Untitled Document
Sign Up | Login    
ಟೀವಿ ಸ್ಟಾರ್ ಅಣ್ಣ ಹಜಾರೆಯೊಂದಿಗೆ ಒಂದು ಮಾತು..


ಕೇಜ್ರಿವಾಲ್ ಅಣ್ಣಾ ಹಜಾರೆಯವರನ್ನು ಹಾವು ತನ್ನ ಪೊರೆ ಕಳಚುವಂತೆ ಕಳಚಿ ದೆಹಲಿಗೆ ಹೋದ ಮೇಲೆ ಹಜಾರೆ ತುಂಬಾ ನೊಂದ ವ್ಯಕ್ತಿ. ಗುರುವಿಗೇ ತಿರುಮಂತ್ರ ಹೇಳಿ ತಿರುಗಿ ನೋಡದೆ ಮುನ್ನಡೆದ ತನ್ನ ಅಚ್ಚು ಮೆಚ್ಚಿನ ಶಿಷ್ಯನನ್ನು ನೆಚ್ಚಿಕೊಂಡಿದ್ದೇ ತಪ್ಪಾಯ್ತು ಅಂತ ರಾಲೆಗಾಂವ್ ಸಿದ್ಧಿಯ ಪಂಚಾಯತ್ ಸದಸ್ಯರೊಂದಿಗೆ ತಮ್ಮ ಅಳಲನ್ನು ಬಹಳ ಸಲ ಹೇಳಿಕೊಂಡಿದ್ದಾರೆ. ಕೇಜ್ರಿವಾಲ್ ಜೊತೆಗಿದ್ದಾಗ ವಾರಗಟ್ಲೆ ಧರಣಿ ಕೂತು ಟೈಂ ಪಾಸ್ ಆಗ್ತಿತ್ತು. ಮೈದಾನ ತುಂಬಾ ಜನ.. ಸುತ್ಲೂ ಟೀವಿ ಕಾಮೆರಾಗಳು.. ಸ್ಟೇಜ್ ಮೇಲೆ ಕಿರಣ್ ಬೇಡಿ, ಬಾಬಾ ರಾಮ್ ದೇವ್, ಅನುಪಮ್ ಖೇರ್ ಮುಂತಾದ ಅತಿರಥ ಮಹಾರಥರು ತಮ್ಮ ಬಳಿ.. ಮಾಧ್ಯಮ ಪ್ರತಿನಿಧಿಗಳಂತೂ ತಾವು ಬಾಯಿ ತೆರೆಯುವುದನ್ನೇ ಕಾಯುತ್ತಾ ಇದ್ದ ಭವ್ಯ ದೃಶ್ಯ ಅಣ್ಣಾ ಹಜಾರೆ ಮನಃಪಟಲದಲ್ಲಿ ಹಾದು ಹೋಗ್ತಾ ಇತ್ತು..

ಆ ಗತಕಾಲದ ವೈಭವವನ್ನು ನೆನೆಯುತ್ತಾ, ಈಗ ಯಾರೂ ಕೇರ್ ಮಾಡ್ತಿಲ್ಲವಲ್ಲಾ ಅಂತ ಕೊರಗುತ್ತಾ ಅಣ್ಣಾ ಎಂಟು ಕೇಜಿ ತೂಕ ಕಡಿಮೆಯಾಗಿದ್ದನ್ನು ಅವರ ಆಪ್ತರೊಬ್ಬರು ಹೇಳಿಕೊಂಡ್ರು. ಪಾಪ, ದಿಲ್ಲಿಯಲ್ಲಿ ಒಂದು ವಾರ ಉಪವಾಸ ಸತ್ಯಾಗ್ರಹ ಮಾಡಿದ್ರೂ ಅಷ್ಟು ತೂಕ ಇಳಿದಿರಲಿಲ್ಲ ಅಂದ್ರು.. ನಾನೂ ಬೇಸರ ಪಟ್ಟೆ. ಅವರೊಂದಿಗೆ ನಾನೂ ಕೆಲವು ದಿನಗಳ ಕಾಲ ಧರಣಿ ಕೂತಿದ್ದನ್ನು, ಪೊಲೀಸರಿಂದ ತಿಂದ ಲಾಠಿ ಏಟಿನಿಂದ ಮುರಿದ ಕೈ ರಿಪೇರಿಗಾಗಿ ಎರಡು ತಿಂಗಳು ಆಫೀಸಿಗೆ ರಜೆ ಹಾಕಿದ್ದನ್ನು ನೆನೆಯುತ್ತಾ ಯಾಕೆ ಒಮ್ಮೆ ಅವರ ದರ್ಶನ ಮಡೆದು ಬರಬಾರದು ಅಂತ ಲೆಕ್ಕ ಹಾಕಿ ರಾಲೆಗಾಂವ್ ಹುಡುಕಿಕೊಂಡು ಹೊರಟೆ..

ರಾಲೆಗಾಂವ್ ಸಿದ್ಧಿಯನ್ನು ತಲುಪಿದ ಮೇಲೆ ಅಣ್ಣಾ ಅವರನ್ನು ಹುಡುಕುವುದು ಕಷ್ಟವಾಗಲಿಲ್ಲ. ಆ ಹಳ್ಳಿಯಲ್ಲಿ ಅವರ ಹೆಸರು 'ವಿಶ್ವ ವಿಖ್ಯಾತ!'. ಆದರೂ ಹಳ್ಳಿಯ ಜನರಿಗೆ ಬೇಸರ. ಇತ್ತೀಚೆಗೆ ಅವರನ್ನು ಹುಡುಕಿಕೊಂಡು ಯಾರೂ ಬರುತ್ತಿಲ್ಲ, ಯುಪಿಯೆ ಸರಕಾರದ ಸ್ಕ್ಯಾಮ್ ಗಳು ಇಲ್ಲದಿದ್ದಾಗ ಮಾತ್ರ ಆಗೊಮ್ಮೆ ಈಗೊಮ್ಮೆ ಟೀವಿ ಚಾನಲ್ ನವರು ಅವ್ರನ್ನ ಕೇಳ್ಕೊಂಡು ಬರ್ತಾರೆ.. ಅಂತ ಗೋಗರೆದ್ರು. ಇರ್ಲಿ, ನನ್ನ ಉದ್ದೇಶ ಅಣ್ಣಾ ಭೇಟಿ, ಸೋ, ಹೞಿಯ ಬಳಸುದಾರಿ ಹಿಡಿದು ನೇರವಾಗಿ ಅಣ್ಣಾವ್ರ ಮನೆಗೆ ಬಂದೆ. ಅಲ್ಲಿ ಏನಾಯ್ತು ಅಂದ್ರೆ..

ಬೆಂಗಳೂರು ವೇವ್ಸ್ : ಅಣ್ಣಾಜಿ, ನಮಸ್ಕಾರ..

ಅಣ್ಣಾ ಹಜಾರೆ : ನಮಷ್ಕಾರ್.. ನೀವು ಯಾರೂಂತ ಗೊತಾಗ್ಲಿಲ್ಲ..

ಬೆಂ.ವೇ. : ನಾನು *%$#&@# ಸಾರ್. ಹೋದ ವರ್ಷ ಕೇಜ್ರಿವಾಲ್ ಮತ್ತು ನಿಮ್ ಜೊತೆ ದಿಲ್ಲೀಲಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದೆ. ಪೊಲೀಸರ ಲಾಠಿ ಏಟು ತಿಂದು ಮನೆಗೆ ಹೋದೆ..

ಅಣ್ಣಾ : ಹೌದಾ ?.. ನಂಗೆ ನೆನಪಿಲ್ಲ, ಆದ್ರೆ ಆ ಕೇಜ್ರಿವಾಲ್ ಹೆಸರು ಮಾತ್ರ ತೆಗೀಬೇಡಿ, ನಂಗೆ ದ್ರೋಹ ಮಾಡಿ ಈಗ ಪ್ರಧಾನಿ ಆಗ್ಬೇಕೂಂತ ಕನಸು ಕಾಣ್ತಾ ಇದಾರೆ.

ಬೆಂ.ವೇ. : ಇರ್ಲಿ ಬಿಡಿ ಅಣ್ಣಾಜಿ, ನಿಮ್ ಶಿಷ್ಯ ತಾನೆ? ಪ್ರಧಾನಿ ಆದ್ರೆ ನಿಮ್ಗೆ ಖುಶಿ ಅಲ್ವಾ?..

ಅಣ್ಣಾ : ಖುಷಿ ಏನು ಬಂತು ಕರ್ಮ.. ನನ್ನ ಹೆಸರು ಉಪಯೋಗಿಸಿಕೊಂಡು ಕೆಲ್ಸ ಆದ್ಮೇಲೆ ಈ ಕಡೆ ತಲೆಇಟ್ಟೂ ಮಲಗಿಲ್ಲ ಪುಣ್ಯಾತ್ಮ. ಸ್ವಲ್ಪವಾದ್ರೂ ಕೃತಜ್ನತಾ ಭಾವ ಬೇಡ್ವಾ ಮನುಷ್ಯನಿಗೆ?.. ಅದೂ ಅಲ್ದೆ ನನ್ನ ಹೆಸರಿಂದಾಗಿನೇ ಕೋಟಿಗಟ್ಲೆ ದುಡ್ಡು ದೇಣಿಗೆ ಬಂದಿದೆಯಂತೆ, ಎಲ್ಲಾ ಬಾಚ್ಕೊಂಡ್ರು ಅದನ್ನ ಬಳಸ್ಕೊಂಡು ರಾಜಕೀಯ ಮಾಡೋಕ್ಕೆ ಹೊರಟಿದಾರೆ, ತಪ್ಪಲ್ವಾ?.

ಬೆಂ.ವೇ. : ತಪ್ಪು ಹೌದು ಅಣ್ಣಾಜಿ, ಆದ್ರೆ ರಾಜಕೀಯ ಅಂದ್ರೆ ಅಷ್ಟೆ ತಾನೆ? ಸ್ವಾರ್ಥಕ್ಕೆ ಇನ್ನೊಂದು ಹೆಸರೇ ರಾಜಕೀಯ ಅಲ್ವಾ?.

ಅಣ್ಣಾ : ಏನೋಪ್ಪ, ನಂಗೆ ಅದೆಲ್ಲ ತಿಳೀದು. ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡೋಣ ಅಂತ ನನ್ನ ತಲೆ ತುಂಬಿ ದಿಲ್ಲೀಗೆ ಕರ್ಕೊಂಡು ಹೋಗಿ ಸತ್ಯಾಗ್ರಹಕ್ಕೆ ಕುಂಡ್ರಿಸಿದ್ರು ನೋಡಿ.. ಈ ಹಳ್ಳಿಲಿ ಕೇಳೇರಿಲ್ಲ ಅಂತ ನಾನೂ ಒಪ್ಪಿದೆ. ಒಂದಷ್ಟು ದಿನ ಎಲ್ರೂ ನನ್ನ ನೋಡೋಕೆ ಬರ್ತಿದ್ರು, ನಾನು ಹೇಳಿದ್ದೆಲ್ಲಾ ಟೀವೀಲಿ, ಪತ್ರಿಕೇಲಿ ಹಾಕ್ತಿದ್ರು.. ನನ್ನ ಗಾಂಧೀಗೂ ಹೋಲಿಸಿಬಿಟ್ರು.. ಫಾರಿನಲ್ಲೂ ನನ್ನ ಬಗ್ಗೆ ಪುಟಗಟ್ಲೆ ಬರ್ದ್ರಂತೆ, ನೋಡಿ.. ಒಟ್ನಲ್ಲಿ ನಂಗೆ ಅವೆಲ್ಲಾ ಖುಶಿಯಾಗ್ತಿತ್ತು.. ಒಳ್ಳೇ ಟೈಂ ಪಾಸ್..

ಬೆಂ.ವೇ. : ಅದು ಹೌದು. ನಮ್ಮಂಥೋರು ಆಫೀಸಿಗೆ ರಜಾ ಹಾಕಿ ಸಂಬಳ ಇಲ್ದೆ, ನಿಮ್ ಜೊತೆ ಸತ್ಯಾಗ್ರಹ ಮಾಡಿದೀವಲ್ಲ.. ಏನೋ ಈ ದೇಶಕ್ಕೆ ಒಳ್ಳೇ ಕಾಲ ಬರ್ತಿದೆ ಅಂತೆಲ್ಲ ನಾವೂ ಕನಸು ಕಂಡ್ವಿ.. ಆದ್ರೆ..

ಅಣ್ಣಾ : ನಾನು ಅವ್ರ ಮಾತೆಲ್ಲ ಕೇಳಿ ಮೋಸ ಹೋದೆ.. ಅವ್ರು ತಮ್ಮ ಬೇಳೆ ಬೇಯ್ಸೋಕೆ ನನ್ನನ್ನ ಚೆನ್ನಾಗಿ ಬಳಸ್ಕೊಂಡ್ರು ಅಂತ ನಮ್ಮ ಹಳ್ಳಿ ಜನ ಹೇಳ್ತಿದಾರೆ..

ಬೆಂ.ವೇ. : ಹೌದು ಅಣ್ಣಾಜಿ, ಹೊರಗಡೆ ಜನ್ರೂ ಅದೇ ಮಾತು ಹೇಳ್ತಾರೆ..

ಅಣ್ಣಾ : ಹಾಂ, ನೋಡಿ ಮತ್ತೆ, ನಂಗೆ ಬೇಸರ ಆಗೋದು ಸಹಜ ತಾನೆ?..

ಬೆಂ.ವೇ. : ಹೌದು. ಆದ್ರೆ ನೀವು ರಾಜಕೀಯ ಬೇಡ, ಅಧಿಕಾರ ಬೇಡ, ಕೇವಲ ಲೋಕಪಾಲ್ ಬಿಲ್ಲು ಬೇಕು ಅಂತೆಲ್ಲಾ ಹೇಳಿಕೆ ಕೊಡ್ತಿದ್ರಲ್ಲ.. ಲೋಕಪಾಲ್ ಪಾಸ್ ಮಾಡಿದ್ರಲ್ಲ.. ಮತ್ತೆ, ಕೇಜ್ರಿವಾಲ್ ರಾಜಕೀಯ ಸೇರಿದ್ರೆ ನಿಮಗ್ಯಾಕೆ ಬೇಜಾರು?..

ಅಣ್ಣಾ : ಅವ್ರು ರಾಜಕೀಯ ಸೇರೋದು ನಂಗೆ ಗೊತ್ತಿರ್ಲಿಲ್ಲ. ನಾವು ಸದಾ ಧರಣಿ ಮಾಡ್ಕೊಂದಿರೋಣ, ಹೇಗಿದ್ರೂ ಸರ್ಕಾರ ಲೋಕಪಾಲ್ ಬಿಲ್ಲು ಪಾಸ್ ಮಾಡಲ್ಲ, ನಿಮ್ಮ ಹೆಸ್ರು ವರ್ಳ್ದ್ ಫೇಮಸ್ಸಾಗುತ್ತೆ ಅಂತೆಲ್ಲಾ ಬಿಟ್ರು, ನಾನು ನಂಬಿದೆ. ಅಲ್ಲಾ, ನನ್ನ ಹೆಸ್ರೇನೋ ಫೇಮಸ್ ಆಯ್ತು ಬಿಡಿ, ಆದ್ರೆ ಈಗ ನನ್ನ ಕೇಳೋರೆ ಇಲ್ಲ.. ಏನಿದ್ರೂ ಕೇಜ್ರಿವಾಲ್ ಬಗ್ಗೇನೆ ಬರೀತಾರೆ. ಟೀವಿಯವ್ರೂ ಅವ್ರ ಜೊತೇನೇ ಕಾಮೆರ ಇಟ್ಕೊಂಡು ತಿರುಗಾಡ್ತಾರೆ ನೋಡಿ. ನಂಗೆ ತಿಂಗಳುಗಟ್ಲೆ ಟೀವಿ ಕಾಮೆರಾದಲ್ಲಿ ಕಾಣಿಸ್ಕೊಂಡು ದಿಲ್ಲೀಲಿ ಸಾವಿರಾರು ಜನ್ರ ಜೊತೆ ಧರಣಿ ನಡೆಸಿ ಅಭ್ಯಾಸ ಆಗಿತ್ತು.. ಈಗ ಈ ಹಳ್ಳಿಲಿ ಬೇಜಾರು ಬಂದೋಗಿದೆ..

ಬೆಂ.ವೇ. : ನೀವು ಹೇಳೋದು ಸರೀನೆ, ಆದ್ರೆ ನೀವು ರಾಜಕೀಯ ಸೇರ್ಬೇಕಿತ್ತು.. ಕೇಜ್ರಿವಾಲ್ ಬದ್ಲು ನೀವು ದೆಹಲಿ ಮುಖ್ಯಮಂತ್ರಿ ಆಗ್ತಿದ್ರಿ, ಅಲ್ವಾ?..

ಅಣ್ಣಾ : ಅಯ್ಯೋ, ರಾಜಕೀಯ ನಂಗೆ ಬೇಡಾರಿ.. ಈ ವಯಸ್ಸಲ್ಲಿ ನಂಗೆ ಅವೆಲ್ಲ ಗೊತ್ತಾಗಲ್ಲ, ಏನೇನೋ ಆಟ ಆಡ್ತಾರೆ, ನಂಗೆ ತಲೆ-ಬುಡ ತಿಳಿಯಲ್ಲ.. ಏನಿಲ್ಲ ದಿನಕ್ಕೊಂದು ಬಾರಿ ಟೀವಿ ಮುಂದೆ ನನ್ನ ಪಿಕ್ಚರ್ರು ಬರ್ತಾ ಇದ್ರೆ ನಂಗೆ ತೃಪ್ತಿ.. ತಿಂಗಳಿಗೊಂದು ವಾರ ಸತ್ಯಾಗ್ರಹ ಮಾಡ್ತಾ, ಇರೋ ಕಾಲ ಕಳೀಬಹುದಿತ್ತು.. ನೋಡಿ, ಏನೇನೋ ಆಗೋಯ್ತು..

ಬೆಂ.ವೇ. : ಅದಕ್ಕೇನಾ ನೀವೀಗ ಪ್ರತಿದಿನ ಟೀವೀಲಿ ಬರ್ತಾ ಇರೋದು?.. ಮಮತಾ ಬಾನರ್ಜಿ ಪರವಾಗಿ ಜಾಹೀರಾತಿನಲ್ಲಿ ಕಾಣಿಸ್ಕೊಳ್ತಾ ಇದೀರಿ?..

ಅಣ್ಣಾ : ಜಾಹೀರಾತೋ, ಎನೋ ನಂಗೊತ್ತಿಲ್ಲ.. ಒಂದಷ್ಟು ಏನೋ ಹೇಳಿಸ್ಕೊಂಡ್ರು, ಟೀವಿಲಿ ಹಾಕ್ಟಿವಿ ಅಂದ್ರು.. ಒಪ್ಕೊಂಡೆ.. ಈಗ ಸ್ವಲ್ಪ ಸಮಾಧಾನ, ಕೊನೇ ಪಕ್ಷ ದಿನಾ ನನ್ ಮುಖ ಕಾಣಿಸ್ಕೋತಾ ಇದೆ ಅಲ್ವಾ ಅಂತ..

ಬೆಂ.ವೇ. : ಹೋಗ್ಲಿ, ಅದ್ಯಾಕೆ ನೀವು ಎಲ್ಲಾ ಬಿಟ್ಟು ಮಮತಾ ಬೆಂಬಲಕ್ಕೆ ನಿಂತು ಬಿಟ್ರಿ? ಬೇರೆ ಯಾರೂ ಸಿಗ್ಲಿಲ್ವಾ, ಅಣ್ಣಾಜಿ?..

ಅಣ್ಣಾ : ಎಲ್ಲ ಪಕ್ಷದವ್ರಿಗೂ ಪತ್ರ ಬರ್ದೆ.. ಭ್ರಷ್ಟಾಚಾರ ವಿರುದ್ಧ ಹೋರಾಡ್ತೀನಿ, ನಿಮ್ಮ ಬೆಂಬಲ ಕೊಡಿ, ಸತ್ಯಾಗ್ರಹ ಮಾಡ್ತೀನಿ ಅಂತೆಲ್ಲ ಬರ್ದೆ.. ಆದ್ರೆ ಕಾಂಗ್ರೆಸ್ ನೋವ್ರು ಬಿಟ್ರೆ ಇನ್ಯಾರೂ ಉತ್ತರ ಕೊಡ್ಲಿಲ್ಲ..

ಬೆಂ.ವೇ. : ಕಾಂಗ್ರೆಸ್ಸಾ?.. ಅವ್ರು ಏನಂದ್ರು, ಅಣ್ಣಾಜಿ?..

ಅಣ್ಣಾ : ಅದೇ, ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಒಟ್ಟಿಗೆ ಹೋರಾಡೋಣ, ಕಾಂಗ್ರೆಸ್ಸಿಗೆ ಸೇರ್ಬಿಡಿ, ಟಿಕೆಟ್ ಕೊಡ್ತೀವಿ ಅಂದ್ರು..

ಬೆಂ.ವೇ. : ಕಾಂಗ್ರೆಸ್ಸ್ ಬ್ರಷ್ಟಾಚಾರ ವಿರುದ್ಧ ಹೋರಾಡೋದಾ..? ಇರ್ಲಿ, ನೀವೇನಂದ್ರಿ?.

ಅಣ್ಣಾ : ನಂಗ್ಯಾಕೋ ಅದು ಸರಿ ಕಾಣ್ಲಿಲ್ಲ.. ಅಲ್ದೇ, ನಮ್ ಹಳ್ಳಿ ಜನ ಬೇಡ ಅಂದ್ರು.. ಅದಕ್ಕೇ, ದೀದಿ ಹತ್ರ ಯಾರೋ ಮಾತಾಡಿ ಅವ್ರು ನನ್ನ ಸಲಹೆಗಳಿಗೆ ಒಪ್ಪಿರೋ ಹಾಗೆ ಪತ್ರ ಬರ್ಸಿದ್ರು, ನಾನು ಅವ್ರಿಗೆ ಸಪೋರ್ಟ್ ಮಾಡೋಕೆ ಒಪ್ಕೊಂಡೆ..

ಬೆಂ.ವೇ. : ಹಾಂ, ನೀವು ಬಹಳ ಕಲ್ತ್ ಬಿಟ್ರಿ, ಬಿಡಿ.. ಅಂದ ಹಾಗೆ, ದೇಶದ ಜನ ಈಗ್ಲೂ ನಿಮ್ಮ ಬಗ್ಗೆ ಮೊದಲಿನ ಗೌರವ ಇಟ್ಕೊಂದಿದಾರೆ ಅಂತೀರಾ?. ನೀವು ಬೆಂಬಲ ಕೊಡ್ತೀನಿ ಅಂದ್ರೆ, ಜನ ಮಮತಾಗೆ ವೋಟ್ ಹಾಕ್ತಾರಾ?.. ರಾಜಕೀಯದಿಂದ ದೂರ ಇರ್ಬೇಕಾದ ನೀವೇ ರಾಜಕಾರಣಿಯೊಬ್ಬರಿಗೆ ಬೆಂಬಲ ಕೊಡೋದು ಸರೀನಾ?.. ಅದೂ ಅಲ್ದೆ, ದೀದಿ ಸರ್ಕಾರದ ಬಗ್ಗೇನೂ ಕೆಲವೊಂದು ಭ್ರಷ್ಟಾಚಾರದ ಮಾತು ಕೇಳಿ ಬರ್ತಾ ಇದೆಯಲ್ಲಾ ?. ಉದಾಹರಣೆಗೆ ಶಾರದಾ ಚಿಟ್ ಫಂಡ್ ಹಗರಣ ಇತ್ಯಾದಿ?..

ಅಣ್ಣಾ : ಅವೆಲ್ಲ ನಂಗೆ ಗೊತ್ತಾಗಲ್ಲ ಬಿಡ್ರಿ, ಏನೋ ನಾನು ಪತ್ರ ಬರ್ದಿದ್ದಕ್ಕೆ ಅವ್ರು ಮಾತ್ರ ಉತ್ರ ಕೊಟ್ರು. ಕಾಂಗ್ರೆಸ್ಸಿಗಿಂತ ಅವ್ರು ಮೇಲು ಅಂತ ಯಾರೋ ಹೇಳಿದ್ರು ಅಂತ ಬೆಂಬಲ ಕೊಟ್ಟೆ, ಅಷ್ಟೆ.. ಯಾವ್ದಕ್ಕೂ ದಿನಾ ಟೀವೀಲಿ ನನ್ ಮುಖ ತೋಸಿಸ್ತಾರಲ್ಲಾ, ಅದೇ ಸಮಾಧಾನದ ವಿಷ್ಯ..

ಬೆಂ.ವೇ. : ನೀವು ಗ್ರೇಟ್ ಅಣ್ಣಾಜಿ, ತುಂಬಾ ಸಿಂಪಲ್ಲು.. ನಾನು ಅಂದುಕೊಂಡಿದ್ದಕ್ಕಿಂತ್ಲೂ ಸಿಂಪಲ್ಲು.. ಹೋಗ್ಲಿ, ಅಣ್ಣಾಜಿ, ಸದ್ಯದಲ್ಲೇ ಏನಾದ್ರೂ ಧರಣಿ ಕೂರೋ ವಿಚಾರ ಮಾಡ್ತಿದೀರಾ?..

ಅಣ್ಣಾ : ಯಾರೂ ಮುಂದೆ ಬರ್ತಾ ಇಲ್ರೀ.. ನಂಗೂ ಇಲ್ಲಿ ಕೂತು ಬೇಜಾರು ಬಂದ್ಬಿಟ್ಟಿದೆ.. ಏನೂ ಇಷಯ ಸಿಗೇ ಹೋದ್ರೆ ಕೇಜ್ರಿವಾಲ್ ವಿರುದ್ಧಾನೇ ಧರಣಿ ನಡೆಬೋದು ಅಂದೆ, ಯಾರೂ ನನ್ ಮಾತು ಕೇಳ್ತಿಲ್ಲ..

ಬೆಂ.ವೇ. : ಸಾರಿ ಅಣ್ಣಾಜಿ, ಈ ಪರಿಸ್ಥಿತಿ ಬರಬಾರ್ದಾಗಿತ್ತು.. ಎಲ್ಲೋ ನೆಮ್ಮದಿಯಿಂದ ಇದ್ದ ನಿಮ್ಮನ್ನ ಕರ್ಕೊಂಡು ಬಂದು, ಇಂಟರ್ನ್ಯಾಷನಲ್ ಫಿಗರ್ ಮಾಡಿ ಆಮೇಲೆ ... ಥರ ಇದ್ದಲ್ಲೇ ಬಿಟ್ಬಿಟ್ಟು ಹೋಗಿದ್ದು ಎಷ್ಟಕ್ಕೂ ಸರಿಯಲ್ಲ.. ಎಲ್ಲಾ ರಾಜಕೀಯ, ಬಿಡಿ.. ಯಾರಾದ್ರೂ ಧರಣಿ ನಡ್ಸೋಕೆ ರೆಡಿ ಇದ್ರೆ ಕಳ್ಸಿಸ್ತೀನಿ, ನಾನಿನ್ನು ಬರ್ತೀನಿ, ಅಣ್ಣಾಜಿ, ಜೈ ಹಿಂದ್.

ಅಣ್ಣಾ : ಸ್ವಲ್ಪ ಇರಿ.. ಚಾ ಕುಡ್ದ್ ಹೋಗಿ, ಅಷ್ಟು ದೂರ್ದಿಂದ ಬಂದಿದೀರಿ..

ಚಾ ಕುಡಿದು ಅಲ್ಲಿಂದ ಭಾರವಾದ ಮನಸ್ಸಿನಿಂದ ಹೊರಟೆ.. ಮನುಷ್ಯನ ಮುಗ್ದತೆಯನ್ನು ಹೇಗೆ ತಮ್ಮ ಸ್ವಾರ್ಥಕ್ಕಾಗಿ ಉಪಯೋಸಿಕೊಳ್ಳೋ ಜನ ಇರ್ತಾರೆ ಅಂತ ಯೋಚಿಸ್ತಾ ಹೆಜ್ಜೆ ಹಾಕಿದೆ..

(ಅಷ್ಟರಲ್ಲಿ ಸಾರ್, ಚಾ.. ಆರೋಗ್ತಿದೆ ಅಂತ ಆಫೀಸ್ ಬಾಯ್ ಕೂಗಿದ, ಎಚ್ಚರವಾಯ್ತು, ನಾನು ಕಂಡಿದ್ದು ಕನಸು ಅಂತ ತಿಳಿಯಲು ಸ್ವಲ್ಪ ಹೊತ್ತಾಯ್ತು..).

 

Author : ಮೂಷಿಕ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited