ಬೆಂಗಳೂರು ಇಂದು ಬಹಳಷ್ಟು ವಿಸ್ತಾರವಾಗಿ ಬೆಳೆದಿದೆ, ಬೆಳೆಯುತ್ತಿದೆ. ಇತಿಹಾಸವೂ ಅಷ್ಟೇ.. ಬೆಂಗಳೂರಿನ ಗತವೈಭವ ಹೇಗಿತ್ತು ಎಂಬ ಕುತೂಹಲ ಇತಿಹಾಸ ತಜ್ಞರಿಗೆ ಇರುವಷ್ಟು ಅಲ್ಲದೇ ಹೋದರೂ ಸ್ವಲ್ಪ ಮಟ್ಟಿಗಾದರೂ ನನ್ನಂತಹ ಜನಸಾಮಾನ್ಯರಿಗೆ ಇದ್ದೇ ಇದೆ. ಹಾಗೆ ಅಂತರ್ಜಾಲ ಜಾಲಾಡುವ ವೇಳೆ ಕಣ್ಣಿಗೆ ಬಿದ್ದ ತಾಣ ಇದು.
ಬೆಂಗಳೂರು ಹೆರಿಟೇಜ್(www.bangaloreheritage.in) ಎಂಬ ಈ ಜಾಲತಾಣ ಒಂದಷ್ಟು ಇತಿಹಾಸದ ನೆನಪುಗಳನ್ನು ಮನದಲ್ಲಿ ಮೂಡಿಸುತ್ತದೆ. 1923ರಲ್ಲಿ ಬಾಕ್ಸಿಂಗ್ ಸ್ಪರ್ಧೆಗೆ ಭಾರತಕ್ಕೆ ಪ್ರಸಿದ್ಧ ಬಾಕ್ಸರ್ ಗನ್‌ಬೋಟ್ ಜಾಕ್(ಜಿಬಿಜೆ) ಆಗಮಿಸಲಿದ್ದು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ ಬಗ್ಗೆ ಇರುವ ಜಾಹೀರಾತು ಒಂದೆಡೆ ಇದೆ. ಅದೇ ರೀತಿ, 1953ರಲ್ಲಿ ಪ್ರಕಟವಾದ ಇನ್ನೊಂದು ಜಾಹೀರಾತಿನಲ್ಲಿ ಸಂಪಂಗಿ ಟ್ಯಾಂಕ್ ಸಮೀಪದ ಒಲಂಪಿಕ್ ಸ್ಟೇಡಿಯಂನಲ್ಲಿ ಬೆಂಗಳೂರು ಕುಸ್ತಿ ಪಂದ್ಯದಲ್ಲಿ ಬೆರ್ಟ್ ಅಸಿರಟಿ ಮತ್ತು ದಾರಾ ಸಿಂಗ್ ಅವರು ಭಾಗವಹಿಸುತ್ತಿರುವ ಬಗ್ಗೆ ವಿವರವಿದೆ.
ಮೈಸೂರು ಅರಸರ ಭಾವಚಿತ್ರಗಳು, ಇನ್ನಿತರೆ ಫೋಟೊಗಳು ಇದರಲ್ಲಿವೆ. ಈ ಅಂತರ್ಜಾಲ ತಾಣವನ್ನು ಮ್ಯಾಪ್‌ಯುನಿಟಿ ಎಂಬ ಸಂಸ್ಥೆ ನಿರ್ಮಿಸಿದ್ದು, 16ನೇ ಶತಮಾನದ ಪೇಂಟಿಂಗ್‌ಗಳ ಚಿತ್ರವೂ ಇದೆ.
ಅಂದಹಾಗೆ ಈ ವೆಬ್‌ಸೈಟನ್ನು ಭಾರತದ ಸ್ಥಳೀಯ ಇತಿಹಾಸ ದಾಖಲಿಸುವ ಯೋಜನೆ ಅಡಿ ನಿರ್ಮಿಸಿದ್ದು, ಇದೇ ರೀತಿ ದೇಶದ ೬೦ ವಿವಿಧ ನಗರಗಳ ಇತಿಹಾಸ ದಾಖಲಿಸುವ ಕೆಲಸವೂ ಮುಂದುವರೆದಿದೆ. ಇದರಲ್ಲಿ ಜನರ ಕೊಡುಗೆಯೂ ಇದ್ದು, ಹಲವರ ಬಳಿ ನಗರದ ಇತಿಹಾಸಕ್ಕೆ ಸಂಬಂಧಪಟ್ಟ ಅತ್ಯಂತ ಪ್ರಮುಖ ದಾಖಲೆಗಳು, ಛಾಯಾಚಿತ್ರಗಳಿರಬಹುದು. ಅವನ್ನೆಲ್ಲ ಕೆಲವು ಒದಗಿಸಿದ್ದು, ನಗರಗಳ ಇತಿಹಾಸ ಕಟ್ಟುವಲ್ಲಿ ಸಹಕಾರಿಯಾಗಿದೆ.
ಈ ಜಾಲತಾಣ ಕೇವಲ ಇತಿಹಾಸದ ಘಟನೆಗಳನ್ನಷ್ಟೇ ದಾಖಲಿಸುತ್ತಿಲ್ಲ. ಬದಲಾಗಿ, ಬೆಂಗಳೂರಿನ ಹಿಂದಿನ ವೈಭವ, ಅಂದಿನ ಪರಿಸರ, ಪರಿಸ್ಥಿತಿ, ಪ್ರಕೃತಿ ಇವೆಲ್ಲವನ್ನೂ ದಾಖಲಿಸುತ್ತಿದ್ದು ತುಲನಾತ್ಮಕ ಅಧ್ಯಯನಕ್ಕೂ ಸಹಕಾರಿಯಾಗಲಿದೆ.
ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಬೈಡ್‌ನ ಸದಸ್ಯರಾದ ಅಶ್ವಿನ್ ಮಹೇಶ್ ಸೇರಿದಂತೆ ಹಲವು ಗಣ್ಯರು ಈ ತಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾಲಾ ಕಾಲೇಜು ಶಿಕ್ಷಣದ ವೇಳೆ ನಾವು ಭಾರತದ ಇತಿಹಾಸವನ್ನು ಓದಿದ್ದೇವೆ. ಆದರೆ, ಅದರಲ್ಲಿ ದೇಶದ ವಿವಿಧ ಭಾಗದ ಇತಿಹಾಸಗಳನ್ನು ಹೇಳಿಕೊಟ್ಟಿರಲಿಲ್ಲ. ಈಗ ಈ ರೀತಿ ವಿವಿಧ ನಗರಗಳ ಇತಿಹಾಸ ದಾಖಲಿಸುವ ಮೂಲಕ ಅತ್ಯಂತ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತಿರುವುದು ಶ್ಲಾಘನೀಯ ಎನ್ನುತ್ತಾರೆ ಮಹೇಶ್.