Untitled Document
Sign Up | Login    
ರೂಪಾಯಿ 5 ಕ್ಕೆ ಊಟ ಸಿಗಲ್ವಾ ?.. ಇಲ್ಲಿದೆ ನೋಡಿ ಅದ್ಭುತ ಪರಿಹಾರ..

(ಚಿತ್ರ : ಕಾಂತೇಶ್ ಬಡಿಗೇರ್)

ಪ್ರಧಾನಿ ಮನಮೋಹನ್ ಸಿಂಗ್ ತಲೆಮೇಲೆ, ಅಲ್ಲಲ್ಲ.. ತಮ್ಮ ಪೇಟಾಮೇಲೆ ಕೈಹೊತ್ತು ಗಂಭೀರವಾಗಿ ಕುಳಿತಿದ್ದಾರೆ. ಅಷ್ಟರಲ್ಲಿ ಒನ್ನೊಬ್ಬ ಪೇಟಾಧಾರಿ, ಯೋಜನಾ ಆಯೋಗದ ಉಪಾಧ್ಯಕ್ಷ ಮೋಂಟೆಕ್ ಸಿಂಗ್ ಎಂಟ್ರಿ ಕೊಡ್ತಾರೆ.. ಅವರ ಮುಖವೂ ಸ್ವಲ್ಪಮಟ್ಟಿಗೆ ಸುಟ್ಟಬದನೆಕಾಯಿಯಂತಿದೆ..

ಮೋಂಟೆಕ್ ಸಿಂಗ್ : ನಮಸ್ತೆ ಸಾರ್, ಕರೆದ್ರಂತೆ ?..

ಮನಮೋಹನ್ ಸಿಂಗ್ : ಹೌದ್ರೀ, ಯಾಕ್ರೀ ಲೇಟು ? ನಾಲ್ಕು ತಾಸಿಂದ ಕಾಯ್ತಾ ಇದೀನಿ ನಿಮಗೋಸ್ಕರ..

ಮೋಂಟೆಕ್ ಸಿಂಗ್ : ಹಿ,ಹಿ,ಹಿ.. ಅಫೀಸಲ್ಲಿ ಬಾತ್ರೂಮಲ್ಲಿ ಇದ್ದೆ ಸಾರ್, 28ಲಕ್ಷ ರೂಪಾಯಿ ಖರ್ಚುಮಾಡಿಸಿ ರಿಪೇರಿ ಮಾಡ್ಸಿದೀನಿ ನೋಡಿ, ಕೂತ್ರೆ ಎದ್ದೇಳೋಕೇ ಮನಸ್ಸು ಬರಲ್ಲ..

ಮನಮೋಹನ್ ಸಿಂಗ್ : ಹೂಂ, ಇಲ್ಲಿ ನಂಗೆ ಮ್ಯಾಡಂ ಪೀಯೆ ಅವರ ಅಸಿಸ್ಟಂಟ್ ಮೇಲಿಂದಮೇಲೆ ಫೋನ್ ಮಾಡ್ತಾ ಇದಾರೆ, ಉಗೀತಾ ಇದಾರೆ, ಮ್ಯಾಡಂ, ಅವರ ಪೀಯೆ, ಕಾರ್ ಡ್ರೈವರ್ ಎಲ್ರೂ ಸಾಲಾಗಿ ನಿಂತು ಉಗೀತಾ ಇದಾರಂತೆ..

ಮೋಂಟೆಕ್ ಸಿಂಗ್ : ಯಾಕ್ ಸಾರ್?. ಅವ್ರ ಮನೇಲಿ ನೀರು-ಗೀರು ಸರಿಯಾಗಿ ಬರ್ತಾ ಇಲ್ವಾ ?..

ಮನಮೋಹನ್ ಸಿಂಗ್ : ಅದಲ್ರೀ ವಿಷಯ.. ಅದೇ, ನಿಮ್ಮ ಆಯೋಗ ಮೊನ್ನೆ ಬಿಡುಗಡೆ ಮಾಡ್ತಲ್ವಾ ವರದಿ.. ನಮ್ ದೇಶದಲ್ಲಿ ಬಡತನ 37 ಶೇ. ದಿಂದ 22 ಶೇ. ಕ್ಕೆ ಇಳಿದಿದೆ ಅಂತ.. ದಿನಕ್ಕೆ 33 ರೂಪಾಯಿ ಅದಾಯ ಇದ್ರೆ ಅವರೆಲ್ಲ ಬಡವರಲ್ಲ ಅಂತ..

ಮೋಂಟೆಕ್ ಸಿಂಗ್ : ಅದಕ್ಯಾಕೆ ವರಿ ಮಾಡ್ತೀರಿ ಸಾರ್, ಹೇಳಿ.. ಬೇಕಾದ್ರೆ ಇನ್ನೂ 10 ಪರ್ಸೆಂಟ್ ಬಡತನ ಕಡಿಮೆ ಆಗಿದೆ ಅಂತ ತೋರ್ಸೋಣ.. ಅದಕ್ಕೇನಂತೆ ?..

ಮನಮೋಹನ್ ಸಿಂಗ್ : ಅಯ್ಯೋ, ಸುಮ್ನಿರ್ರೀ, ನೀವು ಮಾಡಿರೋ ಘನಕಾರ್ಯದ ಬಗ್ಗೆ ದೇಶಾದ್ಯಂತ ಚರ್ಚೆ ಮಾಡ್ತಾ ಇದಾರೆ, ಜನ ಬೀದಿಬೀದಿಲಿ ಸರ್ಕಾರಾನ ಬೈತಾ ಇದಾರೆ ಅಂತೆಲ್ಲಾ ಹೇಳಿದ್ರು.. ಒಪೊಸಿಶನ್ ಪಾರ್ಟಿಯವ್ರೂ, ಟೀವಿಯವ್ರೂ ಎಲೆಅಡಿಕೆ, ಜರ್ದಾ ಹಾಕ್ಕೊಂಡ್ರು ಉಗಿತಾ ಇದಾರೆ..

ಮೋಂಟೆಕ್ ಸಿಂಗ್ : ಸಾರ್, ನಮ್ ಫಿಗರ್ ಗಳು ಯಾವಾಗ್ಲೂ ಸರಿಯಾಗೇ ಇರುತ್ತೆ, ನಿಮ್ಗೊತ್ತಲ್ಲಾ ?..

ಮನಮೋಹನ್ ಸಿಂಗ್ : ಆ 'ಫಿಗರ್' ಅಲ್ರೀ, ಎಕನಾಮಿಕ್ ಫಿಗರ್ ಬಗ್ಗೆ ಮಾತಾಡಿ..

ಮೋಂಟೆಕ್ ಸಿಂಗ್ : ಹಾಂ.. ಅದಕ್ಕೇನಂತೆ ?.. ದಿಲ್ಲಿ, ಮುಂಬೈ ಮುಂತಾದ ನಗರಗಳಲ್ಲಿ ದಿನಕ್ಕೆ 33 ರೂ. ಅದಾಯ ಇದ್ರೆ ಅವ್ರೆಲ್ಲಾ ಬಡವರಲ್ಲ ಅಂತ ಹೇಳಿದೀವಿ.. ಅಷ್ಟು ಸಾಲ್ದಾ ಸಾರ್ ?..

ಮನಮೋಹನ್ ಸಿಂಗ್ : ಅಲ್ರೀ, 33 ರೂಪಾಯಿಗೆ ಏನು ಸಿಗುತ್ತೇರಿ ಈ ಕಾಲ್ದಲ್ಲಿ ?.. ನಾವೇನೋ ಸರ್ಕಾರದ ಖರ್ಚಲ್ಲಿ ದಿನ ತಳ್ತೀವಿ, ಜನ್ರು ಏನು ತಿನ್ಬೇಕು ?.. ಅಲ್ರೀ, ನಮ್ ಅಫೀಸ್ ಬಾಯ್ ಹೇಳ್ತಾನೆ, ಒಂದು ಜೊತೆ ಲಂಗೋಟಿಗೆ 60 ರುಪಾಯಿ ಅಗುತ್ತಂತೆ.. ಜನ್ರೇನು ಕಿವಿಮೇಲೆ ಯಾವಾಗ್ಲೂ ಹೂವ ಇಟ್ಕೊಂಡಿರ್ತಾರಾ ?.. ಅಲ್ಲಾ, 5ರೂಪಾಯಿಗೆ ಸಿಗೋ ಊಟ ತಿಂದ್ರೆ, ನೀವು ದಿನವಿಡೀ ಟಾಯ್ಲೆಟ್ಟಲ್ಲೇ ಕೂತಿರ್ಬೇಕು ನೋಡಿ..

ಮೋಂಟೆಕ್ ಸಿಂಗ್ : ನೀವೂ ಸರಿಯಾಗೇ ಇದೀರಿ ಸಾರ್.. ಇಲ್ದೆ ಹೋದ್ರೆ ಬಡತನ ಕಡಿಮೆ ಮಾಡೋದು ಹೇಗೆ ಸಾರ್ ?.. ಜನರು ಡೀಸೆಂಟಾಗಿ ಬದುಕ್ಬೇಕು ಅಂದ್ರೆ ಎಟ್ ಲೀಸ್ಟ್ ದಿನಕ್ಕೆ 500 ರೂ. ಆದ್ರೂ ಆದಾಯ ಇರ್ಬೇಕು.. ಹಾಗೆ ಹೇಳ್ಬಿಟ್ರೆ ಆಗ ದೇಶದ ಹೆಚ್ಚಿನ ಜನರೆಲ್ಲ ಬಡತನದ ರೇಖೆಗಿಂತ ಕೆಳಗೆ ಬರ್ತಾರೆ.. ಯುಪಿಯೆ ಸರ್ಕಾರ ಬಡತನ ಕಡಿಮೆ ಮಾಡಿದೆ ಅಂತ ತೋರ್ಸೋದು ಹ್ಯಾಗೆ?.. ಅದಕ್ಕಾಗೇ 33 ರೂ. ಅಂತ ಲೆಕ್ಕ ಹಾಕಿ ರಾತೋರಾತ್ರಿ ಬಡವರ ಸಂಖ್ಯೆ ಕಡಿಮೆ ಮಾಡಿದ್ವಿ ಸಾರ್.. ನಮ್ಮನ್ನ ಹೈಕಮಾಂಡ್ ಹೊಗಳುತ್ತೆ ಅಂತ ಅಂದುಕೊಂಡ್ವಿ..

ಮನಮೋಹನ್ ಸಿಂಗ್ : ಮೊದಲು ಹೊಗಳಿದ್ರು.. ಆದ್ರೆ ಈಗ ಮೀಡಿಯಾದವ್ರೂ ಸೇರಿ ಎಲ್ರೂ ನಮ್ ಸರ್ಕಾರಕ್ಕೆ ಶಾಪ ಹಾಕ್ತಾ ಇದಾರೆ, ಅದಕ್ಕೇ ಮ್ಯಾಡಂ ಗರಂ ಆಗಿದಾರೆ.. ಅದು ಹೋಗ್ಲಿ, ಇಷ್ಟೂ ಸಾಲ್ದು ಅಂತ ಮುಂಬೈಯಲ್ಲಿ 12 ರೂಪಾಯಿಗೆ ಹೊಟ್ಟೆ ತುಂಬಾ ಊಟ ಸಿಗುತ್ತೆ ಅಂತ ರಾಜ್ ಬಬ್ಬರ್ ಹೇಳಿದಾರೆ, ಅಲ್ದೆ, 5 ರೂಪಾಯಿಗೆ ದಿಲ್ಲಿಯಲ್ಲಿ ಊಟ ಸಿಗುತ್ತೆ ಅಂತ ರಶೀದ್ ಮಾಸೂದ್ ಹೇಳಿಕೆ ಕೊಟ್ಟಿದಾರೆ, ಅಲ್ರೀ, ದಿಲ್ಲಿಯಲ್ಲಿ ಇಲಿಗೂ ತಿನ್ನೋಕೆ 5 ರೂಪಾಯಿಗಿಂತ ಹೆಚ್ಚಿಗೆ ಖರ್ಚಾಗುತ್ತೆ ಅಲ್ವಾ?.. ಇವ್ರೆಲ್ಲಾ ಯಾಕೆ ಹೀಗೆಲ್ಲ ಮಾತಾಡ್ತಾರೆ ?..

ಮೋಂಟೆಕ್ ಸಿಂಗ್ : ಇನ್ನೇನು ಮಾಡ್ತಾರೆ ಸಾರ್?. ಕಳೆದ 9 ವರ್ಷಗಳಲ್ಲಿ ದೇಶದ ಸಂಪತ್ತೆಲ್ಲ ಲೂಟಿಯಾಗಿದೆ.. ಬಡವರ ಉದ್ಧಾರಕ್ಕೆ ದುಡ್ದು ಎಲ್ಲಿದೆ ಸಾರ್ ?.. ಇಲೆಕ್ಷನ್ ಹತ್ರ ಬರ್ತಾ ಇದ್ಯಲ್ಲಾ?. ಇನ್ನೊಂದು ಸಲ ಅಧಿಕಾರಕ್ಕೆ ಬಂದ್ರೆ ಚೆನ್ನಾಗಿರುತ್ತೆ ಅಂತ ಅವ್ರ ಅಭಿಪ್ರಾಯ.. ಅದೂ ಅಲ್ದೆ, ಬಿಜೆಪಿನವ್ರೂ ಕಚ್ಚಾಡ್ತಾ ಇದ್ದಾರೆ, ಹಾಗಾಗಿ ನಮ್ಗೆ ಇನ್ನೂ ಒಂದು ಛಾನ್ಸ್ ಸಿಗ್ಬೋದು ಅಂತ ಲೆಕ್ಕಾಚಾರ ಹಾಕ್ತಾ ಇದಾರೆ..

ಮನಮೋಹನ್ ಸಿಂಗ್ : ಹೂಂ.. ಅಂದ್ರೆ, ನಾನು ಇನ್ನೂ ಐದು ವರ್ಷ ಈ ಕರ್ಮಗಳನ್ನೆಲ್ಲಾ ನೋಡ್ತಾ ಇರ್ಬೇಕು ಅನ್ನಿ ?..

ಮೋಂಟೆಕ್ ಸಿಂಗ್ : ಇನ್ನೇನು ಮಾಡೊಕಾಗುತ್ತೆ ಸಾರ್, ಪ್ರಧಾನಿನೂ ಅಗ್ಬೇಕು, ಅಧಿಕಾರಾನೂ ಬೇಕು ಅಂದ್ರೆ ಹೇಗೆ ಹೇಳಿ ?.. ಯಾವುದಾದ್ರೂ ಒಂದರಲ್ಲಿ ಸಂತೋಷ ಪಡಿ.. ನಿಮ್ಮನ್ನ ಬಿಟ್ರೆ ಇಷ್ಟೊಂದು ನಿಯತ್ತಾಗಿ ಹೇಳಿದ್ದಕ್ಕೆಲ್ಲ 'ಯಸ್' ಅನ್ನೋ ಯೋಗ್ಯವ್ಯಕ್ತಿ ಬೇರೆ ಯಾರು ಇದಾರೆ ಸಾರ್ ಮ್ಯಾಡಂಗೆ ?..

ಮನಮೋಹನ್ ಸಿಂಗ್ : ಇರ್ಲಿ,ಮಾಂಟೆಕ್, ವಿಷಯ ಎಲ್ಲೆಲ್ಲೋ ಹೋಗ್ತಾ ಇದೆ. ಈಗ ಮ್ಯಾಡಂ ಸಿಟ್ಟು ಹೇಗೆ ಇಳಿಸೋದು ಹೇಳಿ.. ಜೊತೆಗೆ 'ಯುವರಾಜ'ರಿಗೆ ಇನ್ನೂ ಈ ವಿಷಯ ಅರ್ಥ ಆದಂಗಿಲ್ಲ ಅಥವಾ ಅವ್ರಿಗೆ ಯಾರೂ ಹೇಳಿಲ್ಲಾ.. ಗೊತ್ತಾಗ್ಬಿಟ್ರೆ ಅವ್ರೂ ರೇಗಾಡ್ತಾರೆ..

ಮೋಂಟೆಕ್ ಸಿಂಗ್ : ಗೊತ್ತಾಯ್ತು ಸಾರ್, ವಿಷಯ ಗಂಭೀರವಾಗಿದೆ.. ಏನಾದ್ರು ಪ್ಲಾನ್ ಮಾಡೋಣ..

ಮನಮೋಹನ್ ಸಿಂಗ್ : ಅದಕ್ಕೇ ತಾನೆ ನಿಮ್ಮನ್ನ ಪ್ಲಾನಿಂಗ್ ಕಮಿಷನ್ ನಲ್ಲಿ ಕೂರ್ಸಿರೋದು ?.. ಏನಾದ್ರೂ ಐಡಿಯಾ ಕೊಡಿ..

ಮೋಂಟೆಕ್ ಸಿಂಗ್ : ಹಾಂ.. ಹೊಳೀತು ಸಾರ್.. ತುಂಬಾ ಸಿಂಪಲ್ಲು.. ಐದು ರೂಪಾಯಿಗೆ ಊಟ ಸಿಗಲ್ಲ ಅಂತ ಒಪಸಿಶನ್ ಪಾರ್ಟಿಯವ್ರು ಹೇಳ್ತಾರಲ್ಲಾ ?.. ಈಗ ನಮ್ ರೂಪಾಯಿನ 'ಡಾಲರ್' ಅಂತ ಕರೆದ್ರೆ ಹೇಗೆ?.. 5 ಡಾಲರ್ ಗೆ ಊಟ ಅಂದ್ರೆ ಏನು ಕಡಿಮೇನಾ ?.. ಭಾರತದಲ್ಲಿ ಭಿಕ್ಷುಕರೂ 5 ಡಾಲರ್ ಕೊಟ್ಟು ಊಟಮಾಡ್ತಾರೆ ಅಂತ ಹೇಳ್ಬೋದು.. ಇಲೆಕ್ಷನ್ ಗೆ ಮೋದಿ ವಿರುದ್ಧ ನಮ್ಗೆ ಎಂಥಾ ಸ್ಲೋಗನ್ ಸಿಕ್ದಂಗಾಯ್ತು ಅಲ್ವಾ?..

ಮನಮೋಹನ್ ಸಿಂಗ್ : ವಾವ್ವ್!.. ಎಂಥಾ ಸುಪರ್ ಐಡಿಯಾ ಕಣ್ರೀ.. ನಿಮ್ಮನ್ನ ಯೋಜನಾ ಆಯೋಗದಲ್ಲಿ ಕೂರ್ಸಿದ್ದಕ್ಕೆ ಪ್ರಚಂಡ ಯೋಚನೇನೆ ಮಾಡ್ತೀರಿ.. ಸರಿ, ಬೇಗ ಮ್ಯಾಡಂ ಗೆ ಫೋನ್ ಹಾಕ್ತೀನಿ..

ಬಹಳಕಾಲದ ಮೇಲೆ ಪ್ರಧಾನಿ ಮುಖದ ಮೇಲೆ ನಿಧಾನವಾಗಿ ಮುಗುಳ್ನಗೆ ಮೂಡಿತು..

 

Author : ಮೂಷಿಕ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited