ಆರ್.ಟಿ.ಇ (ಶಿಕ್ಷಣ ಹಕ್ಕು ಕಾಯ್ದೆ)ಯ ಮೀಸಲು ಸೀಟು ನೀಡಲು ನೆಪ ಹೇಳುವ ಶಾಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಮೀಸಲು ಸೀಟು ನೀಡಲು ಒಪ್ಪದ ಸಿ ಬಿ ಎಸ್ ಇ ಹಾಗೂ ಐ ಸಿ ಎಸ್ ಇ ಶಾಲೆಗಳ ವಿರುದ್ಧ ಕೆಂಗೆಣ್ಣು ಬೀರಿರುವ ಸರ್ಕಾರ ಸೀಟು ನೀಡದ ಶಾಲೆಗಳ ಮಾನ್ಯತೆಯನ್ನೇ ರದ್ದು ಮಾಡುವುದಾಗಿ ಎಚ್ಚರಿಸಿದೆ.
ಆರ್.ಟಿ.ಇ ಕಾಯ್ದೆ ಉಲ್ಲಂಘಿಸುವಂತಹ ಶಾಲೆಯ ಆರಂಭಕ್ಕೆ ಇಲಾಖೆಯಿಂದ ಹಿಂದೆ ನೀಡಲಾಗಿರುವ ಎನ್.ಒ.ಸಿ(ನಿರಪೇಕ್ಷಣಾ ಪತ್ರ)ವನ್ನು ವಾಪಸ್ ಪಡೆಯಲು ತುರ್ತುಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ, ಡಿಡಿಪಿಐ ಹಾಗೂ ಬಿಇಒಗಳಿಗೆ ಸೂಚನೆ ನೀಡಿದೆ.
2009ರಿಂದ ಅಂದರೆ ಆರ‍್.ಟಿ.ಇ ಕಾಯ್ದೆ ಜಾರಿಗೆ ಬಂದಾಗಿನಿಂದ ಸಿ ಬಿ ಎಸ್ ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಬೋಧಿಸುವ ಎಲ್ಲಾ ಶಾಲೆಗಳೂ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಈ ಎಲ್ಲಾ ಶಾಲೆಗಳೂ ಎಲ್.ಕೆ.ಜಿ ಅಥವಾ 1ನೇ ತರಗತಿಯಿಂದ ಶೇ.25ರಷ್ಟು ಸೀಟನ್ನು ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ಮೀಸಲಿರಿಸುವುದು ಕಡ್ಡಾಯ. ಆದರೆ ಕೆಲ ಶಾಲೆಗಳು ಸರ್ಕಾರದ ನಿಯಮಕ್ಕೂ ತಮಗೂ ಸಂಬಂಧವಿಲ್ಲ ಎಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದು ಶಿಕ್ಷಣ ಇಲಾಖೆಯ ಕೋಪಕ್ಕೆ ಕರಣವಾಗಿದೆ.
ಕೇಂದ್ರ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ರಾಜ್ಯ ಸರ್ಕಾರ ಸಂಯೋಜನೆ ನೀಡುವಾಗ ಕಾಲ ಕಾಲಕ್ಕೆ ಅಗತ್ಯ ಮಾಹಿತಿ ಹಾಗೂ ಸಮರ್ಪಕ ದಾಖಲೆಗಳನ್ನು ಒದಗಿಸುವುದು ಕಡ್ಡಾಯವೆಂದು ಷರತ್ತು ವಿಧಿಸಲಾಗಿದೆ. ಒಂದು ವೇಳೆ ಷರತ್ತು ಉಲ್ಲಂಘಿಸಿದರೆ ಸಂಯೋಜನೆ ವಾಪಸ್ ಪಡೆಯುವ ಅಧಿಕಾರ ಕೂಡ ಸರ್ಕಾರಕ್ಕಿದೆ.
ಎಲ್ಲಾ ರಾಜ್ಯಗಳಲ್ಲೂ ಯಾವುದೇ ಶಾಲೆ ಆರಂಭಕ್ಕೂ ಮೊದಲು ಆಯಾ ರಾಜ್ಯ ಸರ್ಕಾರಗಳಿಂದ ಎನ್.ಒ.ಸಿ ಪಡೆಯುವುದು ಕಡ್ಡಾಯ. ಹೀಗೆ ಪಡೆಯುವಾಗ 1-5ನೇ ತರಗತಿಯವರೆಗೆ ಆಯಾ ರಾಜ್ಯದ ಬೋಧನಾ ಮಾಧ್ಯಮದ ನೀತಿ ಅನುಸರಿಸುವುದರ ಜೊತೆಗೆ ಕಾಲ ಕಾಲಕ್ಕೆ ಸರ್ಕಾರ ಹೊರಡಿಸುವ ಆದೇಶ ಹಾಗೂ ಷರತ್ತುಗಳನ್ನು ಪಾಲಿಸುವುದಾಗಿ ಶಾಲೆಗಳು ಒಪ್ಪಂದ ಮಾಡಿಕೊಂಡಿರುತ್ತದೆ.
ಇಂತಹ ಒಪ್ಪಂದವನ್ನು ಉಲ್ಲಂಘಿಸಿದಲ್ಲಿ ಸರ್ಕಾರ ಅಂತಹ ಶಾಲೆಗಳ ಎನ್.ಒ.ಸಿ ವಾಪಸ್ ಪಡೆದರೆ ಶಾಲೆಗಳ ಮಾನ್ಯತೆ ರದ್ದಾಗುತ್ತದೆ.
ರಾಜ್ಯದಲ್ಲಿ 2014-15ನೇ ಸಾಲಿನ ಆರ್.ಟಿ.ಇ ಪ್ರವೇಶ ಪ್ರಕ್ರಿಯೆ ಜನವರಿ 6ರಿಂದ ಪ್ರಾರಂಭವಾಗಲಿದೆ. ಸಿ ಬಿ ಎಸ್ ಇ ಹಾಗೂ ಐ ಸಿ ಎಸ್ ಇ ಸೇರಿದಂತೆ ಎಲ್ಲಾ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಲಭ್ಯವಿರುವ ಶೇ.25ರಷ್ಟು ಆರ್.ಟಿ.ಇ ಮೀಸಲಾತಿ ಸೀಟುಗಳಿಗೆ ಜ.7ರಿಂದ ಪೊಷಕರು ಅರ್ಜಿ ಸಲ್ಲಿಸಬಹುದು.
ಈ ಸಂಬಂಧ ಯಾವುದೇ ಸಮಸ್ಯೆಗಳಿದ್ದಲ್ಲಿ ಶಿಕ್ಷಣ ಹಕ್ಕು ಕೋಶದ ಸಹಾಯವಾಣಿ 1800-425-34567 ಗೆ ಕರೆ ಮಾಡಬಹುದು.