Untitled Document
Sign Up | Login    
ಡಬ್ಲ್ಯುಎಚ್‌ಒ ಪ್ರಾದೇಶಿಕ ನಿರ್ದೇಶಕಿ ಪೂನಂ ಖೇತ್ರಪಾಲ್ ಸಿಂಗ್

Dr. Poonam Khetrapal

ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಜಗತ್ತಿನ ಅತಿಪ್ರತಿಷ್ಠಿತ ಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ). ಇದರ ಆಗ್ನೇಯ ಏಷ್ಯಾ ಭಾಗದ ಪ್ರಾದೇಶಿಕ ನಿರ್ದೇಶಕರ ಸ್ಥಾನವೂ ಅಷ್ಟೇ ಪ್ರತಿಷ್ಠಿತವಾದುದು. ಇದೀಗ ನಾಲ್ಕು ದಶಕಗಳ ಬಳಿಕ ಈ ಅತ್ಯುನ್ನತ ಹುದ್ದೆ ಭಾರತದ ಪಾಲಾಗಿದೆ. ಅಷ್ಟೇ ಅಲ್ಲ, ಈ ಭಾಗದಿಂದ ಮಹಿಳೆಯೊಬ್ಬರನ್ನು ಪ್ರಾದೇಶಿಕ ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನ ಮಾಡಿರುವುದು ಇದೇ ಮೊದಲು. ಆ ಮಹಿಳಾ ಅಧಿಕಾರಿ ಭಾರತದವರು ಎಂಬುದು ಕೂಡಾ ಭಾರತದ ಪಾಲಿನ ಹೆಗ್ಗಳಿಕೆ.
ಭಾರತದ ನಿವೃತ್ತ ಐಎಎಸ್ ಅಧಿಕಾರಿ ಪೂನಂ ಖೇತ್ರಪಾಲ್ ಸಿಂಗ್ ಈ ಮಹಿಳಾ ಅಧಿಕಾರಿ. ಈ ಪ್ರತಿಷ್ಠಿತ ಹುದ್ದೆಗಾಗಿ ಬಾಂಗ್ಲಾದೇಶ, ಮ್ಯಾನ್ಮಾರ್‌ಗಳ ಅಭ್ಯರ್ಥಿಗಳು ಖೇತ್ರಪಾಲ್‌ಗೆ ತೀವ್ರ ಸ್ಪರ್ಧೆ ಒಡ್ಡಿದ್ದರು. ಆದರೆ, ಆಗ್ನೇಯ ಏಷ್ಯಾ ಭಾಗದ 11 ರಾಷ್ಟ್ರಗಳ ಆರೋಗ್ಯ ಸಚಿವರ 31ನೇ ಸಭೆ ಮತ್ತು ಡಬ್ಲ್ಯುಎಚ್‌ಒದ ಆಗ್ನೇಯ ಏಷ್ಯಾ ಪ್ರಾದೇಶಿಕ ಸಮಿತಿಯ 66ನೇ ಸಭೆಯಲ್ಲಿ ಈ ಪ್ರತಿಷ್ಠಿತ ಸ್ಥಾನಕ್ಕೆ ಪೂನಂ ಅವರನ್ನು ಆಯ್ಕೆ ಮಾಡಲಾಯಿತು. ಅವರು ಮುಂದಿನ ಐದು ವರ್ಷದ ಅವರಿಗೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 32 ಸದಸ್ಯರನ್ನೊಳಗೊಂಡ ಡಬ್ಲ್ಯುಎಚ್‌ಒದ ಕಾರ್ಯನಿರ್ವಾಹಕ ಮಂಡಳಿ ಈ ಕುರಿತು ಅಧಿಕೃತ ಘೋಷಣೆ ಹೊರಡಿಸಿದ್ದು 2014ರ ಫೆಬ್ರವರಿ 1ರಂದು ಅವರು ನವದೆಹಲಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಥಾಯ್ಲೆಂಡ್‌ನ ಸಮ್ಲೀ ಪ್ಲಿಯಾನ್ಗ್‌ಚಾಂಗ್ ಅವರು ಡಬ್ಲ್ಯುಎಚ್‌ಒದ ನಿಕಟಪೂರ್ವ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕರಾಗಿದ್ದರು. ನಲವತ್ತನಾಲ್ಕು ವರ್ಷಗಳ ಮೊದಲು 1948-1968ರ ತನಕ ಭಾರತದವರು ಈ ಸ್ಥಾನವನ್ನು ಅಲಂಕರಿಸಿದ್ದರು.

ಯಾರು ಈ ಪೂನಂ?: ಪಂಜಾಬ್ ಕೆಡರ್ 1975ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಪೂನಂ, ಪಂಜಾಬ್‌ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದವರು. ಇವರು 1998ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದು, ಡಬ್ಲ್ಯುಎಚ್‌ಒದ ಜಿನೇವಾ ಕಚೇರಿಯಲ್ಲಿ ಸಸ್ಟೈನೆಬಲ್ ಡೆವಲಪ್‌ಮೆಂಟ್ ಅಂಡ್ ಹೆಲ್ದಿ ಎನ್‌ವಿರೋನ್ಮೆಂಟ್ಸ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ, ವಿಶ್ವಬ್ಯಾಂಕ್ ಭಾರತದ ಆರೋಗ್ಯ, ಜನಸಂಖ್ಯೆ ಮತ್ತು ಪೌಷ್ಟಿಕತೆ ಯೋಜನೆ ಅನುಷ್ಠಾನ ವಿಭಾಗದಲ್ಲೂ ಮೂರು ವರ್ಷ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಿರುವ 64 ವರ್ಷದ ಪೂನಂ ಅವರು, 2000ದಿಂದ ಡಬ್ಲ್ಯುಎಚ್‌ಒದ ಆಗ್ನೇಯ ಏಷ್ಯಾ ಭಾಗದ ಪ್ರಾದೇಶಿಕ ಉಪನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಗ್ನೇಯ ಏಷ್ಯಾ ಭಾಗದ ಪ್ರಾದೇಶಿಕ ನಿರ್ದೇಶಕರಿಗೆ ಮುಖ್ಯ ಸಲಹೆಗಾರರಾಗಿ ಕೆಲಸ ನಿರ್ವಹಿಸುವುದು ಪ್ರಾದೇಶಿಕ ಉಪನಿರ್ದೇಶಕರ ಕರ್ತವ್ಯ. ಅದರಲ್ಲೂ ಪ್ರಮುಖವಾಗಿ ವಿಶ್ವ ಆರೋಗ್ಯ ಸಂಸ್ಥೆಯ ನೀತಿಗಳು, ಆಡಳಿತ ಮತ್ತು ತಂತ್ರಗಾರಿಕೆ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಾಗುತ್ತದೆ.
‘ಸಸ್ಟೈನೆಬಲ್ ಡೆವಲಪ್‌ಮೆಂಟ್ ಅಂಡ್ ಹೆಲ್ದಿ ಎನ್ವಿರೋನ್ಮೆಂಟ್, ಕಮ್ಯೂನಿಕೆಬಲ್ ಡಿಸೀಸ್, ಕುಟುಂಬ ಆರೋಗ್ಯ ಮತ್ತು ಸಂಶೋದನೆ, ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ನಾನ್ ಕಮ್ಯೂನಿಕೆಬಲ್ ಡಿಸೀಸಸ್ ಅಂಡ್ ಸೋಷಿಯಲ್ ಡಿಟರ್ಮಿನೆಂಟ್ಸ್ ಆ- ಹೆಲ್ತ್’ ಮೊದಲಾದ ವಿಭಾಗಗಳ ಯೋಜನೆಗಳ ಅನುಷ್ಠಾನದ ಸಂಪೂರ್ಣ ಹೊಣೆಯೂ ಇವರದ್ದೇ ಆಗಿರುತ್ತದೆ. ಇದಲ್ಲದೆ, ಉಳಿದ ಪ್ರಾದೇಶಿಕ ಭಾಗಗಳ ಜತೆಗಿನ ಹಣಕಾಸು, ಮಾನವ ಸಂಪನ್ಮೂಲ ವಿಚಾರದ ಸಮನ್ವಯದ ಕೆಲಸವನ್ನೂ ಇವರೇ ಮಾಡಬೇಕಾಗುತ್ತದೆ.

ಡಾ.ಪೂನಂ ಅವರು ಈ ಜವಾಬ್ದಾರಿಗಳನ್ನಷ್ಟೇ ಅಲ್ಲದೆ, ಪ್ರಾದೇಶಿಕ ನಿರ್ದೇಕರಿಗೆ ಮುಖ್ಯ ಸಲಹೆಗಾರರಾಗಿ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವಲ್ಲಿ ಆಡಳಿತಾತ್ಮಕ, ತಾಂತ್ರಿಕಸಹಕಾರವನ್ನು ನೀಡಿದ್ದರು. ಜಿನೇವಾದಲ್ಲಿ ಡೈರೆಕ್ಟರ್ ಜನರಲ್ ಕ್ಯಾಬಿನೆಟ್ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದವರು. ಈಗ ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನೆರವೇರಿಸುವ ಭರವಸೆಯನ್ನು ಆಗ್ನೇಯ ಏಷ್ಯಾ ಸದಸ್ಯ ರಾಷ್ಟ್ರಗಳಲ್ಲಿ ಮೂಡಿಸಿದ್ದಾರೆ.

ಡಾ.ಪೂನಂ ವೃತ್ತಿ ಕ್ಷೇತ್ರದ ಅನುಭವ 



  • ಪಂಜಾಬ್ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ (1984-86) 

  • ವಿಶ್ವಬ್ಯಾಂಕ್‌ನ ಭಾರತದ ಸ್ಥಾನಿಕ ಯೋಜನಾಧಿಕಾರಿ (1987-89)

  • ಪಂಜಾಬ್ ಆರೋಗ್ಯ ಇಲಾಖೆ ಕಾರ್ಯದರ್ಶಿ (1994-95, 199697)

  • ಕಾರ್ಯನಿರ್ವಾಹಕ ನಿರ್ದೇಶಕಿ, ಎಸ್‌ಡಿಎಚ್‌ಇ (1998-2000)

  • ಡೆಪ್ಯುಟಿ ರೀಜನಲ್ ಡೈರೆಕ್ಟರ್, ಡಬ್ಲ್ಯುಎಚ್ಒ' (2000-2013)

ಡಬ್ಲ್ಯುಎಚ್ ಒ' ಆಗ್ನೇಯ ಏಷ್ಯಾ ಭಾಗದ ರಾಷ್ಟ್ರಗಳು 



  •  ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ಇಂಡೋನೇಷ್ಯಾ, ಶ್ರೀಲಂಕಾ, ಮಾಲ್ಡೀವ್ಸ್, ಟಿಮರ್ ಲೆಸ್ಟೆ, ಕೊರಿಯಾ 




 

Author : ಬೆಂಗಳೂರು ವೇವ್ಸ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited