Untitled Document
Sign Up | Login    
ನನ್ನೊಳಗೆ ನಾನಾಗಿ...

ದಿವ್ಯ ಶೃಂಗಾರ ನಾಯಕ ನಾನೆ
ರಸಿಕ ಮಹಾಶಯ ನಿತ್ಯ ಭೂಮಿಕೆಯಲಿ
ಜೀವಿತದಲಿ ಜಿನುಜಿನುಗುವ ಜೇನ ಹನಿಗಳ
ಸವಿ ಹೀರುವ ವಾಂಛೆ
ನನ್ನೊಳಗೆ ನಾನಾಗಿದೆ ನನ್ನತನದ ಸೊಬಗು

ನಾನೆಂಬ ವ್ಯೆಕ್ತಿ ಅಪರಿಚಿತ ಕೆಲವೊಮ್ಮೆ
ನನ್ನ ನೆರಳೂ ಆಗಾಗ ಗುರುತು ಸಿಕ್ಕದು
ಎನ್ನೆರಡು ಎಡಬಲಗಳ ಕಡೆಗಿಂತ
ನಂಬುಗೆ ನನ್ನಾತ್ಮಬಲದ ಮೇಲೆ
ನನ್ನೊಳಗೆ ನಾನಿರುವ ಅದುವೆ ಎನ್ನ ಸಿರಿ

ಹಠವಾದಿ ಮೂರ್ಖ ದುರಳನೂ ನಾನೆ
ಸೋಲಲಾರೆ ಕುಸಿಯಲಾರೆ ಮನಸಿನಾಣೆಗೂ
ಪರಮಾತ್ಮನಿರುವನು ಈ ಎದೆಯ ಒಳಗಣ
ಅಪಚಾರವಾದೀತು ಮಣಿಯಲಾರೆನು
ನನ್ನೊಳಗಿನ ಧೀಬಲವೇ ನನಗೆ ಸದಾ ಅಸಲಿ

ತೀರದಾಚೆಗಿನ ಸುಖವ ಅರೆಸೆನು
ಪದತಳದ ನೆಮ್ಮದಿಯೇ ಬಹುಮೂಲ್ಯ
ಕೂಪಮಂಡೂಕವೆಂದು ಜಗವೇ ಜರಿಯಲಿ
ಎದುರು ನುಡಿಯೆ ನನಗೆ ನಾನೆ ಅಮೂಲ್ಯ
ನನ್ನೊಳಗಿನ ಪಾವಿತ್ರ್ಯವೇ ನನ್ನ ವೈಖರಿ

ಬದಲಾಗುವ ವಿಕ್ಷುಬ್ದ ಪ್ರಪಂಚದಲ್ಲೊಂದು
ಮಿನುಮಿನುಗುವ ನಕ್ಷತ್ರವಾಗುವ ಕಾಂಕ್ಷೆ ನನ್ನದು
ಇದುವೆ ಎನ್ನ ಅಹಂಕಾರ
ಇದು ನನ್ನ ಅದ್ವಿತೀಯತೆ
ನನ್ನೊಳಗೆ ನಾನಾಗಿಯೇ ಇದ್ದೇನೆ ಸತತ-ಸ್ವಗತ!

By : ವಿಶ್ವಾಸ್ ಭಾರದ್ವಾಜ್

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited