Untitled Document
Sign Up | Login    
ಬೇಹುಗಾರ ಭದ್ರತಾ ಸಲಹೆಗಾರ

.

ಗುಪ್ತಚರ ದಳದ ಮಾಜಿ ನಿರ್ದೇಶಕ ಅಜಿತ್ ಕುಮಾರ್ ದೊವಲ್ ನಮ್ಮ ದೇಶದ ಐದನೇ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್ ಎಸ್ ಎ) ರಾಗಿ ನೇಮಕವಾಗಿದ್ದಾರೆ. ಎರಡು ವಾರಗಳ ಹಿಂದಷ್ಟೆ ಪ್ರಧಾನಿ ನರೇಂದ್ರ ಮೋದಿ ಇವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆಗಲೇ ದೊವಲ್ ಭದ್ರತಾ ಸಲಹೆಗಾರರಾಗಿ ನೇಮಕವಾಗಬಹುದೆಂಬ ಸುದ್ದಿ ಹರಡಿತ್ತು. ಆದರೆ, ಎರಡು ಪ್ರಮುಖ ಕಾರಣಗಳಿಂದಾಗಿ ಅವರ ನೇಮಕ ಪ್ರಕ್ರಿಯೆಗೆ ಕೊಂಚ ಹಿನ್ನಡೆಯಾಗಿತ್ತು.

ಪ್ರಧಾನಿಯವರ ಪ್ರಿನ್ಸಿಪಲ್ ಸೆಕ್ರಟರಿಯ ನೇಮಕವಾಗದ ಹೊರತು ಎನ್ಎಸ್ಎ ನೇಮಕ ಸಾಧ್ಯವಿಲ್ಲ. ಅವರ ಮೂಲಕವೇ ಈ ನೇಮಕ ಪ್ರಕ್ರಿಯೆ ನಡೆಯಬೇಕು. ಟೆಲಿಕಾಂ ರೆಗುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್)ದ ಮಾಜಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರನ್ನು ಪ್ರಧಾನಿಯವರ ಪ್ರಿನ್ಸಿಪಲ್ ಸೆಕ್ರಟರಿಯಾಗಿ ಮೊದಲು ನೇಮಕ ಮಾಡಬೇಕಿತ್ತು. ಇದಕ್ಕೆ ಕಾನೂನು ತೊಡಕು ಎದುರಾದ ಹಿನ್ನೆಲೆಯಲ್ಲಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಮಿಶ್ರಾ ನೇಮಕ ಸುಗಮಗೊಳಿಸಿತು. ಇದಾದ ಬಳಿಕ ಶುಕ್ರವಾರ ದೊವಲ್ ನೇಮಕವೂ ಘೋಷಣೆಯಾಗಿದೆ.

ಇದು ತಾಂತ್ರಿಕ ವಿಚಾರವಾಯಿತು. ಇದಕ್ಕೂ ಮುನ್ನ, ಭದ್ರತಾ ಸಲಹೆಗಾರರ ಸ್ಥಾನಕ್ಕೆ ಮಾಜಿ ರಾಜತಾಂತ್ರಿಕ ಉದ್ಯೋಗಿ ಅಥವಾ ಗುಪ್ತಚರದಳದ ಮಾಜಿ ಮುಖ್ಯಸ್ಥರ ನಡುವೆ ಸರ್ಕಾರ ಯಾರನ್ನು ಆಯ್ಕೆ ಮಾಡಲಿದೆ ಎಂಬ ವಿಚಾರ ಭಾರಿ ಚರ್ಚೆಗೊಳಗಾಗಿತ್ತು. ಮೋದಿ ಅವರ ಸಚಿವ ಸಂಪುಟದ ಪ್ರಭಾವಿ ಸಚಿವರೊಬ್ಬರು ಮಾಜಿ ರಾಜತಾಂತ್ರಿಕ ಉದ್ಯೋಗಿ ಆಯ್ಕೆ ಬೆಂಬಲಿಸಿದ್ದರು. ಆದರೆ, ಪ್ರಧಾನಿ ಮೋದಿ ಮನಸ್ಸಿನಲ್ಲಿ ಎನ್ಎಸ್ಎ ಸ್ಥಾನಕ್ಕೆ ಆಗಲೇ ದೊವಲ್ ಹೆಸರು ಮೂಡಿತ್ತು.

ಯಾರು ಈ ದೊವಲ್ : ಭಾರತೀಯ ಪೊಲೀಸ್ ಸೇವೆಯ 1968ರ ಕೇರಳ ಬ್ಯಾಚಿನ ಅಧಿಕಾರಿ. ಗುಪ್ತಚರ ಇಲಾಖೆಗೆ ನಿಯೋಜಿಸಲ್ಪಡುವ ಮೊದಲು ಕೆಲಕಾಲ ಕೇರಳದಲ್ಲಿ ಸೇವೆ ಸಲ್ಲಿಸಿದ್ದರು. ಈ ಚಿಕ್ಕ ವ್ಯಕ್ತಿ ಮುಂದೊಂದು ದಿನ ಭಾರತದ ಗುಪ್ತಚರ ಸಮುದಾಯದ ದಿಗ್ಗಜರಾಗಿ ಬೆಳೆಯುತ್ತಾರೆಂದು ಯಾರೊಬ್ಬರೂ ಊಹಿಸಿರಲಿಲ್ಲ. 2004ರಲ್ಲಿ ಯುಪಿಎ ಸರ್ಕಾರ ಇವರನ್ನು ಗುಪ್ತಚರ ದಳದ ಮುಖ್ಯಸ್ಥರನ್ನಾಗಿ ನೇಮಿಸಿತು. ಆದರೆ ಎರಡು ವರ್ಷದ ಪೂರ್ಣ ಅಧಿಕಾರಾವಧಿ ಅವರಿಗೆ ಸಿಗಲಿಲ್ಲ. ಇವರ ಬೆನ್ನಿಗೆ ಇಎಸ್ಎಲ್ ನರಸಿಂಹನ್ ಅವರನ್ನು ಗುಪ್ತಚರದಳದ ಮುಖ್ಯಸ್ಥರನ್ನಾಗಿಸಿತು ಸರ್ಕಾರ.

ದೊವಲ್. ಆಗ ಅವರು ವಿವೇಕಾನಂದ ಅಂತಾರಾಷ್ಟ್ರೀಯ ಫೌಂಡೇಶನ್ (ವಿಐಎಫ್) ಮುಖ್ಯಸ್ಥರಾಗಿದ್ದರು. ಅಲ್ಲದೆ, ದೇಶದ ಭದ್ರತಾ ವಿಚಾರವಾಗಿ ಅಧ್ಯಯನ ನಡೆಸುವುದಕ್ಕಾಗಿ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಗಳು, ರಾಜತಾಂತ್ರಿಕರನ್ನು ಒಂದುಗೂಡಿಸಿದ್ದರು. ಅಷ್ಟೇ ಅಲ್ಲ, ರಾಜಕೀಯದಿಂದ ದೂರ ಉಳಿದವರು. ಹೀಗಾಗಿಯೇ ಈಗಾಗಲೇ ಹೇಳಿದಂತೆ, ಅವರು ಚುನಾವಣಾ ಪೂರ್ವದಲ್ಲೇ ನರೇಂದ್ರ ಮೋದಿಯವರ ಗಮನ ಸೆಳೆದವರು

ಮಿಜೋರಂನಲ್ಲಿ ಬಂಡಾಯ ಜೋರಾಗಿದ್ದ ವೇಳೆ, ಬರ್ಮಾದ ಅರ್ಕನಾದಲ್ಲಿದ್ದ ಮಿಜೋ ನ್ಯಾಷನಲ್ ಫ್ರಂಟ್ ನ ಶಿಬಿರದೊಳಕ್ಕೆ ನುಸುಳಿದ ದೊವಲ್, ಆ ಚಳವಳಿಯ ನೇತಾರ ಲಾಲ್ಡೆಂಗಾರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಾರೆ. ಲಾಲ್ದೆಂಗಾ ಜತೆಗಿದ್ದ ಏಳು ಮಿಲಿಟರಿ ಕಮಾಂಡರ್ ಗಳ ಪೈಕಿ ಆರು ಕಮಾಂಡರಗಳ ಮನವೊಲಿಸಿ ತಮ್ಮೊಡನೆ ದೊವಲ್ ಕರೆದೊಯ್ಯುತ್ತಾರೆ. ಇಷ್ಟಾದ ಬಳಿಕ ಲಾಲ್ಡೆಂಗಾಗೆ ಶಾಂತಿ ಮಾತುಕತೆ ಹೊರತಾಗಿ ಬೇರಾವ ಆಯ್ಕೆಯೂ ಉಳಿದಿರಲಿಲ್ಲ. ಈ ವಿಷಯವನ್ನು ಲಾಲ್ಡೆಂಗಾ ಸ್ವತಃ ಒಂದು ಸಂದರ್ಶನದಲ್ಲಿ ಹೇಳಿಕೊಂಡ ದಾಖಲೆ ಇದೆ.

1980ರ ದಶಕದಲ್ಲಿ ಗೋಲ್ಡನ್ ಟೆಂಪಲ್ ನಲ್ಲಿದ್ದ ಉಗ್ರರನ್ನು ತೆರವುಗೊಳಿಸುವ ಕಾರ್ಯಾಚರಣೆ "ಆಪರೇಷನ್ ಬ್ಲಾಕ್ ಥಂಡರ್ 2'' ನಡೆಯುತ್ತಿದ್ದಾಗ ಒಬ್ಬ ಕುಳ್ಳು ವ್ಯಕ್ತಿ ಪಾಕಿಸ್ತಾನದ ಏಜೆಂಟ್ ಎಂದು ಪರಿಚಯಿಸಿಕೊಂಡು ಖಲಿಸ್ತಾನಿ ಉಗ್ರರ ನಾಯಕರನ್ನು ಭೇಟಿ ಮಾಡಿದ್ದ. ಅದಾದ ಬಳಿಕ ನಾಪತ್ತೆಯಾಗಿದ್ದ. ಆದರೆ ವರ್ಷಗಳ ಬಳಿಕ "ಪಾಕಿಸ್ತಾನದ ಏಜೆಂಟ್'' ಆಗಿ ಒಳಪ್ರವೇಶಿಸಿದ್ದು ದೊವಲ್ ಎಂಬುದು ಬಹಿರಂಗವಾಯಿತು.

ಇದಲ್ಲದೆ, 1999ರಲ್ಲಿ ಭಾರತೀಯ ವಿಮಾನವನ್ನು ಉಗ್ರರು ಅಪಹರಿಸಿ ಕಂದಹಾರ್ ಗೆ ಕೊಂಡೊಯ್ದಾಗ ಮಧ್ಯಸ್ಥಿಕೆದಾರರ ಪಾತ್ರವಹಿಸಿದ್ದು ದೊವಲ್. ಅದೇ ಅವಧಿಯಲ್ಲಿ ದೊವಲ್ ಗುಪ್ತಚರ ದಳದ ವ್ಯವಸ್ಥೆಯನ್ನು ಪುನಾರಚಿಸುವ ಕೆಲಸಕ್ಕೆ ಕೈ ಹಾಕಿದ್ದರು. ಇಂತಹ ದೊವಲ್ ಇದೀಗ ರಾಷ್ಟ್ರೀಯ ಭದ್ರತಾ ಸಲಹೆಗಾರ. ಅರ್ಹ ವ್ಯಕ್ತಿ ಅರ್ಹ ಮನ್ನಣೆ ಸಿಕ್ಕಂತಾಗಿದೆ.

 

Author : ಅಮೃತೇಶ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited