Untitled Document
Sign Up | Login    
'ಸ್ವಂತ'ದ್ದೆಲ್ಲವನ್ನೂ ತ್ಯಜಿಸಿ ಬಂದವರೇ 'ಸಂತ'ರು - ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

ಸಂತ ಸಮಾಜದ ಉದ್ಘಾಟನೆ

ಬೆಂಗಳೂರಿನ ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸಹಸ್ರ ಸಂತ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷರಾದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಸಂತರನ್ನುದ್ದೇಶಿಸಿ ಮಾತನಾಡಿದರು. ಅದರ ಕೆಲವು ಮುಖ್ಯ ತುಣುಕುಗಳು ನಿಮಗಾಗಿ..

ಆಗಮಿಸಿದ ಎಲ್ಲ ಸಂತರೊಳಗಿನ ಭಗವಂತನಿಗೆ ಪ್ರಣಾಮಗಳು. ನಮ್ಮೆಲ್ಲರ ಪರಂಪರೆ ಬೇರೆ ಬೇರೆ ಆಗಿರಬಹುದು ಆದರೆ, ನಮ್ಮಲ್ಲಿನ ಸಂತತನದ ಕಾರಣದಿಂದ ನಾವೆಲ್ಲಾ ಸಹೋದರರು! ಇಲ್ಲಿ ನಾವೆಲ್ಲಾ ಸಮಾನ ಆಸನದಲ್ಲಿ ಕುಳಿತಿದ್ದೇವೆ! ಸಂತರು ಎಂದಿಗೂ ಸ್ವಂತಕ್ಕಾಗಿ ಸೇರುವುದಿಲ್ಲ. ಸಂತರು ಇಂದು ಸಂತರಿಗಾಗಿ, ಸಂತ ಕುಲದ ಉಳಿವಿಗಾಗಿ ಸೇರಿದ್ದಾರೆ!

"ಸಂತ"ರಾಗಲು "ಸ್ವಂತ"ದ್ದೆಲ್ಲವನ್ನೂ ತ್ಯಜಿಸಿ ಬಂದಿದ್ದೇವೆ. ಸಂತರಾದವರು ಸರ್ವವನ್ನೂ ತ್ಯಜಿಸಿ ಸಮಾಜಕ್ಕಾಗಿ ಬಂದಿರುತ್ತಾರೆ! ನಮ್ಮದೇ ಉದಾಹರಣೆ ತೆಗೆದುಕೊಂಡರೆ "ಆತ್ಮಶ್ರಾದ್ಧ" ಮಾಡಿಕೊಂಡು ಇಲ್ಲಿ ಬಂದಿದ್ದೇವೆ. ಆದರೆ ಸಮಾಜ ಅಥವಾ ವ್ಯವಸ್ಥೆಯಿಂದಲೇ ಸಂತರಿಗೆ ತೊಂದರೆಯಾದರೆ ಯಾರಲ್ಲಿ ಹೇಳಿಕೊಳ್ಳುವುದು? ಸಮಾಜವೇ ಪೀಡಿಸಿದರೆ ನಾವೆಲ್ಲಿ ಹೋಗಬೇಕು?

ಸಂತರಿಲ್ಲದಿದ್ದರೆ...? ಸಂತರು ಭಾರತವನ್ನು ಬೆಳಗಿದವರು. ಸಂತರಿಲ್ಲದಿದ್ದರೆ ವೇದ, ಉಪನಿಷತ್ತು, ಪುರಾಣಗಳು, ಭಾಗವತ, ರಾಮಾಯಣ, ಮಹಾಭಾರತ, ಖಗೋಳ, ಜ್ಯೋತಿಷ್ಯ, ಯೋಗ, ಆಯುರ್ವೇದ ಯಾವುದೂ ಇರುತ್ತಿರಲಿಲ್ಲ! ಮಹಾಪುರುಷರುಗಳಾದ ರಾಮ, ಕೃಷ್ಣ, ಶಿವಾಜಿ, ವಿವೇಕಾನಂದರು ಮುಂತಾದವರ ಹಿಂದೆಯೂ ಒಬ್ಬರಲ್ಲ ಒಬ್ಬ ಸಂತರಿದ್ದಾರೆ!

ಕಂಚಿಯ ಶಂಕರಾಚಾರ್ಯರ ಮೇಲೆ ಮಿಥ್ಯಾರೋಪ ಬಂದಾಗ ಕಿರಿಯವರನ್ನು 1 ತಿಂಗಳು ಮತ್ತು ಹಿರಿಯರನ್ನು 2 ತಿಂಗಳು ಬಂಧನದಲ್ಲಿಟ್ಟರು! 9 ವರ್ಷಗಳ ಹೋರಾಟದ ಬಳಿಕ ನ್ಯಾಯ ಸಿಕ್ಕಿತು... ಅದೂ ಪಕ್ಕದ ರಾಜ್ಯದಲ್ಲಿ!! ಆದರೆ ಅವರಿಗಾದ ಮಾನಹಾನಿಯನ್ನು ತುಂಬಿಕೊಡುವವರು ಯಾರು? ಜೈನ ಮುನಿ ಲೋಕೇಂದ್ರ ವಿಜಯ್ ಮೇಲೆ ಹುಸಿ ಅತ್ಯಾಚಾರ ಆರೋಪ ಮಾಡಿ ಬಂಧಿಸಲಾಯ್ತು, ಅವಮಾನಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡರು! ಆದರೆ ನ್ಯಾಯಾಲಯವು ಅದು ಹುಸಿ ಆರೋಪ ಎಂದು ಘೋಷಿಸಿದಾಗ ಅವರ ಪ್ರಾಣವನ್ನು ಯಾರು ತಂದುಕೊಟ್ಟರು? ಸಾವಿಗೆ ಕಾರಣವಾದವರಿಂದ ಜೀವ ಮರಳಿಸಲು ಸಾಧ್ಯವೇ?

ಆಂದೋಲ ಸ್ವಾಮಿಗಳು ನಮ್ಮ ವಿಷಯವನ್ನು ಉದಾಹರಿಸಿದ್ದಕ್ಕಾಗಿ ನಾವು ಹೇಳಲೇಬೇಕಾಗಿದೆ.. ಏನಾಯಿತು...? ಪುರಾತನ ಗೋಕರ್ಣ ದೇವಾಲಯವು ದುಸ್ಥಿತಿಯಲ್ಲಿದ್ದಾಗ, ಪರಂಪರೆಯಲ್ಲಿ ಇದು ನಿಮಗೆ ಸೇರಿದ್ದು, ನಿರ್ವಹಿಸುತ್ತೀರಾ ಎಂದು ಸರಕಾರವೇ ಕೇಳಿದಾಗ ಅದನ್ನು ಸವಾಲಾಗಿ ಸ್ವೀಕರಿಸಿದೆವು! ನಾವಾಗಿ ಮಠಕ್ಕೆ ಕೊಡಿ ಎನ್ನಲಿಲ್ಲ. ಮೊದಲು ದೇವಾಲಯವನ್ನು ಮಠದ ನೂರಾರು ಕಾರ್ಯಕರ್ತರು ಹತ್ತು ದಿನಗಳ ಕಾಲ ಸ್ವಚ್ಚ ಮಾಡಿದರು! ಅಷ್ಟು ಮಾಲಿನ್ಯ ಇತ್ತು! ಮೊದಲು ಅಲ್ಲಿ ಭಕ್ತರ ಸುಲಿಗೆ ಆಗುತ್ತಿತ್ತು, ಒಂದು ಹುಟ್ಟು ನೀರಿನ ಸೌಲಭ್ಯ ಇರಲಿಲ್ಲ! ಈಗ ಅಲ್ಲಿ ಎರಡು ಹೊತ್ತಿನ ಉಚಿತ ಊಟದ ವ್ಯವಸ್ಥೆಯಿದೆ! ವೀರಶೈವ ಪರಂಪರೆಯ ಸಂತರು ಈಗ ಅವರ ನಿಲುವಂಗಿ ಧರಿಸಿಯೇ ಹೋಗಿ ಆತ್ಮಲಿಂಗಕ್ಕೆ ಪೂಜಿಸಿ ಬರಬಹುದು! ದಲಿತರೂ ಸೇರಿದಂತೆ ಎಲ್ಲರಿಗೂ ಒಳಗೆ ಹೋಗಿ ಪೂಜಿಸಬಹುದು! ಮೊದಲು ಅದಕ್ಕೆ ಅವಕಾಶ ಇರಲಿಲ್ಲ! ಈ ಎಲ್ಲ ಬದಲಾವಣೆಗಳು ಎಲ್ಲಿಂದ ಬಂತು?

ಇದರ ಪರಿಣಾಮ ಮಠದ ಮೇಲೆ ನಿರಂತರ ಷಡ್ಯಂತ್ರ ! ಮೊದಲು, ದೇವಾಲಯವನ್ನು ತೆಗೆದುಕೊಂಡಿದ್ದಕ್ಕೆ ಲೆಕ್ಕವಿಲ್ಲಷ್ಟು ಕೇಸ್ ಗಳು, ಮಾಧ್ಯಮಗಳಲ್ಲಿ ಅಪಪ್ರಚಾರ.. ಅದಕ್ಕೂ ಜಗ್ಗದಾದಾಗ ಮಠದ ಕಾರ್ಯಕರ್ತನಿಗೆ ಹಾಡಹಗಲೇ ನಡುರಸ್ತೆಯಲ್ಲಿ ಬೆಂಕಿ ಹಚ್ಚಲಾಯ್ತು! ಪ್ರಕರಣ ಇನ್ನೂ ಇದೆ. ಮುಂದೆ...? ನಮ್ಮದೇ ತದ್ರೂಪಿಯನ್ನು ತಯಾರಿಸಿ ನಕಲಿ ಅಶ್ಲೀಲ ಸಿಡಿ ರಚಿಸಿ ಮಾನ ಕಳೆವ ಯತ್ನ! ಆಧಾರ ಸಮೇತ ಅವರನ್ನು ಹಿಡಿಯಲಾಯ್ತು. ನ್ಯಾಯಾಲಯ ಒಟ್ಟೂ 9 ಬಾರಿ ಆರೋಪಿಗಳ ವಿರುದ್ಧ ತೀರ್ಪಿತ್ತಿದೆ! ಆದರೆ ಸೂಕ್ತ ಸಾಕ್ಷಾಧಾರಗಳಿದ್ದರೂ, ಕಾನೂನು ಸಲಹೆಗಾರರು, ಪೋಲಿಸ್ ಅಧಿಕಾರಿಗಳು ಇವರೆಲ್ಲರ ಸಲಹೆಗಳನ್ನು ಗಾಳಿಗೆ ತೋರಿದ ಸರ್ಕಾರ ಪ್ರಕರಣವನ್ನೇ ಹಿಂಪಡೆಯ ಹೊರಟಿದೆ! ಸರಕಾರವೇ ದುಷ್ಟ ರಕ್ಷಣೆ ಮಾಡುತ್ತಿದೆ!

ಇಷ್ಟಕ್ಕೇ ಮುಗಿಯಿತು ಅಂದುಕೊಂಡರೆ ಮುಂದೆ ಮಠವನ್ನೇ ವಶಪಡಿಸಿಕೊಳ್ಳುವ ಷಡ್ಯಂತ್ರ! ಮಠ ಬಿಟ್ಟು ಹೋಗಿ ಇಲ್ಲವೇ ಅತ್ಯಾಚಾರ ಆರೋಪ ಮಾಡಿ ಜೈಲಿಗಟ್ಟುತ್ತೇವೆ ಎಂದರು! ಆಗ ನಾವು ಹೆದರಲಿಲ್ಲ, ಮಠವನ್ನು ಹದ್ದು, ಕಾಗೆಗಳ ಕೈಯಲ್ಲಿ ಕೊಟ್ಟು ಹೋಗಲು ಶಂಕರಾಚಾರ್ಯರು ಹೇಳಿಲ್ಲ!! ಮಠವೇ ಈ ಷಡ್ಯಂತ್ರವನ್ನು ಬೆಳಕಿಗೆ ತಂದಿತು. ಮಠದ ಕಾರ್ಯಕರ್ತರೇ ಬ್ಲಾಕ್ ಮೇಲ್ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿದರು. ಅದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ದೊರೆತು ತಪ್ಪಿತಸ್ಥರ ಬಂಧನವಾಯ್ತು! ಆಗ ಬಂದಿದ್ದು ಈ ಪ್ರತ್ಯಾರೋಪ! ಆಧಾರ ಇರುವ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ; ಆದರೆ ಏನೂ ಇಲ್ಲದ್ದು ಬ್ರಹ್ಮಾಂಡ ಪ್ರಚಾರ ಪಡೆಯುತ್ತದೆ. ಎಂಥವರಿಗಾದರೂ ಸುಳ್ಳು ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಆದರೆ ಯಾರಿಗೆ ಗೊತ್ತಾಗಬೇಕೋ ಅವರಿಗೆ ಗೊತ್ತಾಗುವುದಿಲ್ಲ!

ರಾಜಕಾರಣಿಗಳ ಮೇಲೆ ಸಾಕ್ಷ್ಯಾಧಾರಗಳು ಇದ್ದರೂ ಪ್ರಕರಣ ಬಿದ್ದುಹೋಗುತ್ತದೆ. ಆದರೆ ಸಂತರಾದ ಕಾರಣ ಇನ್ನೂ ನಡೆಯುತ್ತಿದೆ. ದೇಶದೆಲ್ಲೆಡೆ ನಡೆಯುತ್ತಿರುವ ಸಂತರ ಮೇಲಿನ ದಾಳಿಗೆ ಕೊನೆ ಯಾವಾಗ? ಕಂಚಿ ಶಂಕರಾಚಾರ್ಯರು, ರಾಜಸ್ಥಾನದ ಜೈನ ಮುನಿ ಲೋಕೇಂದ್ರ ವಿಜಯ್, ಬಾಬಾ ರಾಮದೇವ್, ಆಸಾರಾಂ ಬಾಪೂ, ಮಾತಾ ಅಮೃತಾನಂದಮಯೀ, ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್.... ಇನ್ನೆಷ್ಟು ಸಂತರ ಮೇಲೆ ದಾಳಿಗಳಾಗಬೇಕು?

ಸಹಸ್ರ ಸಂತ ಸಂಗಮದಲ್ಲಿ ಮಾತನಾಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು
ಷಡ್ಯಂತ್ರದ ವಿರುದ್ಧದ ಎರಡು ವರ್ಷಗಳ ಸುದೀರ್ಘ ಸಮರದ ನಂತರ ಇಂದು ಸುಸ್ಥಿತಿಯಲ್ಲಿದ್ದೇವೆ! ಯಾವುದೇ ರಾಜಕೀಯ ಪಕ್ಷ ಅಥವಾ ಇನ್ನಾವುದೇ ಮಠದಿಂದ ಯಾವುದೇ ಸಹಾಯ ಪಡೆಯದೇ ಏಕಾಂಗಿಯಾಗಿ ನಮ್ಮ ಸಮರವನ್ನು ನಾವೇ ಗೆಲ್ಲಬೇಕೆಂಬುದು ನಮ್ಮ ಸಂಕಲ್ಪವಾಗಿತ್ತು... ಈಗ ನಿರ್ಣಾಯಕ ಹಂತದಲ್ಲಿ ಇದ್ದೇವೆ! ಆದರೆ ಈ ಕಾಲಘಟ್ಟದಲ್ಲಿ ನಮ್ಮನ್ನು ಉದ್ದಕ್ಕೂ ಕಾಡಿದ ಪ್ರಶ್ನೆ.. ಒಬ್ಬ ಸಾಮಾನ್ಯ ಸಂತನಿಗೆ/ಮಠಕ್ಕೆ ಈ ಪರಿಸ್ಥಿತಿ ಬಂದರೆ ಅವರ ಗತಿಯೇನು? ಸಣ್ಣ ದೊಡ್ಡ ಎಂಬುದನ್ನು ಪರಂಪರೆ ಅಥವಾ ವಯಸ್ಸಿನ ದೃಷ್ಟಿಯಿಂದ ಹೇಳುತ್ತಿಲ್ಲ, 'ಪ್ರಸಿದ್ಧಿ ಮತ್ತು ಪ್ರಭಾವ'ದ ದೃಷ್ಟಿಯಿಂದ! ಎಷ್ಟೋ ಸಂತರು ಅವಮಾನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

ನಮ್ಮ ನಾಡಿನಲ್ಲಿ ಧರ್ಮ ರಕ್ಷಣೆಗಾಗಿಯೇ ಕೆಲವು ವ್ಯವಸ್ಥೆಗಳಿವೆ. ಆದರೆ ಅವು ರಕ್ಷಣೆಗೆ ಬರುತ್ತವೆ ಅಂದುಕೊಳ್ಳಬೇಡಿ! ಆ ಭ್ರಮೆ ಖಂಡಿತಾ ಬೇಡ! ಸಂತರ ಮೇಲೆ ಆಕ್ರಮಣವಾದಾಗ ಅಂಥವರಾರೂ ಸಹಾಯಕ್ಕೆ ಬರುವುದಿಲ್ಲ! ಒಂದು ವೇಳೆ ಅಂತಹ ವ್ಯವಸ್ಥೆ ಇದ್ದಿದ್ದರೆ ಈ ಕಾಲಾವಧಿಯಲ್ಲಿ ನಮಗೇ ತಿಳಿಯುತ್ತಿತ್ತು! ಅಂತಹ ವ್ಯವಸ್ಥೆಯನ್ನು ನಾವು ಕಟ್ಟೋಣ! ಉತ್ತರ ಭಾರತದಲ್ಲಿ "ಸಂತೊಂಕೋ ಸತಾಯೇ... ಹಮೇ ಬತಾಯೇ...!" ಎಂಬ ವ್ಯವಸ್ಥೆ ಇದೆ. ಇಲ್ಲಿಯೂ ಅಂತದ್ದನ್ನು ಹುಟ್ಟುಹಾಕೋಣ ! ಯಾವುದೇ ಸಂತರಿಗೆ ಸಂಕಷ್ಟ ಬಂದರೆ ಅವರಿಗೆ ಬೆಂಬಲವಾಗಿ ನಿಲ್ಲುವ ವ್ಯವಸ್ಥೆ ನಿರ್ಮಿಸೋಣ! ಇದು ಒಂದು ದಿನದ ಕಾರ್ಯಕ್ರಮ ಅಲ್ಲ.. ವರ್ಷಪೂರ್ತಿ ಹರಿಯುವ 'ಗಂಗಾಪ್ರವಾಹ'ವಾಗಲಿ! ಖಂಡಿತವಾಗಿಯೂ ಇದು ಯಾರದೋ ಸ್ವಂತಕ್ಕಲ್ಲ. ನಮಗೆ ಆದಂತೆ ಇನ್ನಾರಿಗೂ ಆಗಬಾರದು ಎಂಬುದಕ್ಕಾಗಿ!

ನಾವು ವಕೀಲರಿಗೆ ಫೀಸ್ ಕೊಟ್ಟಿದ್ದರೆ ಮಠವನ್ನು ಅಡವಿಡಬೇಕಿತ್ತು! ಆದರೆ ನಮ್ಮ ವಕೀಲರ ತಂಡ ಒಂದು ರೂಪಾಯಿಯ "fees" ಕೂಡ ತೆಗೆದುಕೊಳ್ಳದೆ "peace"ಗಾಗಿ ಕೆಲಸ ಮಾಡಿದ್ದಾರೆ! ಅಂಥವರ ಗುರುತಿಸಿ, ಅವರು ಸಂತರಿಗೆ ಉಚಿತ ಕಾನೂನಾತ್ಮಕ ಸಲಹೆ ಕೊಡುತ್ತಾರೆ. ಸಮಾಜದ ಪ್ರತಿಯೊಂದು ವಿಭಾಗದಲ್ಲಿರುವ ಸಜ್ಜನರನ್ನು ಸೇರಿಸಿ ಒಂದು ವ್ಯವಸ್ಥೆಯನ್ನು ಕಟ್ಟೋಣ! ಎಲ್ಲವು ಸಂತರ, ತನ್ಮೂಲಕ ಸಮಾಜದ ರಕ್ಷಣೆಗಾಗಿ!

ಸಂತರೆಲ್ಲಾ ಸೇರಿ ಸಂತರ ರಕ್ಷಣೆ ಮಾಡಿಕೊಳ್ಳಬೇಕು! ಇಂತಹ ಮಹಾ ಷಡ್ಯಂತ್ರವನ್ನೇ ನಾವು ಏಕಾಂಗಿಯಾಗಿ ಎದುರಿಸಿ ಸಫಲರಾಗಿರುವ ಉದಾಹರಣೆ ಇರುವಾಗ ಎಲ್ಲರೂ ಜೊತೆ ಸೇರಿದರೆ ಎಂತಹ ಸಮಸ್ಯೆಯನ್ನಾದರೂ ಹೂವೆತ್ತಿದಂತೆ ನಿವಾರಿಸಬಹುದು! ನಾವೆಲ್ಲಾ ನಮ್ಮ ಹಿರಿಯರಷ್ಟು ಜ್ಞಾನಿಗಳಲ್ಲ.. ಆದರೆ ನಮ್ಮ ವಿಶೇಷ ಎಂದರೆ ನಾವು ಹೀಗೆ ಒಂದೆಡೆ ಸೇರುತ್ತೇವೆ! ಎಲ್ಲ ಸಂತರೂ ದೇವರಂತೆ ಬಂದಿದ್ದೀರಿ.. ಸಂತರೆಲ್ಲ ಜ್ಯೋತಿಗಳಂತೆ... ಎಲ್ಲ ಜೊತೆಯಾಗಿ ಸೇರಿ ಇಡೀ ಭಾರತವನ್ನೇ, ವಿಶ್ವವನ್ನೇ ದೀಪಾವಳಿ-ದೀಪೋತ್ಸವವನ್ನಾಗಿಸೋಣ! ಆ ಮೂಲಕ ಎಲ್ಲೆಡೆ ಒಳಿತು ತುಂಬಲಿ, ಕೆಡುಕು ದೂರವಾಗಲಿ!

 

Author : ಸತ್ಯದರ್ಶಿ ತಂಡ 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited