Untitled Document
Sign Up | Login    
ಹೆಣ್ಣಿಲ್ಲದೇ ಬದುಕು ಜಗವೆಂಬುದುಂಟೆ?

ಹೆಣ್ಣು ಮಮತೆಯ ಮೂರ್ತಿ ದೇಶ ಕೋಶದ ಕೀರ್ತಿ
ಹೆಣ್ಣಿಲ್ಲದೇ ಬದುಕು ಜಗವೆಂಬುದುಂಟೆ?
ತಾಯಿ ಹೆಂಡತಿ ಮಗಳು ಸೊಸೆ ಸಹೋದರಿ ಅಜ್ಜಿ
ಎಲ್ಲವೂ ತಾನಾಗಿ ಗೈಯ್ಯುವಳು ಸೇವೆ.

ಹೆಣ್ಣು ಸಹನೆಗೆ ಹೆಸರು ತ್ಯಾಗ ಪ್ರೀತಿಗಳುಸಿರು
ಕಾರ್ಯ ಕ್ಷಮತೆಯೊಳಾಕೆಯೇ ಮೊದಲು.
ಹಿಡಿದ ಕೆಲಸವ ಬಿಡದೆ ಪೂರ್ಣಗೊಳಿಸುವ ಶ್ರದ್ಧೆ
ಹೊಂದಿರುವಳಾಕೆಯೇ ಬೇಕು ಶಕ್ತಿಕೊಡಲು.

ನಾರಿ ಮುನಿದರೆ ಮಾರಿ ಎಂಬ ನುಡಿ ದಿಟವುಂಟು
ದುರ್ವ್ಯಸನ ಕೆಡುಕುಗಳಿಗಾಕೆ ಮಾರಿ.
ಸನ್ಮಾರ್ಗ ತೋರಿಸುವ ಸದ್ಭಾವ ಬೋಧಿಸುವ
ಸ್ತ್ರೀಕುಲವ ಗೌರವಿಸಿ ಪ್ರೀತಿಸುವುದೆ ಒಳ್ಳೆದಾರಿ.

ಸ್ತ್ರೀ ಭ್ರೂಣ ಹತ್ಯೆಯನು ಮಾಡುವುದು ಮಹಾಪಾಪ
ಶೋಷಣೆಯ ಅತ್ಯಾಚಾರ ಕ್ರೌರ್ಯವನು ಬಿಡಿರೊ.
ಸಮನಾಗಿ ಪ್ರೀತಿಯಲಿ ಆದರದಿ ಕಾಣುವುದು
ಎಲ್ಲರಿಗು ಕ್ಷೇಮವನು ತರುವದೆಂಬುದ ಕಾಣಿರೊ.

ಅಮ್ಮನನು ಅಕ್ಕನನು ತಂಗಿಯನು ಪತ್ನಿಯನು
ಪ್ರೇಮದಲಿ ಆದರಿಸಿ ಬಾಳಿದರೆ ಬದುಕು.
ಹೆಣ್ಣಾವ ನಾಡಿನಲಿ ಕಣ್ಣೀರು ಹಾಕುವಳೊ
ಸುಖ ಶಾಂತಿ ಅಲ್ಲಿಲ್ಲ ಅಪಮಾನ ನಿಜಕು.

ಹೆಣ್ಣು ಲೋಕದ ಕಣ್ಣು ಭವದ ತಾರಕಿ ಹೆಣ್ಣು
ಹೆಣ್ಣನ್ನು ಅವಗಣನೆ ಮಾಡಿದರೆ ಕೇಡು.
ಭಾರತವು ಮಹಿಳೆಯನು ಪೂಜಿಸುವ ಮಹಾದೇಶ
ಎಂಬ ಕೀರ್ತಿಯಗೀತ ಸೊದರನೆ ಹಾಡು..

By : ವನರಾಗ ಶರ್ಮಾ 

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited