Untitled Document
Sign Up | Login    
ಫಕೀರನ ಆತ್ಮ ಹತ್ಯೆ

ಮುಸ್ಸಂಜೆಯ-ಸೂರ್ಯ ದಣಿದ ಸಮಯ
ಹಾರಲು ಯತ್ನಿಸಿ ಮತ್ತೆ ಅಂಗಾತ ಮಲಗಿದ ಮರಳ ರಾಶಿ
ಮುಗಿಲು ಮುಟ್ಟಲು ಹವಣಿಸಿ ನಿಟ್ಟುಸಿರಿಡುತ್ತಿರುವ ಕುರುಚಲು ಗಿಡ;
ಬೃಹತ್ ಪ್ರಾಣಿಯನ್ನು ನುಂಗಿದ ಹೆಬ್ಬಾವಿನಂತೆ
ಹಿಂದು ಮುಸ್ಲಿಂ ಕ್ರೈಸ್ತರ ಹಸಿರಕ್ತ ಕೆಸರಿನ ಒಜ್ಜೆ ಹೊರಲಾರದೆ
ತೆವಳುತ್ತ ಹರಿಯುತ್ತಿದ್ದರೂ ನಿಂತಂತಿರುವ
ಅಲ್ಲಿ ಆ ನದಿಯ ದಂಡೆಯ ಮೇಲೆ ಆತ ನಿಂತಿದ್ದ:

ಮೊಗದಲ್ಲಿ ದಟ್ಟ ನೋವಿನ ಗೆರೆ
ಫಕೀರನೊಬ್ಬ ಬರುತಿದ್ದ ಸತ್ಯಾಗ್ರಹ ಮುಗಿಸಿ
’ಓಹೋ ಏನು ನಿಂತಿರಿ? ಬಹಳ ಕಾಲವಾಯಿತು ಕಾಣದೆ’
ಕೇಳಿದ ಮುಖದ ತುಂಬ ಬಾರದ ನಗು ತಂದುಕೊಂಡು.
’ವಿಷಾದ ಮಾತ್ರ’ ಮಾರುಲಿದ ಆತ
ಮೌನ ಮುರಿದು ಆಗಸ ನಿಟ್ಟಿಸುತ್ತ.
ಫಕೀರನಿಗೆ ಅರ್ಥವಾಯಿತು,
ವರದಿ ಒಪ್ಪಿಸಿದಂತೆ ಬೆಳಕು ಚಲ್ಲಿದ ವರ್ತಮಾನದ ಮೇಲೆ
’ಶಾಕ್ಯಮುನಿಯೆ, ನೀ ಕಂಡ ಬೋಧಿ ಭಾರತವಿಲ್ಲ;
ಮಂದಿರ ತ್ರಿಶೂಲ ಕೋಠಿ
ಮಸೀದಿ ಬಾಂಬಿನ ಗೋದಾಮು
ಚರ್ಚು ಹರಿತ ಭರ್ಚಿಯ ನೆಲಮಾಳಿಗೆ !
ಮನೆಯ ಮುಂದೆ ರಕ್ತ ರಂಗೋಲಿ
ಪಾರ್ಲಿಮೆಂಟ ಅಸೆಂಬಿಗಳಲ್ಲಿ ಮಾರಾ
-ಮಾರಿಯ ಕಥೆ ಹೇಳುವ ಮುರಿದ ಖುರ್ಚಿ!
ಚಪರಾಸಿಯಿಂದ ದೆಹಲಿಯ ಮಿರಾಶಿಯ ವರೆಗೆ
ಎಗ್ಗಿಲ್ಲದೆ ಕಬಳಿಸಿದ ಲಂಚದ ರಾಶಿ
ತುಣುಕು ರೊಟ್ಟಿ ಹರಕು ಲಂಗ ಕಾಣದ ಸೂರು
ಸ್ಲಂ ಗಲ್ಲಿಯ ಜನತಾ ಜನಾರ್ದನ !
ಪೀಠದಲ್ಲಿ ಪವಿತ್ರ ಭಗವದ್ಗೀತೆ, ಮುಕದ್ದಸ್ ಖೊರಾನ್, ಹೋಲಿ ಬೈಬಲ್
ನದಿಸಂಗಮ, ಸಾಗರ ಸಂಗಮ ಗಿರಿ ಸಂಗಮಕ್ಕೆ ತೊಡರಿಲ್ಲ
ಭಾವಸಂಗಮ ಮಾತ್ರ ಬಾಕಿ !
ಮತಾಂಧತೆಯ ಗಾಳಿಕೈ ಎತ್ತಿ ಒಗೆದ ನರಕದ ಕಲ್ಲು;
ಗರ್ಭ ಗುಡಿಯ ಮೂರ್ತಿಯಂತೆ
ಮೌನವಾಂತಿದೆ ಶುಭ ನುಡಿವ ಶಕುನದ ಹಕ್ಕಿ,
ಭೋರ್ಗಲ್ಲ ಮೇಲೆ ವರ್ಷಿಸಿ ವರ್ಷಿಸಿ
ಸೋತಿದೆ ಮುಗಿಲ ವಾತ್ಸಲ್ಯ;
ಬಿತ್ತಿ ದ್ವೇಷ ಮತ್ಸರದ ವಿಷಬೀಜ
ಬಂಜರಾಗಿದೆ ಧರಣಿಯ ಕರುಣೆ
ಬೆರೆಸಿ ವಿಸರ್ಜನೆಯ ಗರಲ
ಬತ್ತಿದೆ ಸರೋವರದ ಪ್ರೀತಿ.
ಊದಿದ್ದೇನೆ ಊದುವ ಶಂಖ
ಬಾರಿಸಿದ್ದೇನೆ ಜಾಗೃತಿಯ ನಗಾರಿ
ಕಿವುಡು ಸರಕಾರ; ಬಧಿರ ಮತದಾರ
ಮಲಗಿದೆ ಶೋಷಿತ ಪ್ರಜಾಕೋಟಿ
ಅಸಹಾಯಕತೆ ನಿಂತಿದೆ ಬಂಡಗಲ್ಲಿನಂತೆ.

ಹಗಲು ರಾತ್ರಿ ಕುಳಿತು
ಬರೆದ ಅಸೈನಮೆಂಟ ಬಿಡುಗಡೆ ಮಾಡಿದೆ
ಮಾಧ್ಯಮಗಳಿಗೆ ಪ್ರಯೋಜನ ಅಷ್ಟೆ’
ಹೇಳಿ ಮುಗಿಸುತ್ತಿದ್ದಂತೆ
ತಥಾಗತ ಗಂಡಕೀನದಿಯಲ್ಲಿ ಫಳಕ್ಕನೆ ಮುಳುಗಿದ;
ಫಕೀರ ಹೊರಟ; ಹೆಜ್ಜೆ ಎತ್ತಿಡಲಾರದ ಭಾರ
ಅನಂತ ನೀಲ ಆಕಾಶ ಕೈ ಬೀಸಿತು
ಸಿಂಧೂ ನದಿಯತ್ತ ನಡೆದ..ತುಂಬಿ ಹರಿಯುತ್ತಿತ್ತು ನದಿ..
ಇಳಿದ ಮುಂದೆ ಮುಂದೆ ಸಾಗಿದ..

By : ವನರಾಗ ಶರ್ಮಾ

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited