ಹ್ಯಾಪಿ ಟೀಚರ್ಸ್ ಡೇ....
ಗುರುಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ
ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾದದ್ದು, ಪ್ರತಿಯೊಬ್ಬರೂ ತಮಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ ದಿನವೇ ಸೆ.5, ಶಿಕ್ಷಕರ ದಿನಾಚರಣೆ.
ಮಾಜಿ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ 125ನೇ ಜನ್ಮದಿನವನ್ನು ಇಂದು ನಾವು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಶಿಕ್ಷಕರೆಂದರೆ ಇಂದಿನ ಪೀಳಿಗೆಗೆ ಒಂದು ವೃತ್ತಿಯಾಗಷ್ಟೇ ಸೀಮಿತವಾಗಿಬಿಟ್ಟಿದೆ. ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಅದರಲ್ಲಿ ಶಿಕ್ಷಕರೇ ಜೀವಾಳವಾಗಿರುತ್ತಾರೆ. ಯಾವುದೇ ಕ್ಷೇತ್ರದಲ್ಲಾದರೂ ಶಿಕ್ಷಕ ಇಲ್ಲದೇ ಅಭಿವೃದ್ಧಿ ಅಸಾಧ್ಯ. ಓರ್ವ ಶಿಕ್ಷಕ ದೇಶದ ರಾಷ್ಟ್ರಪತಿಯಾಗಿ ಮಾದರಿ ವ್ಯಕ್ತಿತ್ವವಾಗಿ ಹೊರಹೊಮ್ಮಲು ಸಾಧ್ಯ ಎಂಬುದಕ್ಕೆ ಸರ್ವಪಲ್ಲಿ ರಾಧಾಕೃಷ್ಣನ್ ಅವರೇ ಉತ್ತಮ ಉದಾಹರಣೆ. ಪ್ರಸ್ತುತ ಭಾರತದಲ್ಲಿ ಮೌಲ್ಯಾಧಾರಿತ ಶಿಕ್ಷಣ ಕಳೆಗುಂದುತ್ತಿರುವುದು ಮೌಲ್ಯಾಧಾರಿತ ಶಿಕ್ಷಕರ ಕೊರತೆಯನ್ನೂ ಎತ್ತಿ ಹಿಡಿಯುತ್ತಿದೆ!
ಇಂದಿನ ಪೀಳಿಗೆಯವರನ್ನು ಕೇಳಿ ನೋಡಿ, ನೀನು ಏನಾಗಬೇಕೆಂದು, ಅಪ್ಪಿ ತಪ್ಪಿ ಕೂಡ ನಾನೋರ್ವ ಶಿಕ್ಷಕನಾಗಬೇಕು ಎಂದು ಹೇಳುವುದಿಲ್ಲ. ಅವರ ದೃಷ್ಠಿಯೇನಿದ್ದರೂ ಇಂಜಿನಿಯರೋ ಡಾಕ್ಟರಾಗುವ ಗುರಿಯತ್ತ ಪಯಣ ಬೆಳೆಸಿರುತ್ತದೆ. ಹೀಗೆ ಎಲ್ಲರೂ ಶಿಕ್ಷಕ ವೃತ್ತಿಯಿಂದ ದೂರ ಉಳಿದರೆ ದೇಶದ ಸ್ಥಿತಿ ಏನಾಗಬೇಡ? ಪ್ರತಿಷ್ಠಿತ ಕಾಲೇಜು ಶಿಕ್ಷಕರನ್ನು ಬಿಡಿ, ಅವರಿಗೆ ಲಕ್ಷಗಟ್ಟಳೆ ಸಂಬಳ ಸವಲತ್ತು ಎಲ್ಲವೂ ದೊರೆಯುತ್ತದೆ. ಆದರೆ ಸಾಮಾನ್ಯ ಸರ್ಕಾರಿ ಶಿಕ್ಷಕರ ಪಾಡು ಅಂದುಕೊಂಡಷ್ಟು ಸುಲಭವಲ್ಲ. ಸರ್ಕಾರಿ ಕೆಲಸವೆಂದರೆ ಜೀವನದಲ್ಲಿ ಸೆಕ್ಯೂರ್ಡ್ ಎಂಬ ಭಾವನೆ ಮೂಡುತ್ತದೆ. ಆದರೆ ಶಿಕ್ಷಕ ವೃತ್ತಿಗೆ ಹಾಗಲ್ಲ, ಅದರಲ್ಲಿಯೂ ಇಂದಿನ ಸರ್ಕಾರಿ ಶಾಲಾ ಶಿಕ್ಷಕರ ಸ್ಥಿತಿ ಉತ್ತಮವಾಗಿಲ್ಲ ಎಂಬುದಂತೂ ಸತ್ಯ!.
ಆದರೆ ಶಿಕ್ಷಣದ ಗುಣಮಟ್ಟ, ಶಿಕ್ಷಕರ ಮೌಲ್ಯಗಳೂ ಸಹ ಕಡಿಮೆಯಾಗುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಪ್ರಪಂಚವನ್ನೇ ಅರಿಯದ ಮಕ್ಕಳಿಗೆ ಪ್ರಪಂಚ ಜ್ನಾನ ತಿಳಿಸುವ ಶಿಕ್ಷಕರು ನಿಜವಾಗಿಯೂ ನಮ್ಮ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿದ್ದಾರ ಎಂಬ ಸಂಶಯ ಕಾಡುತ್ತದೆ.! ಹಾಗಂತ ವಿವಿಧ ಕಾರಣಗಳಿಂದಾಗಿ ದೇಶ ಅದಃಪತನದತ್ತ ಮುಖ ಮಾಡಿರುವುದಕ್ಕೆ ಶಿಕ್ಷಕರೇ ನೇರ ಕಾರಣ ಎಂದು ಹೇಳಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದೇವೆ ನಾವು.....
ಮಾಜಿ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್
ಇಂದಿನ ಶಿಕ್ಷಣ ಹಾಗೂ ಶಿಕ್ಷಕರನ್ನು ನೋಡಿದರೆ ಖಂಡಿತವಾಗಿಯೂ ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಶಂಕೆ ಮೂಡುತ್ತದೆ. ಇಂದು ಅದೆಷ್ಟು ಕಾಲೇಜುಗಳಲ್ಲಿ ಅವ್ಯವಹಾರ ನಡೆಯುತ್ತಿಲ್ಲ, ಅದೆಷ್ಟು ವಿದ್ಯಾ ಸಂಸ್ಥೆಗಳಲ್ಲಿ(ಪ್ರಮುಖವಾಗಿ ಕಾಲೇಜುಗಳಲ್ಲಿ) ಶಿಕ್ಷಕರೇ ಅವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ ಹೇಳಿ.... ಇದನ್ನೂ ಸಹಿಸಬಹುದು. ಎಷ್ಟೋ ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿನಿಗಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದ್ದಲ್ಲಿ ಎಷ್ಟೋ ಕಾಲೇಜುಗಳಲ್ಲಿ ಹಣ ಪಡೆದು ಹಾಜರಾತಿ ನೀಡುತ್ತಾರೆ. ಅದು ಹೋಗಲಿ, ನಕಲು ಮಾಡಲು, ಪರೀಕ್ಷೆಗಳಲ್ಲಿ ವಾಮಮಾರ್ಗದಿಂದ ಪಾಸಾಗಲು ಅದೆಷ್ಟು ಶಿಕ್ಷಕರು ಸಹಾಯಮಾಡುವುದಿಲ್ಲ ಹೇಳಿ.....?
ಓರ್ವ ವಿದ್ಯಾರ್ಥಿಗೆ ತನ್ನ ಭವಿಷ್ಯದ ಬಗ್ಗೆ ಒಂದು ಗುರಿ ಕಟ್ಟಿಕೊಡುವ ಶಿಕ್ಷಕರೇ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದರೇ ದೇಶ ಹೇಗೆ ತಾನೇ ಉದ್ಧಾರವಾದೀತು....? ಇಂತಹ ಕೆಲವು ಮೌಲ್ಯರಹಿತವಾದ ಶಿಕ್ಷಕರಿಂದ ಇಡೀ ಶಿಕ್ಷಕ ವರ್ಗದವರಿಗೇ ಕಳಂಕ ಅಲ್ಲವೇ....? ಟಿಸಿ ಹೆಚ್ ಮುಗಿಸಿದ ನಂತರ ಶಿಕ್ಷಕರಿಗೆ ಶಿಕ್ಷಣ ನೀಡುವುದರ ಕುರಿತು ತರಬೇತಿ ನೀಡಲಾಗುತ್ತದೆ ಆದರೆ ಅದರಲ್ಲಿಯೂ ಯಾವುದೇ ಪರಿಣಾಮಕಾರಿಯಾದ ತರಬೇತಿ ನೀಡುವುದಿಲ್ಲ. ಪರಿಣಾಮ ನಮ್ಮ ದೇಶದಲ್ಲಿ ರಾಧಾಕೃಷ್ಣನ್ ಅವರು ಕಂಡಿದ್ದ ಕನಸಿನ ಶಿಕ್ಷಣ ಹಾಗೂ ಶಿಕ್ಷಕರ ವರ್ಗ ಕನಸಾಗಿಯೇ ಉಳಿದಿದೆ. ಅದೆಷ್ಟೋ ಶಿಕ್ಷಕರು ತಮಗೇ ಗುರಿಯಿಲ್ಲದೇ ವಿದ್ಯಾರ್ಥಿಗಳಿಗೆ ಗುರಿ ಕಟ್ಟಿಕೊಡುವ ಸ್ಥಿತಿ ಎದುರಾಗಿದೆ ಮೇಲಾಗಿ ಶಿಕ್ಷಕರ ಕೊರತೆ ತಾಂಡವಾಡುತ್ತಿದೆ.
ಶಿಕ್ಷಕರ ವರ್ಗವನ್ನೇ ಕೀಳರಿಮೆ ದೃಷ್ಠಿಯಿಂದ ನೋಡುವ ಸ್ಥಿತಿಗೆ ನಾವು ತಲುಪಿದ್ದೇವೆ ಎಂದರೆ ಅದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಇಂದಿಗೂ ಸಹ ಸರ್ಕಾರಿ ಶಾಲೆಗಳ ಸ್ಥಿತಿ ಬದಲಾಗಿಲ್ಲ. ಶಿಕ್ಷಕರನ್ನು ನಿಯೋಜಿಸಲು ಸರ್ಕಾರ ಮೀನಾ-ಮೇಷ ಎಣಿಸುತ್ತಿದೆ. ಇದು ಪ್ರತಿ ಸರ್ಕಾರ ಬಂದಾಗಲೂ ಶಾಲಾ ಶಿಕ್ಷಕರ ಸಂಖ್ಯೆ ಬಹಳ ಕಡಿಮೆಯಿರುತ್ತದೆ. 5 ವರ್ಷಗಳು ಸರ್ಕಾರ ಅಸ್ಥಿತ್ವದಲ್ಲಿದ್ದರೂ ಸಹ ಶಿಕ್ಷಕರನ್ನು ನೇಮಿಸುವ ಕಾರ್ಯಕ್ಕೆ ಮುಕ್ತಿದೊರೆಯುವುದಿಲ್ಲ.
ಸರಿಯಾದ ಸೌಲಭ್ಯ ಒದಗಿಸದೇ ಇದ್ದರೆ ಯಾರಿಗೆ ತಾನೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಬೇಕೆಂಬ ಭಾವನೆ ಮೂಡುತ್ತದೆ ಹೇಳಿ...? ಅದೆಷ್ಟು ಸರ್ಕಾರಿ ಶಿಕ್ಷಕರು ಇಂದು ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿಲ್ಲ....? ಇವೆಲ್ಲದರ ಪರಿಣಾಮ ಭಾರತಕ್ಕೆ ಉತ್ತಮ ನಾಗರಿಕರನ್ನು ತಯಾರು ಮಾಡುವ ಕ್ರಿಯೆಯಲ್ಲಿ ಗುಣಮಟ್ಟ ಕಡಿಮೆಯಾಗುತ್ತಿದೆ.
ಈ ವರ್ಷದ ಶಿಕ್ಷಕರ ದಿನಾಚರಣೆಯಿಂದಲಾದರೂ ನಾವು ಉತ್ತಮ ಗುಣಮಟ್ಟದ, ಮೌಲ್ಯಾಧಾರಿತ ಶಿಕ್ಷಕರಿಗೆ ನಿರೀಕ್ಷಿಸೋಣ.... ನಮ್ಮ ಉನ್ನತಿಗೆ ಕಾರಣಕರ್ತರಾದ ಗುರುಗಳಿಗೆ ವಂದಿಸೋಣ.... ಹ್ಯಾಪಿ ಟೀಚರ್ಸ್ ಡೇ....