ಈ ದೇಶದ ಸಂಸ್ಕೃತಿಯ ರಕ್ಷಣೆ ಹಾಗೂ ಹಿಂದೂಗಳ ಮೌಲ್ಯಗಳಿಂದ RSS ಹಿಂದೆ ಸರಿಯುತ್ತಿದೆಯೇ?.. ಹೀಗೊಂದು ಜಿಜ್ಞಾಸೆ ಉಂಟಾಗಲು ಕಾರಣವಾಗಿದ್ದು ಸಂಘದ ಹಿರಿಯ ಮುಖಂಡ ದತ್ತಾತ್ರೇಯ ಹೊಸಬಾಳೆಯವರ ಇತ್ತೀಚಿನ ಹೇಳಿಕೆ.
ನಮ್ಮ ಸಂಸ್ಕೃತಿಯಲ್ಲಿ ಸಲಿಂಗಕಾಮಕ್ಕೆ ಅವಕಾಶವೇ ಇಲ್ಲ. ಆದರೆ ಹೊಸಬಾಳೆಯವರು ಹೇಳುತ್ತಿರುವುದಾದರೂ ಏನು? ಸಲಿಂಗರತಿ ಅವರ ವೈಯಕ್ತಿಕ ವಿಚಾರ, ಅದು ಅಪರಾಧವಲ್ಲ ಎನ್ನುತ್ತಿದ್ದಾರೆ.. ಎಲ್ಲಿಗೆ ಬಂದಿತು ಸಂಘದ ಮೌಲ್ಯ-ಮಾನ ಮರ್ಯಾದೆ?...
ಈ ಹಿಂದೆ ದೆಹಲಿಯ ಹೈಕೋರ್ಟು 377ನೇ ವಿಧಿಯ ಪ್ರಕಾರ ಸಲಿಂಗರತಿ ಅಪರಾಧವೆಂದು ತೀರ್ಪಿತ್ತಿತ್ತು. ಆಗಲೆ ಸಲಿಂಗರತಿ ಬಗ್ಗೆ ವಾದ-ವಿವಾದಗಳು ಹುಟ್ಟಿಕೊಂಡವು. ಆದರೆ ಭಾರತದ ಸಂಸ್ಕ್ರತಿ ರಕ್ಷಣೆಗೆ ನಿಲ್ಲಬೇಕಾದ ಸಂಘದ ಹಿರಿಯ ಸದಸ್ಯ ಹೊಸಬಾಳೆ, ತದ್ವಿರುದ್ದವಾದ ಹೇಳಿಕೆ ಕೊಡುತ್ತಿರುವುದು ವಿಪರ್ಯಾಸವೇ ಸರಿ.
ಸಲಿಂಗರತಿ ಅವರವರ ವೈಯಕ್ತಿಕವಾದರೆ, ವೇಶ್ಯಾವಾಟಿಕೆ ಏನು? ಅದೂ ವೈಯಕ್ತಿಕವೇ ಅಲ್ಲವೇ? ನನ್ನ ದೇಹ ನನ್ನ ಹಕ್ಕು ಎಂದು ಒಬ್ಬ ವೇಶ್ಯೆ ಹೇಳಿದರೆ ಅದರಲ್ಲೇನಿದೆ ತಪ್ಪು? ಹೊಸಬಾಳೆಯವರ ವಿಚಾರ ಕ್ರಮದಲ್ಲಿ ಹೇಳುವುದಾದರೆ ವೇಶ್ಯಾವಾಟಿಕೆ ಕೂಡ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಹಾಗೆಂದು ವೇಶ್ಯಾವಾಟಿಕೆ ಮಾಡಲಿ ಎನ್ನಲು ಸಾಧ್ಯವೇ?...
ಇಂದು ಸಲಿಂಗರತಿ ವೈಯುಕ್ತಿಕ ಎಂದ ಹೊಸಬಾಳೆ, ಮುಂದೊಂದು ದಿನ ವೇಶ್ಯಾವಾಟಿಕೆ ಕೂಡ ಅಪರಾಧವಲ್ಲ ಎಂದರೆ ಆಶ್ಚರ್ಯವಿಲ್ಲ. ಅಥವಾ ವೇಶ್ಯೆಯರು ವೇಶ್ಯಾವಾಟಿಕೆ ನೆಡೆಸಲು ಅವಕಾಶ ಕೊಡಿ ಎಂದರೆ ಅದು ತಪ್ಪು ಎನ್ನಲು ಹೊಸಬಾಳೆಯವರ ಬಳಿ ಯಾವ ನೈತಿಕತೆಯು ಉಳಿದಿರುವುದಿಲ್ಲ!
ವಿವಾದಗಳಿಗೆ ಹೊಸಬಾಳೆ ಹೊಸಬರಲ್ಲ...!
ಈ ಹಿಂದೆ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಮೇಲಿನ ಅತ್ಯಾಚಾರ ಆರೋಪದ ಹಿಂದೆ ಹೊಸಬಾಳೆಯವರ ಕೈವಾಡವಿದೆ ಎಂದು ಹವ್ಯಕ ಸಮುದಾಯದ ಹಲವರು ಆರೋಪಿಸಿದ್ದರು ಹಾಗೂ ಕೇಂದ್ರ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂರವರೂ ಮೂರು ಮೂರು ಬಾರಿ ಕರ್ನಾಟಕಕ್ಕೆ ಬರಲು ಹೊಸಬಾಳೆಯವರೇ ಕಾರಣ ಎಂದು ಹವ್ಯಕ ಸಮುದಾಯ ನಿರಂತರವಾಗಿ ಆರೋಪಿಸಿತ್ತು. ಆದರೆ ಅದ್ಯಾವದಕ್ಕೂ ಉತ್ತರಕೊಡದೇ ಜಾಣ ಮೌನ ವಹಿಸಿದ್ದರು. ಹಿಂದೂ ಸಂಘಟನೆ, ಗೋರಕ್ಷಣೆಗಾಗಿ ದೇಶಾದ್ಯಂತ ಪರ್ಯಟನೆ ಮಾಡಿ ಜಾಗೃತಿ ಮೂಡಿಸಿದ ಶ್ರೀಗಳ ವಿರುದ್ಧ ನಡೆಸಲಾಗುತ್ತಿರುವ ಷಡ್ಯಂತ್ರಗಳ ಬಗ್ಗೆ ಚಿಕ್ಕ ಮಕ್ಕಳೂ ಸಹ ದನಿ ಎತ್ತುತ್ತಿರುವಾಗ ಧರ್ಮ, ಸಂಸ್ಕೃತಿ ರಕ್ಷಣೆಗೆ ಎಂದು ಟೊಂಕ ಕಟ್ಟಿ ನಿಂತ ಹೊಸಬಾಳೆಯವರ ದನಿ ಯಾರಿಗೂ ಕೇಳಲೇ ಇಲ್ಲ! ಹಿಂದೂ ಸಂತರ ವಿರುದ್ದವೇ ಹೊಸಬಾಳೆ ತಿರುಗಿಬಿದ್ದರಾ...? ಹಾಗೊಂದು ಪ್ರಶ್ನೆಗೆ ಉತ್ತರ ಇನ್ನೂ ನಿಗೂಢ.
ಸಂಘದಲ್ಲಿ ಸಹಕಾರ್ಯವಾಹ ಹುದ್ದೆ ಖಾಲಿಯಾದಾಗ ಮೊದಲು ಹೆಸರು ಕೇಳಿಬಂದದ್ದೇ ಹೊಸಬಾಳೆ ಹೆಸರು. ಆದರೆ ಅದು ಸಿಕ್ಕಲಿಲ್ಲ, ಸಾಮಾನ್ಯವಾಗಿ ಸಂಘ ಘೋಷಿಸುವವರೆಗೂ ಯಾರಿಗೂ ಆ ಹುದ್ದೆ ಯಾರಿಗೆ ದೊರೆಯುತ್ತದೆ ಎಂಬುದು ಗುಪ್ತವಾಗಿರುತ್ತದೆ. ಆದರೆ ಇಲ್ಲಿ ಹೊಸಬಾಳೆಯವರು ಬೇಕೆಂದೇ ತಮ್ಮ ಹೆಸರು ಸಹಕಾರ್ಯವಾಹ ಹುದ್ದೆಗೆ ಏರಲಿ ಎಂದು ಪತ್ರಿಕೆಗಳ ಮೂಲಕ ಬರೆಸಿದರು ಎಂಬುದು ಹೊಸಬಾಳೆ ವಿರೋಧಿಗರ ಅಂಬೋಣ.
ಒಟ್ಟಿನಲ್ಲಿ ಸಲಿಂಗರತಿ ಬಗ್ಗೆ ವಿವಾದಾತ್ಮಕ ನಿಲುವು ತಳೆದ ಹೊಸಬಾಳೆಯವರ ಮಾತು ಸಂಘದವರಿಗೇ ತೀವ್ರ ಇರಿಸು-ಮುರುಸು ಉಂಟುಮಾಡುತ್ತಿದೆ. ಇಂದು ಸಲಿಂಗರತಿ ಕಾಮಿಗಳು ತಮ್ಮ ದೇಹ ಪ್ರಕೃತಿಯನ್ನು ಮುಂದಿಟ್ಟುಕೊಂಡು ಸಲಿಂಗರತಿ ಹಕ್ಕಿನ ಬಗ್ಗೆ ಕೇಳುತ್ತಾರೆ, ಮುಂದೊಂದು ದಿನ ಅತಿಕಾಮಿಗಳು ಹೀಗೆ ತಮ್ಮ ದೇಹ ಪೃಕೃತಿ ಮುಂದಿಟ್ಟುಕೊಂಡು ವೇಶ್ಯಾವಾಟಿಕೆಗೆ ಅನುಮತಿ ಕೇಳಿದರೆ, ಅದು ಅವರವರ ವೈಯಕ್ತಿಕ ಎಂದು ಹೊಸಬಾಳೆಯವರು ಹೇಳುತ್ತಾರ...? ಹೀಗೊಂದು ಪ್ರಶ್ನೆ ಉತ್ತರಕ್ಕಾಗಿ ಕಾಯುತ್ತಾ ಹಾಗೇ ಉಳಿದಿದೆ.
ಪೃಕೃತಿ ನಿಯಮ, ಸಮಾಜದ ಮೌಲ್ಯ ಹಾಗೂ ನಮ್ಮ ಸಂಸ್ಕೃತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳನ್ನು ನಿರ್ಬಂಧಿಸುವುದು ಅನಿವಾರ್ಯ ಹಾಗೂ ಅಗತ್ಯ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಸಮಾಜದ ಮೌಲ್ಯವನ್ನು ಉಳಿಸುವುದು ಕರ್ತವ್ಯ.
ಹೊಸಬಾಳೆಯವರ ಈ ಸಂಸ್ಕೃತಿ ವಿರೋಧಿ ಹೇಳಿಕೆ ಬಗ್ಗೆ ಸಂಘದ ಹಿರಿಯರು ದಿವ್ಯ ಮೌನ ವಹಿಸಿರುವುದು ಮತ್ತಷ್ಟು ಆಶ್ಚರ್ಯದ ಸಂಗತಿ. ಸಂಘದ ಧ್ಯೇಯೋದ್ದೇಶ ಎತ್ತ ಸಾಗುತ್ತಿದೆ? ಉತ್ತರ ಕೊಡುವವರಾರು?..
(ಲೇಖನದ ಅಭಿಪ್ರಾಯಗಳು ಲೇಖಕರದೇ ಆಗಿರುತ್ತದೆ - ಸಂ.)