Untitled Document
Sign Up | Login    
ನಭಕ್ಕೆ ನೆಗೆದ ಪಿಎಸ್‍ಎಲ್‍ವಿ-ಸಿ 23

.

ಮಂಗಳಯಾನದ ಉಪಗ್ರಹದ ಯಶಸ್ವಿ ಉಡ್ಡಯನ ನೆರವೇರಿಸಿದ್ದ ಇಸ್ರೋ ಸೋಮವಾರ(ಜೂನ್ 30) ಮತ್ತೊಂದು ಮಹತ್ವದ ಸಾಧನೆ ಮೆರೆದಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ ವಿ - ಸಿ 23 ಎಂಬ ಉಪಗ್ರಹವಾಹಕದ ಮೂಲಕ 5 ವಿದೇಶಿ ಉಪಗ್ರಹಗಳನ್ನು ಸೋಮವಾರ ಬೆಳಗ್ಗೆ 9.52ಕ್ಕೆ ಯಶಸ್ವಿಯಾಗಿ ಉಡಾಯಿಸಿದೆ. ಈ ಐತಿಹಾಸಿಕ ಕ್ಷಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ವೀಕ್ಷಿಸಿದ್ದು ವಿಶೇಷ. ಇದಕ್ಕಾಗಿ ಅವರು ಶನಿವಾರ ರಾತ್ರಿಯೇ ಶ್ರೀಹರಿಕೋಟಾ ತಲುಪಿದ್ದರು. ಶನಿವಾರ ಸಂಜೆಯೇ 49 ಗಂಟೆಗಳ ಕ್ಷಣಗಣನೆ ಆರಂಭವಾಗಿತ್ತು.

ಅಂತರಿಕ್ಷದಲ್ಲಿ ಬಾಹ್ಯಾಕಾಶ ಭಗ್ನಾವಶೇಷ (ಸ್ಪೇಸ್ ಡೆರ್ಬಿಸ್) ಗೋಚರಿಸಿದ ಕಾರಣ ಉಡಾವಣೆ ಸಮಯವನ್ನು ಈ ಹಿಂದೆ ನಿಗದಿಯಾಗಿದ್ದ 9.49ರಿಂದ ಮೂರು ನಿಮಿಷಗಳ ಕಾಲ ಮುಂದೂಡಲಾಗಿತ್ತು. ಈ ಸಮಯಕ್ಕೆ ರಾಕೆಟ್ ಉಡಾವಣೆ ಮಾಡಿದರೆ ಉಪಗ್ರಹಗಳಿಗೆ ಎರಡು ಅವಶೇಷ ವಸ್ತುಗಳು ಡಿಕ್ಕಿಯಾಗಬಹುದೆಂಬ ಆತಂಕವೇ ಇದಕ್ಕೆ ಕಾರಣ.

ಭಗ್ನಾವಶೇಷಗಳು ಡಿಕ್ಕಿಯಾದರೆ ಉಪಗ್ರಹಗಳಿಗೆ ಹಾನಿಯಾಗಬಹುದು ಇಲ್ಲವೇ ನಶಿಸಿಹೋಗುವ ಅಪಾಯ ಹೆಚ್ಚು. ಉಪಗ್ರಹಗಳನ್ನು ನೌಕೆಗೆ ವರ್ಗಾಯಿಸುವಾಗ ಮತ್ತು ಕಕ್ಷೆಯಲ್ಲಿ ಪರಿಭ್ರಮಣ ಆರಂಭಿಸುವಾಗ ಇವುಗಳು ಅಪ್ಪಳಿಸಿದರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಇಸ್ರೋ ಸಂಸ್ಥೆಯ ಸ್ಪೇಸ್ ಡೈನಾಮಿಕ್ಸ್ ಸಲಹೆಗಾರ ವಿ.ಆದಿಮೂರ್ತಿಯವರ ಅಭಿಮತ.

ಇದರೊಂದಿಗೆ ಉಪಗ್ರಹ ಉಡಾವಣೆ ಕ್ಷೇತ್ರದಲ್ಲಿ ಇಸ್ರೋ ಅಂತಾರಾಷ್ಟ್ರೀಯ ಮಟ್ಟದ ಪೈಪೋಟಿ ನೀಡುವ ಮಟ್ಟಿಗೆ ಬೆಳೆದಂತಾಗಿದೆ. ಸ್ವತಃ ಅತಿದೊಡ್ಡ ಉಪಗ್ರಹ ಉಡಾವಣಾ ಕೇಂದ್ರ ಹೊಂದಿದ್ದರೂ ಫ್ರಾನ್ಸ್ ತನ್ನ ಉಪಗ್ರಹವನ್ನು ಇಸ್ರೋ ಮೂಲಕ ಉಡಾವಣೆ ಮಾಡಿಸಿದ್ದು ಈ ಸಲದ ವಿಶೇಷ. ಈ ಹಿಂದೆಲ್ಲಾ ಭಾರತ ತನ್ನ ಮಹತ್ವದ ಉಪಪಗ್ರಹಗಳ ಉಡಾವಣೆಗೆ ಫ್ರಾನ್ಸ್ ಅನ್ನು ಆಯ್ಕೆ ಮಾಡಿಕೊಂಡಿತ್ತು. ಆದರೆ, ಪರಿಸ್ಥಿತಿ ಕ್ರಮೇಣ ಬದಲಾಗಿದೆ. ದೊಡ್ಡ ದೇಶಗಳು ಈಗ ಭಾರತದತ್ತ ಮುಖ ಮಾಡತೊಡಗಿವೆ. ಇದಕ್ಕೆ ಕಡಿಮೆ ವೆಚ್ಚದ ತಂತ್ರಜ್ಞಾನ ಕಾರಣವಿರಬಹುದು.

ಪಿಎಸ್‍ಎಲ್‍ವಿ-ಸಿ 23: ಧ್ರುವೀಯ ಉಪಗ್ರಹ ಉಡಾವಣಾ ವಾಹನ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್‍ಎಲ್‍ವಿ) ಎಂದೇ ಜನಜನಿತ. ಇದು ಈ ಬಾರಿ ಫ್ರಾನ್ಸ್ ನ ಭೂವೀಕ್ಷಣಾ ಉಪಗ್ರಹ ಸ್ಪಾಟ್-7, ಜತೆಗೆ ವಿವಿಧ ಉದ್ದೇಶಗಳ ಜರ್ಮನಿಯ ಎಐಸ್ಯಾಟ್, ಕೆನಡಾದ ಯುಟಿಐಎಎಸ್ ಮತ್ತು ಸಿಂಗಾಪುರದ ವಿಇಎಲ್‍ಒಎಕ್ಸ್-1 ಉಪಗ್ರಹಗಳನ್ನೂ ಕೊಂಡೊಯ್ಯಲಿದೆ. ಪಿಎಸ್‍ಎಲ್‍ವಿ- ಸಿ 23 ನಾಲ್ಕು ಹಂತಗಳನ್ನು ಮತ್ತು 4 ವರ್ಧನ ರಾಕೆಟ್‍ಗಳನ್ನು ಹೊಂದಿದ್ದು 230 ಟನ್ ತೂಕ ಹೊಂದಿದೆ. ಉದ್ದ 44.4 ಮೀಟರ್‍ಗಳು.
ರಾಕೆಟ್‍ನಲ್ಲಿ ಉಪಗ್ರಹಗಳ ಒಟ್ಟು ತೂಕವೇ 830 ಕೆ.ಜಿಗಳು. ಪಿಎಸ್‍ಎಲ್‍ವಿ ಕನಿಷ್ಠ 1,600 ಕೆ.ಜಿಗಳಷ್ಟು ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳು ಇಸ್ರೋದತ್ತ ಆಕರ್ಷಿತಗೊಂಡಿವೆ. ಇಸ್ರೋ ಇಲ್ಲಿಯವರೆಗೆ 35 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ.

ಫ್ರಾನ್ಸ್ ನ ಏರ್‍ಬಸ್ ರಕ್ಷಣಾ ಮತ್ತು ಅಂತರಿಕ್ಷ ವಿಭಾಗದ `ಸ್ಪಾಟ್ 7' ದೂರ ಸಂವೇದಿ ಉಪಗ್ರಹ. ಸೌರ ಸಮಕಾಲಿನ ಪಥದ ನಂತರ ಸ್ಪಾಟ್ 7 ಉಪಗ್ರಹವನ್ನು ಸ್ಪಾಟ್ 6 ಉಪಗ್ರಹದ ವಿರುದ್ಧ ದಿಕ್ಕಿಗೆ ತರಲಾಗುತ್ತದೆ. ಅಲ್ಲಿ ಸ್ಪಾಟ್ 7 ಉಪಗ್ರಹವು ಭೂ ಸರ್ವೇಕ್ಷಣಾ ಕಾರ್ಯ ನಿರ್ವಹಿಸಲಿದೆ.

ಸಿಂಗಾಪುರದ ನಾನ್‍ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದ ಉಪಗ್ರಹ ವೆಲಾಕ್ಸ್-1 ನ್ಯಾನೋ ತೂಕ 7ಕೆ.ಜಿ. ಮೈಕ್ರೋ ಲೆಕ್ಟ್ರೋಮೆಕಾನಿಕಲ್ ಸೆನ್ಸಾರ್(ಎಂಇಎಂಎಸ್) ಒಳಗೊಂಡ ಎತ್ತರದ ಸೂಚಕ ಹಾಗೂ ಇತರೆ ಉಪಯೋಗಗಳಿಗಾಗಿ ಇದನ್ನು ಬಳಸಲಾಗುತ್ತದೆ.

ಡಿಎಲ್‍ಆರ್ ಜರ್ಮನಿಯ ಎಐಸ್ಯಾಟ್ ತೂಕ: 14 ಕೆ.ಜಿ ಹೊಂದಿದೆ. ಇದು ಜರ್ಮನಿಯ ಮೊದಲ ನ್ಯಾನೋ ಉಪಗ್ರಹವಾಗಿದ್ಉದ, ಎಐಎಸ್(ಆಟೋಮ್ಯಾಟಿಕ್ ಐಡೆಂಟಿಫಿಕೇಷನ್ ಸಿಸ್ಟಂ)ಸಂದೇಶಗಳ ಮೂಲಕ ಜಗತ್ತಿನ ಸಮುದ್ರ ಟ್ರಾಫಿಕ್ ವ್ಯವಸ್ಥೆಯ ಬಗ್ಗೆ ಗಮನವಹಿಸುವುದು

ಕೆನಡಾ ಅಂತರಿಕ್ಷ ಕೇಂದ್ರದ ತಲಾ 15ಕೆ.ಜಿ ತೂಕದ ಎನ್‍ಎಲ್‍ಎಸ್ 7.1(ಕಾನ್-ಎಕ್ಸ್4) ಮತ್ತು 7.2(ಕಾನ್-ಎಕ್ಸ್5)
ಎರಡು ಉಪಗ್ರಹಗಳು ಇಂದು ಉಡಾವಣೆಗೊಂಡ ಉಪಗ್ರಹಗಳಲ್ಲಿ ಎರಡು. ಇವು ಗಗನನೌಕೆಗಳ ಖಚಿತವಾದ ಹಾರಾಟದ ಬಳಕೆಗಾಗಿ ಉಪಯೋಗಿಸಲ್ಪಡುತ್ತವೆ.

 

Author : ಸುಧನ್ವ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited