ದೀರ್ಘಕಾಲ ಬದುಕಬೇಕು ಎನ್ನುವುದು ಅದೆಷ್ಟೊ ಮನುಷ್ಯರ ಆಸೆ. ಆದರೆ, ಕಾಯಿಲೆಗಳು ಇದಕ್ಕೆ ಬಹುದೊಡ್ಡ ಅಡ್ಡಿಯಾಗಿವೆ. ವಿಶಿಷ್ಟ, ವಿನೂತನ ಚಮತ್ಕಾರ, ಸಂಶೋದನೆಗಳಿಗೂ ಈ ವಿಜ್ನಾನಕ್ಕೂ ಒಂದು ರೀತಿಯ ನಂಟು. ಈ ನಿಟ್ಟಿನಲ್ಲಿ ದೀರ್ಘಾಯುಷಿಗಳಾಗಲು ವಿಜ್ನಾನಿಗಳು ಒಂದು ಸಂಶೋಧನೆ ಮಾಡಿದ್ದಾರೆ.
ಮನುಷ್ಯನ ಆಯುಷ್ಯ ಮತ್ತು ಆರೋಗ್ಯ ಹೆಚ್ಚಿಸಲು ವಿಜ್ಞಾನಿಗಳ ಸತತ ಪ್ರಯತ್ನ ಸದ್ಯದಲ್ಲೇ ಕೈಗೂಡುವ ಸಾಧ್ಯತೆ ಇದೆ. ಆಯುಷ್ಯ ಹೆಚ್ಚಿಸುವ ಬೋಹೆಡ್ ಜಾತಿಯ ತಿಮಿಂಗಿಲದ ಒಂದು ಜೀನ್ ಅನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಅಮೆರಿಕ ಮತ್ತು ಬ್ರಿಟನ್ ವಿಜ್ಞಾನಿಗಳು ಈ ಸಂಶೋಧನೆ ಮಾಡಿದ್ದು, ಈ ಜೀನ್‌ನಿಂದ ಮನುಷ್ಯನ ಆಯುಷ್ಯವನ್ನೂ ಹೆಚ್ಚಿಸಬಹುದು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ.
ಒಂದು ವೇಳೆ ಅವರ ಎಣಿಕೆ ನಿಜವೇ ಆಗಿದ್ದಲ್ಲಿ ಮನುಷ್ಯರು ದೀರ್ಘಾಯುಷಿಗಳಾಗಲಿದ್ದಾರೆ. ಮಾನವ ಇತಿಹಾದಲ್ಲೇ ಚಮತ್ಕಾರ ನಡೆಯಲಿದೆ. ಸಸ್ತನಿ ಪ್ರಾಣಿಗಳು ಸಾಮಾನ್ಯವಾಗಿ 100 ವರ್ಷಕ್ಕಿಂತ ಹೆಚ್ಚುಕಾಲ ಬದುಕುವುದು ಅಪರೂಪ.
ಆದರೆ, ಬೋಹೆಡ್ ಜಾತಿಯ ತಿಮಿಂಗಿಲ 200ಕ್ಕೂ ಹೆಚ್ಚು ವರ್ಷಗಳ ಕಾಲ ಬದುಕುತ್ತವೆ. ಅವು ಜಗತ್ತಿನಲ್ಲಿ ಅತಿ ಹೆಚ್ಚು ವರ್ಷ ಬದುಕಬಲ್ಲ ಸಸ್ತನಿಗಳಾಗಿವೆ. ಈ ಪ್ರಾಣಿಗಳ ಡಿಎನ್‌ಎ ಪರೀಕ್ಷೆ ನಡೆಸುತ್ತಿದ್ದ ವಿಜ್ಞಾನಿಗಳು ದೀರ್ಘಾಯುಸ್ಸಿಗೆ ಕಾರಣವಾಗುವ ಜೀನ್ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಜೀನ್ ಕೇವಲ ದೀರ್ಘಾಯುಸ್ಸನ್ನು ನೀಡುವುದಷ್ಟೇ ಅಲ್ಲ, ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳನ್ನೂ ದೂರವಿಡುತ್ತದೆ. ಲಿವರ್ಪೂಲ್ ವಿಜ್ನಾನಿಗಳು ಮೊದಲು ಇಲಿಗಳ ಮೇಲೆ ಪ್ರಯೋಗ ಮಾಡಲಿದ್ದಾರೆ. ಅದೇನಾದರೂ ಯಶಸ್ವಿಯಾದರೆ ಮನುಷ್ಯನ ಮೇಲೆ ಪ್ರಯೋಗ ನಡೆಯಲಿದೆ.
ಅಂತೂ ಈ ಪ್ರಯೋಗಗಳು ಯಶಸ್ವಿಯಾದರೆ ಇನ್ನು ಮುಂದೆ ಹಿರಿಯರು ಆಶೀರ್ವಾದ ಮಾಡುವಾಗ, 'ಆಯುಷ್ಮಾನ್ ಭವ' ಅನ್ನುವ ಬದಲು 'ದೀರ್ಘ ಆಯುಷ್ಮಾನ್ ಭವ' ಅಂತ ಹೇಳಬೇಕಾದೀತು! ಮುಂದೊಂದು ದಿನ 'ಚಿರಂಜೀವಿ'
ಅನ್ನುವ ಪದಕ್ಕೂ ನಿಜವಾದ ಅರ್ಥ ಬರಬಹುದೇನೋ?.