Untitled Document
Sign Up | Login    
ಸಂತರು ಒಗ್ಗಟ್ಟಾದರೆ ದೇಶ ಉಳಿದೀತು


ಕಾಲವೊಂದಿತ್ತು.. ದೇಶವಾಳುವ ಅರಸರಿಗೆ, ಚಕ್ರವರ್ತಿಗಳಿಗೆ ಸಂತರು, ಋಷಿ-ಮುನಿಗಳು ಧರ್ಮಾಧಾರಿತ ಆಢಳಿತಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು. ದಶರಥ, ರಾಮರಿಗೆ ವಸಿಷ್ಠರು, ವಿಶ್ವಾಮಿತ್ರರು ಇದ್ದರು. ಪಾಂಡವರಿಗೆ ವಿಶ್ವಗುರು ಶ್ರೀಕೃಷ್ಣ ದೊರಕಿದ. ಚಂದ್ರಗುಪ್ತ ಮೌರ್ಯನಿಗೆ ಚಾಣಕ್ಯರು, ವಿಜಯನಗರ ಸಾಮ್ರಾಜ್ಯ ಸ್ಥಾಪಿಸಲು ಹಕ್ಕ ಬುಕ್ಕರಿಗೆ ವಿದ್ಯಾರಣ್ಯರು, ಛತ್ರಪತಿ ಶಿವಾಜಿಗೆ ಸಮರ್ಥ ರಾಮದಾಸರು.. ಹೀಗೆ ಭರತಖಂಡದಲ್ಲಷ್ಟೇ ಅಲ್ಲ, ಚಕ್ರವರ್ತಿ ಅಲೆಗ್ಸಾಂಡರನಿಗೂ ಅರಿಷ್ಟಾಟಲ್ ನಂಥ ಗುರು ಸಿಕ್ಕಿದ್ದ. ಸರಿ-ತಪ್ಪು, ಒಳಿತು-ಕೆಡುಕುಗಳನ್ನು ವಿಶ್ಲೇಷಿಸಿ ನ್ಯಾಯ ಮಾರ್ಗದಲ್ಲಿ ಸಾಗುವ ದಾರಿ ತೋರುವುದೇ ಧರ್ಮದ ಉದ್ದೇಶವಾಗಿತ್ತು. ಆದರೆ ನಾಗರಿಕತೆ ಮುಂದುವರಿಯುತ್ತ ಬರುತ್ತಿದ್ದಂತೆ ಪ್ರಜಾಪ್ರಭುತ್ವ ಎಂಬ ವ್ಯವಸ್ಥೆ ಜಾರಿಗೆ ಬಂತು. 'ಧರ್ಮ' ಎಂಬ ಪದದ ಅರ್ಥ ವಿಕೃತಗೊಂಡಿತು. ಅದು ಪಶ್ಚಿಮದಿಂದ ಆಮದಾದ 'ರಿಲಿಜನ್' ಎಂಬ ಅನರ್ಥಕ್ಕೆ ತಿರುಗಿತು.

ಅಲ್ಲಿಗೆ, ಆಳುವವರಿಗೆ ಗುರು, ಸಂತರ ಅವಶ್ಯಕತೆ ತೀರಿತು. ಸಂತರು ಮಠ-ಮಾನ್ಯಗಳಿಗೆ ಸೀಮಿತಗೊಂಡರು. ಆಳುವವರು ಸ್ವಚ್ಚಂದವಾಗಿ, ತಮ್ಮನ್ನು ಚುನಾಯಿಸಿದ ಜನರನ್ನೇ ಮೆಟ್ಟಿ ನಿಂತು ಮನಸೋ ಇಛ್ಚೆ ಆಳಲಾರಂಭಿಸಿದರು. 'ಧರ್ಮ' ಎಂಬ ನೀತಿ ಸಂಹಿತೆಯ ಮಹಾನ್ ಸಂವಿಧಾನ ಕಾನೂನು, ಕೋರ್ಟು-ಕಟ್ಲೆಗಳ ರೂಪ ಪಡೆದುಕೊಂಡಿತು. ಅಲ್ಲಿಗೆ ಧರ್ಮ ಕುಲಗೆಟ್ಟು ಹೋಯಿತು. ಅಧರ್ಮ ತಲೆ ಎತ್ತಿ ರಾರಾಜಿಸತೊಡಗಿತು. ಒಟ್ಟಾರೆ ದೇಶದ ಚಾರಿತ್ರ್ಯವೇ ಬದಲಾಗತೊಡಗಿತು. ಸಂಸ್ಕಾರ, ಸಂಸ್ಕೃತಿಗಳು ಗೊಡ್ದು ಸಂಪ್ರದಾಯಗಳಾಗಿ ಜಾನುವಾರುಗಳೂ ನಾಚುವಂಥ ಪಾಶ್ಚಾತ್ಯ ಜೀವನ ಶೈಲಿಯೇ 'ಸಂಸ್ಕೃತಿ', ವೃದ್ಧ ಅಪ್ಪ ಅಮ್ಮಂದಿರನ್ನು ಮನೆಯಿಂದ ಹೊರಹಾಕಿ 'ನೆಮ್ಮದಿ'ಯಿಂದ ಜೀವನ ನಡೆಸುವ ಪದ್ಧತಿಯೇ 'ಸಂಸ್ಕಾರ' ಎನ್ನುವ ಮಟ್ಟಕ್ಕೆ ದೇಶದ ಜನರು ಪರಿವರ್ತನೆಗೊಳ್ಳಲಾರಂಭಿಸಿದರು. ಇಷ್ಟೆಲ್ಲಾ ಆದರೂ, ತಮ್ಮ ಸೀಮಿತ ಪರಿಧಿಗಳಲ್ಲೇ ಉಳಿದುಕೊಂಡು ಸಮಾಜದ ಉನ್ನತಿಗಾಗಿ, ಧರ್ಮದ ರಕ್ಷಣೆಗಾಗಿ ಹೋರಾಡುಡುತ್ತಲೇ ಬಂದ ಸಂತರು ಇನ್ನೂ ನಮ್ಮ ದೇಶದಲ್ಲಿ ಅಲ್ಲಲ್ಲಿ ಉಳಿದುಕೊಂಡರು.

ಆದರೆ, ಭಾರತದ ಸಂಸ್ಕೃತಿಯನ್ನು, ಸನಾತನ ಧರ್ಮವನ್ನು ನಾಶಪಡಿಸಿದರೆ ಮಾತ್ರ ತಮ್ಮ ಗೆಲುವು ಸಾಧ್ಯ ಎನ್ನುವುದನ್ನು ಮನಗಂಡ ವಿದೇಶೀ ಶಕ್ತಿಗಳು ನಮ್ಮ ದೇಶದಲ್ಲೂ ವ್ಯಾಪಕವಾಗಿ ತಮ್ಮ 'ಕುಲೋದ್ಧಾರಕ'ರನ್ನು ವ್ಯಾಪಕವಾಗಿ ಸೃಷ್ಟಿಸಿ ತಮ್ಮ ಗುರಿ ಸಾಧನೆಗೆ ತೊಡಗಿದರು. ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ಮಾರಲು ಹೇಸದ ಜನರ ತಂಡಗಳು ಜಾತ್ಯತೀತರು, ಪತ್ರಕರ್ತರು, ವಿಚಾರವಾದಿಗಳು, ಪ್ರಗತಿಪರರು, ಬುದ್ಧಿಜೀವಿಗಳು ಎಂಬ ಹಣೆಪಟ್ಟಿಕಟ್ಟಿಕೊಂಡು ತಲೆ ಎತ್ತತೊಡಗಿದವು. ಆದರೆ ಅವರಿಗೆ ತೊಡಕಾಗಿದ್ದು ನಮ್ಮಲ್ಲಿ ಇನ್ನೂ ಉಳಿದುಕೊಂಡಿದ್ದ ಸಂತರು ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು!. ಹಾಗಾಗಿ ತಮ್ಮ ಕೊನೆಯ ಪ್ರಯತ್ನವಾಗಿ ಕೋಟ್ಯಂತರ ಜನರ ನಂಬಿಕೆಯ ದೇವಸ್ಥಾನ, ಧಾರ್ಮಿಕ ಸಂಸ್ಥೆಗಳ ಮೇಲೆ ಹಾಗೂ ಸಂತರ ಮೇಲೆ ಪ್ರಹಾರ ಮಾಡಲಾರಂಭಿಸಿದರು. ಜನರು ಅವರ ಮೇಲೆ ನಂಬಿಕೆ ಕಳೆದುಕೊಂಡರೆ ಅವರನ್ನು ಸುಲಭವಾಗಿ ತಮ್ಮೆಡೆಗೆ ಸೆಳೆದುಕೊಳ್ಳಬಹುದು ಎನ್ನುವುದು ಅವರ ಲೆಕ್ಕಾಚಾರ. ಶಬರಿಮಲೈ, ತಿರುಪತಿ-ತಿರುಮಲ, ಅಮರನಾಥ, ಶ್ರೀಕ್ಷೇತ್ರ ಧರ್ಮಸ್ಥಳ, ಶಿರ್ಡಿ ಹಾಗೂ ಇತ್ತೀಚಿನ ಶನಿ ಶಿಂಗನಾಪುರ ವಿವಾದಗಳ ಹುಟ್ಟು, ಬೆಳವಣಿಗೆ ಮತ್ತು ಅವುಗಳ ಹಿಂದಿರುವ ಶಕ್ತಿ-ವ್ಯಕ್ತಿಗಳ ಹಿನ್ನಲೆಗಳನ್ನು ಗಮನಿಸಿದರೆ ಈ ಷಡ್ಯಂತ್ರಗಳ ಬಗ್ಗೆ ಖಚಿತವಾದ ಅರಿವು ಮೂಡುತ್ತದೆ. ಅಷ್ಟೇ ಅಲ್ಲ, ಕಂಚಿ ಶ್ರೀಗಳು, ಬಾಬಾ ರಾಮದೇವ್, ಅಸರಾಮ್ ಬಾಪು, ಶ್ರೀ ಶ್ರೀ ರವಿಶಂಕರ ಗುರೂಜಿ, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಮುಂತಾದ ಸಂತರು, ಧಾರ್ಮಿಕ ಮುಖಂಡರ ಮೇಲೆ ನಿರಂತರವಾಗಿ ನಡೆದ ಅಪಪ್ರಚಾರ, ಚಾರಿತ್ರ್ಯಹರಣ ಪ್ರಯತ್ನಗಳು ಇನ್ನೇನನ್ನು ಸೂಚಿಸುತ್ತವೆ? ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ವಿಚಾರವೆಂದರೆ, ಈ ಎಲ್ಲಾ ಹಲ್ಲೆಗಳು ಕೇವಲ ಸನಾತನ ಧರ್ಮದ ಮೇಲೆಯೇ ಕೇಂದ್ರೀಕೃತವಾಗಿರುವುದು!.

ಧರ್ಮ ರಕ್ಷಕ ಯತಿ ಸಮಾವೇಶ (ಸಾಂದರ್ಭಿಕ ಚಿತ್ರ)
ನಮ್ಮ ದೇಶ, ಧರ್ಮ, ಸಂಸ್ಕೃತಿಯ ಮೇಲೆ ಸಹಸ್ರಾರು ವರ್ಷಗಳಿಂದ ಹಲ್ಲೆಯಾಗುತ್ತಲೇ ಬಂದಿದೆ. ಧರ್ಮ ಗ್ಲಾನಿಯಾದಗಲೆಲ್ಲ ಮಹಾಪುರುಷರು ಜನ್ಮವೆತ್ತಿ ಧರ್ಮ ಪುನರ್ಸ್ಥಾಪಿಸಿದ್ದಾರೆ. ಸನಾತನ ಧರ್ಮ ಅಳಿದೇ ಹೋಗುವ ಸಂಕಷ್ಠ ಎದುರಾದಾಗ ಆದಿ ಶಂಕರರು ಭುವಿಗಿಳಿದು ಬಂದು ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿದರು. ಇನ್ನಾದರೂ ಧರ್ಮ, ಸಂಸ್ಕೃತಿಯನ್ನು, ಆ ಮೂಲಕ 'ನಮ್ಮತನ'ವನ್ನು ಉಳಿಸಿಕೊಳ್ಳಿ ಎಂದು ಸಂದೇಶವನ್ನು ಸಾರಿ ಹೋದರು. ಆದರೆ ಚರಿತ್ರೆಯಿಂದ ಯಾವುದೇ ಪಾಠ ಕಲಿಯದ ನಮಗೆ ಅವುಗಳೆಲ್ಲ ಅರ್ಥವಾಗುವುದೇ ಇಲ್ಲ. ಹಾಗಾಗಿ ಮತ್ತೆ ಮತ್ತೆ ಸವಾಲುಗಳನ್ನು, ಪರೀಕ್ಷೆಗಳನ್ನು ಎದುರಿಸುತ್ತಲೇ ಇದ್ದೇವೆ. ಈಗ ಮತ್ತೊಮ್ಮೆ ಅಂಥ ವಿಷಮ ಪರಿಸ್ಥಿತಿ ಉಂಟಾಗಿದೆ. ಸಂತರೆಲ್ಲ ಒಗ್ಗೂಡಿ ಸಂತರನ್ನೇ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಸಂತರು ಈ ದೇಶದ ಸಂಸ್ಕಾರ, ಸಂಸ್ಕೃತಿ, ಧರ್ಮದ ಬೆನ್ನೆಲುಬು. ಅವರಿಲ್ಲವಾದರೆ ನಮ್ಮ ದೇಶ ವಿನಾಶವಾದೀತು. ಈ ನಿಟ್ಟಿನಲ್ಲಿ 'ಸಹಸ್ರ ಸಂತ ಸಂಗಮ'ಕ್ಕೆ ವಿಶೇಷವಾದ ಅರ್ಥವಿದೆ, ಮಹತ್ವವಿದೆ.

ಊರು ಅಳಿದ ಮೇಲೆ ಕೋಟೆ ಬಾಗಿಲು ಹಾಕಿ ಪ್ರಯೋಜನವಿಲ್ಲ. ಇನ್ನಾದರೂ ಭಾರತೀಯರು ಎಚ್ಚೆತ್ತುಕೊಂಡು ಪ್ರಥಮವಾಗಿ ಸಂತರನ್ನು ರಕ್ಷಿಸಬೇಕಾಗಿದೆ. ಅವರಿಗಾಗಿ ಅಲ್ಲ, ನಮ್ಮನ್ನು ಉಳಿಸಿಕೊಳ್ಳಲು, ನಮ್ಮ ಮಕ್ಕಳನ್ನು ಉಳಿಸಿಕೊಳ್ಳಲು; ನಮ್ಮ ಸಂಸ್ಕೃತಿ, ಧರ್ಮವನ್ನು ಉಳಿಸಿಕೊಳ್ಳಲು. ಇಲ್ಲವಾದರೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಎಂದಿಗೂ ಕ್ಷಮಿಸಲಾರರು. ಧರ್ಮದ ಹೆಸರಿನಲ್ಲಿ ಇಂದು ಪಾಕಿಸ್ಥಾನ, ಇರಾಕ್, ಸಿರಿಯಾ, ಅಫಘಾನಿಸ್ಥಾನಗಳಲ್ಲಿ ನಡೆಯುತ್ತಿರುವ ಪೈಶಾಚಿಕ ಕೃತ್ಯಗಳನ್ನು ನೋಡಿಯಾದರೂ ನಮ್ಮ ಮಕ್ಕಳ ರಕ್ಷಣೆಗಾಗಿ, ಅವರಿಗೆ ಧರ್ಮದ ಹಾದಿಯಲ್ಲಿ ನಡೆಯಲು ಅಗತ್ಯವಾದ ಮಾರ್ಗದರ್ಶನಕ್ಕಾಗಿ ಸಂತರನ್ನು ಉಳಿಸಿಕೊಳ್ಳಲೇಬೇಕಾಗಿದೆ.

ಸಂತರ ಆಶೀರ್ವಾದ, ಮಾರ್ಗದರ್ಶನ ನಮ್ಮ ಸಮಾಜಕ್ಕೆ, ದೇಶಕ್ಕೆ ಹಿಂದೆಂದಿಗಿಂತಲೂ ಅಗತ್ಯವಿದೆ. ಬೆಂಗಳೂರಿನಲ್ಲಿ ಫೆಬ್ರವರಿ 5ರಂದು, ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಸಂತ ಸೇವಕ ಸಮಿತಿ ಆಯೋಜಿಸಿರುವ 'ಸಹಸ್ರ ಸಂತ ಸಂಗಮ' ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮ, ಸಮುದಾಯಗಳ ಸಂತರು ಭಾಗವಹಿಸುತ್ತಿರುವುದು ಒಗ್ಗಟ್ಟಿನ ಸಂಕೇತ. ಧರ್ಮ ಸ್ಥಾಪನೆ, ಸ್ವಸ್ಥ ಸಮಾಜಕ್ಕೆ ಈ ಕಾರ್ಯಕ್ರಮ ನಾಂದಿಯಾಗಲಿ ಎಂಬುದೇ ನಮ್ಮ ಆಶಯ.

 

Author : ಸತ್ಯಶಂಕರ್ ಮರಕಿಣಿ 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited