Untitled Document
Sign Up | Login    
257 ನಿರಪರಾಧಿಗಳ ಜೀವಕ್ಕಿಲ್ಲದ ಬೆಲೆ ಯಾಕೂಬ್ ಗೆ ಯಾಕೆ? ಇವರು ಸೆಕ್ಯುಲರ್ ಗಳೇ? ದೇಶದ್ರೋಹಿಗಳೇ?


ಹೌದು, ಇದೊಂದು ಪ್ರಶ್ನೆ ಭಾರತೀಯರನ್ನು ಕಾಡುತ್ತಿದೆ. 1993ರ ಮುಂಬೈ ಸರಣಿ ಬಾಂಬ್ ಸ್ಪೋಟ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿದ ಯಾಕೂಬ್ ಮೆಮೋನ್ ಗೆ ಗಲ್ಲು ಶಿಕ್ಷೆಯಾಯಿತು. ಈ ಬರ್ಬರ ಕೃತ್ಯದಲ್ಲಿ 257 ಅಮಾಯಕರ ಜೀವ ಬಲಿಯಾಯಿತು ಹಾಗೂ 700ಕ್ಕೂ ಮಿಕ್ಕಿ ನಿರಪರಾಧಿಗಳು ಗಾಯಗೊಂಡರು. ಭೂಗತ ಪಾತಕಿ ದಾವೂದ್ ಇಬ್ರಾಹಿಂ ನೇತೃತ್ವದಲ್ಲಿ ನಡೆದ ಈ ಪೈಶಾಚಿಕ ಕೃತ್ಯಕ್ಕೆ ಟೈಗರ್ ಮೆಮೋನ್ ಹಾಗೂ ಅವನ ಸಹೋದರ ಯಾಕೂಬ್ ಮೆಮೋನ್ ಮುಂತಾದವರು ಸಾಥ್ ನೀಡಿದ್ದರು. ಎರಡು ದಶಕಗಳ ಸುದೀರ್ಘ ಕಾಲದ ನಂತರ ಯಾಕೂಬ್ ಗೆ ದೊರೆತ ಶಿಕ್ಷೆಯಿಂದ ಆ ಸ್ಪೋಟಗಳಲ್ಲಿ ಜೀವ ತೆತ್ತ ಆತ್ಮಗಳಿಗೆ ಕಿಂಚಿತ್ತಾದರೂ ಶಾಂತಿ ದೊರಕಿರಬಹುದು.

ಯಾಕೂಬ್ ಮೆಮೋನ್ ಗೆ ಅವನ ಹೀನ ಕೃತ್ಯಕ್ಕೆ ಟಾಡಾ ನ್ಯಾಯಾಲಯದಲ್ಲಿ ಮರಣ ದಂಡನೆ ಶಿಕ್ಷೆ ಸಿಕ್ಕಿತು. ಭಾರತದ ನಿಷ್ಪಕ್ಷಪಾತ ನ್ಯಾಯಾಂಗ ವ್ಯವಸ್ಥೆಯಲ್ಲಿ ಅವನಿಗೆ ಲಭ್ಯವಿದ್ದ ಎಲ್ಲಾ ಕಾನೂನಾತ್ಮಕ ದಾರಿಗಳನ್ನೂ ಅವನು ಹಾಗೂ ಅವನ ವಕೀಲರುಗಳು ಪ್ರಯೋಗಿಸಿದ ನಂತರವೂ ಅವನ ಶಿಕ್ಷೆ ಮಾಫಿಯಾಗಲಿಲ್ಲ. ಉಛ್ಚ ನ್ಯಾಯಾಲಯ, ಮಹಾರಾಷ್ಟ್ರದ ರಾಜ್ಯಪಾಲ, ರಾಷ್ಟ್ರಪತಿ ಸೇರಿದಂತೆ ಯಾರಿಗೂ ಅವನ ದಯಾ ಅರ್ಜಿ ಸಮ್ಮತವಾಗಲಿಲ್ಲ. ಹಾಗಾಗಿ ಅವನಿಗೆ ಮರಣ ದಂಡನೆ ಖಾಯಂ ಆಯಿತು. ಅಂದರೆ, ಆ ಪಾತಕಿಯ ಹೀನ ಕೃತ್ಯಕ್ಕೆ ಕ್ಷಮೆ ಕೊಡುವ ಬಗ್ಗೆ ಯಾರಿಗೂ ಮನವರಿಕೆಯಾಗಲಿಲ್ಲ ಎಂದಾಯಿತು. ಮರಣ ದಂಡನೆ ಯಾಕೂಬ್ ನ ದುಷ್ಕೃತ್ಯಕ್ಕೆ ಸಿಕ್ಕ ತಕ್ಕ ಶಿಕ್ಷೆ ಎಂದು ದೇಶಾದ್ಯಂತ ಅಭಿಪ್ರಾಯ ವ್ಯಕ್ತವಾಯಿತು. ಆದರೂ ಕೆಲವೊಂದು ಜನರು ಇದರ ವಿರುದ್ಧ ಅಪಸ್ವರ ಎತ್ತಿದರು. ಯಾಕೂಬ್ ನಿರಪರಾಧಿ, ಸುಪ್ರೀ ಕೋರ್ಟ್ ತೀರ್ಪು ಪಕ್ಷಪಾತದಿಂದ ಕೂಡಿದೆ, ಅವನು ಮುಸ್ಲಿಂ ಎನ್ನುವ ಒಂದೇ ಕಾರಣಕ್ಕಾಗಿ ಅವನಿಗೆ ಮರಣ ದಂಡನೆ ವಿಧಿಸಲಾಯಿತು, ಈಗಾಗಲೇ 20 ವರ್ಷಗಳಷ್ಟು ಸಮಯ ಜೈಲುವಾಸ ಅನುಭವಿಸಿದ ಯಾಕೂಬ್ ಗೆ ಮರಣ ದಂಡನೆಯಿಂದ ವಿನಾಯಿತಿ ಕೊಟ್ಟು ಅವನನ್ನು ಬಿಡುಗಡೆಗೊಳಿಸಬೇಕು ಎಂಬಿತ್ಯಾದಿ ವಾದಗಳು ಕಳೆದ ಕೆಲವು ದಿನಗಳಿಂದ ಅವ್ಯಾಹತವಾಗಿ ಕೇಳಿಬರತೊಡಗಿದವು. ಮಾಧ್ಯಮಗಳಲ್ಲಿ ನಿರಂತರವಾಗಿ ಪರ-ವಿರೋಧ ಚರ್ಚೆಗಳು ನಡೆದವು. ಯಾಕೂಬ್ ನ ಪರವಾಗಿ ಹಲವು ಸೆಕ್ಯುಲರ್ ವಾ(ವ್ಯಾ)ದಿಗಳು ಬೊಬ್ಬೆ ಹೊಡೆಯಲಾರಂಭಿಸಿದರು. ಯಾವುದೇ ಅಪರಾಧ ಮಾಡದ 257 ಜನರ ಜೀವಕ್ಕಿಲ್ಲದ ಬೆಲೆ ಒಬ್ಬ ಉಗ್ರನ ಜೀವಕ್ಕೆ ಇದೆಯೆ? ಈ ಜನರೇಕೆ ಅವನ ಪರ ವಹಿಸುತ್ತಿದ್ದಾರೆ? ಒಬ್ಬ ದೇಶದ್ರೋಹಿಯನ್ನು ಉಳಿಸಲು ಇವರೇಕೆ ಪ್ರಯತ್ನಿಸುತ್ತಿದ್ದಾರೆ? ಮುಂತಾದ ಪ್ರಶ್ನೆಗಳು ದೇಶದ ಜನರನ್ನು ಕಾಡಲಾರಂಭಿಸಿದವು.. ಹೌದು, ಯಾಕೆ ಹೀಗೆ ?..

ವೋಟ್ ಬ್ಯಾಂಕ್ ರಾಜಕೀಯ

ತುಷ್ಟೀಕರಣ ರಾಜಕಾರಣ ಎನ್ನುವುದು ಕಳೆದ 65 ವರ್ಷಗಳಿಂದ ಕಾಂಗ್ರೆಸ್ ಪೋಷಿಸಿ ಬೆಳೆಸಿದ ಒಂದು ಮಹಾ ಪಿಡುಗು. ಅಲ್ಪಸಂಖ್ಯಾತರನ್ನು, ಅದರಲ್ಲೂ ಮುಸ್ಲಿಮರನ್ನು ಕೇವಲ ವೋಟ್ ಬ್ಯಾಂಕ್ ಎಂದು ಪರಿಗಣಿಸಿದ ಕಾಂಗ್ರೆಸ್ ಹಾಗೂ ಇತರ ಕೆಲವು ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟವು. ಭಾರತದಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸಿ ರಾತೋರಾತ್ರಿ ಹೀರೋಗಳಾಗಲು ಅತ್ಯಂತ ಸುಲಭ ಮಾರ್ಗವೆಂದರೆ ಮುಸ್ಲಿಮರ ಪರವಾಗಿ ಮಾತನಾಡುವುದು ಹಾಗೂ ಹಿಂದೂಗಳ ವಿರೋಧವಾಗಿ ಸಾಧ್ಯವಾದದ್ದನ್ನೆಲ್ಲ ಮಾಡುವುದು. ಕಳೆದ ಕೆಲವು ದಶಕಗಳಲ್ಲಿ ಈ ವಾಮಮಾರ್ಗದ ಮೂಲಕ ಭಾರತದಲ್ಲಿ ಹಲವು ಸೆಕ್ಯುಲರ್ ವಾ(ವ್ಯಾ)ದಿಗಳು ಹುಟ್ಟಿಕೊಂಡಿದ್ದಾರೆ, ಮಾತ್ರವಲ್ಲ ದೇಶದ ಘನತೆ, ಭದ್ರತೆಗೇ ಅಪಾಯ ಎನ್ನುವಷ್ಟರ ಮಟ್ಟಿಗೆ ಅವರು ವಾದ ಮಾಡತೊಡಗಿದ್ದಾರೆ. ಯಾಕೂಬ್ ಮೆಮೋನ್ ವಿಚಾರದಲ್ಲಿ ಅವನ ಪರ ವಾದ ಮಾಡುತ್ತಿರುವವವರ ಮಾತುಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

ಸೆಕ್ಯುಲರ್ ಗಳ ಈ ಚಾಳಿ ಮುಂದುವರಿದು ಈಗ ಭಾರತದ ಉಛ್ಚ ನ್ಯಾಯಾಲಯದ ತೀರ್ಪನ್ನೇ ಪ್ರಶ್ನಿಸಿ ನ್ಯಾಯಾಲಯ ಮುಸ್ಲಿಮರ ವಿರೋಧಿ ಎನ್ನುವಷ್ಟರ ಮಟ್ಟಿಗೆ ಈ ರಾಜಕಾರಣಿಗಳು ಮತ್ತು ಸ್ವಘೋಷಿತ ಸೆಕ್ಯುಲರ್ ಗಳು ತಲುಪಿದ್ದಾರೆ. ಇದೊಂದು ಅತ್ಯಂತ ಅಪಾಯಕಾರಿ ಬೆಳವಣಿಗೆ. ವೋಟ್ ಗಿಟ್ಟಿಸಲು ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್ ನ ನೀತಿಯನ್ನು ಇನ್ನೂ ಅಭಿವೃದ್ಧಿಪಡಿಸಿ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಾ, ಮುಸ್ಲಿಮರನ್ನು ಪ್ರಚೋದಿಸುತ್ತಾ, ಪ್ರಚಾರಕ್ಕಾಗಿ ಸದಾ ಒಂದಲ್ಲ ಒಂದು ವಿವಾದದಲ್ಲಿ ಸಿಲುಕುತ್ತಾ ದೇಶವ್ಯಾಪಿ ತನ್ನ ಪಕ್ಷವನ್ನು ಬೆಳೆಸುವ ಅತ್ಯಂತ ಮಹತ್ವಾಕಾಂಶೆ ಹೊಂದಿರುವ ಐಎಂಎಂಐಎಂ ನ ನಾಯಕ ಹಾಗೂ ಹೈದರಾಬಾದ್ ನ ಸಂಸದ ಅಸದುದ್ದೀನ್ ಓವೈಸ್ವಿ ಮುಂದುವರಿದು, ಯಾಕೂಬ್ ಗೆ ಗಲ್ಲು ಶಿಕ್ಷೆ ನೀಡಿರುವುದನ್ನು ಖಂಡಿಸಿ ಅವನೊಬ್ಬ ಮುಸ್ಲಿಂ ಎನ್ನುವ ಕಾರಣಕ್ಕಾಗಿ ಅವನಿಗೆ ಗಲ್ಲು ಶಿಕ್ಷೆ ನೀಡಲಾಗಿದೆ ಎಂದಿರುವುದು ನಮ್ಮ ದೇಶದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ.

ಮಾತ್ರವಲ್ಲ, ಇಂಥವರು ದೇಶದ ಭದ್ರತೆಗೆ, ಅಖಂಡತೆಗೆ ಉಂಟುಮಾಡಬಹುದಾದ ಸಮಸ್ಯೆಗಳನ್ನು ನೆನೆದರೆ ಆತಂಕವಾಗುತ್ತದೆ. ಇವರಿಗೆ ಭಾರತದ ನ್ಯಾಯ ವ್ಯವಸ್ಥೆಯಲ್ಲೇ ನಂಬಿಕೆ ಇಲ್ಲ ಎನ್ನುವುದಾದರೆ ಇಂಥವರ ಮಾತುಗಳನ್ನು ನಂಬಿ ಅವರನ್ನು ಹಿಂಬಾಲಿಸುವ ಲಕ್ಷಾಂತರ ಜನರು, ಅದರಲ್ಲೂ ಮುಸ್ಲಿಮರು ಭಾರತದ ಕಾನೂನು, ಪೊಲೀಸ್ ಹಾಗೂ ನ್ಯಾಯಾಂಗದಲ್ಲಿ ಯಾವ ಭರವಸೆ ಇಟ್ಟುಕೊಂಡಾರು?

ಇಂಥ ದೇಶ ವಿರೋಧಿ ನಾಯಕರಿಗೆ ಸೊಪ್ಪು ಹಾಕುತ್ತಾ ಅಂಥದ್ದೇ ಹೇಳಿಕೆ ನೀಡುವ, ಯಾಕೂಬ್ ನ ಶಿಕ್ಷೆಯನ್ನು ವಜಾಗೊಳಿಸಲು ವಾದಿಸುತ್ತಿರುವ ಇತರ 'ಸೆಕ್ಯುಲರ್' ವಾದಿಗಳೂ ದೇಶಕ್ಕೆ ಯಾವ ಸಂದೇಶ ನೀಡುತ್ತಿದ್ದಾರೆ? ಇವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಇವರು ಮುಂದೆ ಇನ್ನೆಷ್ಟು ಗಂಭೀರ ಸಮಸ್ಯೆಗಳನ್ನು ತಂದೊಡ್ಡಿಯಾರು? ಭಾರತದ ನ್ಯಾಯ ವ್ಯವಸ್ಥೆಯೇ ಸರಿ ಇಲ್ಲ, ಅದು ಮುಸ್ಲಿಂ ವಿರೋಧಿ ಎನ್ನುವ ಇವರು ವಿಶ್ವದ ಎದುರು ಭಾರತ ಹಾಗೂ ಭಾರತದ ನ್ಯಾಯಾಂಗವನ್ನು ಅವಮಾನಿಸುತ್ತಿರುವುದು ದೇಶದ್ರೋಹಿ ಕೆಲಸವಲ್ಲವೇ? ಮಾತೆತ್ತಿದರೆ ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ ಎಂದು ಬೊಬ್ಬೆ ಹೊಡೆಯುವ ಇಂಥ ಖದೀಮರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ಅಪರಾಧಿಗಳ, ಅದರಲ್ಲೂ ಮುಸ್ಲಿಂ ಅಪರಾಧಿಗಳ ವಿರುದ್ಧ ತೀರ್ಪು ಕೊಡಲು ನ್ಯಾಯಾಲಯಗಳು ಹಿಂದೇಟು ಹಾಕಬಹುದಾದ ವಾತಾವರಣ ಸೃಷ್ಠಿಯಾಗಬಹುದಲ್ಲವೆ? ಇದು ಎಂಥಹಾ ಅಪಾಯಕಾರಿ ಬೆಳವಣಿಗೆ ಅನ್ನಿಸುವುದಿಲ್ಲವೆ? ಅಷ್ಟಕ್ಕೂ ಈ ದೇಶ ವಿರೋಧಿಗಳಿಗೆ ಕೇವಲ ಅಫ್ಝಲ್ ಗುರು, ಯಾಕೂಬ್ ಮೆಮೋನ್ ನಂಥ ದೇಶದ್ರೋಹಿಗಳ ಮೇಲಷ್ಟೇ ಯಾಕೆ ಮಮತೆ, ಕನಿಕರ? ಅವರ ಹೇಯ ಕೃತ್ಯಗಳಿಂದ ಮಡಿದ ನೂರಾರು ಅಮಾಯಕರ ಮೇಲೆ ಯಾಕೆ ಕರುಣೆ ಬರುವುದಿಲ್ಲ? ಯಾಕೆಂದರೆ, ಅವರ ಬಗ್ಗೆ ಮಾತನಾಡಿದರೆ ವೋಟ್ ಸಿಗುವುದಿಲ್ಲ, ಜನರ ಭಾವನೆಗಳನ್ನು ಕೆರಳಿಸಲಾಗುವುದಿಲ್ಲ, ಹಾಗೂ ಬಿಟ್ಟಿ ಪ್ರಚಾರ ದೊರಕುವುದಿಲ್ಲ, ಅಲ್ಲವೆ?.

ಬಹುಶಃ ಸಂವಿಧಾನ ನೀಡಿರುವ 'ಸ್ವಾತಂತ್ಯ್ರ' ಕ್ಕೂ 'ಸ್ವೇಛ್ಚೆ' ಗೂ ವ್ಯತ್ಯಾಸ ತಿಳಿಯದ, ಅಥವಾ ತಿಳಿದರೂ ತಿಳಿಯದಂತೆ ನಟಿಸಿ ಅದರ ದುರುಪಯೋಗ ಮಾಡಿ ತಾವು ಏನೇ ಹೇಳಿದರೂ 'ವಾಕ್ ಸ್ವಾತಂತ್ರ್ಯ' ಎಂಬ ಕಾರಣ ಕೊಟ್ಟು ಪಾರಾಗುವ ದೇಶದ್ರೋಹಿಗಳನ್ನು ಜೈಲಿಗಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ ಅನಿಸುತ್ತಿದೆ. ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಪ್ರಥಮ ಹಕ್ಕು ಎಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ, ಅಥವಾ, ಈವರೆಗೂ ನಿಜಾರ್ಥದಲ್ಲಿ ಸೆಕ್ಯುಲರ್ ಎಂದು ಕರೆಸಿಕೊಂಡ ಭಾರತದ ಸೇನೆಯಲ್ಲಿ ಮುಸ್ಲಿಮರೆಷ್ಟಿದ್ದಾರೆ ಎಂದು ಗಣತಿ ಮಾಡಹೊರಟ ಕಾಂಗ್ರೆಸ್ ಸರಕಾರದ ಉದ್ದೇಶಗಳು ಕೇವಲ ವೋಟ್ ಗಿಟ್ಟಿಸುವುದಷ್ಟೆ ಆಗಿತ್ತು. ಆದರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯ ಹೊರಟ ಓವೈಸ್ವಿಯಂಥವರು ಹಾಗೂ ಸೆಕ್ಯುಲರ್ ವಾದಿಗಳು ಕಾಂಗ್ರೆಸ್ಸಿನ ಓಲೈಕೆ ನೀತಿಯನ್ನು ಅಪಾಯಕಾರಿ ಮಟ್ಟಕ್ಕೆ ಕೊಡೊಯ್ಯುತ್ತಿರುವುದು ದೇಶಕ್ಕೆ ಆತಂಕದ ವಿಚಾರ ಎನ್ನುವುದು ಖಂಡಿತ.

ಈ ದೇಶವಿರೋಧಿ ತಂಡದೊಂದಿಗೆ ಮರಣ ದಂಡನೆ ಎಂಬ ಶಿಕ್ಷೆಯನ್ನೇ ರದ್ದುಗೊಳಿಸಿ ಎಂಬ ಇನ್ನೊಂದು ಪಟಲಾಂ ಸಹ ಸೇರಿಕೊಂಡಿದೆ. ಇವರ ವಾದ ಇನ್ನಷ್ಟು ಹಾಸಾಸ್ಪದ ಮತ್ತು ಅವರು ತಮ್ಮ 'ಬುದ್ಧಿ'ಯನ್ನು ಎಲ್ಲಿ ಅಡವಿಟ್ಟುಕೊಂಡು ಮಾತನಾಡುತ್ತಿದ್ದಾರೆ ಎಂಬ ಸಂಶಯ ಬರುವಂತೆ ಇರುತ್ತದೆ. ನೂರಾರು ಅಮಾಯಕರನ್ನು ಹತ್ಯೆಗೈದ ಉಗ್ರನಿಗೂ ಮರಣ ದಂಡನೆ ಕೊಡಬಾರದಂತೆ. ತೆರಿಗೆ ಕೊಟ್ಟ ಜನರ ದುಡ್ಡಿನಲ್ಲಿ ಅಂಥ ಪಾತಕಿಗಳನ್ನು ಜೈಲಿನಲ್ಲಿ ಕೂಡಿಟ್ಟು ಸಾಕಬೇಕು ಎಂಬುದು ಅವರ ವಾದ!. ಈ ಪಾತಕಿಗಳು ಸಾಯಿಸಿದ ನಿರಪರಾಧಿಗಳ ಕುಟುಂಬದ ಸದಸ್ಯರ ಬೇಗುದಿ ಅವರಿಗೆ ಅರ್ಥವಾಗುವುದಿಲ್ಲ. ಇಂಥಹ ಒಂದು ವರ್ಗವೂ ದೇಶದಲ್ಲಿ ತಲೆ ಎತ್ತಿದೆಯಲ್ಲ ಎಂಬ ದುಗುಡವೂ ನಮ್ಮನ್ನು ಕಾಡದೆ ಇರುವುದಿಲ್ಲ.

ಇನ್ನೊಂದು ಆತಂಕದ ವಿಚಾರವೆಂದರೆ, ಯಾರೋ ಒಬ್ಬ ರಾಜಕಾರಣಿ ದೇಶವಿರೋಧಿ ಹೇಳಿಕೆ ಕೊಟ್ಟರೆ ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿ, ಪ್ರಚಾರದ ಅವಕಾಶಕ್ಕಾಗಿ ಕಾದುಕುಳಿತಿರುವ ಸೆಕ್ಯುಲರ್ ಗಳನ್ನೂ ಕೂರಿಸಿಕೊಂಡು ವಾರಗಟ್ಟಲೆ ಟಿವಿಯಲ್ಲಿ ಚರ್ಚೆ ನಡೆಸಿ ಅಂಥ ನಾ(ಲಾ)ಯಕರಿಗೆ ದೇಶವ್ಯಾಪಿ ಪ್ರಚಾರ ಕೊಡುವ ಮಾಧ್ಯಮೆಗಳ ಪಾತ್ರವೂ ಇದರಲ್ಲಿ ಸೇರಿಲ್ಲವೆ?

ಹಾಗಾದರೆ ಇವರಿಗೆ ಗಂಟೆ ಕಟ್ಟುವವರಾರು?..

 

Author : ಸಮಚಿತ್ತ 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited