Untitled Document
Sign Up | Login    
ಭಿನ್ನಮತ

ಮತ್ತೆ ಆರಂಭ ಭಿನ್ನಮತ
ಅಧಿಕಾರದ ಆರೋಹಣ ನೆತ್ತಿಗೇರಿದ ಪಿತ್ತ
ತಿರುಗಲೊಂದು ಗೂಟದ ಕಾರಿನತ್ತ ಚಿತ್ತ
ಇವರು ಬಂಡಾಯವಾದಿಗಳೋ
ಇವರು ಬಂಡುಕೋರರೋ
ವ್ಯಾಕರಿಕೆಯ ಹೇಸಿಗೆಗೆ ಹೆಸರಿಟ್ಟರು ಹೋರಾಟ

ಅತೃಪ್ತ ಆತ್ಮಗಳು ಒಟ್ಟುಗೂಡಿವೆ ಮತ್ತೆ
ಸಿದ್ದವಾಯ್ತು ಮಾರುದ್ದದ ಬೇಡಿಕೆಗಳ ಪಟ್ಟಿ
ಕೆಲವರಿಗೆ ಬೇಕೆಬೇಕಂತೆ ಮಂತ್ರಿಗಿರಿ
ಉಳಿದವರಿಗೆ ನಿಗಮ ಬೋರ್ಡಿನ ಮುಸುರೆ ಕಡಾರಿ
ಖಜಾನೆಯ ಕೋಟಿ ರೊಕ್ಕ ಸೂಟುಕೇಸು ತುಂಬಿತು
ನೆಕ್ಕಿ ಚೊಕ್ಕ ಮಾಡೊ ಭೂಪ ಮೊಗವರಳಿಸಿ ನಿಂತನು

ಮೈಕು ಹಿಡಿದ ನಾಯಕ ಬೊಗಳೆ ಬಿಟ್ಟ ಬರದಲಿ
ಇದೆ ಅಖಂಡ ಏಕತೆ ನಮ್ ಪಕ್ಸದಲ್ಲಿ
ಮೀಡ್ಯಾದೋರು ಸುಳ್ಳಾಡ್ತಾರೆ ನಂಬಕ್ಕಾಗಲ್ಲ
ಹಸಿ ಸುಳ್ಳು-ಪಳ್ಳು ಭಿನ್ನಮತವೆ ಎಲ್ಲಿ
ನಾವೆಲ್ಲರು ಒಂದು
ನಮ್ಮವರೆ ಅವರು ಎಂದೆಂದೂ

ಎಚ್ಚರಿಕೆ ಅತೃಪ್ತರೆ ತಿರುಗಿ ಬನ್ನಿ ಸಧನಕೆ
ಘರ್ಜಿಸುವ ಮುಖ್ಯಮಂತ್ರಿ ಮಾತಿನಲ್ಲೆ ಒನಕೆ
ಸರ್ಕಾರ ಉಳಿವುದಾ ಒಳಗೊಳಗೆ ಅಂಜಿಕೆ
ಖುರ್ಚಿ ಉಳಿಸೊ ಭಗವಂತ ಎರಗಿದನವನ ಚರಣಕೆ
ಈ ನಡುವೆ ಪರಿವಾರದ ರಂಗಪ್ರವೇಶ
ತಿರುತಿರುಗಿಸಿ ಲಾಠಿ, ಶಿಸ್ತು ಪಾಠ ವೀರಾವೇಶ

ಶುರುವಾಯಿತು ಸಂಧಾನ ರಾಜೀ-ನಾಜೂಕು
ಅಷ್ಟು ಕೊಡುವ, ಇಷ್ಟು ಕೊಡುವ ಎಷ್ಟು ಬೇಕು
ಕದ ಹಾಕಿ ಕೆಲತಾಸು ಸೀಕ್ರೇಟ್ ಮೀಟಿಂಗು
ಡ್ರಿಂಕ್ಸು-ಫುಲ್‍ಮಿಲ್ಸು ಓಳಿನ ಪಟ್ಟಾಂಗು
ಸುತ್ತುಗಳು ಮುಗಿಯುತ್ತಿವೆ, ನಿಮ್ ಮಾತಿಗೆ ನಾಸಲ್ಲೆ
ಸಡಿಲವಲ್ಲ ಬಿಗಿಪಟ್ಟು, ಕೊಟ್ರಾಯ್ತು ಅಧಿಕಾರ ಇಲ್ಲಾಂದ್ರೆ ಒಲ್ಲೆ

ಮುರಿದು ಬಿದ್ದ ಸಂಧಾನ, ಹಿಂದೆ ರೆಸಾರ್ಟ್ ರಾಜಕಾರಣ
ತಿಪ್ಪೆ ತಿನ್ನೊ ಕೊರಮರ ಸಾಮೂಹಿಕ ಅಪಹರಣ
ಈ ಕುದುರೆಗೆ ಇಷ್ಟುಬೆಲೆ ಎಳೆದು ಕಟ್ಟಿ ಲಾಯಕೆ
ದಾರಿಬಿಡಿ ಹಾರತೊಟ್ಟ ಪುಂಡರು ಬರುವರು ವಿಧಾನಸೌಧಕೆ
ಗವರ್ನರ್ ಹೇಳವ್ರೆ ಮ್ಯಾಜಿಕ್ ನಂಬರ್ ಬೇಕಂತೆ
ಒಂದ್ ವಾರದ್ ಗಡವು ಆಮೆಲೆ ವಿಶ್ವಾಸ ಮತವಂತೆ

ಡೊಂಕುಬಾಲದ ನಾಯಕರ ವರ್ತನೆ ಹೊಲಸು ಕೊಚ್ಚೆ
ಭಿನ್ನಮತದ ನಾಟಕದಲಿ ಜಾರಿಹೋಯ್ತು ಕಚ್ಚೆ
ಮತಹಾಕಿದ ನಂತರ ನೀನ್ಯಾವನೋ ಶ್ರೀಸಾಮಾನ್ಯ
ಮಠಾಧಿಪತಿಗಳಿಗೆ ಸಪ್ಪಾಕಿ ಮಾಡಲಿಲ್ಲ ಮಾನ್ಯ
ಇಹಕೂ ಇಲ್ಲ, ಪರಕೂ ಇಲ್ಲ, ಇವರೆಲ್ಲೆಲ್ಲೂ ಸಲ್ಲ
ಊರಿಗೆ ಜನರಲ್ಲದ ಐಕಾನ್‍ಗಳು ಮಸಣಕೆ ಹೆಣವೂ ಅಲ್ಲ

ಶವದ ಮೇಲೆ ಹೋಳಿಗೆಯ ಬೇಯಿಸುವ ಹಿಂಡು
ಹಸಿದ ತೋಳ-ಕಿರುಬಗಳು. ತಿನ್ನಲಿ ನಾಯಿಗಳವರ ಪಿಂಡ
ದೆವ್ವಮೆಟ್ಟಿ, ಚೋಳುಕಡಿದ ಹುಚ್ಚುಕೋಡಗಗಳ ಬ್ರೇಕ್ ಡ್ಯಾನ್ಸು
ಹೈಡ್ರಾಮ, ಸಂವಿಧಾನದ ನಂಗಾನಾಚ್ ಯಾರಿಗಿದೆ ಮ್ಯಾನರ್ಸು
ದಿನದಿನವೂ ದೊಂಬರಾಟ, ಬೀದೀಲಿ ಬೆತ್ತಲಾಯ್ತು ಪ್ರಜಾಪ್ರಭುತ್ವ
ಅವಕಾಶವಾಧಿ, ಆಶಾಡಭೂತಿಗಳು ಮಾರೆಬಿಟ್ಟರು ಆದರ್ಶ-ತತ್ವ...

By : ವಿಪ್ರವಿಶ್ವತ್(ವಿಶ್ವಾಸ್ ಭಾರದ್ವಾಜ 

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited