Untitled Document
Sign Up | Login    
ಧರಣಿ ಮಂಡಲದಲ್ಲಿ ಕೇಜ್ರಿವಾಲ್ ಜೊತೆಗೆ ಸಂ-ದರ್ಶನ


ಧರಣಿಗಳಿಂದಲೇ ಧರಣಿ ಮಂಡಲದ ಮಾಧ್ಯಮಗಳಲ್ಲಿ ನಿತ್ಯಹಸುರಾಗಿ ಕಾಣಿಸಿಕೊಂಬ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರ ಜೊತೆ ನಡೆದಿದೆ ಎನ್ನಲಾದ ಸಂ-ದರ್ಶನದ ಮುಖ್ಯ ಭಾಗ ನಿಮಗಾಗಿ..

(ಕೇಜ್ರಿವಾಲ್ ರಸ್ತೆ ಬದಿ ಧರಣಿಯಲ್ಲಿ ನಿರತರಾಗಿದ್ದರು. ಯಾಕೆ ಅಂತ ಕಾರ್ಯಕರ್ತರೊಬ್ಬರನ್ನ ಕೇಳಿದೆ. ಯಾಕೋ ಗೊತ್ತಿಲ್ಲ, ನಿನ್ನೆ, ಮೊನ್ನೆ ಬೇರ್ಯಾವುದೋ ಕಾರಣಗಳಿದ್ದವು. ಈದಿನ ಹೊಸತೇನೋ ವಿಷಯಕ್ಕಾಗಿ ಮಾಡ್ತಿದಾರೆ, ಬೇಕಾದ್ರೆ ಕೇಳಿ ಹೇಳ್ತೀನಿ ಅಂದ್ರು. ಬೇಡ, ಗೊತ್ತಿದ್ದಿದ್ದೇ ಬಿಡಿ, ಅಂತ ಹೇಳಿ ಮುನ್ನುಗ್ಗಿದೆ)..

ಬೆಂಗಳೂರು ವೇವ್ಸ್: (ಕೆಮ್ಮುತ್ತಾ ಕುಳಿತಿದ್ದ ಕೇಜ್ರಿವಾಲ್ ಅವರನ್ನು ಕಂಡು..) ಕೇಜ್ರಿವಾಲ್ ಅವರಿಗೆ ನಮಸ್ಕಾರ. ನನ್ನ ಗುರುತು ಸಿಕ್ತಾ ಸಾರ್?.. ಅದೇ, ಅಣ್ಣಾ ಹಜಾರೆ ಜೊತೆಗೆ ನೀವು ರಾತ್ರಿ, ಹಗಲು ಧರಣಿ ಕೂತಿದ್ದಾಗ ನಿಮ್ಮೊಂದಿಗೆ ನಾನೂ ಇದ್ದೆ.. ಸಾರ್, ತಗೊಳಿ (ಒಂದು ಕಫ್ ಸಿರಪ್ ಬಾಟಲ್ ಕೊಡ್ತಾ..), ಕೆಮ್ಮಿಗೆ ಇದು ರಾಮಬಾಣ..

ಅರವಿಂದ್ ಕೇಜ್ರಿವಾಲ್: (ಥ್ಯಾಂಕ್ಸ್ ಹೇಳಿ, ಬಾಟಲ್ ತಗೊಂಡು ಬದಿಗಿಡುತ್ತಾ), ಇರಬಹುದು, ನನಗೆ ಈಗೆಲ್ಲ ಮರೆತು ಹೋಗಿದೆ, ಎಷ್ಟೋ ಜನರನ್ನು ನಾನು ದಾಟಿ ಬಂದಿದ್ದೇನೆ.. ಇರ್ಲಿ, ನೀವ್ಯಾಕೆ ಬಂದಿದ್ದೀರಿ?

ಬೆಂ.ವೇ.: ಏನಿಲ್ಲ, ನಿಮ್ಮದೊಂದು ಸಂದರ್ಶನ ಮಾಡೋಣ ಅಂತ, ಸ್ವಲ್ಪ ಸಮಯ ಕೊಡ್ತೀರಾ ?..

ಅ.ಕೇ.: ನೋಡಿ.. ನನಗೆ ಇತ್ತೀಚೆಗೆ ಮಾಧ್ಯಮದವರು ಅಂದ್ರೆ ಅಲರ್ಜಿ. ನೀವು ಏನೇನೋ ಬರೀತೀರಾ.. ನಮ್ಮ ವಿರುದ್ಧ ಬರೀಯೋರನ್ನ, ನಮ್ಮನ್ನ ಕಾಮೆಂಟ್ ಮಾಡೋರನ್ನ ನಮ್ಮ ಪಕ್ಷ ದೂರ ಇಡುತ್ತೆ. ನಮ್ಮನ್ನ ಹೊಗಳೋರನ್ನ ಮಾತ್ರ ಹತ್ರ ಸೇರ್ಸ್ಕೋತೀವಿ. ನೀವು ಯಾವ ಕ್ಯಾಟಗೆರಿಗೆ ಸೇರ್ದೋರು?..

ಬೆಂ.ವೇ.: ನಾವು ವಿನಾಕಾರಣ ಯಾರನ್ನೂ ದೂರಲ್ಲ, ಸಾರ್.. ಆದ್ರೂ ಇದೇ ಮೀಡಿಯಾದವ್ರೇ ತಾನೇ ನಿಮ್ಮನ್ನ ಇಷ್ಟು ಮೇಲಕ್ಕೆ ಎತ್ತಿಟ್ಟಿರೋದು ? ಈಗ ಇದ್ದಕ್ಕಿದ್ದ ಹಾಗೆ ಅವ್ರನ್ನ ದೂರೋದು ಸರೀನಾ ?..

ಅ.ಕೇ.: ಅಯ್ಯೋ, ಅದೆಲ್ಲಾ ಹಳೇ ಕಥೆ.. ಈಗ ನಾವು ರಾಜ್ಯ ಆಳಿ ತೋರ್ಸಿದೀವಿ, ಇನ್ನು ದೇಶ ಆಳೋಕೆ ಹೊರಟಿರೋರು.. ಅಷ್ಟಕ್ಕೂ ನಂ ಕೆಲ್ಸ ಆದ್ಮೇಲೆ ಅವ್ರನ್ನ ಕಟ್ಕೊಂಡು ನಮ್ಗೇನಾಗ್ಬೇಬೇಕು?..

ಬೆಂ.ವೇ.: ಅದು ಸರಿ, ಸಾರ್. ಅಣ್ಣಾ ಹಜಾರೆಯಂಥವರನ್ನೇ ಬಾಳೆಹಣ್ಣು ಸಿಪ್ಪೆ ಥರಾ ಎಸೆದುಬಿಟ್ಟವ್ರು ನೀವು, ನಾವೇನು ಹೆಚ್ಚು?.. ಆದ್ರೂ..

ಅ.ಕೇ.: ಹಾಗೆಲ್ಲ ಹೇಳ್ಬೇಡಿ, ಅಣ್ಣಾ ಬಗ್ಗೆ ನಂಗೆ ಈಗ್ಲೂ ಒಂದಷ್ಟು ಗೌರವ ಇದೆ, ಆದ್ರೆ ಅವ್ರು ನನ್ ಬಗ್ಗೆ ಏನೇನೋ ಹೇಳ್ತಾರೆ, ಅದಕ್ಕೇ ಅವ್ರನ್ನ ದೂರ ಇಟ್ಟಿದೀವಿ.

ಬೆಂ.ವೇ.: ಅವ್ರು ಏನು ಹೇಳಿದ್ರು ?.. ಅವರ ಹೆಸರನ್ನು ಬಳಸಿ ನೀವು ಕೋಟಿಗಟ್ಲೆ ದುಡ್ಡು ಸಂಪಾದಿಸಿದ್ದೀರಿ, ಅದು ಸರಿಯಲ್ಲ, ನಿಮಗೆ ರಾಜಕೀಯದಲ್ಲಿ ಮಹತ್ವಾಕಾಂಕ್ಷೆಯಿದೆ ಅಂತೆಲ್ಲಾ ಹೇಳಿದ್ರು..

ಅ.ಕೇ.: ದುಡ್ಡೇನ್ರೀ ಮಹಾ.. ಬೇರೆ ಪಕ್ಷಗಳಿಗೆ ಹೋಲ್ಸಿದ್ರೆ ನಮ್ಮ ಪಕ್ಷವೇ ಅತೀ ಬಡವಾದ್ದು.. ಈಗ ಅಣ್ಣಾ ಹೆಸರು ಹೇಳ್ದೇನೆ ಸಾಕಷ್ಟು 'ದೇಣಿಗೆ'ಗಳು ಬರ್ತಾ ಇದೆ..

ಬೆಂ.ವೇ.: ಅದ್ರೂನೂ, ನೀವು ಆರಂಭದಲ್ಲಿ ಅಣ್ಣಾ ಹಜಾರೆ ಹೆಸರನ್ನ ಬಳಸಿ, ಅವ್ರು ಹೇಳಿದ್ದು ವೇದವಾಕ್ಯ ಅಂತೆಲ್ಲ ಹೇಳ್ಕೊಂಡು, ಪಾಪ, ನಿಮ್ ಕೆಲ್ಸ ಆದ್ಮೇಲೆ ಅವ್ರನ್ನ ಈ ಥರ ಮೂಲೆಗುಂಪಾಗಿಸಿದ್ದು ಸರೀನಾ?..

ಅ.ಕೇ.: ನಾವೇನ್ರೀ ಮಾಡೊಕಾಗುತ್ತೆ ? ಅವ್ರು ಹೇಳಿದ್ದನ್ನೆಲ್ಲ ಕೇಳ್ಕೊಂಡಿದ್ರೆ ನಾನು ದೆಹಲಿ ಮುಖ್ಯಮಂತ್ರಿ ಆಗೋದಿತ್ತಾ?.. ಈಗಿರೋ ಬಂಗ್ಲೆ ನಂಗೆ ಸಿಗ್ತಿತ್ತಾ?.. ಟೀವಿ ಮುಂದೆ ಪ್ರತಿದಿನ ದರ್ಶನ ಕೊಡೋಕಾಗ್ತಿತ್ತಾ?.. ಅಷ್ಟಕ್ಕೂ ಏಣಿ ಹತ್ತಿದ್ ಮೇಲೆ ಯಾರಾದ್ರೂ ಏಣೀನಾ ಜೊತೆಯಲ್ಲೇ ಒಯ್ತಾರಾ ? ಅಲ್ಲೇ ಬಿಟ್ಬಿಟ್ಟು ಹೋಗಲ್ವಾ ?..

ಬೆಂ.ವೇ.: ನಿಮ್ ಪಾಯಿಂಟ್ ಸರಿ ಸಾರ್, ಆದ್ರೂ.. ಜನ ನಿಮ್ ಬಗ್ಗೆ ಹಾಗೆಲ್ಲ ಮಾತಾಡ್ಕೋತಾರೆ..

ಅ.ಕೇ.: ಅವ್ರೆಲ್ಲ ಬಿಜೆಪಿನವ್ರು ಕಣ್ರೀ.. ನಾನು ಪ್ರಧಾನಿಯಾಗೋದು ಅವ್ರಿಗೆ ಸಹಿಸಲ್ಲ, ಅದಕ್ಕೆ ಹಾಗೆಲ್ಲ ಮಾತಾಡ್ತಾರೆ, ನೀವು ಮಾಧ್ಯಮದವ್ರು ಉಪ್ಪು,ಖಾರ ಸೇರ್ಸಿ ಬರೀತೀರಿ..

ಬೆಂ.ವೇ.: ಅಂದ್ರೆ, ನೀವು ಪ್ರಧಾನಿ ಪಟ್ಟದ್ಮೇಲೆ ಕಣ್ಣಿಟ್ಟಿದ್ದೀರಿ ಅಂತಾಯ್ತು ?..

ಅ.ಕೇ.: ಯಾಕಾಗ್ಬಾರ್ದು ?.. ಲಾಲೂ, ಮುಲಾಯಮ್, ದೇವೇಗೌಡ, ಮಮತಾ ಇತ್ಯಾದಿ ಇತ್ಯಾದಿಗಳೆಲ್ಲಾ ಪ್ರಧಾನಿ ಆಗ್ಬೇಕೂಂತ ಹೊರಟಿಲ್ವಾ ? ನಾನ್ಯಾಕಾಗ್ಬಾರ್ದು ?. ಇವ್ರೆಲ್ಲರಿಗಿಂತ್ಲೂ ನಾನೇ ಸೂಕ್ತ ವ್ಯಕ್ತಿ ಅಲ್ವಾ ?.. ನೋಡಿ, ಭ್ರಷ್ಟಾಚಾರ ವಿರುದ್ಧ ದಿನಬೆಳಗಾದ್ರೆ ಹೇಳಿಕೆ ಕೊಡ್ತೀನಿ, ಧರಣಿ ಕೂರ್ತೀನಿ.. ಈಗೀಗ ಸೆಕ್ಯುಲರಿಸಂ ಬಗ್ಗೇನೂ ಹೇಳೋಕೆ ಶುರುಮಾಡಿದೀನಿ..

ಬೆಂ.ವೇ.: ಹೌದು ಸಾರ್.. ನೀವೇ ಯೋಗ್ಯರು, ಬಿಡಿ.. ಆದ್ರೂ, ಡೆಲ್ಲೀಲಿ ಸರ್ಕಾರ ನಡೆಸಿ ನೀವು ಏನೂ ಮಾಡೋಕಾಗಿಲ್ವಲ್ಲಾ, ಜನ ನಿಮ್ ಬಗ್ಗೆ ಇನ್ನೂ ನಂಬಿಕೆ ಇಟ್ಕೊಂಡಿದಾರೆ ಅಂತ ನಂಬ್ತೀರಾ?..

ಅ.ಕೇ.: ನಂಬದೆ ಏನ್ಮಾಡ್ಲಿ ?.. ಡಿಲ್ಲೀಲಿ ನಮ್ಗೆ ಅಷ್ಟೋಡು ಸೀಟು ಸಿಗುತ್ತೆ ಅಂತ ಕನಸಲ್ಲೂ ನಾವು ಯೋಚಿಸಿದ್ವಾ?.. ಏನೋ, ಏಳೆಂಟು ಸೀಟು ಬರ್ಬೋದು, ಅಸೆಂಬ್ಲೀಲಿ ಕೂತ್ಕೊಂಡು ಧರಣಿ ಮಾಡ್ಕೊಂಡಿರ್ಬೋದು ಅಂತ ಲೆಕ್ಕ ಹಾಕಿದ್ರೆ, ಜನ ಆ ಪಾಟಿ ಗೆಲ್ಸೋದಾ?.. ಚುನಾವಣೆಗೆ ನಿಲ್ಲೋಕೆ ಜನ ಸಿಗ್ಲಿಲ್ಲ ಅಂತ ರಿಕ್ಷಾ ಡ್ರೈವರ್ಸ್, ಹಾಲು ಹಾಕೋ ಹುಡುಗ್ರನ್ನೆಲ್ಲ ನಿಲ್ಸಿದ್ವಿ, ಅವ್ರೆಲ್ಲ ಗೆದ್ಕೊಂಡು ಬಂದ್ರು, ಅವ್ರನ್ನ ಕಟ್ಕೊಂಡು ಸರ್ಕಾರ ನಡೆಸೋದು ಹ್ಯಾಗೆ ಹೇಳಿ.. ಅದೂ ಅಲ್ದೆ, ನಮ್ಗೂ ಅನುಭವ ಇರ್ಲಿಲ್ಲ ಅಲ್ವಾ?..

ಬೆಂ.ವೇ.: ಹಾಗಾದ್ರೆ ಸರ್ಕಾರ ಯಾಕೆ ಮಾಡಿದ್ರಿ?.. 49 ದಿನಕ್ಕೇ ಔಟಾಗಿಬಿಟ್ರಲ್ಲ ?..

ಅ.ಕೇ.: ಹಾಂ, ಹೇಗೂ ಗೆದ್ದಿದ್ದೀವಿ, ಸರ್ಕಾರ ಮಾಡಿ ಅಂತ ಕಾಂಗ್ರೆಸ್ನವ್ರೂ ದುಂಬಾಲು ಬಿದ್ರು, ನಾಕ್ ದಿನ ನಡೆಸಿ, ಕಾಂಗ್ರೆಸ್ನೋರೆ ನಮ್ ಸರ್ಕಾರಾನಾ ಬೀಳ್ಸಿದ್ರೆ ಜನ ನಮ್ ಮೇಲೆ ಸಿಂಪತಿ ತೋರ್ಸಿ ಲೋಕಸಭೆಗೂ ಕಳಿಸ್ತಾರೆ ಅಂತ ಲೆಕ್ಕ ಹಾಕಿದ್ವಿ.. ಯಾರೋ ಹೇಳಿದ್ರು, ಲೋಕಸಭೆ ಚುನಾವಣೇಗೂ ನಿಂತ್ಕೊಂಬಿಡಿ ಅಂತ, ಯಾರ್ಗೊತ್ತು, ಪ್ರಧಾನಿ ಆದ್ರೂ ಆಶ್ಚರ್ಯ ಇಲ್ಲ.. ಏನೋ ಲಕ್ಕು ನನ್ ಕಡೆ ಇದೆ ಅನ್ಸುತ್ತೆ..

ಬೆಂ.ವೇ.: (ದೇಶದ ಲಕ್ಕು ಹೇಗಿದ್ಯೋ, ದೇವ್ರೇ, ಅನ್ನುತ್ತಾ..) ಹೂಂ, ಮಾಷ್ಟರ್ ಪ್ಲಾನೇ ಹಾಕಿದ್ದೀರಿ.. ಆದ್ರೂ, ದೆಹಲಿಯಂಥ ಸಣ್ಣ ರಾಜ್ಯವನ್ನೇ ಆಳೋಕಾಗ್ದಿರೋ ನೀವು ಲೋಕಸಭೆಗೆ ಹೋಗಿ ಏನು ಕುಯ್ತೀರಿ ಸಾರ್?..

ಅ.ಕೇ.: ಕುಯ್ಯೋದೇನು, ಕತ್ತರಿಸ್ತೀವಿ.. ದೇಶದಲ್ಲಿ ಭ್ರಷ್ಟಾಚಾರ ಇರೋವರ್ಗೂ ಹೋರಾಡ್ತೀವಿ.. ಪ್ರತಿದಿನ ಪಾರ್ಲಿಮೆಂಟ್ ಹೊರಗೆ ಧರಣಿ ಮಾಡ್ತೀವಿ, ಎಲ್ಲಾ ಟೀವಿ ಚಾನಲ್ ಗಳಲ್ಲೂ ದರ್ಶನ ಕೊಡ್ತೀವಿ.

ಬೆಂ.ವೇ.: ಹಾಗಾದ್ರೆ ಆಡಳಿತ ಮಾಡೋದ್ಯಾರು ?..

ಅ.ಕೇ.: ಅಡಳಿತ ಯಾರಿಗ್ರೀ ಬೇಕು ?. ಮೊದಲು ಭ್ರಷ್ಟಾಚಾರ ತೊಲಗಬೇಕು, ಆಮೇಲೆ, ದೇಶ ಉಳಿದ್ರೆ ಆಡಳಿತ ಮಾಡ್ತೀವಿ.

ಬೆಂ.ವೇ.: ಅಂದ್ರೆ, ಒಂದುವೇಳೆ ನಮ್ಮ ವೈರಿ ದೇಶದವ್ರು ದಾಳಿ ಮಾಡಿದ್ರೆ ದೇಶದ ಗತಿ ಏನು?..

ಅ.ಕೇ.: ಅದಕ್ಕೂ ಧರಣಿ ಮಾಡ್ತೀವಿ. ವೈರಿ ದೇಶದ ರಾಯಭಾರಿ ಕಚೇರಿ ಮುಂದಿರೋ ರಸ್ತೇಲಿ ರಾತ್ರಿ ಹಗಲೂ ಧರಣಿ ಮಾಡ್ತೀವಿ.. ವೈರಿ ಸೈನ್ಯವನ್ನ ಬಿಜೆಪಿನವ್ರು ಕಳ್ಸಿದಾರೆ ಅಂತ ಹೇಳ್ತೀವಿ.. ಕೊನೆಗೆ, ಏನೇ ಆದ್ರೂ ದಿಲ್ಲೀನ ಬಿಟ್ಬಿಡಿ ಅಂತೀವಿ..

ಬೆಂ.ವೇ.: ಭೇಷ್!.. ನಿಮ್ಮಂಥವ್ರಿದ್ರೆ ದೇಶಕ್ಕೆ ಸೈನ್ಯಾನೇ ಬೇಕಾಗಿಲ್ಲ, ಸಾರ್.

ಅ.ಕೇ.: ಹೌದೂರಿ, ಅವೆಲ್ಲ ವೇಷ್ಟು.. ಮೊದಲು ಭ್ರಷ್ಟಾಚಾರ ತೊಲಗಬೇಕು.

ಬೆಂ.ವೇ.: ಸರಿ ಸಾರ್, ದೇಶದಲ್ಲಿ ಎಷ್ಟೊಂದು ಸಮಸ್ಯೆಗಳಿವೆ.. ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ, ಬಡತನ, ಕುಡಿಯುವ ನೀರಿನ ಕೊರತೆ, ರಸ್ತೆ, ನೈರ್ಮಲ್ಯ, ಹಲವು ಕಡೆ ಬರಗಾಲ ಇತ್ಯಾದಿ ಇತ್ಯಾದಿ.. ಅವೆಕ್ಕೆಲ್ಲ ನಿಮ್ಮ ಪಾಲಿಸಿಗಳೇನು?..

ಅ.ಕೇ.: ಪಾಲಿಸಿಗಳನ್ನೆಲ್ಲ ಆಮೇಲೆ ಮಾಡ್ತೀವಿ, ಮೊದಲು ಭ್ರಷ್ಟಾಚಾರ ತೊಲಗಬೇಕು. ಅವೆಲ್ಲಕ್ಕೂ ಧರಣಿ ಮಾಡ್ತೀವಿ. ಬೆಲೆ ಇಳಿಸಬೇಕು ಅಂತ ವ್ಯಾಪಾರಿಗಳ ಮುಂದೆ, ಕೆಲ್ಸ ಕೊಡ್ಸಿ ಅಂತ ಸರ್ಕಾರಿ, ಖಾಸಗಿ ಸಂಸ್ಥೆಗಳ ಮುಂದೆ ಧರಣಿ ಮಾಡ್ತೀವಿ. ಮಳೆ ಬಂದು ನೀರಿನ ಸಮಸ್ಯೆ ನೀಗಲಿ ಅಂತಾನೂ ಧರಣಿ ಮಾಡ್ತೀವಿ..

ಬೆಂ.ವೇ. : ಓಕೆ, ಓಕೆ, ಈಗ ಅರ್ಥ ಆಗ್ತಾ ಇದೆ, ಸಾರ್, ಈ ದೇಶದ ಅವಸ್ಥೆ ಏನಾಗಬಹುದು ಅಂತ.. ಸಾರ್, ಸ್ವಲ್ಪ ಕುಡೀಲಿಕ್ಕೆ ನೀರು ಸಿಗ್ಬೋದಾ?.. ಗಂಟಲು ಆರೋಗ್ತಾ ಇದೆ..

ಆ.ಕೇ. : ಹಾಂ, ನಾನು ಕಫ್ ಸಿರಪ್ ಮಾತ್ರ ಕುಡೀತಿದ್ದೀನಿ, ನೀರು ಮುಟ್ಟೊಲ್ಲ, ಇರ್ಲಿ, ತರ್ಸಿ ಕೊಡ್ತೀನಿ, ತಾಳಿ..

ಬೆಂ.ವೇ. : (ನೀರು ಕುಡೀತಾ), ಸಾರ್, ಭ್ರಷ್ಟಾಚಾರದ ಬಗ್ಗೆ ಇಷ್ಟೊಂದು ತೀವ್ರ ಹೋರಾಟ ಮಾಡೋ ನೀವು ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರಾದ ಕಾಂಗ್ರೆಸ್ ಪಕ್ಷದ ಸಹಾಯ ಯಾಕೆ ತಗೊಂಡ್ರಿ ?.

ಆ.ಕೇ. : ಸಹಾಯ ತಗೊಂಡ್ರೆ ಏನಾಯ್ತು ?. ಎವ್ರಿಥಿಂಗ್ ಈಸ್ ಫೇರ್ ಇನ್ ಲವ್ ಎಂಡ್ ವಾರ್ ಅಂತ ಮಾತೇ ಇದ್ಯಲ್ಲ?.. ಅದು ರಾಜಕೀಯಕ್ಕೂ ಅನ್ವಯ ಆಗುತ್ತೆ.. ಏನೇ ಆದ್ರೂ ನಾವು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡ್ತಾ ಇದೀವಲ್ಲ?..

ಬೆಂ.ವೇ. : ಅದು ಸರಿ, ಲೋಕಸಭೆ ಚುನಾವಣೆಗೆ ಹೆಚ್ಚು ಸಮಯ ಉಳಿದಿಲ್ಲ, ನಿಮ್ಮ ಪಕ್ಷ ಅದು ಹೇಗೆ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಬಹುಮತ ಪಡೆಯುತ್ತೆ ?..

ಆ.ಕೇ. : ಬಹುಮತ ಬಿಡಿ, ದೆಹಲಿಯಲ್ಲಿ ನಾವು ನೆನೆಸದೇ ಅಧಿಕಾರಕ್ಕೆ ಬಂದಿಲ್ವಾ ? ಒಂದಷ್ಟು ಸೀಟುಗಳು ಬಂದ್ರೆ ಕಾಂಗ್ರೆಸ್ ಸಪೋರ್ಟ್ ತಗೊಂಡು ಸರ್ಕಾರ ಮಾಡ್ಬೋದು.. ಸಿ.ಎಂ ಆದೋನಿಗೆ ಪಿ.ಎಂ ಆಗೋದು ಕಷ್ಟಾನಾ?..

ಬೆಂ.ವೇ. : ಹೌದು ಸಾರ್, ಈ ದೇಶ್ದಲ್ಲಿ ಏನೇನೂ ಆಗ್ಬೋದು.. ಆದ್ರೂ, ಕಾಂಗ್ರೆಸ್ ಬದ್ಲು ನೀವು ಮೋದಿ ವಿರುದ್ಧ ಜಾಸ್ತಿ ಪ್ರಚಾರ ಮಾಡ್ತೀದಿರಲ್ಲಾ ಯಾಕೆ?..

ಆ.ಕೇ. : ಮೋದಿ ಬಂದ್ರೆ ನನ್ನ ಕೇಳೋರ್ಯಾರು ?.. ಈ ದೇಶದಿಂದ ಭ್ರಷ್ಟಾಚಾರ ತೊಲಗಬೇಕಾದ್ರೆ ನಾನು ಪ್ರಧಾನಿ ಆಗ್ಬೇಕು. ಅದಕ್ಕಾಗಿ ನಾನು ಏನು ಬೇಕಾದ್ರೂ ಮಾಡೋಕೆ ರೆಡಿ. ಆಗ್ಲೇ ಹೇಳಿದ್ನಲ್ಲಾ, ಎವ್ರಿಥಿಂಗ್ ಈಸ್ ಫೇರ್ ಇನ್...

ಬೆಂ.ವೇ. : ಗೊತ್ತಾಯ್ತು ಸಾರ್.. ನೀವು ಪ್ರಚಂಡರು ಬಿಡಿ ಸಾರ್.. ಬೆಸ್ಟ್ ಆಫ್ ಲಕ್ ಸಾರ್.. ಹಾಂ.. ನಾನು ಕೊಟ್ಟ ಕಫ್ ಸಿರಪ್ ಮರೀದೆ ದಿನಕ್ಕೆ ಮೂರು ಬಾರಿ ತಗೊಳಿ... ಸಾರ್, ಒಮ್ಮೆ ನಿಮ್ಮ ಮಫ್ಲರ್ ತೆಗೀರಿ ಸಾರ್, ನಿಮ್ಮ ಪೂರ್ತಿ ಮುಖ ನೋಡದೆ ಬಹಳ ದಿನ ಆಯ್ತು.. ನಂ ಫೋಟೋಗ್ರಾಫರ್ ಫೋಟೋ ತೆಗೀಲಿ, ಪತ್ರಿಕೇಲಿ ಹಾಕ್ತೀವಿ.. ಇತ್ತೀಚ್ಗೆ ಎಲ್ಲೂ ನಿಮ್ಮ ಪೂರ್ತಿ ಮುಖ ಪ್ರಕಟ ಆಗಿಲ್ಲ, ನಾವೇ ಮೊದಲು..

ಆ.ಕೇ. : ಸರಿ, ತೆಗೀರಿ, ಹಾಂ.. ನಮ್ ಬಗ್ಗೆ ಏನಾದ್ರೂ ಟೀಕಿಸಿ ಬರೆದ್ರೆ ನಿಮ್ಮ ಪತ್ರಿಕೇನ ಇನ್ಮೇಲೆ ಹತ್ರ ಸೇರ್ಸಲ್ಲ, ಗೊತ್ತಾಯ್ತಾ ?..

ಬೆಂ.ವೇ. : ಗೊತ್ತು ಸಾರ್, ಅದಕ್ಕೆ ರೆಡಿ ಆಗೀನೆ ಬಂದಿದೀನಿ, ಥ್ಯಾಂಕ್ಯೂ ಸಾರ್.. ಬರ್ತೀನಿ ಸಾರ್.. ಈ ದೇಶಾನ ದೇವ್ರು ಕಾಪಾಡ್ಲಿ..

 

Author : ಮೂಷಿಕ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited