Untitled Document
Sign Up | Login    
ಮೇಲೇರುವ ಹವಣಿಕೆಗೆ

ಮೇಲೇರುವ ಹವಣಿಕೆಗೆ
ಕಾಲೆಳೆವ ಭೂಪರು, ಭರಪೂರ.
ನಿಚ್ಚಣಿಕೆ ಉರುಳಿಸುವ ಫಿತೂರಿ
ಹುತ್ತ ಕಟ್ಟುವ ಒರಲೆಯಂತೆ.
ಸ್ವಂತ ಮನೆಗೇ ಕನ್ನ ಹಾಕುವ ಕಠಾರಿಯ
ಅಲಗಿಗೆ ಎರಡು ದಾರಿ .
ಆಲಂಗಿಸಲು ಅವಕಾಶ ಕೊಟ್ಟಿರೊ
ಹಬ್ಬುತ್ತದೆ ರಕ್ತ ಹೀರುವ ಬಂದಳಿಕೆ;
ಒಳಮನೆ ರಣರಂಗ; ಪ್ರಾಣ ಭೀತಿ.

ಮೇಲೇರುವ ಹವಣಿಕೆಗೆ
ತಡೆ ಗೋಡೆ ಬಾಲಂಗೋಚಿ ಪಡೆ
ಕಾಸು ಎಸೆಯ ಬೇಕು ಕೇಳಿದಾಗೆಲ್ಲ
ದೇವರಿಗೆ ಹೂ ತಪ್ಪಿದರೂ ಇವರಿಗೆ ತಪ್ಪುವಂತಿಲ್ಲ
ತಪ್ಪಿದ ದಿನ ನಿಲ್ಲಿಸಿ ಮುನ್ನಡೆ
ಇಡುತ್ತಾರೆ ನಜರಬಂದಿ.

ಮೇಲೇರುವ ಹವಣಿಕೆಗೆ
ಹುಲಿಸವಾರಿಯ ಫಜೀತಿ.
ಎದುರಾಳಿಯ ಕತ್ತಿಯನೆದುರಿಸುವುದು
ಮುಕ್ತ ಹೋರಾಟ.
ಮನೆಯ ಅಡಕತ್ತರಿಯಲ್ಲಿ ಸಿಲುಕಿರುವುದು
ಮುಸುಕಿನ ಗುದ್ದಾಟ.
ಬಿಡಿಸಿಕೊಳ್ಳಲಾರದ,
ಇಳಿಯ ಬಾರದು, ನಿಲ್ಲ ಬಾರದು ಎಂಬ
ನಡೆಗೆ ಇರುವ ಅಡೆತಡೆಯ ಕಿತ್ತೆಸೆದು ಎಸೆದು
ಮುಂದಡಿಯ ಇಡುವುದೆಂತು?

ಮೇಲೇರುವ ಹವಣಿಕೆಗೆ
ಜಲಸಿಯ ಜವಕುಣಿಕೆ,
ನೋಟು ಜಲಜಾಕ್ಷಿಯ ಜಹರ ಕುಡಿಕೆ.
ಮತ್ತೇರಿದ ತೂರಾಟದಲ್ಲಿ ತಪ್ಪಿ ಸೋಪಾನದಂದಾಜು
ಅಂಗಾತ ಬೀಳುವುದು
ಕುಸಿದ ನಿಂತನೆಲದ ತಳದಲ್ಲಿ.

By : ವನರಾಗ ಶರ್ಮಾ

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited