Untitled Document
Sign Up | Login    
ಕೋಟೆ ಕಟ್ಟಿದ ದಂಡ

ಅಗ್ನಿ ದಿವ್ಯಗಳ ಆಣೆ ಪ್ರಮಾಣಗಳು ಹೆಣ್ಣಿಗೆ ಮಾತ್ರ
ನಡೆ ತಪ್ಪಿದ ತಪ್ಪಿಗೆ ದಂಡ
ಬಿದ್ದಿತ್ತು ಬೀದಿ ಬದಿಯಲ್ಲಿ ಉದ್ದಂಡ
ತರುಣಿ ದೇಹ ವಿವಸ್ತ್ರ
ಕುಕ್ಕುವ ಕಾಗೆ ಗೂಗೆ ಹದ್ದುಗಳ ಕೊಕ್ಕು
ಕಂಚುಕದ ಗಾತ್ರ ಸುತ್ತಳತೆ ತೆಗೆವ ಎಕ್ಸರೇ !
ಧರ್ಮ ಮಾನ ದಂಡ.

ಬದುಕು ಬದುಕಗೊಡು ಸತ್ತಮೇಲೂ ಬದುಕು
ಇದು ಧರ್ಮ ಮಿಕ್ಕವೆಲ್ಲ; ನಿಜದ ಸೋಗಿನ ಠಕ್ಕ,
ಎಂದು ಸಾರಿದವರಿಗೆ ಗುಂಡಿನ ಶಿಕ್ಷೆ !
ಶತಮಾನಗಳ ಮುದ್ರೆಯೊತ್ತಿದ ಗಂಗೆ ಕಾವೇರಿಯರ ಪಾತ್ರ
ವಿಸರ್ಜನೆಯ ಗಲೀಜು; ಅಪವಿತ್ರ
-ಗೊಂಡರೂ ಲೆಕ್ಕಿಸದ ಸೈತಾನ ಸಾಮ್ರಾಜ್ಯ ಕಟ್ಟಿದ ಛತ್ರ.
ಮೂಢನಂಬಿಕೆ ಭಂಡ-ವಾಳ.

"ಹಣ ಇದ್ದವರಿಗೊಂದು ಇಲ್ಲದವರಿಗೊಂದು
ತಪ್ಪುದಂಡ ಧರ್ಮ ನ್ಯಾಯ.
ದೇವರ ಮೈಸುತ್ತ ಪಾಚಿಕಟ್ಟಿದಂತೆ ದಧಿಘೃತಮಧು ಸವರಿಕೆ
ಹಿಡಿದು ಅಲ್ಲಾಡಿಸುವವರ ಕೈಗೊಂಬೆ ಗಂಟೆ ಚಂಡಿಕೆ.
ಸೂತ್ರ ಹಿಡಿದ ಕೈ ತಪ್ಪಿಸಿಕೊಳ್ಳುತ್ತದೆ ಕೋಳ
ಒಡ್ಡಬೇಕು ’ನೇಣಿಗೆ’ ಕುರಿ ತನ್ನ ಕೊರಳ
ಅಲ್ಲಿಯೂ ಇಲ್ಲಿಯೂ ತೋಳ ನ್ಯಾಯ".

ಯಾರೊ ಕೂಗಿದರು ದನಿಯೆತ್ತಿ ಹೀಗೆಂದು
ಆಕಾಶದ ಕಳಾಹೀನ ಚಂದ್ರ ಮ್ಲಾನ ನಕ್ಷತ್ರಗಳ ಮುಖ ನೋಡಿದ
ಅಲ್ಲಿತ್ತು ಚರಿತ್ರೆಗೆ ಸಾಕ್ಷಿಯಾಗಿ ಮೌನ ಉತ್ತರ
ಬೀದಿಯಲ್ಲಿ ಕರೆಗಟ್ಟಿದ ರಕ್ತ;
ಅಮ್ಮಂದಿರ ಕೆನ್ನೆಯ ಸುಕ್ಕಿನಲ್ಲಿ ಆರಿದ ಕಣ್ಣೀರು
ಗುಡಿಸಲ ನೆಲದಲ್ಲಿ ತೆವಳುವ ಚಿಣ್ಣಂದಿರ ಕಾಡಳಲು
ಕಲ್ಲಾದಳೊಬ್ಬಳು, ಬೆಂಕಿಗೆ ಬಿದ್ದಳಿನ್ನೊಬ್ಬಳು,
ಸೀರೆ ಬಿಚ್ಚುವ ಶಿಕ್ಷೆ ಇನ್ನೊಬ್ಬಳಿಗೆ
ಯಾರಿಗೆ? ಕೆರೆಗೆ ಹಾರವಾದವಳ ದೇವಸಂತತಿಗೆ.

ಗಹಗಹಿಸುವ ಅಟ್ಟಹಾಸದ ಕೋಟೆಗೆ ತಟ್ಟಿದುದಿಲ್ಲ;
ದಂಡ ವಿಧಿಸುತ್ತಲೇ ಇದೆ ದಂಡಿಯಾಗಿ,
ಹೊರಗಣ್ಣು ಅಲ್ಲ ಕಟ್ಟಿ, ಒಳಗಣ್ಣು ಮುಚ್ಚಿ,
ಕಾಯಬೇಕೆ ? ಸಿಡಿದು ಜ್ವಾಲಾಮುಖಿಯ ಕೆಂಪು ಕತ್ತಿ
ಹಾಕುವ ವರೆಗೆ ಎಲ್ಲವನು ಕೊಚ್ಚಿ ಕೊಚ್ಚಿ

By : ವನರಾಗ ಶರ್ಮಾ

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited