Untitled Document
Sign Up | Login    
ನನಸಾಗುತ್ತಿರುವ ದೇಶೀ ನಿರ್ಮಿತ ಪುನರುಪಯೋಗಿ ಬಾಹ್ಯಾಕಾಶ ನೌಕೆ ಕನಸು

ಇಸ್ರೋ ನಿರ್ಮಿತ ಪುನರುಪಯೋಗಿ ಬಾಹ್ಯಾಕಾಶ ನೌಕೆ ಮಾದರಿ (ಚಿತ್ರ ಕೃಪೆಃ ಡಿಫೆನ್ಸ್.ಪಿಕೆ)

ಬಾಹ್ಯಾಕಾಶದಲ್ಲಿ ಭಾರತ ತನ್ನದೇ ಛಾಪು ಮೂಡಿಸಿದ್ದು, ಇದೀಗ ದೇಶೀ ನಿರ್ಮಿತ ಪುನರುಪಯೋಗಿ ಬಾಹ್ಯಾಕಾಶ ಉಡಾವಣಾ ನೌಕೆ (ಸ್ಪೇಸ್ ಷಟಲ್) ಯ ಕನಸೂ ನನಸಾಗುವ ದಿನಗಳು ಹತ್ತಿರವಾಗುತ್ತಿದೆ.

ಸರಕಾರಿ ಸ್ವಾಮ್ಯದ ಬಾಹ್ಯಾಕಾಶ ಸಂಸ್ಥೆ, ಇಸ್ರೋ ಪ್ರಾಯೋಗಿಕ ಉಡಾವಣಾ ನೌಕೆಯನ್ನು ನಿರ್ಮಿಸುತ್ತಿದ್ದು, ವಿಮಾನವನ್ನು ಹೋಲುವ, 1.5 ಟನ್ ತೂಕದ ನೌಕೆ ಈ ವರ್ಷದ ಜುಲೈ ಅಂತ್ಯಕ್ಕೆ ಅಥವಾ ಆಗಷ್ಟ್ ತಿಂಗಳಲ್ಲಿ ತನ್ನ ಚೊಚ್ಚಲ ಪ್ರಯಾಣ ಕೈಗೊಳ್ಳುವ ನಿರೀಕ್ಷೆಯಿದೆ. ಇದನ್ನು ಶ್ರೀಹರಿಕೋಟಾದ ಸತೀಶ್ ಧಾವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗುತ್ತದೆ.

ಕೇರಳದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಈ ನೌಕೆ ನಿರ್ಮಾಣದ ಅಂತಿಮ ಘಟ್ಟದಲ್ಲಿದೆ. ಇದನ್ನು ಪುನರುಪಯೋಗಿ ಉಡಾವಣಾ ವಾಹನ (reusable launch vehicle ಅಥವಾ ಸಂಕ್ಷಿಪ್ತವಾಗಿ, RLV-TD) ಎಂದು ಕರೆಯಲಾಗುತ್ತದೆ.

ಉಪಗ್ರಹ ಉಡಾವಣೆ ಅತ್ಯಂತ ಕ್ಲಿಷ್ಠಕರ ಹಾಗೂ ದುಬಾರಿಯಾಗಿದ್ದು, ಬಾಹ್ಯಾಕಾಶ ತಂತ್ರಜ್ನಾದಲ್ಲಿ ಸಾಕಷ್ಟು ಅಭಿವೃದ್ಧಿ ಮತ್ತು ಯಶಸ್ಸು ಸಾಧಿಸಿದ ಭಾರತ ಈಗ ಪುನರುಪಯೋಗಿ ಉಡಾವಣಾ ನೌಕಾ ತಂತ್ರಜ್ನಾವನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿದೆ. ಇದರ ಯಶಸ್ಸಿನಿಂದ ಪ್ರಸ್ತುತ 1ಕೆ.ಜಿ. ತೂಕದ ವಸ್ತುವನ್ನು ಬಾಹ್ಯಾಕಾಶಕ್ಕೆ ತಲಪಿಸಲು ಸುಮಾರು 5,000 ಅಮೆರಿಕನ್ ಡಾಲರ್ ವೆಚ್ಚ ತಗಲುತ್ತಿದ್ದು, ಭಾರತ ತನ್ನದೇ ನೌಕೆಯನ್ನು ಅಭಿವೃದ್ಧಿಪಡಿಸಿ ಈ ವೆಚ್ಚವನ್ನು ಕೇವಲ 500 ಅಮೆರಿಕನ್ ಡಾಲರ್ ಗಳಿಗೆ ಇಳಿಸುವ ಇರಾದೆ ಹೊಂದಿದೆ. ಇದರಿಂದ ವಿಶ್ವದ ಉಳಿದ ದೇಶಗಳೂ ತಮ್ಮ ಉಪಗ್ರಹಗಳನ್ನು ಭಾರತದಿಂದಲೇ ಉಡಾಯಿಸುವ, ಆ ಮೂಲಕ ವಿದೇಶೀ ವಿನಿಮಯ ಗಳಿಸುವ ಅವಕಾಶ ಭಾರತದ್ದಾಗುತ್ತದೆ.

ಸದ್ಯಕ್ಕೆ ಈ ನೌಕೆಯನ್ನು ಮಾನವ ಸಹಿತ ಬಾಹ್ಯಾಕಾಶ ಪ್ರಯಾಣಕ್ಕೆ ಬಳಸುವ ಜೋಜನೆ ಇಲ್ಲ. ಮಾಧ್ಯಮದಲ್ಲಿ ವರದಿಯಾದಂತೆ, 100 ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ ಮೊದಲ ಹಂತದಲ್ಲಿ ಈ ನೌಕೆ 9 ಟನ್ ತೂಕದ ಪ್ರೊಪೆಲ್ಲೆಂಟ್ ಗಳನ್ನು ಉಪಯೋಗಿಕೊಂಡು ಏಕ ಘನ ರಾಕೆಟ್ ಬೂಸ್ಟರ್ (single solid rocket booster) ನಿಂದ ಉಡಾವಣೆಗೊಳ್ಳಲಿದೆ.

ಉಡಾವಣೆಗೊಂಡ ನಂತರ ಈ ನೌಕೆ ಬಾಹ್ಯಾಕಾಶದಲ್ಲಿ 70ಕಿ.ಮಿ ಎತ್ತರಕ್ಕೆ ಜಿಗಿದು, ನಂತರ ಬಂಗಾಳ ಕೊಲ್ಲಿಯಲ್ಲಿ ಇಳಿಯಲಿದೆ. ಈ ಪರಿಕ್ಷಾರ್ಥ ಉಡಾವಣೆಗೆ ಸುಮಾರು 900 ಸೆಕೆಂಡುಗಳು ತಗಲುವ ನಿರೀಕ್ಷೆಯಿದೆ. ಬಾಹ್ಯಾಕಾಶ ಸೇರಿದ ನಂತರ ನೌಕೆ ಪುನಃ ಭೂಮಿಯತ್ತ ಚಲಿಸುತ್ತ ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಅದರ ವೇಗ ಶಬ್ದದ ವೇಗದಿಂದಲೂ ಐದು ಪಟ್ಟು ಹೆಚ್ಚಿರುತ್ತದೆ. ವಿಜ್ನಾನಿಗಳಿಗೆ ಇದು ಅತ್ಯಂತ ಪ್ರಮುಖವಾದ ಪರೀಕ್ಷೆಯಾಗಿದ್ದು, ಆ ವೇಗದಲ್ಲಿ ಉಂಟಾಗುವ ಸುಮಾರು 1,200 ಸೆಲ್ಶಿಯಸ್ ನಷ್ಟು ತಾಪಮಾನದಿಂದ ನೌಕೆಗೆ ಹಾನಿಯಾಗದಂತೆ ತಡೆಯಲು ಅದರ ಮುಂಭಾಗವನ್ನು ಕಾರ್ಬನ್-ಕಾರ್ಬನ್ ನಿಂದ ರಕ್ಷಿಸಲಾಗಿದೆ. ಮಾತ್ರವಲ್ಲ, ನೌಕೆಯ ಹೊರಭಾಗದ ಸುತ್ತಲೂ 600 ಉಷ್ಣ ನಿರೋಧಕ ಟೈಲ್ ಗಳನ್ನೂ ಬಳಸಲಾಗಿದೆ.

ಭೂಮಿಗೆ ವಾಪಸ್ಸಾದ ನೌಕೆ ಸಮುದ್ರದಲ್ಲೇ ಮುಳುಗಲಿದ್ದು, ಅದನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲವೆಂದು ವಿಜ್ನಾನಿಗಳು ತಿಳಿಸಿದ್ದಾರೆ. ಒಂದು ವೇಳೆ ಅದನ್ನು ಎತ್ತಲೇ ಬೇಕಾದ ಸಂದರ್ಭ ಎದುರಾದರೆ ಭಾರತೀಯ ನೌಕಾ ಪಡೆ ಮತ್ತು ಕೋಸ್ಟ್ ಗಾರ್ಡ್ ಸಹಾಯ ಪಡೆಯಲಾಗುವುದು ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ನೌಕೆಯನ್ನು ವಿಮಾನ ನಿಲ್ದಾಣದ ರನ್ ವೇ ಯಲ್ಲೇ ಇಳಿಸುವುದು ಇಸ್ರೋ ವಿಜ್ನಾನಿಗಳ ಗುರಿಯಾಗಿದೆ.

ವಿಶ್ವದ ಗಮನ ಸೆಳೆಯುವ ಈ ಯೋಜನೆಯಲ್ಲಿ ವಿವಿಧ ತಂತ್ರಜ್ನಾನಗಳನ್ನು ಅಳವಡಿಸಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ, ಹೈಪರ್ ಸೋನಿಕ್ ಯಾನ, ಸ್ವಯಂಚಾಲಿತ ಅವರೋಹಣ (autonomous landing), ಅಲ್ಲದೆ ಹೈಪರ್ ಸೋನಿಕ್ ಯಾನ ಮತ್ತು ಏರ್ ಬ್ರೀದಿಂಗ್ ಪ್ರೊಪಲ್ಷನ್ ಮುಂತಾದ ಅತ್ಯಾಧುನಿಕ ತಂತ್ರಜ್ನಾನದ ಬಳಕೆಯಾಗಲಿದೆ. ಇವೆಲ್ಲವನ್ನೂ ಹಂತ ಹಂತವಾಗಿ ಪ್ರಯೋಗಿಸಲಾಗುವುದು. ಮೊದಲ ಹಂತದಲ್ಲಿ ಹೈಪರ್ ಸೋನಿಕ್ ಯಾನ ಪರೀಕ್ಷೆ ನಡೆಯಲಿದ್ದು, ನಂತರ ಸ್ವಯಂಚಾಲಿತ ಅವರೋಹಣ, ವಾಪಸಾತಿ ಯಾನ ಮತ್ತು ಸ್ರ್ಕಾಮ್ ಜೆಟ್ ಪ್ರೊಪಲ್ಷನ್ ಮುಂತಾದ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಪುನರುಪಯೋಗಿ ಬಾಹ್ಯಾಕಾಶ ನೌಕಾ ಉಡಾವಣಾ ಯೋಜನೆ ಇಸ್ರೋ ವಿಜ್ನಾನಿಗಳಿಗೆ ಒಂದು ಸವಾಲಾಗಿದ್ದು, ಅದರ ಯಶಸ್ಸು ಭಾರತದ ಗರಿಮೆಯನ್ನು ವಿಶ್ವ ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿಸಲಿದೆ. ಈಗಾಗಲೇ ಈ ಕ್ಷೇತ್ರದಲ್ಲಿ ವಿಶ್ವವೇ ಬೆರಗಾಗುವಂತೆ ಸಾಧನೆ ಮಾಡಿದ ಇಸ್ರೋ ವಿಜ್ನಾನಿಗಳು ಈ ಯೋಜನೆಯಲ್ಲೂ ಯಶಸ್ವಿಯಾಗುತ್ತಾರೆ ಎನ್ನುವುದರಲ್ಲಿ ಸಂದೇಹವಿಲ್ಲ.

 

Author : ಶಂಕರ್ ಎಸ್. 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited