರೆಯಲಿದ್ದು ಪ್ರಸ್ತುತ ಅಧ್ಯಯನ ಮಾಡುತ್ತಿರುವ ವಿಷಯಗಳೊಂದಿಗೆ ಸನ್ಯಾಸ ಧರ್ಮ, ಗುರುಪರಂಪರೆ ಬಗ್ಗೆಯೂ ಅಧ್ಯಯನ ನಡೆಯಲಿದೆ.
ಶಂಕರಾಚಾರ್ಯರು ಸ್ಥಾಪಿಸಿದ ದಕ್ಷಿಣಾಮ್ನಾಯ ಪೀಠದ ಉತ್ತರಾಧಿಕಾರಿಯಾಗಿ ನೇಮಗೊಂಡಿರುವ ವೆಂಕಟೇಶ್ವರ ಪ್ರಸಾದ ಶರ್ಮರ ಸನ್ಯಾಸ ದೀಕ್ಷೆಯ ಕಾರ್ಯಕ್ರಮವನ್ನು ಸಮಸ್ತ ಭಕ್ತವೃಂದ ಎದುರು ನೋಡುತ್ತಿದ್ದು, ಜಗದ್ಗುರುಗಳಾದ ಭಾರತೀ ತೀರ್ಥರ ಕರಕಮಲ ಸಂಜಾತರು(ಉತ್ತರಾಧಿಕಾರಿ) ಶೃಂಗೇರಿ ಪೀಠದ 37ನೇ ಪೀಠಾಧಿಪತಿಗಳಿಗೆ ಸಿಗುವ ಯೋಗಪಟ್ಟದ ಬಗ್ಗೆ ಭಕ್ತಾದಿಗಳಲ್ಲಿ ಕುತೂಹಲವಿದೆ.

 

Author : ಶ್ರೀನಿವಾಸ್ ರಾವ್

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited