Untitled Document
Sign Up | Login    
ಭಾರತದ ಅಸ್ಮಿತೆ ಕಾಪಾಡುತ್ತಿದೆ ತಿಲಕರು ನೀಡಿದ ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ!

ಗಣೇಶೋತ್ಸವ

ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿ ಬಂದಿದೆ. ವರ್ಷದಿಂದ ವರ್ಷಕ್ಕೆ ಆಡಂಭರ ಆಚರಣೆಗಳಲ್ಲಿ ವ್ಯತ್ಯಾಸವಾಗಿದ್ದರೂ ಎಂದಿನಂತೆ ನಡೆಯುವ ಗಣೇಶ ಉತ್ಸವಕ್ಕೆ ಕೊರತೆ ಏನೂ ಎದುರಾಗಿಲ್ಲ ಎಂಬುದು ಯುವಕರ ಹಿಂಡು ಗಣೇಶನ ವಿಗ್ರಹಗಳನ್ನು ಸಾಲುಗಟ್ಟಿ ನಿಂತು ಖರೀದಿಸುತ್ತಿರುವುದನ್ನು ನೋಡಿದರೇನೆ ತಿಳಿಯುತ್ತದೆ.

ಮನೆಗಳಲ್ಲೇ ಗಣಪನ ವಿಗ್ರಹವಿಟ್ಟು ಪೂಜಿಸುವುದು ಅಪರೂಪವಾಗುತ್ತಿರುವ ಇಂದಿನ ದಿನಗಳಲ್ಲಿ ಇಂಥಹ ಜಾಗದಲ್ಲಿಯೇ ಗಣಪತಿಯನ್ನು ಇಟ್ಟು ಪೂಜೆ ಮಾಡಬೇಕು, ಉತ್ಸವಗಳನ್ನು ಹೀಗೆಯೇ ನಡೆಸಬೇಕು ಎಂದು ಯಾರೂ ಹುಕುಂ ಜಾರಿಗೊಳಿಸುವುದಿಲ್ಲ. ಆದರೂ ಯುವಕರಲ್ಲೇನೋ ಉತ್ಸಾಹ, ಯಾವುದೇ ಚಿಕ್ಕ ಬೀದಿಯಲ್ಲಿ ಕಾಲಿಟ್ಟರೂ ಗೋಲಕ ಕುಲುಕುತ್ತ ಹಿಂಬಾಲಿಸುತ್ತಾರೆ.

ಗಲ್ಲಿಗಲ್ಲಿಗಳಲ್ಲಿ ಗಣೇಶನ ಪೆಂಡಾಲು, ಆರ್ಕೆಸ್ಟ್ರಾ ಇಲ್ಲದೇ ಅದೊಂದು ಗಣಪತಿ ಹಬ್ಬ ಎಂದು ಅನ್ನಿಸಿಕೊಳ್ಳುವುದೇ ಇಲ್ಲ. ಇಂದಿನ ಪೀಳಿಗೆಗೆ ದೇವರ ಮೇಲೆ ಶ್ರದ್ಧೆ ಇಲ್ಲದೇ ಇದ್ದರೂ ಗಣೇಶನ ಬಗ್ಗೆ ಇರುವ ಆಸಕ್ತಿ, ಉತ್ಸಾಹ ನೋಡಿದರೆ ಸಂತಸವಾಗುವುದೇನೋ ನಿಜ. ಮತ್ತೊಂದೆಡೆ ದುಖಃವೂ ಆಗುತ್ತದೆ. ಆಧುನಿಕತೆಯ ಸೆಲೆಗೆ ಸಿಲುಕಿ ಶ್ರದ್ಧೆಗಿಂತಲೂ ಆಡಂಭರವೇ ವಿಜೃಂಭಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವದ ಉದ್ದೇಶವೇ ಬದಲಾಗಿ ಹೋಗಿದೆ.

ಗಣೇಶೋತ್ಸವ ಎಂದರೆ ಮೊದಲಿಗೆ ನೆನಪಿಗೆ ಬರುವುದು ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ತಿಲಕರು. ಪೆಂಡಾಲು, ಆರ್ಕೆಸ್ಟ್ರಾ, ಬಣ್ಣ ಬಣ್ಣದ ದೀಪಗಳ ಗುಂಗಿನಲ್ಲಿ ತೇಲುವ ಯುವಜನತೆ ಆಕಾಶದೆತ್ತರದಷ್ಟು ಗಣಪನ ವಿಗ್ರಹಗಳನ್ನು ತಂದು ಸಂಭ್ರಮಿಸುತ್ತಾರೆ. ಆದರೆ ಅವರಿಗೆ ತಿಲಕರಂಥಹ ಮಹಾನ್ ವ್ಯಕ್ತಿಗಳು ಗಣೇಶೋತ್ಸವದ ಬಗ್ಗೆ ನೀಡಿದ್ದ ಸಂದೇಶ ಸ್ಫುರಿಸುವುದೇ ಇಲ್ಲವಲ್ಲ! ಇಂದಿಗೂ ಮುಂಬೈ ನಲ್ಲಿ ಲಕ್ಷಾಂತರ ಮಂದಿ ಜಮಾಯಿಸಿ ಗಣೇಶೋತ್ಸವ ಆಚರಿಸುತ್ತಾರೆ. ಆದರೆ ಆ ಗಣೇಶೋತ್ಸವ ಸಾಕ್ಷಿಯಾಗುವುದು ಯಾವುದೋ ಘನಕಾರ್ಯಕ್ಕಲ್ಲ. ಬದಲಾಗಿ ಉತ್ಸವ ಲಾಭಾವಾಗುತ್ತಿರುವುದು ಸಹಸ್ರಾರು ಮಂದಿ ಇರುವ ಗುಂಪಿನಿಳಗೆ ಸೇರಿ ಅಹಿತಕರ ಘಟನೆ ಉಂಟು ಮಾಡುವಂತಹ ಸಮಾಜ ಘಾತುಕರಿಗೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತಿಲಕರು. ಕೇಸರಿ ಎಂಬ ಮರಾಠಿ ಪತ್ರಿಕೆಯನ್ನು ಮತ್ತು ದಿ ಮರಠಾ ಎಂಬ ಆಂಗ್ಲ ಪತ್ರಿಕೆಯನ್ನು ಸ್ನೇಹಿತರೊಂದಿಗೆ ಸೇರಿ ಪ್ರಾರಂಭಿಸಿ ಪತ್ರಿಕೋದ್ಯಮದ ಮೂಲಕ ಬ್ರಿಟೀಷರ ವಿರುದ್ದ ಧ್ವನಿಯೆತ್ತಿದವರು. ನಂತರ ಸ್ವಾತಂತ್ರ್ಯ ಹೋರಾಟದ ಜನಜಾಗೃತಿಗಾಗಿ ದೇಶದ ಹಳ್ಳಿಹಳ್ಳಿ ತಿರುಗಿದ ತಿಲಕರು ಮನಗಂಡ ಕೆಲ ವಿಚಾರಗಳೆಂದರೆ. ಜನ ಒಂದೆಡೆ ಸೇರುವುದೇ ಕಷ್ಟ. ಹಾಗೊಮ್ಮೆ ಜನರನ್ನು ಒಂದೆಡೆ ಸೇರುವಂತೆ ಮಾಡಿದರೆ, ಅಂತಹ ಕಡೆ ಸ್ವಾತಂತ್ರ್ಯ ಹೋರಾಟದ ಉದ್ದೇಶ ಮತ್ತು ಅಗತ್ಯತೆಯನ್ನು ಜನರಿಗೆ ಮನವರಿಕೆ ಮಾಡಬಹುದು. ಹೀಗೆ ವಿಚಾರ ಮಾಡಿದ ತಿಲಕರಿಗೆ ಕಂಡದ್ದು ಗಣೇಶೋತ್ಸವ ಮತ್ತು ಶಿವಾಜಿ ಉತ್ಸವ. ಉತ್ಸವದ ಮೂಲಕ ಸಂಘಟನೆ ನಿರ್ಮಾಣ ಮಾದುವುದು ತಿಲಕರ ಮುಖ ಉದ್ದೇಶವಾಗಿತ್ತು. ಊರು ಊರು ಸುತ್ತುತ್ತಾ ಅಲ್ಲಿನ ಯುವಕರನ್ನ ಸಂಘಟಿಸಿ, ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಿ, ಆ ಮೂಲಕ ಅಲ್ಲಿ ಸೇರುತ್ತಿದ್ದ ಜನ ಸಮೂಹಕ್ಕೆ ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ವಿವರಿಸಿ, ಅವರೆಲ್ಲರನ್ನೂ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಜನಾಂದೋಲನ ರೂಪಿಸಿದವರು ಲೋಕಾಮಾನ್ಯ ಬಾಲಗಂಗಾಧರ ತಿಲಕರು. ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ತಿಲಕರು ನೀಡಿದ್ದ ಈ ಉದ್ದೇಶ ಸ್ವಾತಂತ್ರ್ಯಾ ನಂತರವೂ ಸಾರ್ವಕಾಲಿಕವಾಗಿರಲಿದೆ.

ಆದರೆ ಇಂದು ನಡೆಯುತ್ತಿರುವ ಗಣೇಶೋತ್ಸವಗಳನ್ನು ನೋಡಿದರೆ ಇದ್ಯಾವುದಕ್ಕೂ ಸೇರದೇ ವರ್ಷಕ್ಕೊಮ್ಮೆ ಆಚರಿಸುವ ಮನರಂಜನೆ ಉತ್ಸವಗಳಿದ್ದಂತೆ ಕಾಣುತ್ತದೆ. ಕೆಲವು ಭಾಗಗಳಲ್ಲಿ ಮಾತ್ರ ಗಣೇಶೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಉತ್ತಮ ವಿಚಾರಧಾರೆಗಳು ಮೂಡುತ್ತವೆ. ತಿಲಕರ ವಿಚಾರಧಾರೆಯ ಗಣೇಶೋತ್ಸವವೆಂದರೆ ದೇಶದ ಅಸ್ಮಿತೆಯ ಪ್ರತಿರೂಪ. ಇಂದಿನ ಜನರಿಗೆ ತಿಲಕರ ಬಗ್ಗೆ ತಿಳಿದಿದ್ದರೆ ಅವರು ನಡೆಸುತ್ತಿದ್ದ ಗಣೇಶೋತ್ಸದ ಬಗ್ಗೆಯೂ ಅರಿವಿರುತ್ತಿತ್ತೇನೋ? ಆಗಲಾದರೂ ಮನರಂಜನೆ ಸೇರಿದಂತೆ ಇನ್ಯಾವುದೋ ಕಾರಣಕ್ಕೆ ನಡೆಯುತ್ತಿದ್ದ ಗಣಪತಿ ಹಬ್ಬ ದೇಶದ ಅಸ್ಮಿತೆಯನ್ನು ಕಾಪಾಡಲು ನಿಜವಾಗಿಯೂ ಸಹಾಯಕವಾಗುತ್ತಿತ್ತು. ಆದರೇನು ಮಾಡುವುದು ತಿಲಕರು ಇಂದಿನ ಯುವ ಪೀಳಿಗೆ ಮನಸಿನಿಂದ ದೂರ ಉಳಿಯುವಂತೆ ಮಾಡಲಾಗಿದೆ.

ಸಂತಸದ ವಿಷಯವೇನೆಂದರೆ ಯುವಜನತೆ ಹಿಂದೂ ಧರ್ಮದಿಂದಲೇ ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ತೋರಿಕೆಗಾದರೂ ಪೂಜೆ ಮಾಡುತ್ತಿದ್ದಾರಲ್ಲಾ.... ಇದೇ ಮನಸ್ಥಿತಿಯೇ ಭಾರತದ ಆತ್ಮವನ್ನು ಇಂದಿಗೂ ಜೀವಂತವಾಗಿಸಿರುವುದು. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಯ ಪರಿಕಲ್ಪನೆ ನೀಡಿದ ತಿಲಕರನ್ನು ಗಣಪತಿ ಹಬ್ಬದಂದು ನೆನೆಯೋಣ. ಸಮಾಜಮುಖಿ ಗಣೇಶೋತ್ಸವಗಳು ಜರುಗಲಿ ಎಂದು ನಿರೀಕ್ಷಿಸೋಣ.... ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು

 

Author : ಬೆಂಗಳೂರು ವೇವ್ಸ್

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited