ನಿಮ್ಮ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಚಾರ್ಜರ್ ಮನೆಯಲ್ಲಿ ಮರೆತು ಹೋಗಿದ್ದೀರಾ? ಚಾರ್ಜರ್ ಗೆ ಹುಡುಕಾಟ ಬೇಡ. ಕೇವಲ ಸಿಗರೇಟು ಹಚ್ಚಿ ಸೇದಿದ ನಂತರ ಉಳಿಯುವ ಫಿಲ್ಟರ್ ನಿಂದ ನಿಮ್ಮ ಮೊಬೈಲ್, ಲ್ಯಾಪ್ ಟಾಪ್ ಚಾರ್ಜ್ ಮಾಡಿಕೊಳ್ಳಿ!. ಇಂಧನ ಸಂಗ್ರಹ ವಿಚಾರದಲ್ಲಿ ಪರಿಸರ ಸ್ನೇಹಿಯಾದ ಪರಿಹಾರವೊಂದನ್ನು ಕಂಡುಕೊೞುವಲ್ಲಿ ಸಿಗರೇಟು ಫಿಲ್ಟರ್ ಗಳು ಮಹತ್ತರ ಪಾತ್ರವಹಿಸಲಿವೆ ಎಂದರೆ ಅಚ್ಚರಿ ಪಡಬೇಡಿ.
ಹೌದು, ಆ ದಿನಗಳು ದೂರವಿಲ್ಲ. ದಕ್ಷಿಣ ಕೊರಿಯಾದ ವಿಜ್ನಾನಿಗಳ ತಂಡವೊಂದು ಸಿಗರೇಟು ಸೇದಿದ ನಂತರ ಉಳಿಯುವ ಫಿಲ್ಟರುಗಳನ್ನು ಉಪಯೋಗಿಸಿ, ಕಂಪ್ಯೂಟರ್, ಬ್ಯಾಟರಿ ಚಾಲಿತ ಕಾರು, ಮೊಬೈಲ್ ಮುಂತಾದವುಗಳಲ್ಲಿ ಇಂಧನ ಸಂಗ್ರಹ ಮಾಡುವ ಉತ್ತಮ ಕ್ಷಮತೆಯ ವಸ್ತುವೊಂದನ್ನು ತಯಾರುಮಾಡಿದೆ.
"ಸಿಗರೇಟು ಫಿಲ್ಟರ್ ಗಳಲ್ಲಿ 'ಸೆಲ್ಲ್ಯುಲೋಸ್ ಅಸಿಟೇಟ್' ಫೈಬರ್ ಎಂಬ ವಸ್ತುವನ್ನು ಬಹುವಾಗಿ ಉಪಯೋಗಿಸುತ್ತಾರೆ. ಇದನ್ನು ಸುಲಭವಾಗಿ 'ಪೈರೋಲಿಸಿಸ್' ಎಂಬ ಏಕ-ಹಂತದ ದಹನ ವಿಧಾನದಿಂದ ಇಂಗಾಲ-ಆಧಾರಿತ ವಸ್ತುವಾಗಿ ಮಾರ್ಪಾಡುಮಾಡಬಹುದು" ಎಂದು ಸಿಯೋಲ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರೊ.ಜೋಂಗ್ಯೋಪ್ ಯಿ ಅವರು ಹೇಳುತ್ತಾರೆ.
ಈ ದಹನ ವಿಧಾನದಿಂದ ಸಿಗುವ ಇಂಗಾಲ ಆಧಾರಿತ ವಸ್ತುವಿನಲ್ಲಿ ಅನೇಕ ಸಣ್ಣ ಸಣ್ಣ ತೂತುಗಳಿದ್ದು, ಅತಿ ಕ್ಷಮತೆಯ ಸುಪರ್ ಕೆಪಾಸಿಟಿವ್ ವಸ್ತುಗಳಾಗಿ ಅವು ಕಾರ್ಯ ನಿರ್ವಹಿಸಲು ಸಹಾಯವಾಗುತ್ತದೆ. ಈ ವಸ್ತುವನ್ನು ಸುಪರ್ ಕೆಪಾಸಿಟರ್ ಇಲೆಕ್ಟ್ರೋಡ್ (ಇಲೆಕ್ಟ್ರೋ ಕೆಮಿಕಲ್ ಘಟಕ) ಗಳಿಗೆ ಲೇಪನ ಮಾಡಬಹುದಾಗಿದ್ದು, ಅವುಗಳು ಅತೀ ಹೆಚ್ಚಿನ ವಿದ್ಯುತ್ ಇಂಧನವನ್ನು ಸಂಗ್ರಹಿಸಿಡುವ ಕ್ಷಮತೆಯನ್ನು ಪಡೆಯುತ್ತವೆ.
ಅತಿ ಹೆಚ್ಚಿನ ಸುಪರ್ ಕೆಪಾಸಿಟರ್ ಗಳಿಗೆ ಹೆಚ್ಚಿನ ಮೇಲ್ಮೈ ಪ್ರದೇಶ (ಸರ್ಫೇಸ್ ಏರಿಯಾ) ಅಗತ್ಯವಿದ್ದು, ಅಧಿಕವಾದ ಸಣ್ಣ ಸಣ್ಣ ತೂತುಗಳನ್ನು ಅಳವಡಿಸುವುದರಿಂದ ಇದನ್ನು ಸಾಧಿಸಬಹುದು ಎಂದು ಪ್ರೊ. ಯಿ ಹೇಳುತ್ತಾರೆ.
ಸಣ್ಣ ಹಾಗೂ ದೊಡ್ಡ ತೂತುಗಳ ವ್ಯವಸ್ಥಿತ ಜೋಡಣೆಯಿಂದ ಅಧಿಕ ವಿದ್ಯುತ್ ಸಾಂಧ್ರತೆ ಸಾಧ್ಯವಾಗುತ್ತದೆ. ಇದು ಸುಪರ್ ಕೆಪಾಸಿಟರ್ ಗಳು ಕ್ಷಿಪ್ರವಾಗಿ ಚಾರ್ಜ್ / ಡಿಸ್ಚಾರ್ಜ್ ಮಾಡಲು ಸಹಾಯವಾಗುತ್ತದೆ.
ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಇಂಗಾಲ (ಕಾರ್ಬನ್) ಗಳಿಗಿಂತ ಹೆಚ್ಚಿನ ವಿದ್ಯುತ್ ಸಂಗ್ರಹ ಕ್ಷಮತೆಯನ್ನು ಈಗ ಶೋಧಿಸಿದ ವಸ್ತು ಹೊಂದಿರುತ್ತದೆ. ಇವು, ಈ ಮೊದಲು ತಿಳಿದಿದ್ದ ಗ್ರಾಫೇನ್ ಮತ್ತು ಕಾರ್ಬನ್ ನ್ಯಾನೋಟ್ಯೂಬ್ ಗಳಿಗಿಂತಲೂ ಅಧಿಕ ಪ್ರಮಾಣದ ವಿದ್ಯುತ್ ಸಂಗ್ರಹ ಕ್ಷಮತೆಯನ್ನು ಪಡೆದಿವೆ.
ಈ ಸಂಶೋಧನೆಯನ್ನು ವರದಿಮಾಡಿದ ನ್ಯಾನೋ ಟೆಕ್ನಾಲಜಿ ಜರ್ನಲ್ ಪ್ರಕಾರ, ಪ್ರಸ್ತುತ ಪ್ರಪಂಚದಲ್ಲಿ ವಾರ್ಷಿಕವಾಗಿ 5.6 ಟ್ರಿಲ್ಲಿಯನ್ ಸಿಗರೇಟು ಫಿಲ್ಟರ್ ಗಳು ಪರಿಸರಕ್ಕೆ ಸೇರ್ಪಡೆಯಾಗುತ್ತಿದೆ.
ಈ ಫಿಲ್ಟರ್ ಗಳ ಮರುಬಳಕೆಯಿಂದ ಪರಿಸರಕ್ಕೆ ಎಷ್ಟೊಂದು ಉತ್ತಮ ಕೊಡುಗೆಯಾಗಬಹುದು ಎಂಬುದನ್ನು ಊಹಿಸಿಕೊಳ್ಳಿ!.
ಸಿಗರೇಟ್ ಸೇವನೆ ಕ್ಯಾನ್ಸರ್ ಮುಂತಾದ ಮಾರಕ ರೋಗಗಳಿಗೆ ಕಾರಣವೆಂಬುದನ್ನು ಮರೆಯಬೇಡಿ. ಇದೇನಿದ್ದರೂ ಸಿಗರೇಟು ವ್ಯಸನಿಗಳಿಂದ ಉತ್ಪತ್ತಿಯಾದ ತ್ಯಾಜ್ಯದ ಬಳಕೆಗಾಗಿ ಅಷ್ಟೆ.