Untitled Document
Sign Up | Login    
ದೀಪಗಳ ಹಬ್ಬ ದೀಪಾವಳಿ....


ದೀಪಾವಳಿ, ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.

ಸನಾತನ ಧರ್ಮದಲ್ಲಿ ಆಶ್ವಯುಜ ಕೃಷ್ಣ ತ್ರಯೋದಶಿ, ಆಶ್ವಯುಜ ಕೃಷ್ಣ ಚತುರ್ದಶಿ(ನರಕ ಚತುರ್ದಶಿ) ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆ, ಮತ್ತು ಆಶ್ವಯುಜ ಶುಕ್ಲ ಪಾಡ್ಯಯಂದು ಬಲಿಪಾಡ್ಯಮಿ ಆಚರಣೆ ಮಾಡುವ ಮೂಲಕ ದೀಪಾವಳಿ ಹಬ್ಬ ಆಚರಣೆ ಮಾಡಲಾಗುತ್ತದೆ. ಶ್ರೀಕೃಷ್ಣ, ನರಕಾಸುರನನ್ನು ವಧಿಸಿ ಜನರನ್ನು ರಕ್ಷಿಸಿದ ಈ ಹಿನ್ನೆಲೆಯಲ್ಲಿ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ನಂತರದ ದಿನ ಅಂದರೆ ಅಮಾವಾಸ್ಯೆಯಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿ ಪೂಜೆ ಮಾಡುವ ಮೂಲಕ ದೀಪಾವಳಿಯನ್ನು ಆಚರಣೆ ಮಾಡಲಾಗುತ್ತದೆ. ಇನ್ನು ಬಲಿಪಾಡ್ಯಮಿ, ಇಂದ್ರನಿಂದ ಸಂಹರಿಸಲ್ಪಟ್ಟ ಬಲಿ ಚಕ್ರವರ್ತಿ ಶುಕ್ರಾಚಾರ್ಯರ ಮೃತ ಸಂಜೀವಿನಿ ವಿದ್ಯೆಯಿಂದ ಬದುಕಿ ವಿಶ್ವಜಿತ್‌ ಎಂಬ ಯಾಗವನ್ನು ಮಾಡಿ, ಅಗ್ನಿದೇವನ ಮೂಲಕ ಧನ, ಅಶ್ವ, ಧ್ವಜಗಳನ್ನು ಪಡೆಯುತ್ತಾನೆ. ಬಳಿಕ ಇಂದ್ರನ ಮೇಲೆ ಯುದ್ಧ ಮಾಡಿ ಅವನನ್ನು ಸೋಲಿಸಿ ಸ್ವರ್ಗ ರಾಜ್ಯವನ್ನು ಗೆಲ್ಲುತ್ತಾನೆ. ಈ ಗೆಲುವಿನಿಂದ ಬಲಿ ಚಕ್ರವರ್ತಿಯಲ್ಲಿ ಅಹಂಕಾರ ಮೂಡುತ್ತದೆ. ಇದನ್ನು ಕಂಡು ಹೆದರಿದ ದೇವತೆಗಳು ವಿಷ್ಣುವಿನಲ್ಲಿ ಮೊರೆಯಿಡುತ್ತಾರೆ. ಇದೇ ಸಂದರ್ಭದಲ್ಲಿ ವಾಮನಾವತಾರವಾಗುತ್ತದೆ.

ಅನಂತರ ಬಲಿ ಚಕ್ರವರ್ತಿ ನರ್ಮದಾ ತೀರದಲ್ಲಿ ಕೈಗೊಂಡ ಅಶ್ವಮೇಧಯಾಗಕ್ಕೆ ವಟುವಿನ ರೂಪದಲ್ಲಿ ಆಗಮಿಸುವ ವಾಮನನನ್ನು ಆದರದಿಂದ ಬರಮಾಡಿಕೊಂಡು ಪೂಜಿಸಿ ಬೇಕಾದುದನ್ನು ಕೇಳು ಎಂದಾಗ ಈ ವಾಮನ ವಟು ಕೇವಲ 3 ಹೆಜ್ಜೆ ಭೂಮಿಯನ್ನು ದಾನವಾಗಿ ನೀಡುವಂತೆ ಕೇಳುತ್ತಾನೆ. ಕುಬ್ಜನಾಗಿದ್ದ ವಾಮನ ಒಮ್ಮೆಲೇ ಆಕಾಶದೆತ್ತರಕ್ಕೆ ಬೆಳೆದು ತ್ರಿವಿಕ್ರಮನಾಗಿ 2 ಹೆಜ್ಜೆಗಳಲ್ಲಿ ಭೂಮಿ, ಅಂತರಿಕ್ಷಗಳನ್ನು ಅಳೆದು 3 ನೇ ಹೆಜ್ಜೆಯನ್ನು ಎಲ್ಲಿಡಬೇಕೆಂದು ಕೇಳುತ್ತಾನೆ. ವಚನಭ್ರಷ್ಟನಾಗದ ಬಲಿ ತನ್ನ ತಲೆಯ ಮೇಲೆ ಇಡುವಂತೆ ಹೇಳಿದಾಗ ವಾಮನ ರೂಪದ ವಿಷ್ಣು ಅದರಂತೆ ಮಾಡಿ ಬಲಿಯನ್ನು ಪಾತಾಳಕ್ಕೆ ತಳ್ಳುತ್ತಾನೆ. ಬಲಿ ಚಕ್ರವರ್ತಿಯ ತ್ಯಾಗ, ನಿಷ್ಠೆ, ದೃಢತೆಗಳನ್ನು ಮೆಚ್ಚಿದ ವಿಷ್ಣು, ಬಲಿ ವಧೆಯಾದ ಈ ದಿನಕ್ಕೆ ಬಲಿಪಾಡ್ಯ ಎಂದು ಹೆಸರನ್ನಿಟ್ಟನು ಹಾಗೂ ವರ್ಷದಲ್ಲಿ ಒಂದು ದಿನ ಭೂಮಂಡಲದಲ್ಲಿ ಬಲಿಯ ರಾಜ್ಯ ನಡೆಯುವಂತೆ ಅನುಗ್ರಹಿಸಿದ. ಬಲಿಪಾಡ್ಯದಂದು ಪೂರ್ತಿ ದಿನ ಬಲಿಯ ರಾಜ್ಯಭಾರ ನಡೆಯುತ್ತದೆ ಎಂಬುದು ನಂಬಿಕೆ. ಅಹಂಕಾರವೆಂಬುದು ತೊಲಗಿ ತ್ಯಾಗ, ನಿಷ್ಠೆ, ದೃಢತೆಗಳು ನೆಲೆಯಾಗಲಿ ಎಂಬುದು ಇದರ ಹಿಂದಿನ ಆಶಯವಾಗಿದೆ.
ಇದು ಪುರಾಣ್ವಾಯಿತು. ಈಗ?.. ಬುಲ್ ಶಿಟ್! ಎಲ್ಲವೂ ಯಾವುದೋ ಓಬಿರಾಯನ ಕಾಲದ ಕಥೆಗಳು, ಯಾವುದೂ ಸತ್ಯಕ್ಕೆ ಹತ್ತಿರವಾದುದ್ದಲ್ಲ. ಕಾಲ್ಪನಿಕ ಎಂದು ಜರಿಯುವ ಪ್ರಗತಿಪರರೇ ಜಾಸ್ತಿ. ಅವರಿಗೆ ದೀಪಾವಳಿಯ ರಾಕೆಟ್ ಗಳು, ಕ್ಷಣಾರ್ಧದಲ್ಲಿ ಉರಿದು ಬೂದಿಯಾಗುವ ಪಟಾಕಿಗಳೇ ವಾಸ್ತವವಾಗಿ ಕಾಣುತ್ತವೆ. ಆಧುನಿಕ ಭಾರತದಲ್ಲಿ ದೀಪಾವಳಿಗೆ ವ್ಯಾಖ್ಯಾನವೇ ಬದಲಾಗಿ ಹೋಗಿದೆ. ಹಿಂದೆಲ್ಲಾ ದೀಪಾವಳಿಯನ್ನು ದೀಪಗಳ ಹಬ್ಬವೆಂದೇ ಅಚರಿಸಲಾಗುತ್ತಿತ್ತು. ಒಂದಷ್ಟು ಆಕಾಶ ಬುಟ್ಟಿಗಳನ್ನು ಮನೆ ಅಂಗಳದಲ್ಲಿ ತೂಗುಹಾಕಿ ಸಂಭ್ರಮಿಸಲಾಗುತ್ತಿತ್ತು. ಇಂದಿನಂತೆ ಓಜೋನ್ ಪದರಕ್ಕೆ ಹಾನಿಯಾಗುವಂತಹ ಪಟಾಕಿಗಳ ಸದ್ದು ಇರುತ್ತಿರಲಿಲ್ಲ. ಕೃತಕ ಜೀವನ ಶೈಲಿಯಲ್ಲಿ ಎಲ್ಲವೂ ಕೃತಕಮಯವಾಗಿದ್ದು ದೀಪಗಳ ಹಬ್ಬವೂ ಕೃತಕವಾಗಿದೆ. ನಿಜ ಅರ್ಥದ ದೀಪಗಳೂ ಕೂಡ....!

ವರ್ಷಕ್ಕೊಮ್ಮೆ ಇಂತಿಷ್ಟು ಎಂದು ಪಟಾಕಿಗೆ ರೇಟು ಫಿಕ್ಸ್ ಮಾಡಿ ತರಹೇವಾರಿ ಮದ್ದುಗಳು ತುಂಬಿದ ಪಟಾಕಿ ಸಿಡಿಸುವುದೇ ದೀಪಾವಳಿ ಹಬ್ಬದ ದ್ಯೋತಕವಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ಆಚರಿಸುತ್ತಿರುವ ದೀಪಾವಳಿಯನ್ನು ದೀಪಗಳ ಹಬ್ಬವೆನ್ನುವುದಕ್ಕಿಂತಲೂ ಪಟಾಕಿಗಳ ಹಬ್ಬವೆನ್ನುವುದೇ ಹೆಚ್ಚು ಸೂಕ್ತ. ಇದರೊಂದಿಗೆ ಒಂದಷ್ಟು ಅನಾಹುತಗಳೂ ಸಂಭವಿಸುತ್ತವೆ ಎಂಬುದನ್ನು ಅಗತ್ಯವಾಗಿ ಗಮನದಲ್ಲಿಡಬೇಕು.

ದೀಪಾವಳಿ ಎಂಬುದು ಜ್ನಾನಜ್ಯೋತಿಯನ್ನು ಪ್ರಚೋದಿಸುವಂತದ್ದಾಗಬೇಕೇ ಹೊರತು ಪಟಾಕಿಗಳ ಮೇಲೆಯೇ ಕೇಂದ್ರೀಕೃತವಾಗಬಾರದು. ಪಟಾಕಿಗಳನ್ನೂ ಮೀರಿ ಸನಾತನ ಧರ್ಮ ತಿಳಿಸಿರುವ ತತ್ವಗಳನ್ನು ಮೈಗೂಡಿಸಿಕೊಂಡರೆ ಜೀವನವೂ ಸಾರ್ಥಕವಾಗುತ್ತದೆ. ಸ್ವಲ್ಪ ಎಚ್ಚರಿಕೆಯಿಂದ ಪಟಾಕಿ ಹೊಡೆದರೆ ಅದೆಷ್ಟೋ ಜನರು ಕಣ್ಣು, ಕಿವಿಗಳನ್ನು ಕಳೆದುಕೊಳ್ಳುವುದು ತಪ್ಪುತ್ತದೆ!.....

 

Author : ಬೆಂಗಳೂರು ವೇವ್ಸ್

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited