Untitled Document
Sign Up | Login    
ಮಾಮ ಓಬಾಮಾ ಭಾರತದ ಪ್ರಧಾನಿ ?..


ಅಂಕಲ್ ಸ್ಯಾಮ್, ಯಾನೆ ಮಾಮ ಒಬಾಮ.. ತಲೆ ಮೇಲೆ ಕೈಹೊತ್ತು ಕುಳಿತಿದ್ದು, ಅವರ ಸಹಾಯಕರು ಅಸಹಾಯಕರಾಗಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಇತ್ತ ಒಬಾಮ ಮೆಲ್ಲನೆ ಚೇತರಿಸಿಕೊಂಡು, 'ಮೈಕೆಲ್, ಇಲ್ಲಿ ಬಾ..' ಅಂತ ತನ್ನ ಆಪ್ತರೊಬ್ಬರನ್ನು ಕೂಗುತ್ತಾರೆ..

ಮೈಕೆಲ್ ಮೈಕೈ ಕೊಡವುತ್ತಾ ಎದ್ದು ಬಂದು 'ಹೇಳಿ ಸರ್, ಯಾಕೆ ಕೂಗಿದ್ರಿ?' ಅಂತ ಮೆಲುದನಿಯಲ್ಲಿ ಕೇಳಿದ..

ಒಬಾಮ: ಅಲ್ರೀ, ಏನಿದು ಪತ್ರ, ಗಿತ್ರ ?.. ಇಂಡಿಯಾದಿಂದ ಬಂದಿದೆ.. ಅದೇನೋ ಆ ದೇಶದ ಎಂ.ಪಿ.ಗಳು ಸೈನ್ ಮಾಡಿ ಇಷ್ಟುದ್ದ ಬರ್ದು ಕಳ್ಸಿದಾರೆ.. ಉರ್ದು ಮತ್ತು ಹಿಂದಿಯಲ್ಲಿದೆ.. ನಂಗೆ ಓದಕ್ಕಾಗಲ್ಲ ಅಂತ ಓದಕ್ಕೆ ಬರೋವರ್ನ ಕರ್ದು ಓದ್ಸಿದೆ.. ಅದೇನೋ, ಮೋದಿಗೆ ವೀಸಾ ಕೊಡ್ಬೇಡಿ ಅಂತೆಲ್ಲಾ ಬರ್ದಿದಾರೆ.. ಅಲ್ಲಾ, ನಾನೇನು ಪಾಸ್ ಪೋರ್ಟ್ ಆಫೀಸರ್ರಾ ?.. ವೀಸಾ ಕೋಡ್ಬೇಕಾ ಬೇಡ್ವಾ ಅಂತೆಲ್ಲಾ ವಿಚಾರ್ಸೋಕೆ ?..

ಮೈಕೆಲ್ : ಹಾಗಲ್ಲ ಸಾರ್, ನಾನೂ ವಿಚಾರ್ಸಿ ನೋಡಿದೆ.. ಇಂಡಿಯಾದಲ್ಲಿ 'ಸೆಕ್ಯುಲರ್ರು', 'ಕಮ್ಯೂನಲ್ಲು' ಗಳ ಮಧ್ಯೆ ಯುದ್ಧ ನಡೀತಾ ಇದೆ, ಅದರ ಬಾಬ್ತು ಇದೊಂದು ಹೊಸ ತಂತ್ರ ಸಾರ್..

ಒಬಾಮ : ಅಂದ್ರೆ, ಅವರ ಗಲಾಟೇಲಿ ನಾವ್ಯಾಕೆ ಮಧ್ಯೆ ಮೂಗು, ಮತ್ತೊಂದು ತೂರಿಸ್ಬೇಕು ಅಂತಾ ಗೊತ್ತಾಗ್ತಾ ಇಲ್ಲ ನಂಗೆ..

ಮೈಕೆಲ್ : ನಾವೇನೂ ತೂರ್ಸೋದು ಬೇಡ ಸಾರ್.. ಅವ್ರವ್ರೇ ಬಡ್ಕೊಳ್ತಾ ಇರ್ಲಿ, ಆದ್ರೂನೂ ನಮ್ಗೊಂದು ಅವಕಾಶ ಅಲ್ವಾ ?.. ನಮ್ ದೇಶದಲ್ಲಿ ನಮ್ಗೇ ಹಾಸಿ ಹೊದ್ಕೋಳೋವಷ್ಟು ಸಮಸ್ಯೆಗಳಿವೆ.. ನಿರುದ್ಯೋಗ, ಬಡತನ, ಆಂತರಿಕ ಭದ್ರತೆ ಇತ್ಯಾದಿ ಇತ್ಯಾದಿ.. ಜನ್ರ ಮನಸ್ಸನ್ನ ಬೇರೆ ಕಡೆ ತಿರ್ಗಿಸೋದ್ರಲ್ಲಿ ಇಂಡಿಯಾದ ಕಾಂಗ್ರೆಸ್ ಸರ್ಕಾರದೋರು ಎಕ್ಷ್ಪರ್ಟ್ಸ್ ಅಂತ ಕೇಳಿದ್ದೇನೆ.. ವೀಸಾ ಗಲಾಟೆಯನ್ನ ನಾವೂ ಹಿಡ್ಕೊಂಡು ಒಂದಷ್ಟು ದಿನ ಸುದ್ದಿ ಮಾಡ್ಬೋದಲ್ಲಾ ?..

ಒಬಾಮ : ಸುಮ್ನಿರಯ್ಯಾ.. ಇದೇನು ಇಂಡಿಯಾ ಅಂದ್ಕೊಂಡ್ಯಾ ?.. ಅಲ್ಲಾದ್ರೆ ಟೀವಿ-ಗೀವಿನವ್ರಿಗೆ ಬೇರೇನೂ ಸಿಗ್ಲಿಲ್ಲ ಅಂದ್ರೆ ನೊಣ ಸತ್ರೂ ವಾರಗಟ್ಳೆ ಸುದ್ದಿ ಮಾಡ್ತಾರೆ.. ಇಲ್ಲಿ ಯಾರು ಕೇರ್ ಮಾಡ್ತಾರೆ ಹೇಳು?.. ಒಟ್ನಲ್ಲಿ ಕಾಂಗ್ರೆಸ್ ಎಂಪಿಗಳೂ ಸೈನ್ ಮಾಡಿರೋದ್ರಿಂದ ನಂಗೆ ತಲೆಬಿಸಿ ಆಗಿದೆ ನೋಡು.. ಅತ್ತ ಮೋದಿಗೆ ವೀಸಾ ಕೊಡೋಣ ಅಂತ ತೀರ್ಮಾನ ಮಾಡ್ತಾ ಇದೀವಿ.. ಯಾಕಂದ್ರೆ ಮುಂದಿನ ಚುನಾವಣೇಲಿ ಅವ್ರೇ ಪ್ರಧಾನಿ ಆಗಬಹುದು ಅಂತ ನಂ ಇಂಟೆಲ್ಲಿಜೆಂಟ್ ನ್ಯೂಸ್ ಹೇಳ್ತಾ ಇದೆ.. ಅಂದ್ರೆ ವೀಸಾ ಕೊಟ್ಟಿಲ್ಲಾಂದ್ರೆ ಇಂಡಿಯಾದಿಂದ ನಮ್ಗೆ ಬಿಲಿಯನ್ ಗಟ್ಲೆ ಯುದ್ಧವಿಮಾನ, ಮುಂತಾದ ಆರ್ಡರ್ ಸಿಗ್ಬೇಕಲ್ಲಾ?.. ಅವೆಲ್ಲಾ, ರಶ್ಯಾ, ಯುರೋಪ್ ಪಾಲಾಗುತ್ತೆ ಅಂತ ಭಯ..

ಮೈಕೆಲ್: ಅದು ಸರಿ ಸಾರ್, ಹಾಗಾದ್ರೆ ವೀಸಾ ಕೊಡ್ಬಿಡಿಯಲ್ಲ..

ಒಬಾಮ : ಅದು ಅಷ್ಟೊಂದು ಸುಲಭ ಅಲ್ಲ ನೋಡು.. ಇಂಡಿಯಾದಲ್ಲಿ ಸೆಕ್ಯುಲರ್ ಗಳು ತುಂಬಾ ಸ್ಟ್ರಾಂಗ್ ಇದಾರೆ.. ಅವ್ರು ಯಾರನ್ನ ಯಾವಾಗ ಬೇಕಾದ್ರೂ ಸೆಕ್ಯುಲರ್, ಕಮ್ಯೂನಲ್ ಅಂತ ಬ್ರಾಂಡ್ ಮಾಡ್ತಾರೆ.. ಜೊತೆಗೆ ಅವ್ರು ಹೇಳೋದನ್ನ ಜನ ನಂಬ್ತಾರೆ ಅಂತಾನೂ ನಂಬಿದಾರೆ.. ಅವ್ರಿಗೆ ಟೀವಿ ನ್ಯೂಸ್ ಚಾನಲ್ ಗಳ ಸಾಥ್ ಬೇರೆ ಇದೆ.. ರಾತೋರಾತ್ರಿ ಅಡ್ವಾಣಿ, ನಿತೀಶ್ ಕುಮಾರ್ ಮುಂತಾದವರನ್ನೆಲ್ಲಾ ಸೆಕ್ಯುಲರ್ ಮಾಡ್ಬಿಟ್ಟಿದಾರೆ ಗೊತ್ತಾ?.. ಈಗ ಮೋದಿಗೆ ವೀಸಾ ಕೊಡ್ಬಾರ್ದು ಅಂತ ಪತ್ರ ಬರ್ದಿರೋದ್ರಲ್ಲಿ ಕಾಂಗ್ರೆಸ್ ನ ಘಾಟಾನುಘಟಿ ಸೆಕ್ಯುಲರ್ ಗಳೂ ಇದಾರಂತೆ.. ಅಂದಮೇಲೆ ಅಮೆರಿಕಾ ಹೇಳಿದಂತೆ ಕೇಳೋ ಮನಮೋಹನ್ ಸಿಂಗ್ ಮತ್ತು ಅವರ ಪಕ್ಷದವ್ರನ್ನ ಅಷ್ಟು ಸುಲಭದಲ್ಲಿ ಬಿಟ್ಟುಕೊಟ್ರೆ ಹೇಗೆ ?..

ಮೈಕೆಲ್ : ನೀವು ಹೇಳೋದ್ರಲ್ಲೂ ಸತ್ಯ ಇದೆ ಸಾರ್. ಒಟ್ನಲ್ಲಿ ಈಗ ನಾವೇನು ಮಾಡ್ಬೇಕು ಅಂತ ನಿರ್ಧಾರ ಮಾಡ್ಬೇಕು ಅಲ್ವಾ?..

ಒಬಾಮ : ಹೌದು ಕಣಯ್ಯಾ.. ಅದನ್ನೇ ಯೋಚಿಸ್ತಾ ಕೂತಿದೀನಿ ನೋಡು.. ಈ ಇಂಡಿಯಾದೋರು ಬೇರೆ ದೇಶದವ್ರ ಹಾಗಲ್ಲ.. ಮೋದಿ ವಿಚಾರ ಬಂದ್ರೆ ಸಾಕು, ದೇಶದ ಮಾನ ಮರ್ಯಾದೆ ಮರ್ತು ನಮ್ ಕಡೆ ಓಡಿ ಬರ್ತಾರೆ.. ಒಂದಷ್ಟು ವೋಟ್ ಗಳು ಸಿಗುತ್ತೆ ಅಂದ್ರೆ ಪಾಕಿಸ್ತಾನಕ್ಕೂ ಮನವಿ ಪತ್ರ ಕೊಡ್ತಾರೆ, ನೋಡು..

ಒಬಾಮ : ಹೌದು, ನಾನೂ ಸಾಕಷ್ಟು ಕೇಳಿದೀನಿ ಅವ್ರ ಬಗ್ಗೆ.. ಈಗ ಒಂದು ಕೆಲ್ಸ ಮಾಡ್ಬೋದು ಸಾರ್.. ಇಂಡಿಯಾದಲ್ಲಿ ಏನೇ ಹಗರಣ, ಗೋಟಾಲಾ ಆದ್ರೂ, ಸಾವಿರಾರು ಜನ ಸತ್ರೂ ಒಂದು ಸಮಿತಿ ಮಾಡ್ಬಿಟ್ಟು ಕೈತೊಳ್ಕೋತಾರೆ.. ಆ ಸಮಿತಿ ವರದಿ ಬಂದಾಗ ಎರಡು ಸಲ ಚುನಾವಣೆ ನಡ್ದೋಗಿರುತ್ತೆ.. ನಾವೂ ಹಂಗೇನೆ ಒಂದು ಸಮಿತಿ ಅಂತ ಮಾಡಿ ಮೋದಿಗೆ ವೀಸಾ ಕೊಡ್ಬೇಕೊ ಬೇಡ್ವೋ ಅಂತ ನಿರ್ಧಾರ ಮಾಡ್ತೀವಿ ಅಂತ ಹೇಳ್ಬಿಡೋಣ.. ಚುನಾವಣೇಲಿ ಮೋದಿ ಗೆದ್ದು ಪ್ರಧಾನಿ ಆಗ್ಬುಟ್ರೆ ಇಮ್ಮೀಡಿಯೆಟ್ಟಾಗಿ ವರದಿ ತರ್ಸ್ಕೊಂದು ವೀಸಾ ಕೊಡೋದು, ಇಲ್ಲಾಂದ್ರೆ ಇನ್ನೈದು ವರ್ಷ ತಳ್ಬೋದು, ಅಲ್ವಾ ಸಾರ್ ?..

ಒಬಾಮ : ವೆರಿ ಗುಡ್ ಐಡಿಯಾ!.. ನಿನ್ನನ್ನ ಅಂಬಾಸಡರ್ ಮಾಡ್ತೀನಿ ಕಣೋ.., ಇನ್ನೊಂದು ಬಾರಿ ಚುನಾವಣೇಲಿ ಗೆದ್ರೆ..

ಮೈಕೆಲ್ : ಬಿಡಿ ಸಾರ್, ಆ ಭಾಗ್ಯ ನಿಮ್ಗೆಲ್ಲಿ ಸಾರ್?.. ಇದೇನು ಇಂಡಿಯಾನ.. ಎಷ್ಟುಸಲ ಬೇಕಾದ್ರೂ ಪ್ರಧಾನಿ / ಅಧ್ಯಕ್ಷ ಆಗೋಕೆ ?..ಇಲ್ಲಿ ಎರಡು ಸಲಕ್ಕಿಂತ ಹೆಚ್ಚು ಸಲ ಅಧ್ಯಕ್ಷ ಆಗೋಹಾಗಿಲ್ಲ ಅಂತ ಗೊತ್ತಿಲ್ವಾ ?..

ಒಬಾಮ : ನೀನ್ಯಾಕೆ ವರಿ ಮಾಡ್ತೀಯಾ ಮೈಕೆಲ್ ?... ಮುಂದಿನ ಸಲ ಇಂಡಿಯಾದ ಸೆಕ್ಯುಲರ್ ಎಂಪಿಗಳು ನನ್ನನ್ನೆ ಭಾರತದ ಪ್ರಧಾನಿಯಾಗಿ ಬನ್ನಿ ಅಂತ ಕರೀತಾರೆ, ನೋಡ್ತಾ ಇರು..

ಮೈಕೆಲ್ : ವಾವ್ವ್!.. ಬ್ರಿಲ್ಲಿಯಂಟ್!.. ಸಾರ್, ಈ ಸೆಕ್ಯುಲರ್ ಎಂಪಿಗಳನ್ನ ಅಮೆರಿಕಕ್ಕೆ ಕರ್ದು ಊಟ ಹಾಕ್ಸಿ ಸಾರ್, ಮುಂದಕ್ಕೆ ಸಹಾಯ ಆಗುತ್ತೆ..

ಒಬಾಮ : ಓಕೆ, ಓಕೆ, ಎಲ್ಲಾ ಓಕೆ.. ಅಬ್ಬ, ಈಗ ಸಮಾಧಾನ ಆಯ್ತು!..

ಮೈಕೆಲ್ : ಸಾರ್, ಇಂಡಿಯಾದಿಂದ ಫೋನ್.. ಅದ್ಯಾರ್ಗೋ ವೀಸಾ ಕೊಡ್ಬೇಕಂತೆ, ಯಾವುದೋ ಸೆಕ್ಯುಲರ್ ಪಾರ್ಟಿ ಎಂಪಿ ನಿಮ್ಮತ್ರ ಮಾತಾಡ್ಬೇಕಂತೆ..

ಒಬಾಮಾ : ಅಯ್ಯೋ ಇದೇನಯ್ಯಾ ನನ್ ಗ್ರಹಚಾರ ?.. 'ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ' ಅಂತ ಈ ವೀಸಾ ಭೂತ ನನ್ನ ಬಿಡ್ತಾನೆ ಇಲ್ವಲ್ಲೋ..

 

Author : ಮೂಷಿಕ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited