Untitled Document
Sign Up | Login    
ಮೂಢನಂಬಿಕೆ ತೊಲಗಿಸಲು ಸಿಡಿಮಿಡಿ ಸ್ವಾಮೀಜಿಯ ಪ್ರಚಂಡ ಯೋಜನೆ!..


ಸಿದ್ದರಾಮಯ್ಯನವರ ಕಾಂಗ್ರೆಸ್ ಘನ ಸರ್ಕಾರ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರುವ ದಿವ್ಯ ಯೋಜ(ಚ)ನೆಯನ್ನು ಪ್ರಕಟಿಸಿದಲಾಗಿನಿಂದ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕೆಲವು 'ಆಯ್ದ' ವಿಚಾರವಾದಿಗಳು, ಸಾಹಿತಿಗಳು ಮತ್ತು 'ತಜ್ನರು' ಗಳು ಸೇರಿ ತಯಾರಿಸಿದ ಮೂಢನಂಬಿಕೆ ನಿಷೇಧ ವರದಿ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಿದ್ದುಗೆ ನಿದ್ದೆಗೆಡಿಸುವಂತಾಗಿದೆ.

ವರದಿ ಬಗ್ಗೆಯೇ ಇಷ್ಟೊಂದು ಗಲಾಟೆ ನಡೆಯುತ್ತಿರುವಾಗ, ಇನ್ನು ಕಾಯ್ದೆ ಜಾರಿಯಾದರೆ ನಮ್ಮ ಗತಿಯೇನು ಎಂದು ಚಿಂತಿಸಿದ ಕಾಂಗ್ರೆಸ್ಸಿಗರು ಸಿದ್ದುಗೆ ಬೆಂಬಲ ಕೊಡುವ ಬಗ್ಗೆ ಹೈಕಮಾಂಡ್ ಆಜ್ನೆಗೆ ಕಾಯದೆ ಕಾಯ್ದೆ ಬಗ್ಗೆ ತಣ್ಣಗೆ ಕೂತಿದ್ದಾರೆ. ತಮ್ಮ ಪಕ್ಷದವರೇ 'ಕೈ' ಕೊಡುತ್ತಿರುವುದನ್ನು ಕಂಡ ಸಿದ್ದು, ತನ್ನ ಮದ್ದು ತನಗೇ ರಿವರ್ಸ್ ಗುದ್ದುತ್ತಿದೆಯಲ್ಲಾ, ಯಾಕೋ ಏಡ್ವಟ್ಟಾಗೈತೆ, ಎನೋ ಮಾಡಕ್ಕೋಗಿ ಇನ್ನೇನೋ ಆಗ್ತಾ ಇದೆ ಅಂತ ತಮ್ಮ ದಿವ್ಯಜ್ನಾನದಿಂದ ಅರಿತು, ಸದ್ದಿಲ್ಲದೆ, ಮೂಢನಂಬಿಕೆ ನಿಷೇಧ ಕಾಯ್ದೆ ಈಗ ಜಾರಿಗೆ ಬರಲ್ಲ ಅಂತ ಹೇಳಿಕೆ ಕೊಟ್ಟುಬಿಟ್ರು. ಸಿದ್ದು ಸಾಯೇಬ್ರು ಏನೋ ಹೇಳಿಕೆ ಕೊಟ್ಟು ತಣ್ಣಗಾದ್ರು. ಅಷ್ಟರಲ್ಲಿ..

ಗಲ್ಲಿಗೊಂದು, ಕೇರಿಗೊಂದು ಮಠಗಳಿರುವ ನಮ್ಮ ಕರುನಾಡಿನ ಒಂದಷ್ಟು ಮಠಾಧೀಶರುಗಳು ಮೂಢನಂಬಿಕೆ ವಿರುದ್ಧ ತಮ್ಮ ಜ್ನಾನ ಪ್ರದರ್ಶನ ಮಾಡಲು ಸಿಡಿಮಿಡಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಗಡಿಬಿಡಿಯಿಂದ ಒಟ್ಟು ಸೇರಿದ್ದರು. ಮೊದಲಾಗಿ, ಮಾಧ್ಯಮದ ಕ್ಯಾಮೆರಾಗಳು ಮುಖದ ಮುಂದೆ ಬರುವವರೆಗೆ ತಮ್ಮ ವಿಚಾರ ಸಂಕಿರಣ ಮುಂದುವರೆಸುವ ಮಹತ್ವದ ನಿರ್ಣಯ ಕೈಗೊಂಡರು. ಸಭೆಯಲ್ಲಿ ನಡೆದ ಸಂಭಾಷಣೆಯ ಕೆಲವು ತುಣುಕುಗಳನ್ನು ನಿಮಗಾಗಿ ಕೊಡುತ್ತಿದ್ದೇವೆ..

ಸಿಡಿಮಿಡಿ ಸ್ವಾಮಿ : ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಸಿದ್ರಾಮಣ್ಣ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರಲು ತುಂಬಾ ಕಾತುರರಾಗಿದ್ದಾರೆ. ನಮ್ಮ ನಾಡಿನ ಹೆಸರಾಂತ ವಿಚಾರವಾದಿಗಳು, ಸಾಹಿತಿಗಳು ಸೇರ್ಕೊಂಡು ಈ ವರದಿ ಮಾಡಿದಾರೆ. ಆದ್ರೆ ಕೆಲವು ಸಮಾಜ ವಿರೋಧಿ ಹಿತಾಸಕ್ತಿಗಳು ಇದರ ವಿರುದ್ಧ ಹೋರಾಟ ಮಾಡ್ತೀವಿ ಅಂತ ಹೇಳಿಕೆ ಕೊಟ್ಟಿದ್ದಾರೆ. ಅಲ್ನೋಡಿದ್ರೆ ಸಿದ್ರಾಮಣ್ಣ ತಣ್ಣಗಾಗಿರೋ ಹಾಗೆ ಕಾಣ್ತೈತೆ. ಕಾಯ್ದೆ ಜಾರಿ ಮಾಡಲ್ಲ ಅಂತ ಹೇಳ್ತಿದಾರೆ. ನಾವು, ಅಂದ್ರೆ, ಕಾವಿ ಬಟ್ಟೆ ಹಾಕ್ಕೊಂಡಿರೋ ಸ್ವಾಮಿಗಳು ಒಟ್ಟಾಗಿ, ಒಗ್ಗಟ್ಟಿನಿಂದ ಈ ಕಾಯ್ದೆ ಜಾರಿಗೆ ಬರೋಹಾಗೆ ಸರ್ಕಾರದ ಮೇಲೆ ಒತ್ತಡ ತರ್ಬೇಕು..

ಹೌದಪ್ಪ ಸ್ವಾಮಿ : ಹೌದು ಹೌದು, ನಾವು ವಿರೋಧ ಮಾಡ್ಬೇಕು.. ಇಲ್ದಿದ್ರೆ ನಮ್ಮ ಸಂಸ್ಕೃತಿ ಕೆಟ್ಟೋಯ್ತದೆ..

ಡೌಟಪ್ಪ ಸ್ವಾಮಿ : ನಂಗ್ಯಾಕೋ ಸ್ವಲ್ಪ ಕಾಯ್ದೆ ಬಗ್ಗೆ ಸ್ವಲ್ಪ ಡೌಟೈತೆ.. ವರ್ದಿನಾಗೆ ಮಾಯ-ಮಾಟ ಮಾಡ್ಬಾರ್ದು ಅಂತೆಲ್ಲ ಹೇಳವ್ರಂತೆ, ಅದೇನೋ ಸರಿ.. ಆದ್ರೆ ಗುದ್ಲಿ ಪೂಜೆ ಮಾಡ್ಬಾರ್ದು, ಆಫೀಸ್ನಾಗೆ ಪೂಜೆ ಪುನಸ್ಕಾರ ಮಾಡ್ಬಾರ್ದು, ಮಕ್ಳನ್ನ ದೇವಸ್ಥಾನಕ್ಕೆ ಕರ್ಕೊಂಡೋಗ್ಬಾರ್ದು, ಹಣೆಗೆ ನಾಮ, ವಿಭೂತಿ ಹಾಕ್ಬಾರ್ದು ಅಂತೆಲ್ಲ ಬರ್ದಿದಾರಂತೆ ? ಈಪಾಟಿ ಮಾಡಿದ್ರೆ ನಮ್ ಗತಿಯೇನು? ನಮ್ಮನ್ನು ಸ್ವಾಮಿ ಅಂತ ಯಾರು ಗೌರವ ಕೊಡ್ತಾರೆ ?..

ಸಿಡಿಮಿಡಿ ಸ್ವಾಮಿ : ಸುಮ್ನಿರ್ರೀ ನೀವು.. ಪೂಜೆ ಗೀಜೆ ಎಲ್ಲಾ ಬರೀ ಮೂಢನಂಬಿಕೆ.. ಪೂಜೆ ಮಾಡ್ದೇ ಇದ್ರೆ ದೇವ್ರು ಯಾಕ್ ಮಾಡ್ಲಿಲ್ಲ ಅಂತ ಕೇಳ್ತಾನಾ?.. ಮಕ್ಳು ಸ್ಕೂಲಿಗೆ ಹೋದ್ರೆ ಸಾಕಲ್ವಾ? ದೇವಸ್ಥಾನಕ್ಕೆ ಯಾಕೋಬ್ಕೇಕು?. ನೋಡಿ, ನಾವು ಹಿಂದಿನ ನಂಬಿಕೆಗಳನ್ನೆಲ್ಲ ಬಿಟ್ಟು ಈ ಕಾಲಕ್ಕೆ ತಕ್ಕಂತೆ ಹೊಸ ರೀತಿಯಲ್ಲಿ ಯೋಚಿಸ್ಬೇಕು. ಅಲ್ದೆ ನಾವೆಲ್ಲ ಸೇರಿ 'ಸ್ವಾಮೀಜಿ ಅಸೋಸಿಯೇಷನ್' ಅಂತ ಸ್ಥಾಪನೆ ಮಾಡೋಣ. ಸರ್ಕಾರದಿಂದ ಅದಕ್ಕೆ ಸಹಾಯ, ಸಬ್ಸಿಡಿ ಎಲ್ಲಾ ಬರೋ ಹಂಗೆ ಮಾಡ್ಬೋದು. ನಮ್ 'ಕೈ'ಯಲ್ಲಿ ಸಾವಿರಾರು ವೋಟುಗಳಿರ್ತವಲ್ಲಾ, ಯಾವ್ದೇ ಸರ್ಕಾರ ಬಂದ್ರೂ ನಾವ್ ಹೇಳ್ದಂಗೆ ಕೇಳ್ಬೇಕು..

ಎಡ್ವಟ್ಟು ಸ್ವಾಮಿ : ಅದ್ಸರಿ, ಆದ್ರೆ ಈಗಾಗ್ಲೆ ನಮ್ ಮಠಕ್ಕೆ ಭಕ್ತ ಶಿಷ್ಯರು ಕೋಟಿಗಟ್ಳೆ ದುಡ್ದು, ಜಮೀನು ಕೊಟ್ಟಿದಾರೆ. ಸರ್ಕಾರ ಕೊಡೋ ಪುಡಿಗಾಸಿಗೆ ಅವ್ರು ಹೇಳ್ದಂಗೆ ಯಾಕೆ ಕೇಳ್ಬೇಕು ?.. ನಾಳೆ ಮಠದಲ್ಲಿ ಏನಾದ್ರೂ ಎಚ್ಚು ಕಮ್ಮಿ ಆಗ್ಬುಟ್ರೆ ಸರ್ಕಾರ ಮಠವನ್ನೇ ತಗೊಂಡ್ಬಿಟ್ಟೀತು.. ಆಗ ನಮ್ ಗತಿ?..

ಸಿಡಿಮಿಡಿ ಸ್ವಾಮಿ : ಹಾಗಲ್ರೀ.. ಜನ ಕೊಡೋ ದುಡ್ಡು ಹ್ಯಾಗೂ ನಮ್ ಕೈಲಿರ್ತೈತೆ.. ಜೊತೆಗೆ ಸರ್ಕಾರಾನೂ ಕಾಸು ಕೊಟ್ರೆ ಏನು ನಷ್ಟ?..

ಹೌದಪ್ಪ ಸ್ವಾಮಿ : ಹೌದು ಹೌದು.. ನೀವೇಳೋದು ಸರಿ..

ಡೌಟಪ್ಪ ಸ್ವಾಮಿ : ಅದೆಲ್ಲಾ ಸರಿ, ಮೂಢನಂಬಿಕೆಗೂ ಈ ವಿಷಯಕ್ಕೂ ಏನು ಸಂಬಂಧ ? ಯಾಕೋ ಸಂಗೆ ಫುಲ್ಲ್ ಕನ್ಫ್ಯೂಷನ್ ಆಗ್ತಾ ಇದೆ..

ಹೌದಪ್ಪ ಸ್ವಾಮಿ : ಹೌದು ಹೌದು, ಮೂಢನಂಬಿಕೆಗೇ ವಾಪಸ್ ಬರೋಣ..

ಸಿಡಿಮಿಡಿ ಸ್ವಾಮಿ : ಅದೇ, ಎನು ಹೇಳ್ತಾ ಇದ್ದೆ ಅಂದ್ರೆ.. ನಾವೆಲ್ಲ ಮೂಢನಂಬಿಕೆ ವಿರೋಧಿಸಬೇಕು. ನಮ್ ಜನ್ರಿಗೆ ಹಿಂದಿನೋರು ಹೇಳಿದ್ರಲ್ಲಿ, ಮಾಡಿದ್ರಲ್ಲಿ ನಂಬಿಕೆ ಇರ್ಬಾರ್ದು, ನಾವು ಹೇಳ್ದಂಗೆ ಅವ್ರು ಕೇಳ್ಬೇಕು.

ಡೌಟಪ್ಪ ಸ್ವಾಮಿ : ಅಂದ್ರೆ, ನಾವು ಕಾವಿ ಹಾಕೋಬಾರ್ದು, ಪೂಜೆ ಮಾಡ್ಬಾರ್ದು, ಪಾದ್ಪೂಜೆ ಇತ್ಯಾದಿ ಮಾಡಿಸ್ಕೋಬಾರ್ದು, ವಿಭೂತಿ, ನಾಮ ಹಾಕೋಬಾರ್ದು ಅಲ್ವಾ?..

ಎಡ್ವಟ್ಟು ಸ್ವಾಮಿ : ಅದೆಂಗಾಯ್ತದೆ?.. ಹಂಗಾದ್ರೆ ಜನ ನಮ್ಮನ್ನ ಸ್ವಾಮೀಜಿ ಅಂತ ಹ್ಯಾಗೆ ಕರೀತಾರೆ?.. ಯಾಕೋ ಇದು ಸರಿ ಬರ್ತಾ ಇಲ್ಲಾ..

ಹೌದಪ್ಪ ಸ್ವಾಮಿ : ಹೌದು ಹೌದು.. ನಾವು ಕಾವಿ ಹಾಕ್ಕೊಂಡ್ರಷ್ಟೇ ನಮ್ಗೆ ಬೆಲೆ ಇರ್ತೈತೆ.. ಇಲ್ದೇ ಹೋದ್ರೆ ನಮ್ಮನ್ನ ಯಾರು ಕೇರ್ ಮಾಡ್ತಾರೆ ಹೇಳಿ ?..

ಸಿಡಿಮಿಡಿ ಸ್ವಾಮಿ : ಸುಮ್ನಿರ್ರೀ.. ಏನೇನೋ ಮಾತಾಡ್ಬೇಡಿ.. ನಾನೇನೋ ಸ್ಕೆಚ್ ಹಾಕೊಂಡ್ರೆ ನೀವು ತಲೆಗೊಂದು ಮಾತಾಡಿ ನನ್ ಪ್ಲಾನೇ ಫ್ಲಾಪ್ ಅಗೋಂಗೆ ಮಾಡ್ತಾ ಇದೀರಿ..

ಡೌಟಪ್ಪ ಸ್ವಾಮಿ : ಅದೇ ಸ್ವಾಮೀ ನೀವೇನೋ ಸ್ಕೆಚ್ ಹಾಕ್ದಂಗಿದೆ ಅಂತ ನಂಗೂ ಡೌಟ್ ಬರ್ತಾ ಇತ್ತು..

ಸಿಡಿಮಿಡಿ ಸ್ವಾಮಿ (ಕೋಪದಿಂದ) : ಯಾಕ್ರೀ, ಹಾಗೆಲ್ಲ ಮಾತಾಡ್ತೀರಿ? ನಿಮ್ ವಿಷಯ ನಂಗೊತ್ತಿಲ್ವಾ?.. ಹೇಳ್ಬಿಡ್ಲಾ ಎಲ್ಲಾ?..

ಎಡ್ವಟ್ಟು ಸ್ವಾಮಿ : ಯಾಕ್ರೀ ರೋಪ್ ಹಾಕ್ತಾ ಇದೀರಾ? ಪಬ್ಲಿಕ್ನಾಗೆ ನಮ್ಗೂ ಬೆಂಬಲ ಐತೆ ಗೊತ್ತಾ?.. ನನ್ ಹಿಂದೇನೂ 18 ಎಮ್ಮೆಲ್ಲ್ಯೆ ಗಳಿದಾರೆ.. ನೀವೇಳ್ದಂಗೆ ನಾವ್ಯಾಕೆ ಕೇಳ್ಬೇಕು?..

ಹೌದಪ್ಪ ಸ್ವಾಮಿ : ಹೌದು ಹೌದು.. ನಾವೇನು ಕಮ್ಮಿ ?..

( ಪರಿಸ್ಥಿತಿ 'ಕೈ'ಮೀರಿ ಹೊಡೆದಾಟದವರೆಗೂ ಹೋಗೋ ಹಾಗಾಯ್ತು..) ಆಗ..

ಸಿಡಿಮಿಡಿ ಸ್ವಾಮಿ (ಪರಿಸ್ಥಿತಿಯನ್ನು ಶಾಂತಗೊಳಿಸುವ ಸಲುವಾಗಿ): ನೋಡ್ರೀ, ನಾನು ಹೇಳಿದ್ದು ಯಾವ್ದೇ ದುರುದ್ದೇಶದಿಂದ ಅಲ್ಲ. ನನ್ ಪ್ಲಾನ್ ಪ್ರಕಾರ ನಡ್ಕೊಂಡ್ರೆ ನಮ್ ಜನ ನಮ್ 'ಕೈ'ಯೊಳಗಿರ್ತಾರೆ, ಆಗ ನಾವೇ ಕಿಂಗುಗಳಾಗ್ತೀವಿ.. ಇಲ್ದಿದ್ರೆ ಜನ ನಮ್ಮಂಥೋರ್ನ ಜಾಸ್ತಿ ನಂಬಲ್ಲ.. ಸ್ವಲ್ಪ ಯೋಚನೆ ಮಾಡಿ.. ಬ್ರಿಟಿಷರು, ನಂತರ ಕಾಂಗ್ರೆಸ್ನೋರು ನಮ್ಮ ಸಮಾಜವನ್ನ ಒಡೆದು ಆಳ್ತಾ ಬಂದ್ರಲ್ಲಾ?.. ಯಾಕೆ ? ಜನರು ಕುರಿಗಳಾದ್ರೆ ಮಾತ್ರ ಅವ್ರನ್ನ ಸುಲಭವಾಗಿ ಆಳಬಹುದು. ಅವರು ಒಗ್ಗಟ್ಟಾಗಿದ್ರೆ ನಮ್ಮಂಥೋರಿಗೆ, ರಾಜಕಾರಣಿಗಳಿಗೆ ಸಮಾಜದಲ್ಲಿ ಜಾಗ ಇಲ್ಲ. ಅದಕ್ಕೇ ಎಲ್ರ ಹಿತದೃಷ್ಟಿಯಿಟ್ಕೊಂಡೇ ನಾನು ಮೂಢನಂಬಿಕೆ ವಿರೋಧ ಕಾಯ್ದೆ ಜಾರಿಗೆ ಬರ್ಬೇಕು ಅಂತ ಹೇಳ್ದೆ. ಹಿಂದಿನದ್ದೆಲ್ಲಾ ತಪ್ಪು, ನಮ್ ಹಿರಿಯರು ಮಾಡಿದ್ದು, ಹೇಳಿದ್ದೆಲ್ಲಾ ಢೋಂಗಿ, ನಮ್ಮ ಆಚಾರ ವಿಚಾರಗಳೆಲ್ಲ ಮೂಢ ನಂಬಿಕೆ ಅಂತ ಹೇಳ್ತಾ ಬಂದ್ರೆ ಜನ ನಮ್ಮನ್ನ ನಂಬ್ತಾರೆ, ನಮ್ಮ 'ಕೈ'ಯೊಳಗೆ ಬರ್ತಾರೆ.. ಜೊತೆಗೆ ಬೇರೆ ಸ್ವಾಮಿಗಳನ್ನ, ಮಠಗಳನ್ನ ವ್ಯವಸ್ಥಿತವಾಗಿ ಬಯ್ತಾ ಇರ್ಬೇಕು, ಜನ್ರಿಗೆ ಆಗ ಅವ್ರ ಮೇಲೆ ಇರೋ ಭಕ್ತಿ, ನಂಬಿಕೆ ಕಡಿಮೆ ಅಗ್ತಾ ಬರ್ತದೆ.. ನಮ್ಮನ್ನ ನಂಬ್ತಾರೆ.. ಯೋಚಿಸಿ ನೋಡಿ..

ಹೌದಪ್ಪ ಸ್ವಾಮಿ : ನೀವೇಳೋದ್ರಲ್ಲೂ ಸತ್ಯ ಇದೆ. ಏನೇ ಆಗ್ಲಿ ನೀವು ಪ್ರಚಂಡರು ಬಿಡಿ.. ನಮ್ ಸಂಘಕ್ಕೆ ನೀವೇ ಅಧ್ಯಕ್ಷರಾಗ್ಬೇಕು..

ಸಿಡಿಮಿಡಿ ಸ್ವಾಮಿ : ಸರಿ, ಹಾಗಾದ್ರೆ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಬರ್ಲೇ ಬೇಕು ಅಂತ ಪತ್ರಿಕೆಗೆ ಹೇಳಿಕೆ ಕೊಟ್ಬೊಡೋಣ.. ಪ್ರೆಸ್ನೋರು ಬರ್ತಾ ಇದಾರೆ, ಕ್ಯಾಮೆರಾ ಮುಂದೆ ಎಲ್ರೂ ಒಗ್ಗಟ್ಟಾಗಿ ಇರ್ಬೇಕು. ಗೊತ್ತಾಯ್ತಾ?.. ಹೇಳ್ಕೆ ನಾನು ಕೊಡ್ತೀನಿ, ನೀವೆಲ್ಲಾ ತಲೆ ಅಲ್ಲಾಡ್ಸಿದ್ರೆ ಸಾಕು..

( ಎಲ್ಲಾ ಆಸಾಮಿ, ಅಲ್ಲ, ಸ್ವಾಮಿಗಳೂ ಒಕ್ಕೊರಲಿನಿಂದ - ಹಾಗೇ ಆಗ್ಲಿ, ತಥಾಸ್ತು ಅಂತಂದ್ರು..)

ಅಂತೂ ಸೌಹಾರ್ಧಯುತವಾಗಿ ಆರಂಭವಾದ ಸಭೆ ಕೆಲವೊಂದು ಕಾಲ ಗದ್ದಲ, ಹೊಯ್ ಕೈ ನಡೆದು ಕೊನೆಯಲ್ಲಿ ಶಾಂತವಾಗಿ ಪರ್ಯವಸಾನಗೊಂಡಿತು.

 

Author : ಮೂಷಿಕ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited