Untitled Document
Sign Up | Login    
ಭಾರತೀ ಪ್ರಕಾಶನದಿಂದ ಪುಸ್ತಕ ಯಾತ್ರೆ: ಅರಿವಿನ ಲೋಕಕ್ಕೆ ಹೊಸಬೆಳಕಿನ ಮುನ್ನುಡಿ

ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

ಶ್ರೀ ಭಾರತೀ ಪ್ರಕಾಶನದಿಂದ ’ಗುರುಗ್ರಂಥಮಾಲಿಕಾ’- 60 ದಿನದಲ್ಲಿ 60 ಪುಸ್ತಕಗಳ ನಿರಂತರ ಪ್ರಕಟಣೆಯ ವಿಶ್ವದಾಖಲೆ........

ತಮ್ಮ ಗುರುತ್ವದಿಂದ ಲೋಕವನ್ನು ಬೆಳಗಿದ ಭಾರತೀಯ ಪರಂಪರೆಯ 60 ಮಹಾಪುರುಷರ ಜೀವನಕಥನ-ಮಾಹಿತಿಯನ್ನು ಒಳಗೊಂಡ 60 ಕನ್ನಡ ಪುಸ್ತಕಗಳ ಲೋಕಾರ್ಪಣೆ ಈ ಬಾರಿಯ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಗಳ ಚಾತುರ್ಮಾಸ್ಯದ ವಿಶೇಷ. ಅಷ್ಟೇ ಅಲ್ಲ, ಭರತಖಂಡದ ಶ್ರೇಯಸ್ಸಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ವಿಶೇಷ ವ್ಯಕ್ತಿಗಳ, ಗುರುಮಹಾತ್ಮರ, ಶಾಸ್ತ್ರಕಾರರ ಜೀವನಚರಿತ್ರೆ ಮತ್ತು ದುರ್ಲಭವೆನಿಸುವ ಶಾಸ್ತ್ರವಿಶೇಷಗಳನ್ನು ತಿಳಿಸುವ ಈ ಉಪಕ್ರಮ ಹಿಂದೆಂದೂ ನಡೆದಿರದ ದಾಖಲೆಯಾಗಿದೆ. ಆದ್ದರಿಂದ ಬೆಂಗಳೂರಿನ ಶ್ರೀ ಭಾರತೀ ಪ್ರಕಾಶನ ಹಮ್ಮಿಕೊಂಡ ಈ ಪುಸ್ತಕ ಯಾತ್ರೆಯು ’ಲಿಮ್ಕಾ ಬುಕ್ ಆಫ್ ರೆಕಾರ್ಡ್’ಗೆ ಸೇರಲಿದೆ ಎಂಬುದು ಕನ್ನಡ ಸಾಹಿತ್ಯಲೋಕದ ಪಾಲಿಗೆ ಹೆಮ್ಮೆ ಪಡಬೇಕಾದ ಅಂಶ.

ಹಾಗೆಂದು ಈ 60 ಪುಸ್ತಕದ ಯೋಜನೆ ದಾಖಲೆ ಮಾಡುವ ಉದ್ದೇಶಕ್ಕೆಂದೇ ಹೊರಟ ಪ್ರಯತ್ನವಲ್ಲ! ಆದರೂ ವಿಶ್ವದಾಖಲೆಯಾಗುವ ಎಲ್ಲಾ ಕಾರಣಗಳನ್ನು ಹೊಂದಿದೆ. 60 ದಿನಗಳ ಕಾಲ ಒಂದೇ ಪ್ರಕಾಶನದಿಂದ 60 ಪುಸ್ತಕಗಳ ಬಿಡುಗಡೆ; ಹೀಗೆ ಬಿಡುಗಡೆಯಾಗುವ ಪ್ರತೀ ಪುಸ್ತಕದ 25೦ ಪ್ರತಿಗಳನ್ನು ಉಚಿತವಾಗಿ 60 ದಿನಗಳ ಕಾಲ (ಅಂದರೆ ಒಟ್ಟಾರೆ ಸುಮಾರು 25,000 ಪ್ರತಿಗಳನ್ನು) ಉಚಿತವಾಗಿ ಮಠದ ಶಿಷ್ಯಪರಂಪರೆಯ ಮನೆಮನೆಗಳಿಗೆ ತಲುಪಿಸುವುದೆಂದರೆ ಸಾಮಾನ್ಯ ಮಾತೇ?

ಪ್ರಸಕ್ತ ಜುಲೈ 12 ರಿಂದ ಪ್ರಾರಂಭವಾದ ಈ ಪಯಣ ಸೆಪ್ಟೆಂಬರ್ 9 ರವರೆಗೆ ಪ್ರತಿನಿತ್ಯ ಮಠದ ಶ್ರೀಭಾರತೀ ಪ್ರಕಾಶನದ ಕಡೆಯಿಂದ ಜರುಗುತ್ತಲಿದ್ದು ದಿನಕ್ಕೊಂದು ಪುಸ್ತಕ ಲೋಕಾರ್ಪಣೆಗೊಳ್ಳುತ್ತಾ ಅರಿವಿನ ಲೋಕಕ್ಕೆ ಹೊಸಬೆಳಕಿನ ಮುನ್ನುಡಿ ಬರೆಯುತ್ತಿದೆ. ’ಪುಸ್ತಕ ಓದುವ ಪರಂಪರೆಯೇ ಕ್ಷೀಣೀಸುತ್ತಿದೆ’ ಎಂಬ ಅಪವಾದವನ್ನೇ ಸುಳ್ಳಾಗಿಸುವಂತೆ ಈ ಬೃಹತ್ ಯೋಜನೆ ಪ್ರಕಟಣೆಯ ಜೊತೆಜೊತೆಗೆ ಅಪಾರ ಓದುಗರನ್ನೂ ಏಕಕಾಲಕ್ಕೆ ಹೊಂದುತ್ತಲಿದೆ. ಪ್ರಕಾಶನವೊಂದು ಹೀಗೆ ಏಕಕಾಲದಲ್ಲಿ, ನಿರಂತರವಾಗಿ, ಅದೂ 60 ದಿನಗಳ ಕಾಲ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಾ ಭಾರತೀಯ ಗುರು-ಮಹಾಪುರುಷರ ಕುರಿತು ದಿನಕ್ಕೊಂದು ಪುಸ್ತಕದಂತೆ ಬಿಡುಗಡೆ ಮಾಡುತ್ತಿರುವುದು ಸಾಹಿತ್ಯ-ಪ್ರಕಾಶನ ಕ್ಷೇತ್ರದಲ್ಲೇ ಪ್ರಥಮ ಅಲ್ಲದೆ ಸಮಾಜದ 25-30ಸಾವಿರ ಮನೆಗಳಿಗೆ ಉಚಿತವಾಗಿ ಪುಸ್ತಕ ನೀಡಲಾಗುತ್ತಿರುವುದು ಇತಿಹಾಸದಲ್ಲೊಂದು ಮೈಲುಗಲ್ಲು.

ಈ ಮಾದರಿಯಲ್ಲೇ ಹಿಂದೊಮ್ಮೆ ರಾಷ್ಟ್ರೋತ್ಥಾನ ಪ್ರಕಾಶನವು ’ಭಾರತ-ಭಾರತೀ’ ಪುಸ್ತಕಮಾಲೆಯಲ್ಲಿ ಒಂದೇ ಗುಕ್ಕಿಗೆ ಓದಿ ಮುಗಿಸುವಂತೆ ಹಲವು ದೇಶಭಕ್ತರ-ಪುರಾಣ ಪುರುಷರ ಕುರಿತು ಪುಟ್ಟ ಪುಟ್ಟ ಪುಸ್ತಕಗಳನ್ನು ಪ್ರಕಟಿಸಿತ್ತು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಅನಾವರಣಗೊಂಡ ಈ ಕೃತಿಸರಣಿಯು ಚಿಣ್ಣರಿಂದ ಮೊದಲ್ಗೊಂಡು ಬೇರೆ ಬೇರೆ ವಯೋಮಾನದ ಮನೆ-ಮನಗಳನ್ನು ತಲುಪಿತ್ತು. ಶ್ರೀಭಾರತೀ ಪ್ರಕಾಶನ ಈ ನಿಟ್ಟಿನಲ್ಲಿ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನಿಯಮಿತವಾಗಿ ಗುರುವರೇಣ್ಯರ ಪುಸ್ತಕಗಳು ಲೋಕಾರ್ಪಣೆಗೊಳ್ಳುವಂತೆ ಸಮಗ್ರವಾಗಿ, ಸಂಕ್ಷಿಪ್ತವಾಗಿ, ’ಭಾರತ-ಭಾರತೀ’ ಪುಸ್ತಕಮಾಲೆಗಿಂತಲೂ ಕೊಂಚ ದೊಡ್ಡ ಗಾತ್ರದಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದೆ. (ವಿಶೇಷವೆಂದರೆ ಮುದ್ರಣದ ಜವಾಬ್ದಾರಿಯನ್ನು ರಾಷ್ಟ್ರೋತ್ಥಾನವೇ ವಹಿಸಿಕೊಂಡಿದೆ.)

ವಸಿಷ್ಠ, ವ್ಯಾಸ, ವಿಶ್ವಾಮಿತ್ರ, ಬೃಹಸ್ಪತಿ, ಅಗಸ್ತ್ಯ, ನಾರದ, ಪರಾಶರರಂತಹ ಹಲವು ಋಷಿಮುನಿಗಳು; ಯಾಜ್ಞವಲ್ಕ್ಯ, ಪಾಣಿನೀ, ಭರತಮುನಿ, ಆನಂಧವರ್ಧನ, ಅಭಿನವಗುಪ್ತ, ಚರಕ, ಸುಶ್ರುತ, ಪಿಂಗಳ, ವರಾಹಮಿಹಿರ, ಬೋಧಾಯನ ಮುಂತಾದ ಶಾಸ್ತ್ರಕಾರರು; ಸಮರ್ಥ ರಾಮದಾಸ, ತ್ಯಾಗರಾಜ, ಜ್ಞಾನೇಶ್ವರ, ಕೃಷ್ಣಚೈತನ್ಯ, ಸದಾಶಿವ ಬ್ರಹ್ಮೇಂದ್ರರಂತಹ ಭಗವದ್ಭಕ್ತ ಕೃತಿರಚನಕಾರ-ದಿಗ್ಧರ್ಶಕರು, ಶಂಕರ, ಚಾಣಕ್ಯ, ಕುಮಾರಿಲಭಟ್ಟ, ಶ್ರೀರಂಗ, ಶ್ರೀಧರ, ರಮಣ, ವಿದ್ಯಾರಣ್ಯ, ದತ್ತಗುರುಗಳಂತಹ ಮಹಾಪುರುಷರು, ಪದ್ಮಪಾದ-ತೋಟಕ-ಹಸ್ತಾಮಲಕ-ದ್ರೋಣ-ಭೀಷ್ಮರಂತಹ ಆಚಾರ್ಯಸ್ವರೂಪರು..ಹೀಗೆ ಬೇರೆ ಬೇರೆ ಆಯಾಮದಲ್ಲಿ ಬಾಳಿ ಬೆಳಗಿದ ಮಹಾತ್ಮರ ಮಾಹಿತಿ, ಜೀವನಸಂಕಥನ, ತಿಳಿದುಕೊಳ್ಳಬೇಕಾದ ಕೃತಿ-ಶಾಸ್ತ್ರದ ಸಂಕ್ಷಿಪ್ತ ಪರಿಚಯಗಳು ಈ ಪುಸ್ತಕಮಾಲಿಕೆಯಲ್ಲಿ ಸಿಗುವುದು ವಿಶೇಷ. ಜೊತೆಗೆ ನಿತ್ಯ ಜೀವನದಲ್ಲಿ ಅನುಸರಿಸಬೇಕಿರುವ ಅಂಶಗಳು ಸೇರಿದಂತೆ ಬದುಕಲ್ಲಿ ಅಳವಡಿಸಿಕೊಳ್ಳಲೇಬೇಕಾದ ಪರಿಪೂರ್ಣ ವಿಚಾರ ಸಂದೇಶ ಸಾರುವ ಹೊತ್ತಿಗೆಯಾಗಿ ಈ ಪುಸ್ತಕಗಳು ಜನರ ಕೈಸೇರುತ್ತಲಿದೆ.

ಆಕರ್ಷಕವಾದ ಮುಖಪುಟ, ಉತ್ತಮ ಗುಣಮಟ್ಟದ ಪುಟಗಳು, ಅಚ್ಚುಕಟ್ಟಾದ ಪುಟವಿನ್ಯಾಸ, ವೃದ್ಧರೂ ಓದಲು ಅನುಕೂಲವಾಗುವಂತೆ ದೊಡ್ಡ ಅಕ್ಷರಗಳಲ್ಲಿ ಮುದ್ರಣ ಈ ಪುಸ್ತಕಮಾಲಿಕೆಯ ಹೆಚ್ಚುಗಾರಿಕೆಗೆ ಸೇರ್ಪಡೆಯಾಗುವಂತದ್ದು. ಜೊತೆಗೆ ಇಂತಹ ಪುಸ್ತಕಗಳನ್ನು ಬರೆಯುವುದಾದರೂ ಯಾರು? ಸಾಹಿತ್ಯ-ಸಾಂಸ್ಕೃತಿಕ-ವಿದ್ವಲ್ಲೋಕದ ಸಂಪನ್ಮೂಲ ವ್ಯಕ್ತಿಗಳು, ವಿದ್ವಾಂಸರು, ಸಾಹಿತಿಗಳೇ ಪುಸ್ತಕಮಾಲಿಕೆಯ ಲೇಖಕರೂ ಆಗಿದ್ದಾರೆ. ಹಿರಿಯ ವಿದ್ವಾಂಸ ಡಾ.ಕೆ.ಎಲ್. ಶಂಕರನಾರಾಯಣ ಜೋಯಿಸ್ ಅವರ ಮುಖವಚನ ಈ ಪುಸ್ತಕಮಾಲಿಕೆಯ ಪ್ರತೀ ಪುಸ್ತಕಗಳಿಗಿದೆ. ಅಂತೆಯೇ ಈ ಮಾಲಿಕೆಯ ಸಂಪಾದಕತ್ವಕ್ಕಾಗಿ ವಿದ್ವಾನ್ ಜಗದೀಶ ಶರ್ಮ ಅವರ ಮುಂದಾಳತ್ವದಲ್ಲಿ ಹಲವು ಮಂದಿ ಪ್ರಾಜ್ಞರ ಕಾರ್ಯನಿರ್ವಹಣ ಸಮಿತಿಯೂ ಟೊಂಕ ಕಟ್ಟಿ ನಿಂತಿದೆ. ಆದ್ದರಿಂದಲೇ ಈ ಪ್ರಯತ್ನವು ಸಾಂಸ್ಕೃತಿಕ-ಸಾಹಿತ್ಯಿಕ-ಧಾರ್ಮಿಕ-ಸಾಮಾಜಿಕ-ಸಂಶೋಧನೆ ಹೀಗೆ ಯಾವುದೇ ಕೋನಗಳಿಂದ ನೋಡಿದರೂ ಐತಿಹಾಸಿಕ ದಾಖಲೆಯಾಗಲಿದೆ. ಈ ನಿಟ್ಟಿನಲ್ಲಿ ರಾಘವೇಶ್ವರ ಶ್ರೀಗಳು ತಮ್ಮ ವ್ರತಕಾಲದಲ್ಲಿ ಗುರುವರೇಣ್ಯರನ್ನು ಗುರುತಿಸಿ ದಾಖಲಿಸುವ ಕಾರ್ಯ ಹಮ್ಮಿಕೊಂಡಿರುವುದು ನಿಜಕ್ಕೂ ಸ್ತುತ್ಯರ್ಹ.

ಹಾಗೆಂದು ಈ ಪ್ರಯತ್ನ 60 ದಿನ- 60 ಪುಸ್ತಕಕ್ಕೆಂದೇ ಸೀಮಿತವಾಗಿಲ್ಲ. ಈಗಾಗಲೇ 60 ಪುಸ್ತಕಗಳಿಂದಾಚೆಗೂ ಹಲವು ಮಹಾತ್ಮರ ಕುರಿತು ಈ ಪುಸ್ತಕಗಳನ್ನು ಬರೆಯಲು ಲೇಖಕರಿಗೆ ಆಹ್ವಾನ ದೊರಕಿದ್ದು; ಈ ಗುರುಗ್ರಂಥಮಾಲಿಕೆಯಲ್ಲಿ 90ಕ್ಕಿಂತಲೂ ಹೆಚ್ಚಿನ ಗುರುವರೇಣ್ಯರ ಪುಸ್ತಕಗಳು ಮುದ್ರಣಗೊಳ್ಳುವುದು ಖಚಿತವಾಗಿದೆ. ಕನ್ನಡದ ಯುವಜನತೆ ಸೇರಿದಂತೆ ಎಲ್ಲ ಬಗೆಯ ಓದುಗರಿಗೂ-ಅಧ್ಯಯನಾಪೇಕ್ಷಿಗಳಿಗೂ ತಲುಪಿಸುವ ಸದುದ್ದೇಶದಿಂದ ಹೊರಟಿರುವ ಪ್ರಕಾಶನದ ಈ ಕಾರ್ಯ ಸಾರಸ್ವತ ಲೋಕಕ್ಕೆ ಉತ್ತಮ ಕೊಡುಗೆಯಾಗಿದೆ.

 

Author : ಮನೋರಮಾ ಬಿ.ಎನ್

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited