ಸಡಗರದ ಸ್ವರ್ಣಗೌರಿ ವ್ರತ ಆಚರಣೆ....
ಶುಭವನ್ನು ತರುವ ಮಂಗಳ ಗೌರಿ..
ಪ್ರತಿ ವರ್ಷ ಭಾದ್ರಪದ ಮಾಸದ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ. ಭಾದ್ರಪದ ಮಾಸದ ಶುದ್ಧ ತದಿಗೆಯನ್ನು ಗೌರಿ ಹಬ್ಬವನ್ನು ಸ್ವರ್ಣ ಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ. ಗಣೇಶ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸದಿದ್ದರೂ ಸರಳವಾಗಿ ಭಕ್ತಿಯಿಂದ ಆಚರಿಸಲಾಗುತ್ತದೆ.
ಹೆಸರೇ ಸೂಚಿಸುವಂತೆ ಸ್ವರ್ಣ ಅಂದರೆ ಬಂಗಾರ, ಬಂಗಾರದ ಬಣ್ಣದಂತೆ ಹೊಳೆಯುವ ಜಗನ್ಮಾತೆಯಾದ ಗೌರಿಯನ್ನು ಈ ದಿನ ಷೋಡಶೋಪಚಾರದಿಂದ ಪೂಜಿಸಲಾಗುತ್ತದೆ. ಮಹಿಳೆಯರೆಲ್ಲರಿಗೂ ಗೌರಿ ಹಬ್ಬ ಬಂತೆಂದರೆ ಸಡಗರ. ಮನೆಯಲ್ಲಿ ಮಂಟಪ ನಿರ್ಮಿಸಿ ಬಾಳೆ ಕಂದು, ಮಾವಿನ ತೋರಣ ಕಟ್ಟಿ ಅಲಂಕಾರ ಮಾಡಿ ಗೌರಿ ಮೂರ್ತಿಯನ್ನು ಶೃಂಗರಿಸಿ ಸಡಗರದಿಂದ ಗೌರಿ ಹಬ್ಬವನ್ನು ಆಚರಿಸುತ್ತಾರೆ.
ಸ್ವರ್ಣ ಗೌರಿ ಪೂಜೆ ಹೇಗೆ ಆಚರಣೆಯಲ್ಲಿ ಬಂತು ಎನ್ನುವ ಕುರಿತು ಹಲವು ಪೌರಾಣಿಕ ಕಥೆಗಳು ಚಾಲ್ತಿಯಲ್ಲಿದೆ. ಗೌರಿ ಎಂಬುದು ಶಿವನ ಸತಿ ಪಾರ್ವತಿಯ ಮತ್ತೊಂದು ನಾಮ. ಪಾರ್ವತಿಯ ತಂದೆ ಪರ್ವತರಾಜ. ಅಂದರೆ ಹಿಮಾಲಯವಿರುವ ಭಾರತ (ಭೂಲೋಕ). ಶಿವನನ್ನು ವರಿಸಿ ಕೈಲಾಸದಲ್ಲಿ ನೆಲೆಸಿಹ ಗೌರಿ ವರ್ಷಕ್ಕೊಮ್ಮೆ ತವರಿಗೆ (ಭೂಮಿಗೆ) ಬಂದು ಪೂಜೆ ಸ್ವೀಕರಿಸಿ, ಹೆಣ್ಣು ಮಕ್ಕಳಿಂದ ಬಾಗಿನ ಪಡೆದು ಸಂತೃಪ್ತಳಾಗಿ ಕೈಲಾಸಕ್ಕೆ ಹೋಗುತ್ತಾಳೆ ಎಂಬುದು ಕೆಲವರ ನಂಬಿಕೆ. ಗಣಪನಿಗೆ ಒಂದು ದಿನ ಮೊದಲೇ ತವರಿಗೆ ಬರುವ ಗೌರಿಯನ್ನು ಆದರದಿಂದ ಬರಮಾಡಿಕೊಂಡು ಪೂಜಿಸಲು ಸುಮಂಗಲಿಯರು ಕಾತರಿಸುತ್ತಾರೆ. ಗೌರಿಯ ಪೂಜೆ ಮಾಡಿದರೆ ತಮ್ಮ ಮಾಂಗಲ್ಯ ಗಟ್ಟಿಯಾಗಿರುತ್ತದೆ ಎಂಬುದು ಹಿಂದೂಗಳ ನಂಬಿಕೆ.
ಗಣಪತಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವಾಗ ಗೌರೀ ಗಣೇಶ ಹಬ್ಬದ ಶುಭಾಶಯಗಳು ಎಂದೇ ಹೇಳುತ್ತೇವೆ. ಗಣಪತಿ ಹಬ್ಬದ ಹಿಂದಿನ ದಿನ ಬರುವ ಗೌರಿ ಹಬ್ಬವನ್ನು ಜೊತೆಯಲ್ಲಿ ಸೇರಿಸಿಕೊಂಡು ಹೇಳುತ್ತೇವೆ. ಬೇರಾವ ಹಬ್ಬಕ್ಕೂ ಈ ರೀತಿ ಇನ್ನೊಂದು ಹಬ್ಬವನ್ನು ಜೊತೆಯಲ್ಲಿ ಸೇರಿಸಿ ಹೇಳುವುದಿಲ್ಲ.
ಈ ಹಬ್ಬಕ್ಕಿರುವ ಪರಿಪೂರ್ಣತೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಯಾವುದೇ ಧಾರ್ಮಿಕ ಆಚರಣೆಗಳಿಗೂ ಅಥವಾ ಹಬ್ಬಗಳಿಗೂ ಇಲ್ಲವೆಂಬುದು ಗಮನಾರ್ಹ ಗೌರಿ ಎಂಬುದು ಪ್ರಕೃತಿಯ ಪರ್ಯಾಯ ಪದವೆಂದೂ ಹೇಳಲಾಗುತ್ತದೆ. ಗೌರಿ ತನ್ನ ಮೈ (ಬೆವರು)ಮಣ್ಣಿನಿಂದ ಮೂರ್ತಿಯನ್ನು ಸೃಷ್ಟಿಸಿ ಪ್ರಾಣ ತುಂಬಿ ಗಣಪತಿಯೆಂಬ ಅನ್ವರ್ಥ ನಾಮ ನೀಡಿ ನಮಗಾಗಿ ಕರುಣಿಸುತ್ತಾಳೆ. ಭೂತ ಗಣಗಳ ಅಧಿಪತಿ ಸೃಷ್ಠಿಯಾಗಿರುವುದು ಪ್ರಕೃತಿಯ ಸ್ಥೂಲ ಭಾಗವಾದ ಪೃಥ್ವಿ(ಮಣ್ಣಿನಿಂದ) ತತ್ವದ ಮೂಲಕವೇ....
ಸನಾತನ ಧರ್ಮದಲ್ಲಿ ಪ್ರತಿಯೊಂದು ಆಚರಣೆ ಹಿಂದೆಯೂ ಒಂದೊಂದು ಅರ್ಥವಿದೆ. ಅದರಂತೆಯೇ ಗಣಪತಿ ಆಕೃತಿಯ ಬಗ್ಗೆಯೂ ವೈಶಿಷ್ಠ್ಯಗಳಿವೆ. ಗಣಪನ ಡೊಳ್ಳು ಹೊಟ್ಟೆ ಸಂಕೇತ ಮತ್ತು ಇದನ್ನು ಬಿಗಿದು ಕಟ್ಟಿರುವ ಹಾವು ಕಾಲದ ಸಂಕೇತ. ದೊಡ್ಡ ಕಿವಿ ಮತ್ತು ತಲೆಯು ಶ್ರವಣ ಮತ್ತು ಮನನವನ್ನು ಸಂಕೇತಿಸಿದರೆ, ಮನುಷ್ಯ ದೇಹದ ಮೇಲಿರುವ ಆನೆಯ ತಲೆ ಪರಮ ಜ್ನಾನದ ಸಂಕೇತವಾಗಿದೆ.
ಅವನ ಮೂಗು. ಅದು ಎಡಕ್ಕೆ ತಿರುಗಿರಬಹುದು. ಇಲ್ಲವೇ ಬಲಕ್ಕೆ ತಿರುಗಿರಬಹುದು ಅಥವಾ ಮಧ್ಯದಲ್ಲಿಯೇ ಇದ್ದು ಊಧ್ರ್ವಮುಖವಾಗಿರಬಹುದು. ಗಣಪನ ಸೊಂಡಿಲು ಎಡಕ್ಕೆ ತಿರುಗಿದ್ದರೆ ಎಡಮುರಿ ಗಣಪತಿಯೆಂದೂ, ಬಲಕ್ಕೆ ತಿರುಗಿದ್ದರೆ ಬಲಮುರಿ ಗಣಪತಿಯೆಂದೂ, ಮಧ್ಯದಲ್ಲಿದ್ದರೆ ಊಧ್ರ್ವ ಮೂಲ ಗಣಪತಿಯೆನ್ನುತ್ತಾರೆ. ಬಲಮುರಿ ಗಣಪತಿ ವಿಗ್ರಹವೇ ಶ್ರೇಷ್ಠವಂತೆ. ಆನೆಗೆ ಸೊಂಡಿಲೆಂದರೆ, ಉಸಿರಾಡುವ ಮೂಗು ಹಾಗೂ ನೀರನ್ನು ಹೀರಿ ಕುಡಿಯುವ ಹಾಗೂ ಹೀರಿದ ನೀರನ್ನು ಹೊರ ಬಿಡುವ ಸಾಧನವೂ ಆಗಿರುವುದು ಪ್ರಾಣಾಯಾಮದ ಜಲನೇತಿಯನ್ನು ಸಂಕೇತಿಸುತ್ತದೆ. ಹೀಗೆ ಅತ್ಯಂತ ಗಹನತತ್ವಗಳನ್ನು ತನ್ನ ಆಕೃತಿಯ ಒಂದೊಂದು ಭಾಗದಲ್ಲಿಯೂ ಹೊಂದಿರುವ ಗಣಪತಿ ಆಕಾರ, ಅನೇಕ ಅರ್ಥಗರ್ಭಿತ ಆಯಾಮಗಳಿಗೆ ಆಸ್ಪದ ನೀಡುತ್ತದೆ. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಇಂತಹ ಗಣಪತಿ ನಮ್ಮ ಜ್ನಾನ ಸಾಧನೆಯ ವಿಘ್ನಗಳನ್ನು ನಿವಾರಿಸಿ ಬದುಕಿನ ಹಾದಿಯನ್ನು ಸುಗಮವಾಗುವಂತೆ ಮಾಡಲೆಂದು ಪ್ರಾರ್ಥಿಸೋಣ.
Author : ಶ್ರೀನಿವಾಸ್ ವೇವ್ಸ್