Untitled Document
Sign Up | Login    
ಕೌಶಲ್ಯ ಅಭಿವೃದ್ಧಿಗೆ ಪ್ರತ್ಯೇಕ ಇಲಾಖೆ?

image courtesy - debockgroup.com

ಲೋಕಸಭಾ ಚುನಾವಣಾ ಪೂರ್ವದಲ್ಲಿ ದೇಶದ ಅಭಿವೃದ್ಧಿಯ ಕನಸುಗಳನ್ನು ಬಿತ್ತಿದ್ದ ಬಿಜೆಪಿಯ ನರೇಂದ್ರ ಮೋದಿ, ಇದೀಗ ಅವುಗಳ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಉದ್ಯೋಗ ಕ್ಷೇತ್ರಕ್ಕೆ ಬೇಕಾಗಿರುವಂಥ ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಕೌಶಲ್ಯ ಅಭಿವೃದ್ಧಿ ಅವಶ್ಯಕ ಎಂಬುದನ್ನು ಪ್ರತಿಪಾದಿಸಿದ್ದವರು ಇದೀಗ, ಕೌಶಲ್ಯ ಅಭಿವೃದ್ಧಿಗಾಗಿಯೇ ಪ್ರತ್ಯೇಕ ಇಲಾಖೆ ಸ್ಥಾಪಿಸುವ ಇರಾದೆ ಕೂಡಾ ಸರ್ಕಾರಕ್ಕೆ ಇದೆ ಎಂಬ ಅಂಶ ಬಹಿರಂಗವಾಗಿದೆ.

ಆಂಗ್ಲ ಪತ್ರಿಕೆ ಒಂದರ ದೆಹಲಿ ಆವೃತ್ತಿಯಲ್ಲಿ ಇಂತಹದ್ದೊಂದು ಕುತೂಹಲಕಾರಿ ವ ರದಿ ಪ್ರಕಟವಾಗಿದೆ. ಇದರಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಸಚಿವಾಲಯಗಳಡಿ ಹಂಚಿ ಹೋಗಿರುವ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಯೋಜನೆಗಳನ್ನು ಪ್ರತ್ಯೇಕಿಸಿ ಹೊಸದಾಗಿ ಕೌಶಲ್ಯ ಅಭಿವೃದ್ಧಿ ಇಲಾಖೆ ಸ್ಥಾಪನೆ ಯೋಜನೆಯನ್ನು ಇತ್ತೀಚಿನ ಪ್ರಮುಖ ಸಭೆಯೊಂದರಲ್ಲಿ ಪ್ರಸ್ತಾಪಿಸಿದ್ದರು. ಈ ಹೊಸ ಇಲಾಖೆಯನ್ನು ಯುವಜನ ಹಾಗೂ ಕ್ರೀಡಾ ಸಚಿವಾಲಯದಡಿ ತರುವ ಉದ್ದೇಶ ಸರ್ಕಾರಕ್ಕೆ ಇದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆಯನ್ನೇನೂ ಸರ್ಕಾರ ನೀಡಿಲ್ಲ ಎಂಬ ಉಲ್ಲೇಖವಿತ್ತು.

ಹಾಗೆ ನೋಡಿದರೆ, ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಬಹು ವಿಸ್ತಾರದ ಕ್ಷೇತ್ರವಾಗಿದೆ. ಅದರ ಕಾರ್ಯವ್ಯಾಪ್ತಿಯೂ ಹೆಚ್ಚು. ಮಾನವ ಸಂಪನ್ಮೂಲ ಅಭಿವೃದ್ಧಿ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ, ಅಲ್ಪಸಂಖ್ಯಾತರ ಅಭಿವೃದ್ಧಿ ಸೇರಿದಂತೆ 11 ಸಚಿವಾಲಯಗಳಡಿ ಇದು ಹಂಚಿಹೋಗಿದೆ. ವಾರ್ಷಿಕ ಅಂದಾಜು 5000 ಕೋಟಿ ರೂ. ಅನುದಾನ ಕೂಡಾ ಮೀಸಲಿಡಲಾಗುತ್ತಿದೆ. ಪ್ರಗತಿ ಪ್ರಮಾಣ ಎಷ್ಟು ಎಂದರೆ ಅಲ್ಲಿ ನಿಖರತೆ ಮತ್ತು ಸ್ಪಷ್ಟತೆ ಇಲ್ಲ.

ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕೌಶಲ್ಯ ಹೊಂದಿದ ಉದ್ಯೋಗಿಗಳು ಹಾಗೂ ಉದ್ಯಮಿಗಳಿದ್ದರೆ ಉದ್ಯಮ ಪ್ರಗತಿಪಥದಲ್ಲಿ ಸಾಗುತ್ತದೆ. ಮೋದಿ ಸರ್ಕಾರದ ಹೊಸ ಯೋಜನೆ ಪ್ರಕಾರ, ಇದಕ್ಕಾಗಿಯೇ ಪ್ರತ್ಯೇಕ ಇಲಾಖೆ ಸ್ಥಾಪಿಸಿದರೆ ವಿಷಯದ ಮೇಲಿನ ಗಮನ ಹೆಚ್ಚುವುದಲ್ಲದೇ ಫಲಿತಾಂಶವೂ ಉತ್ತಮವಾಗಿರಲಿದೆ.

ಆದರೆ, ಸರ್ಕಾರದ ಹೊಸ ಯೋಜನೆಗೆ ಈ ಸಚಿವಾಲಯಗಳ ಪೈಕಿ ಹಲವು ವಿರೋಧ ವ್ಯಕ್ತಪಡಿಸಿವೆ. ಈಗಿರುವ ವ್ಯವಸ್ಥೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಸಚಿವಾಲಯ, ಇಲಾಖೆಗಳ ಮೂಲಕ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಹೊಸ ಇಲಾಖೆ ಸ್ಥಾಪನೆಯಾದರೆ, ಸಚಿವಾಲಯಗಳಿಗೆ, ಇಲಾಖೆಗಳಿಗೆ ಸಿಗುವ ಅನುದಾನದಲ್ಲೂ ಕಡಿತ ಉಂಟಾಗಲಿದೆ. ಉದಾಹರಣೆಗೆ ಕಾರ್ಮಿಕ ಸಚಿವಾಲಯದಡಿ ಇರುವ ಕಾರ್ಮಿಕ ತರಬೇತಿಯನ್ನೇ ಪ್ರತ್ಯೇಕಿಸಿದರೆ, ಅದರ ಮುಖ್ಯ ಕಾರ್ಯವನ್ನೇ ಕಿತ್ತುಕೊಂಡಂತಾಗುತ್ತದೆ. ಇದೇ ರೀತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಐಸಿಟಿಇ ಮೂಲಕ ವಿವಿಧ ಶೈಕ್ಷಣಿಕ ಸಂಸ್ಥೆಗಳ ಮೂಲಕ ವೊಕೇಷನಲ್ ಕೋರ್ಸ್ ಗಳನ್ನು ಒದಗಿಸುತ್ತಿದೆ. ಇವುಗಳನ್ನು ಪ್ರತ್ಯೇಕಿಸಿದರೆ ಯುವಜನ ಹಾಗೂ ಕ್ರೀಡಾ ಸಚಿವಾಲಯ ನಿಭಾಯಿಸುವುದಾದರೂ ಹೇಗೆ ಎಂಬ ಭೀತಿಯನ್ನು ಈ ಸಚಿವಾಲಯಗಳು ವ್ಯಕ್ತಪಡಿಸಿವೆ ಎನ್ನಲಾಗಿದೆ.

ಈಗಿನ ವ್ಯವಸ್ಥೆಯಡಿ ಗ್ರಾಮೀಣ ಅಭಿವೃದ್ಧಿ ಸಚಿವಾಲಯ “ಆಜೀವಿಕಾ’’ ಎಂಬ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಕಳೆದ ಬಜೆಟ್ ನಲ್ಲಿ 1400 ಕೋಟಿ ರೂ. ಅನುದಾನ ಪಡೆದಿತ್ತು. ಇದೇ ಮಾದರಿಯ ಕಾರ್ಯಕ್ರಮಕ್ಕಾಗಿ ನಗರಾಭಿವೃದ್ಧಿ ಸಚಿವಾಲಯ ಕೂಡಾ ಕೆಲವು ನೂರು ಕೋಟಿ ರೂ. ಅನುದಾನ ಪಡೆದಿತ್ತು.

ಈಗ ಬದಲಾದ ಸನ್ನಿವೇಶ ಹಾಗೂ ಪರಿಸ್ಥಿತಿಯಲ್ಲಿ ಇಂಥದ್ದೊಂದು ಮಹತ್ವದ ಬದಲಾವಣೆಯ ನಿರೀಕ್ಷೆ ಹುಸಿಯಾಗದೆಂಬ ಭರವಸೆ ಉದ್ಯೋಗಾಕಾಂಕ್ಷಿಗಳದ್ದು.

 

Author : ರಾಜಾ ಗುರು 

More Articles From Education & Career

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited