ದೇಶೀಯ ಖ್ಯಾತ ಕಾರು ಉತ್ಪಾದಕ ಕಂಪನಿ ಟಾಟಾ ಗಾಳಿಯಲ್ಲಿ ಒತ್ತಡದಿಂದ ಓಡುವ ’ಏರ್ ಪಾಡ್” ಕಾರು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ.
ಬ್ಯಾಟರಿ ವಿದ್ಯುತ್ ಚಾಲಿತ, ಹೈಡ್ರೋಜನ್ ಚಾಲಿತ, ಗಾಳಿಯಲ್ಲಿ ಓಡುವ ಕಾರುಗಳ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಆದರೆ ಇದರಲ್ಲಿ ಬ್ಯಾಟರಿ ವಿದ್ಯುತ್ ಚಾಲಿತ ಕಾರುಗಳು ಈಗಾಗಲೇ ರಸ್ತೆಗೆ ಲಗ್ಗೆ ಇಟ್ಟಿವೆ. ಇನ್ನು ಹೈಡ್ರೋಜನ್ ಚಾಲಿತ ಕಾರುಗಳ ಸಂಶೋಧನೆ ಇನ್ನೂ ನಡೆಯುತ್ತಿದೆ. ಅಷ್ಟರಲ್ಲೇ ದೇಶೀಯ ಖ್ಯಾತ ಕಾರು ಉತ್ಪಾದಕ ಕಂಪನಿ ಟಾಟಾ ಗಾಳಿಯಲ್ಲಿ ಒತ್ತಡದಿಂದ ಓಡುವ ’ಏರ್ ಪಾಡ್” ಕಾರು ಮಾರುಕಟ್ಟೆಗೆ ಇಳಿಸಲು ಸದ್ದಿಲ್ಲದೇ ಯತ್ನಿಸುತ್ತಿದೆ. ಇನ್ನೂ ಅಚ್ಚರಿ ಎಂದರೆ 2015ರ ಅಂತ್ಯದ ವೇಳೆ ಈ ಕಾರು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
7 ವರ್ಷಗಳ ಹಿಂದೆಯೇ ಗಾಳಿಯ ಒತ್ತಡದಿಂದ ಓಡುವ ಕಾರು ಆವಿಷ್ಕಾರದ ಬಗ್ಗೆ ಟಾಟಾ ಪ್ರಯೋಗ ಶುರುಮಾಡಿತ್ತು. ಇದೀಗ ಅದು ಅಂತಿಮ ಪರೀಕ್ಷಾ ಹಂತಕ್ಕೆ ತಲುಪಿದೆ. ಅಂದಹಾಗೆ ಈ ಕಾರು ಒಂದು ಬಾರಿ ಗಾಳಿ ತುಂಬಿಸಿಕೊಂಡರೆ 200 ಕಿ.ಮೀ. ದೂರಕ್ಕೆ ಕ್ರಮಿಸಬಲ್ಲದು. ನಾಲ್ಕು ಗಾಲಿ ಹೊಂದಿದ್ದು, ಇದಕ್ಕೆ ಸ್ಟಿಯರಿಂಗ್ ಇಲ್ಲ. ಬದಲಿಗೆ ಜಾಯ್ ಸ್ಟಿಕ್ ಮಾದರಿಯಲ್ಲಿ ಇದನ್ನು ನಿಯಂತ್ರಿಸಲಾಗುತ್ತದೆ. ಮೂವರು ದೊಡ್ಡವರು ಮತ್ತು ಒಂದು ಮಗು ಕೂರುವಷ್ಟು ಸ್ಥಳಾವಕಾಶ ಇದರಲ್ಲಿದೆ. ಗರಿಷ್ಠ 80 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಅಂದರೆ ಒಂದು ಪುಟ್ಟ ಸಂಸಾರ ನಗರ ಸುತ್ತಬಹುದು.
ಅಮೆರಿಕದ ಝೀರೋ ಪೊಲ್ಯೂಷನ್ ಮೋಟಾರ್ಸ್ ಜೊತೆ ಸೇರಿ ಟಾಟಾ ಇದರ ಸಂಶೋಧನೆಯಲ್ಲಿ ತೊಡಗಿದ್ದು, ಈಗಾಗಲೇ 2009ರ ಜಿನೇವಾ ಮೋಟಾರ್ ಶೋದಲ್ಲಿ ಈ ಕಾರು ಪ್ರದರ್ಶನಗೊಂಡಿತ್ತು. ಅದಾಗಿ ಅಮೆರಿಕದೊಂದಿಗೆ ಭಾರತದಲ್ಲೂ ಈ ಕಾರು ರಸ್ತೆಗಿಳಿಯಲಿದೆ ಎಂದು ಹೇಳಲಾಗಿದೆ. ಆದರೆ ಕಾರಿನ ಬೆಲೆ ಇನ್ನಿತರ ಮಾಹಿತಿಗಳ ಬಗ್ಗೆ ಟಾಟಾ ಕಂಪನಿಯಿಂದ ಯಾವುದೇ ಸುದ್ದಿ ಬಂದಿಲ್ಲ.