Untitled Document
Sign Up | Login    
'ಧರಣೀ'ಶ ಕೇಜ್ರಿವಾಲ್ ಮತ್ತು ಪಡೆಯ ಸ್ಟ್ರಾಟೆಜಿ ಸಭೆ..


ಅತ್ತ ಭರ್ಜರಿ ವಿಜಯದೊಂದಿಗೆ ದೇಶದ ಚುಕ್ಕಾಣಿ ಹಿಡಿದು ಸರ್ಕಾರ ರಚನೆಯಲ್ಲಿ ಮೋದಿ ಸಾಹೇಬ್ರು ತೊಡಗಿದ್ರೆ ಇತ್ತ ಚುನಾವಣೆಯಲ್ಲಿ ಸೋತು ನೆಲ ಕಚ್ಚಿದ ಆಮ್ ಆದ್ಮಿ ಪಕ್ಷದ ಘಟಾನುಘಟಿಗಳೆಲ್ಲ ತಮ್ಮ ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಸೋಲಿನ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ, ಅಲ್ಲದೆ, ಮುಂದೇನು ಮಾಡಲಿ? ಎಂಬ ಯಕ್ಷ ಪ್ರಶ್ನೆಗೆ ಉತ್ತರ ಹುಡುಕುವುದರಲ್ಲಿ ತತ್ತರಿಸಿ ಹೋಗಿದ್ದಾರೆ. ಅವರ ಪಾಡನ್ನು ಪಕ್ಷದ ಕಚೇರಿಗೆ ಹೋಗಿ ನೋಡಿದಾಗ....

ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿ ತಮ್ಮ ಕೋಣೆಯ ವಾಲ್ ಗೆ ಬೆನ್ನು ಮಾಡಿ ಮಾಮೂಲಿ ಧರಣಿ ಸ್ಟೈಲಿನಲ್ಲಿ ಕುಳಿತಿದ್ದಾರೆ. ಫ್ಯಾನ್ ಇಲ್ಲ, ಜೊತೆಗೆ ಸೊಳ್ಳೆ ಕಾಟ, ನಿದ್ದೆ ಬರಲೊಲ್ಲದು. ತಮ್ಮ ನಾಟಕ ಮಂಡಲಿಯ ಸಾಹಸಗಳ ಬಗ್ಗೆ ಯೋಚಿಸತೊಡಗಿದರು...

ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತೇವೆ, ಕರೆಂಟು, ನೀರಿನ ಬಿಲ್ಲು ಕಡಿತಗೊಳಿಸುತ್ತೇವೆ ಅಂತೆಲ್ಲ ಮಾತಿನ ಬಾಣ ಬಿಡುತ್ತಾ ದೆಹಲಿ ಜನರನ್ನು ನಂಬಿಸಿ ವಿಧಾನ ಸಭೆಯೊಳಗೆ ಹೋಗಿ, ಸರ್ಕಾರ ರಚಿಸಿ ಅದಕ್ಕಿಂತ ವೇಗವಾಗಿ ರಾಜೀನಾಮೆ ಕೊಟ್ಟು ಹೊರಬಂದದ್ದು ತಪ್ಪಾಯಿತೇ ?.. ಅಥವಾ, ನೆನೆಸದೇ ಅದೃಷ್ಟಕ್ಕೆ ಬಂದ ಅಧಿಕಾರದಲ್ಲಿ ಮುಂದುವರಿಯಬೇಕಿತ್ತೇ?.. ಚುನಾವಣೆಗೆ ಮೊದಲು ಅಧಿಕಾರಕ್ಕೆ ಬರುವ ನಿರೀಕ್ಷೆಯೇ ಇರಲಿಲ್ಲ.. ಅದೇನು ಅದೃಷವೋ, ದುರದೃಷ್ಟವೋ, ೨೮ ಸೀಟುಗಳಲ್ಲಿ ಗೆದ್ದೆವು. ಸರ್ಕಾರ ರಚಿಸುವುದು ಬೇಡ ಅಂತ ಕೂತರೂ ಕುರ್ಚಿ ಆಸೆ ಮೆಲ್ಲಗೆ ಚಿಗುರೊಡೆಯಿತು, ಒಂದಷ್ಟು ದಿನ ಅದರಲ್ಲಿ ಕೂತರೆ ಏನು ತಪ್ಪು ಅಂತ ನನ್ನ ಬಾಲಂಗೋಚಿಗಳು ಸಲಹೆ ಕೊಡಲಾರಂಭಿಸಿದರು. ಅದಕ್ಕೆ ಸರಿಯಾಗಿ ಕಾಂಗ್ರೆಸ್ಸಿಗರು ಕೂಡ ಸಪೋರ್ಟ್ ಕೊಡ್ತೀವಿ ಅಂತ ಬಿಸ್ಕತ್ ಹಾಕಿದ್ರು.. ಕುರ್ಚಿಯಲ್ಲಿ ಕೂತ ಮೇಲೆ ಗೊತ್ತಾಯ್ತು, ಜನರಿಗೆ ಏನೇನೋ ಭರವಸೆಗಳನ್ನು ಕೊಟ್ಟಿದ್ದೇವೆ ಅಂತ.. ಒಂದೆರಡು ಭರವಸೆ ಈಡೆರಿಸುವ ನಾಟಕ ಮಾಡಿದ್ರೂ, ಕುರ್ಚಿ ಹೆಚ್ಚು ದಿನ ಬಾಳಲ್ಲ ಅಂತ ತಿಳಿದಾಗ, ಅದರಿಂದ ಇಳಿಯುವುದು ಹೇಗೆ ಎಂಬುದೇ ದೊಡ್ಡ ಸಮಸ್ಯೆ ಆಯ್ತು.. ಅಂತೂ ದೇವರ ದಯೆಯಿಂದ ಹೇಗಾದ್ರೂ ಮಾಡಿ ರಾಜೀನಾಮೆ ಕೊಟ್ಟು ಚಾವಾವಾದೆವು ಅಂತ ಹೇಳಿಕೊಳ್ಳುತ್ತ, ಕೇಜ್ರಿವಾಲ್ ತನ್ನನ್ನು ತಾನೇ ಸಮಾಧಾನ ಪಡಿಸುವ ಪ್ರಯತ್ನದಲ್ಲಿದ್ದಾರೆ.

ಯೋಚನಾಲಹರಿ ಮುಂದುವರಿಯುತ್ತಾ, ದೆಹಲಿ ಕುರ್ಚಿಯನ್ನು ಇನ್ನೊಮ್ಮೆ ಅಲಂಕರಿಸುವ ಪ್ರಯತ್ನ ಮಾಡೋಣ ಅಂತ ನಾಟಕ ಮಂಡಲಿಯ ಹಲವರ ಅಭಿಪ್ರಾಯ. ಆದರೆ, ಸರ್ಕಾರ ರಚನೆಗೆ ಒಮ್ಮೆ ಕೈ ಕೊಟ್ಟು ಕಚ್ಚಿಸಿಕೊಂಡ ಕಾಂಗ್ರೆಸ್ಸು ಲೋಕಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ತಮ್ಮ ಪಕ್ಷದ ಅಸ್ಥಿತ್ವದ ಬಗ್ಗೆಯೇ ಚಿಂತೆಯಲ್ಲಿದ್ದಾರೆ. ಪಕ್ಷ ನಿರ್ನಾಮ ಆದ್ರೂ ಸರಿ, ಆಪ್ ಗೆ ಬೆಂಬಲ ಕೊಡಲ್ಲ ಅಂತ ಪೊರಕೆ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಅಂದ ಮೇಲೆ, ಇನ್ನು ದೆಹಲಿ ಚುನಾವಣೆ ಎದುರಿಸುವುದೊಂದೇ ದಾರಿ.. ಅದರೆ ಇರೋ ಮರ್ಯಾದೆ ಎಲ್ಲಾ ಹರಾಜು ಆದ್ಮೇಲೆ ಈ ಬಾರಿ ಜನರನ್ನ ನಂಬಿಸೋದು ಹೇಗೆ ಎಂಬ ಪ್ರಶ್ನೆ ಕೇಜ್ರಿವಾಲ್ ಅವರಿಗೆ ಮೋದಿಯಾಕಾರವಾಗಿ ಕಾಡತೊಡಗಿತು..

ಇತ್ತ ಪಕ್ಷದ ಕಚೇರಿಯಲ್ಲಿ ಕೆಲವು ಧರಣಿ ಪರಿಣಿತರು ಕೈಯಲ್ಲಿ ಪೊರಕೆ ಹಿಡಿದು ಕುಳಿತಿದ್ದಾರೆ. ಬಹುತೇಕ ಉಚ್ಚ ಸ್ಥ್ರರದ ನಾಯಕರು ಗಂಭೀರವದನರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನೆಲ ಕಚ್ಚಿದ ನೋವು ಒಂದೆಡೆಯಾದರೆ, ತಮ್ಮ ಹಾಗೂ ಸರಣಿಯಲ್ಲಿ ಧರಣಿ ಕೂತು ಕಟ್ಟಿದ ಪಕ್ಷದ ಗತಿಯೇನು ಎಂಬ ಚಿಂತೆ ಅವರನ್ನೆಲ್ಲ ಆವರಿಸಿತ್ತು.. ಬಹಳ ಹೊತ್ತಿನ ನಂತರ ಒಬ್ಬೊಬ್ಬರು ಒಂದೊಂದು ಥರದ ಸಲಹೆ ಕೊಡಲಾರಂಭಿಸಿದರು..

ಯೋಗೇಂದ್ರ : ನೋಡಿ, ನಾನು ಬಹಳ ವರ್ಷಗಳಿಂದ ಸೆಫಲಾಜಿಸ್ಟ್ ಆಗಿ ಟೀವಿ ಮುಂದೆ ಕೂತು ಕೊರೆದ ಅನುಭವದಿಂದ ಹೇಳುತ್ತೇನೆ - ನಮ್ಮ ಪಕ್ಷಕ್ಕೆ ಭವಿಷ್ಯ ಇಲ್ಲ ಅಂತ ಕಾಣುತ್ತೆ.. ನನ್ನಂತ ದಿಗ್ಗಜರೇ ಸೋತಿದ್ದೇವೆ ಅಂದಮೇಲೆ ನಾವು ನಮ್ಮ ಹಿಂದಿನ ದಂಧೆಗಳಿಗೆ ಹಿಂತಿರುಗುವುದು ಒಳ್ಳೇದು. ನನಗಂತೂ, ಉರಿಬಿಸಿಲಲ್ಲಿ ಪ್ರಚಾರ, ಧರಣಿ ಅಂತ ಕೂರೋದಕ್ಕಿಂತ ಹವಾ ನಿಯಂತ್ರಿತ ಕೋಣೆಗಳಲ್ಲಿ ಕೂತು ಟೀವಿ ಚಾನಲ್ ಗಳಲ್ಲಿ ಕೊರೆಯೋದೆ ಮೇಲು ಅಂತ ಅನಿಸುತ್ತೆ..

ಸಿಸೋಡಿಯಾ : ಅದೆಂಗಾಗುತ್ತೆ ?.. ಪೊರಕೆ ಹಿಡಿದು ಗಲ್ಲಿ ಗಲ್ಲಿ ತಿರುಗಿದ್ದೀವಿ.. ಇನ್ನೊಂದು ಸಲ ನೋಡೇ ಬಿಡೋಣ, ಗೆದ್ರೆ ಸರಿ, ಇಲ್ಲವಾದ್ರೆ ಹೇಗು ಇದೆಯಲ್ಲ, ಬಿದೀಲಿ ಧರಣಿ ಮಾಡೋಣ.. ಜನ ನಮ್ಮನ್ನು ಅಧಿಕಾರಕ್ಕೆ ತರೋವರ್ಗೂ ಧರಣಿ ಮಾಡ್ತೀವಿ ಅಂತ ಹೇಳಿದ್ರಾಯ್ತು, ಬೇರೇನೂ ವಿಷಯ ಬೇಕಾಗಿಲ್ಲ. ಹೇಗೂ ಟೀವಿ ಕ್ಯಾಮೆರಾಗಳು ಇದ್ದೇ ಇರ್ತವೆ, ಧರಣಿಯಲ್ಲಿ ಕೂರೋದಿಕ್ಕೆ ಜನ ಇಲ್ದಿದ್ರೂ ಸರಿ, ದೇಶದ ತುಂಬಾ ಜನ ವಿಧಿಯಿಲ್ದೆ ನಮ್ಮನ್ನ ನೋಡ್ತಾರೆ..

ಸೋಮನಾಥ್ : ಹೌದು ಹೌದು.. ಧರಣಿಯೇ ನಮ್ಮ ತಾಯಿ ತಂದೆ, ಧರಣಿಯೇ ನಮ್ಮ ಅನ್ನದಾತ, ಧರಣಿಯೇ ನಮಗೆ ಅಧಿಕಾರಕ್ಕೆ ದಾರಿ.. ಹಾಗಾಗಿ ನಾವು ಧರಣಿಯನ್ನು ಕೈಬಿಡಬಾರ್ದು. ಬಿಸಿಲು ತಡೆಯೊಕ್ಕಾಗಲ್ಲ ಅಂದ್ರೆ ಹವಾನಿಯಂತ್ರಿತ ಟೆಂಟುಗಳಲ್ಲಿ ಕೂತ್ರಾಯ್ತು.. ಹೇಗೂ ಚುನಾವಣೆಗೆ ಅಂತ ಹಣದ ಹೊಳೆಯೇ ಹರಿದು ಬಂದಿದೆ.. ಇನ್ನೂ ಜಾಸ್ತಿ ಎಫೆಕ್ಟ್ ಬೇಕಾದ್ರೆ ಆಗಾಗ ವಿದೇಶಿ ಮಹಿಳೆಯರ ಮನೆಗಳ ಮೇಲೆ ರೈಡ್ ಮಾಡಿದ್ರಾಯ್ತು..
ಷಾಜಿಯಾ ಇಮ್ಲಿ: ನಂಗ್ಯಾಕೋ ಬಿಸಿಲಲ್ಲಿ ತಿರುಗಾಡಿ ನನ್ನ ಮುಖದ ಕಳೆಯೆಲ್ಲ ಹೋಗಿ ಕೊಳೆಯಾಗಿದೆ.. ಯಾಕೋ ನಂ ಪ್ಲಾನುಗಳೆಲ್ಲಾ ಉಲ್ಟಾ ಹೊಡೀತಿದೆಯಲ್ಲಾ.. ಏನಾದ್ರೂ ಹೊಸತು ಮಾಡ್ಬೇಕು.. ಇನ್ಮೇಲೆ ಹಳೇ ಸ್ಲೋಗನ್ ಹಿಡ್ಕೊಂಡು ಜನ್ರತ್ತ್ರ ಹೋದ್ರೆ ಗನ್ ಹಿಡ್ಕೊಂಡು ಹೊಡೀತಾರೆ..

ಕುಮಾರ್ ವಿಶ್ವಾಸ್ : ಅಲ್ಲಾ, ನಾನು ಐದಾರು ತಿಂಗ್ಳಿಂದ ನೀರು, ರಸ್ತೆ ಇಲ್ದಿರೋ ಅಮೇಠೀಲಿ ಬೀದಿ ಬೀದಿ ಸುತ್ತಿದೀನಿ.. ಕವನ ಹಾಡಿದೀನಿ.. ಗೆದ್ದೇ ಗೆಲ್ತೀನಿ ಅಂತ ವಿಶ್ವಾಸದಿಂದ ಇದ್ದೆ... ಜನ ನನ್ನನ್ನೇ ನಂಬ್ಲಿಲ್ಲ. ಅವ್ರಿಗೆ ಇನ್ನೇನು ಬೇಕೊ.. ಯಾಕೋ ನಮ್ದು ನಾಟಕ ಸ್ವಲ್ಪ ಅತಿಯಾಯ್ತು ಅಂತ ಅನ್ಸುತ್ತೆ.. ಜನ ನಂಬೋವಂಥದ್ದು ಏನಾದ್ರೂ ಮಾಡ್ಬೇಕು, ಇದೆ ಹೋದ್ರೆ ಅದೇ ಪೊರಕೇಲಿ ನಂಮ್ಗೆ ಬಾರಿಸ್ತಾರೆ..

ಯೋಗೇಂದ್ರ : ಅದೆಲ್ಲಾ ಸರಿ..ಈಗ ತಕ್ಷಣಕ್ಕೆ ಏನ್ಮಾಡೋದು ? ಕೇಜ್ರಿವಾಲ್ ಬೈಲ್ ಬೇಡ ಅಂತ ಹೇಳಿ ಜೈಲಿಗೆ ಹೋಗಿದ್ದಾರೆ. ಅಲ್ಲಿ ಸೊಳ್ಳೆ ಕಾಟ ಜೋರಾಗಿದೆಯಂತೆ, ನಿದ್ದೇನೂ ಬರ್ತಾ ಇಲ್ವಂತೆ.. ನಾವು ಜೈಲಿನ ಹೊರಗೆ ಧರಣಿ ಕೂತ್ರೆ ಹೇಗೆ?.. ಹೇಗೂ ಮೋದಿ ಸರ್ಕಾರ ಪ್ರಮಾಣ ವಚನಕ್ಕೆ ಇನ್ನೂ ೩-೪ ದಿನ ಬಾಕಿ ಇದೆ. ಮೀಡಿಯಾದವ್ರಿಗೂ ಮೋದಿ ಕಾಬಿನೆಟ್ ರಚನೆ ಸಾಕಷ್ಟು ಸಲ ಮಾಡಿ ಮಾಡಿ ಬೋರಾಗಿದೆ. ನಾವು ಒಂದು ಹೊಸ ನಾಟಕ ಮಾಡಿದ್ರೆ, ಖಂಡಿತ ಕಾಮೆರಾ ನಂ ಮುಂದೆ ಹಿಡೀತಾರೆ.. ಜನರಿಗೆ ನಮ್ಮನ್ನ ಮರೆತು ಹೋಗ್ದೇ ಇರೋಹಾಗೆ ಮಾಡಲು ಇದು ಒಳ್ಳೆ ಉಪಾಯ..

ಸಿಸೋಡಿಯಾ : ಹಾಂ.. ಗುಡ್ ಐಡಿಯಾ!.. ಹೇಗಿದ್ರೂ ಮಾಡೋದಕ್ಕೆ ಬೇರೇನೂ ಕೆಲ್ಸ ಇಲ್ಲ.. ಇದನ್ನಾದ್ರೂ ನೀಟಾಗಿ ಮಾಡೋಣ.. ಧರಣಿ ಮಾಡ್ದೆ ತುಂಬಾ ದಿನ ಆಯ್ತು.. ಬನ್ನಿ, ಎಲ್ರೂ ತಿಹಾರ್ ನತ್ತ ಹೋಗೋಣ.. ಹಾಗೇ, ಮೀಡಿಯಾದವ್ರಿಗೂ ಧರಣಿ ಮಾಡ್ತೀವಿ ಅಂತ ತಿಳಿಸಿ.. ಎಲ್ರೀಗೂ ಪ್ರತ್ಯೇಕವಾಗಿ ನಿಮ್ಗೆ ಫಸ್ಟ್ ಹೇಳ್ತಿದೀವಿ ಅಂತ ಹೇಳಿ - ಆಗ ಎಲ್ರೂ ತಕ್ಷಣ ಕ್ಯಾಮೆರಾ ಹಿಡ್ಕೊಂಡು ಬರ್ತಾರೆ..

ಎಲ್ಲರೂ ಒಟ್ಟಾಗಿ : 'ಸರಿ, ನಡೀರಿ' ಅಂತ ಹೇಳ್ತಾ ಬಿಳಿ ಟೋಪಿ ಹಾಕ್ಕೊಂಡು ಉತ್ಸಾಹದಿಂದ ಹೊರಟರು..

 

Author : ಮೂಷಿಕ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited