Untitled Document
Sign Up | Login    
ಮಂಗಳಯಾನ ಕಕ್ಷೆ ಸೇರಲು ಕ್ಷಣಗಣನೆ


ಭಾರತೀಯ ಬಾಹ್ಯಾಕಶ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿರುವ ಐತಿಹಾಸಿಕ ಮಂಗಳಯಾನ ನೌಕೆ ಕಕ್ಷೆ ಸೇರಲು ಕ್ಷಣಗಣೆ ಆರಂಭವಾಗಿದೆ. ಈ ನಡುವೆ ಇಸ್ರೋ ಎರಡು ಮಹತ್ವದ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ.

ಕಳೆದ 300 ದಿನಗಳಿಂದ ನಿಷ್ಕ್ರಿಯಾವಸ್ಥೆಯಲ್ಲಿರುವ 440 ನ್ಯೂಟನ್ ಲಿಕ್ವಿಡ್ ಅಪೋಜಿ ಮೋಟರ್ ಎಂಜಿನ್ ಗೆ ಚಾಲನೆ ನೀಡಲಾಗಿದೆ. ಅಲ್ಲದೇ ನಾಲ್ಕನೇ ಬಾರಿ ಮಂಗಳಯಾನ ನೌಕೆಯ ಪಥ ಸರಿಪಡಿಸುವ ಕಾರ್ಯವೂ ಯಶಸ್ವಿಯಾಗಿದೆ.

ಸುಮಾರು ಅರ್ಧ ಕೆ.ಜಿ ಇಂಧನ ಬಳಸಿ ನಾಲ್ಕು ಸೆಕೆಂಡುಗಳ ಕಾಲ ಎಂಜಿನ್ ಚಾಲೂ ಮಾಡಿ, ಅದು ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ.

ಈ ಮೂಲಕ ಮಂಗಳ ಯಾನ ನೌಕೆಯನ್ನು ಮಂಗಳ ಗ್ರಹದ ಕಕ್ಷೆಗೆ ಸೇರಿಸಲು ಶ್ರಮಿಸುತ್ತಿರುವ ವಿಜ್ನಾನಿಗಳಲ್ಲಿ ಆತ್ಮವಿಶ್ವಾಸ ಇಮ್ಮಡಿಗೊಂಡಿದೆ. ಒಂದು ವೇಳೆ 300 ದಿನಗಳಿಂದ ನಿಷ್ಕ್ರಿಯ ಸ್ಥಿತಿಯಲ್ಲಿರುವ ಎಂಜಿನ್ ಚಾಲೂ ಆಗದಿದ್ದಲ್ಲಿ ಪ್ಲಾನ್ ಬಿ ಕೂಡ ಇಸ್ರೋ ಸಿದ್ಧಪಡಿಸಿಕೊಂಡಿತ್ತು.

ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಕಳೆದ ವರ್ಷ ನ.5ರಂದು ಮಂಗಳಯಾನ ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಸಧ್ಯ ಸೆಕೆಂಡ್ ಗೆ 22.1 ಕಿ.ಮೀಯಂತೆ ಓಡುತ್ತಿರುವ ನೌಕೆಯ ವೇಗವನ್ನು ಸೆಕೆಂಡ್ ಗೆ 4.4 ಕಿ.ಮೀಗೆ ಇಳಿಸಬೇಕಾದ ಹಿನ್ನಲೆಯಲ್ಲಿ 24 ನಿಮಿಷಗಳ ಕಾಲ ಎಂಜಿನ್ ಅನ್ನು ಚಾಲನೆ ಮಡಲಾಗುತ್ತದೆ. ಒಂದು ವೇಳೆ ಮಂಗಳ ಯಾನ ಯಶಸ್ವಿಯಾಗಿ ಕಕ್ಷೆ ಸೇರಿದಲ್ಲಿ ಮೊದಲ ಯತ್ನದಲ್ಲೇ ಮಂಗಳಯಾನದಲ್ಲಿ ಯಶಸ್ಸು ಸಾಧಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಅಲ್ಲದೇ ಯಶಸ್ವಿ ಮಂಗಳಯಾನ ಕೈಗೊಂಡ ಏಷ್ಯಾದ ಮೊದಲ ದೇಶ ಹಾಗೂ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ.

ಹಲವು ಪ್ರಯತ್ನಗಳ ಬಳಿಕ ಅರೋಪ್ಯ ಒಕ್ಕೂಟ, ಅಮೆರಿಕ ಹಾಗೂ ರಷ್ಯಾ ಈಗಾಗಲೇ ಯಶಸ್ವಿಯಾಗಿ ಮಂಗಳಯಾನ ಕೈಗೊಮ್ಡಿವೆ ಈ ಹಿನ್ನಲೆಯಲ್ಲಿ ಸೆ.24ರಂದು ಇಸ್ರೋ ಮಂಗಳಯಾನ ನೌಕೆ ಕಕ್ಷೆ ಸೇರಿಸಲು ನಡೆಸುವ ಕಾರ್ಯಾಚರಣೆಯನ್ನು ವಿಶ್ವದ ಹಲವು ರಾಷ್ಟ್ರಗಳು ತೀವ್ರ ಕುತೂಹಲದಿಂದ ಎದುರು ನೋಡುತ್ತವೆ.

ಸೆ.24ರಂದು ಬೆಳಿಗ್ಗೆ 7.30ಕ್ಕೆ ನೌಕೆಯನ್ನು ಮಂಗಳ ಗ್ರಹದ ಕಕ್ಷೆಗೆ ತಲುಪಿಸುವ ವೇಳೆ ಸುಮಾರು 24 ನಿಮಿಷಗಳ ಕಾಲ ಎಂಜಿನ್ ಕೆಲಸ ಮಾಡಬೇಕಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ 300 ದಿನಗಳಿಂದ ನಿದ್ರಾವಸ್ಥೆಯಲ್ಲಿದ್ದ ಎಂಜಿನ್ ಗೆ ಸೆ.22ರಂದು ಚಾಲನೆ ನೀಡಲಾಗಿದೆ.

ಮಂಗಳಯಾನ ನೌಕೆ ಸಧ್ಯ 66.6 ಕೋಟಿ ಕಿ.ಮೀ ದೂರದಲ್ಲಿದೆ. ಭೂಮಿ ಮೇಲಿನ ಇಸ್ರೋ ಕೇಂದ್ರದಿಂದ ಸಂದೇಶ ಕಳುಹಿಸಲು ಅಥವಾ ನೌಕೆಯಿಂದ ಸಂದೇಶ ಸ್ವೀಕರಿಸಲು ಬರೋಬ್ಬರಿ 22 ನಿಮಿಷಗಳು ಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಸೆ.24ರಂದು ನೌಕೆ ಸ್ವಯಂ ಚಾಲಿತವಾಗಿ ಮಂಗಳ ಗ್ರಹ ಸೇರುವಂತಾಗಲು ಈಗಾಗಲೇ ವಿಜ್ನಾನಿಗಳು ಸೂಚನೆಗಳನ್ನು ರವಾನಿಸಿದ್ದಾರೆ.

ಸೆ.24ರಂದು ಬೆಳಗಿನ ಜಾವ 4.17ಕ್ಕೆ ಉಪಗ್ರಹಗಳನ್ನು ಮಂಗಳನ ಕಕ್ಷೆಗೆ ಸೇರಿಸುವ ಪ್ರಕ್ರಿಯೆ ಆರಂಭವಾಗಲಿದ್ದು, 7.52ಕ್ಕೆ ಸಂಪೂರ್ಣಗೊಳ್ಳಲಿದೆ. 7.17ರಿಂದ 7.21ರ ಸಮಯದಲ್ಲಿ ಇಸ್ರೋದ ಮಂಗಳಯಾನ ನೌಕೆ ಕಕ್ಷೆ ಸೇರಲಿದ್ದು, ಒಂದೇ ನಿಮಿಷದಲ್ಲಿ ಅಂದರೆ 7.22ಕ್ಕೆ ಕಕ್ಷೆ ಸೇರಿರುವ ಮಾಹಿತಿ ಹೊತ್ತ ರೇಡಿಯೋ ಸಂದೇಶಗಳು ಮಂಗಳಯಾನ ನೌಕೆಯಿಂದ ಭೂಮಿಯತ್ತ ಹೊರಡಲಿವೆ. 7.54ರ ಹೊತ್ತಿಗೆ ಸಂದೇಶಗಳು ಭೂಮಿಗೆ ತಲುಪಲಿವೆ. ಅದನ್ನು ಸ್ವೀಕರಿಸಲು ಬೆಂಗಳೂರಿನ ಬ್ಯಾಲಾಳು, ಅಮೆರಿಕದ ಗೋಲ್ಡ್ ಸ್ಟೋನ್, ಸ್ಪೇನ್ ನ ಮ್ಯಾಡ್ರಿಡ್ ಹಾಗೂ ಆಸ್ಟ್ರೇಲಿಯಾದ ಕ್ಯಾನ್ ಬೆರಾದಲ್ಲಿ ಬೃಹದಾಕಾರದ ಆಂಟೆನಾಗಳನ್ನು ಇಸ್ರೋ ಸ್ಥಾಪಿಸಿದೆ.

ಮಂಗಳಯಾನ ನೌಕೆ ಕಕ್ಷೆ ಸೇರಿದ ಮೊದಲ ಸಂದೇಶ ಕ್ಯಾನ್ ಬೆರಾಗೆ ತಲುಪಲಿದ್ದು, ಬಳಿಕ ಬೆಂಗಳೂರಿನ ಬ್ಯಾಲಾಳು ಕೇಂದ್ರಕ್ಕೆ ರವಾನೆಯಾಗಲಿದೆ. ಅಲ್ಲದೇ ಮಂಗಳಯಾನದಲ್ಲಿ ಬಣ್ಣದ ಪೋಟೋ ತೆಗೆಯುವ ಕೆಮರಾ ಅವಳವಡಿಸಲಾಗಿದೆ. ಕಕ್ಷೆ ಸೇರಿದ ನಂತರ ಆ ನೌಕೆಯಿಂದ ಮೊದಲ ಕಲರ್ ಫೋಟೋ ಕೂಡ ಭೂಮಿಗೆ ರವಾನೆಯಾಗಲಿದೆ ಎಂದು ಇಸ್ರೋ ವಿಜ್ನಾನಿಗಳು ತಿಳಿಸಿದ್ದಾರೆ.

ಅಮೆರಿಕದ ಗಗನನೌಕೆ ಮಂಗಳ ಕಕ್ಷೆಗೆ

ಇಸ್ರೋ ತನ್ನ ಮಂಗಳಯಾನ ನೌಕೆಯನ್ನು ಉಡಾವಣೆ ಮಾಡಿದ 13 ದಿನಗಳ ಬಳಿಕ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳ ಗ್ರಹದತ್ತ ಉಡಾವಣೆ ಮಾಡಿದ್ದ ಮಾವೆನ್ ನೌಕೆ ಸೆ.22ರಂದು ಬೆಳಿಗ್ಗೆ 7ರಿಂದ 8.15ರ ನಡುವಿನ ಅವಧಿಯಲ್ಲಿ ಮಂಗಳ ಗ್ರಹದ ಕಕ್ಷೆ ತಲುಪಿದೆ. ಈ ನೌಕೆ ಒಂದು ವರ್ಷಗಳ ಕಾಲ ಮಂಗಳ ಗ್ರಹದ ಮೇಲ್ಮೈ ವಾತಾವರಣದ ಕುರಿತು ಅಧ್ಯಯನ ನಡೆಸಲಿದೆ.

 

Author : ಲೇಖಾ ರಾಕೇಶ್ .

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited