Untitled Document
Sign Up | Login    
ಹಳ್ಳಿಗೆ ಒಂದು ಹಳ್ಳ

ಹಳ್ಳಿಗೆ ಒಂದು ಹಳ್ಳವು ಇರಲು
"ಒಳ್ಳೆ ವರವು'' ಕೇಳಣ್ಣ
ವಸ್ತ್ರ ಪಾತ್ರೆ ಕಾಲನು ತೊಳೆಯಲು
ಮೀಯಲು ಕುಡಿಯಲು ಬೇಕಣ್ಣ

ಭತ್ತದ ಗದ್ದೆಗೆ ತೋಟಕೆ ಹೊಲಕೆ
ನೀರುಣಿಸುವುದು ಈ ಹಳ್ಳ
ಕುಡಿಯುವ ನೀರಿಗೆ ಗಿಡ ತರಕಾರಿಗೆ
ಬಲು ಉಪಕಾರಿಯು ಹೊಳೆ ಹಳ್ಳ

ದನಕರು ಹಕ್ಕಿ ಹಾವು ಕಪ್ಪೆ
ಎಲ್ಲಕೂ ಆಸರೆ ನೆಲೆಯಾಗಿ
ಹಳ್ಳವು ಹರಿದು ಊರಿಗೆ ಸೊಬಗು
ತರುವುದು ಜೀವನದುಸಿರಾಗಿ

ಭೂಮಿಯು ತಂಪು ಮರ ಲತೆ ಚಿಗುರಿ
ಕಣ್ಮನ ಸೆಳೆವುದು ಹಸಿರಾಗಿ
ನಾರಿಯರೆಲ್ಲ ನೀರಿಗೆ ಬರುವರು
ನುಡಿಯುತ ಹಾಡುತ ಸಾಲಾಗಿ

ಹಳ್ಳಿಯೊಳೊಂದು ಹಳ್ಳವು ಹರಿಯಲಿ
ಅರಳಲಿ ಗ್ರಾಮೀಣರ ಬದುಕು
ನಾಡಿಗೆ ಅನ್ನವ ನೀಡುವ ರೈತನ
ಬಾಳಲಿ ಮೂಡಲಿ ಹೊಂಬೆಳಕು

By : ವನರಾಗ ಶರ್ಮಾ

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited